ಜನ ಸಂಕಷ್ಟದಲ್ಲಿದ್ದಾಗ ರೆಸಾರ್ಟ್ ರಾಜಕಾರಣ ಮಾಡಿದ ಬಿಜೆಪಿಯವರಿಂದ ಪಾಠ ಕಲಿಯಬೇಕೇ?

10 months ago

ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರೆಸಾರ್ಟ್ ರಾಜಕಾರಣ ಮಾಡಿದ ಬಿಜೆಪಿಯವರಿಂದ ಪಾಠ ಕಲಿಯಬೇಕೇ?

2008ರಿಂದ 2013ರ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆದಂತಹ ರೆಸಾರ್ಟ್ ರಾಜಕಾರಣ ಯಾರೂ ಮರೆಯುವಂತಿಲ್ಲ.

2010ರ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಸಂಕಷ್ಟದ ಸಮಯದಲ್ಲಿ, ಮುಖ್ಯಮಂತ್ರಿಯ ಬದಲಾವಣೆಗಾಗಿ ಅಸಮಾಧಾನಗೊಂಡ ಬಿಜೆಪಿಯ ಶಾಸಕರು ಮತ್ತು ನಾಯಕರು ರೆಸಾರ್ಟ್ ರಾಜಕಾರಣ ಮಾಡಿ ಜನತೆಯ ಹಿತವನ್ನು ಕಡೆಗಣಿಸಿದ್ದು ಯಾರು ಇನ್ನೂ ಮರೆತಿರುವುದಿಲ್ಲ.

ಕರ್ನಾಟಕ ರಾಜ್ಯದಲ್ಲಿ 2008 ರಿಂದ 13ರ ಅವಧಿಯಲ್ಲಿ ಮ್ಯೂಸಿಕಲ್ ಚೇರ್ ರೀತಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನ ನಾಡಿಗೆ ನೀಡಿದಂತಹ ಅಭದ್ರ ಅದಕ್ಷ ಮತ್ತು ಅಕ್ರಮಗಳ ಸರ್ಕಾರಗಳನ್ನು ನೀಡಿದ ಬಿಜೆಪಿಯವರಿಂದ ಪಾಠ ಕಲಿಯಬೇಕೇ?

2019 ರಿಂದ 2023ರ ಅವಧಿಯಲ್ಲಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಗುಂಪು ರಾಜಕಾರಣವನ್ನು ಮಾಡಿ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಯಡಿಯೂರಪ್ಪನವರನ್ನು ಸ್ಥಾನದಿಂದ ಇಳಿಸಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಸಂದರ್ಭದಲ್ಲಿ ಯಡಿಯೂರಪ್ಪನವರು ಕಣ್ಣೀರು ಸುರಿಸಿದ್ದನ್ನು ಎಲ್ಲರೂ ಚೆನ್ನಾಗಿ ನೋಡಿದ್ದಾರೆ. ಅದೇ ರೀತಿಯಲ್ಲಿ ಬೊಮ್ಮಾಯಿಯವರನ್ನು ಇಳಿಸಿ ಮತ್ತೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸುವ ಪ್ರಯತ್ನಗಳು ನಡೆದು ಸರ್ಕಾರ ಅಸ್ಥಿರದಿಂದ ಯಾವುದೇ ರೀತಿಯ ಯೋಜನೆಯನ್ನ ಅನುಷ್ಠಾನ ಮಾಡದೆ ಕೇವಲ ದಿನಗಳನ್ನು ಕಳೆದ ಮಾತ್ರವೇ ದೊಡ್ಡ ಸಾಧನೆ ಎಂಬುದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಇಂತಹ ಬಿಜೆಪಿಯವರಿಂದ ಪಾಠ ಕಲಿಯಬೇಕೇ?

ಹಲವಾರು ರೀತಿಯ ಭ್ರಷ್ಟಾಚಾರಗಳು ಅನ್ಯಾಯ ಅಕ್ರಮಗಳು ನಡೆದು ಮುಖ್ಯಮಂತ್ರಿಯೇ ಸ್ವತಹ ಸೆರೆಮನೆ ವಾಸವನ್ನ ಅನುಭವಿಸಿದರು. ಹಲವಾರು ಮಂತ್ರಿಗಳು ಭ್ರಷ್ಟಾಚಾರದ ಕಾರಣಕ್ಕೆ ರಾಜೀನಾಮೆ ನೀಡಿದರು. ಕೆಲವರು ಸೆರೆಮನೆ ವಾಸವನ್ನ ಅನುಭವಿಸಿದರು. ಜಾಮೀನಿನ ಮೇಲೆ ಹೊರಬಂದರು. ಇಂತಹ ಸಾಲು ಸಾಲು ಭ್ರಷ್ಟಾಚಾರದ ಚಕ್ರವರ್ತಿಗಳ ನಾಯಕರುಗಳನ್ನ ನಾಡಿಗೆ ನೀಡಿರುವ ಬಿಜೆಪಿಯವರಿಂದ ಪಾಠ ಕಲಿಯಬೇಕೇ?

ಕರ್ನಾಟಕ ರಾಜ್ಯದಲ್ಲಿ 2013 ರಿಂದ 18ರವರೆಗೆ ಯಾವುದೇ ರೀತಿಯ ಭಿನ್ನಮತ ಚಟುವಟಿಕೆಗಳಿಲ್ಲದೆ ಸ್ಥಿರವಾದ ಸರ್ಕಾರವನ್ನು ಮತ್ತು ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಆಡಳಿತವನ್ನು ನೀಡಿರುವುದು ಜನತೆ ಗಮನಿಸಿದ್ದಾರೆ. ಅದೇ ರೀತಿಯಲ್ಲಿ ಈಗಲೂ ಸಹ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಸರ್ಕಾರದ ಚುಕ್ಕಾಣಿಯನ್ನು ಹಿಡಿದು ಆಡಳಿತ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬಲಿಷ್ಠವಾಗಿದ್ದು ಕಾಲಕಾಲಕ್ಕೆ ತನ್ನ ತೀರ್ಮಾನಗಳನ್ನ ನೀಡುತ್ತದೆ. ಇದರ ಚಿಂತೆ ಬಿಜೆಪಿಯವರಿಗೆ ಬೇಕಿಲ್ಲ. ಮಾನ್ಯ ವಿಜಯೇಂದ್ರ ರವರು  ಮತ್ತು ಅಶೋಕ್ ರವರು ತಮ್ಮ ಸ್ಥಾನಗಳನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಂಡರೆ ಸಾಕಾಗಿದೆ. ಕಾಂಗ್ರೆಸ್ ಸರ್ಕಾರದ ವಿಚಾರದಲ್ಲಿ ಭವಿಷ್ಯ ಹೇಳುವ ಮೊದಲು ತಾವು ಎಷ್ಟು ದಿನಗಳ ಕಾಲ ತಮ್ಮ ಹುದ್ದೆಗಳಲ್ಲಿ ಇರುತ್ತೀರಿ ಎನ್ನುವುದನ್ನು ಮೊದಲು ಭವಿಷ್ಯಕಾರರಾಗಿ ಜನರ ಮುಂದೆ ಬಹಿರಂಗಪಡಿಸಿ.

ಬಿಜೆಪಿ ನಾಯಕರಿಗೆ ಹಗಲು ಕನಸು ಕಾಣುವುದು ಇತ್ತೀಚಿಗೆ ಹೆಚ್ಚಾಗಿದೆ. ಪ್ರತಿಯೊಬ್ಬ ನಾಯಕರು ಶಾಸ್ತ್ರ ಹೇಳಲು ಹೊರಟಿದ್ದಾರೆ. ಬಿಜೆಪಿ ನಾಯಕರು ಈ ರೀತಿಯಲ್ಲಿ ಹೇಳಿಕೊಂಡೆ 2028ರ ತನಕ ಕಾಲ ಹಾಕಬೇಕಾಗಿದೆ. ಬಿಜೆಪಿ ನಾಯಕರ ವರ್ತನೆ ಮತ್ತು ಅವರ ಅನಾಯಕತ್ವ ಇವುಗಳನ್ನು ನೋಡಿದರೆ 2033ರ ವರೆಗೂ ಬಿಜೆಪಿಯವರು ಇದೇ ರೀತಿಯಲ್ಲಿ ವಿರೋಧ ಪಕ್ಷದಲ್ಲಿದ್ದು ಹೇಳಿದ್ದೆ ಹೇಳಿಕೊಂಡು ಸಮಾಧಾನ ಮಾಡಿಕೊಂಡು ಸಮಯ ಕಳೆಯಬೇಕಾಗಿದೆ.

2008ರಲ್ಲಿ ಮತ್ತು 2019ರಲ್ಲಿ ಬಹುಮತವಿಲ್ಲದ ಪಕ್ಷಾಂತರಿಗಳ ಮೂಲಕ ಸರ್ಕಾರವನ್ನು ಸ್ಥಾಪಿಸಿದ್ದು ಬಿಜೆಪಿಯವರು ಆಪರೇಷನ್ ಕಮಲ ಎನ್ನುವ ಪ್ರಜಾಪ್ರಭುತ್ವದ ವಿರೋಧಿ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್, ಸದಾನಂದ ಗೌಡರು ಹಾಗೂ ಬೊಮ್ಮಾಯಿರವರು ಯಾವ ರೀತಿ ಮುಖ್ಯಮಂತ್ರಿಗಳಾದರೂ ಎನ್ನುವುದು ರಾಜ್ಯದ ಜನತೆ ಗಮನಿಸಿದ್ದಾರೆ. ಲಾಟರಿ ಮುಖ್ಯಮಂತ್ರಿಗಳು ಎಂದರೆ ಯಾರು ಎನ್ನುವುದು ಇವರುಗಳನ್ನ ನೋಡಿದರೆ ಅರ್ಥವಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply