ದೇವರ ಹೆಸರಲ್ಲೂ ಬಿಜೆಪಿ ಸರ್ಕಾರ ಕೊಳಕು ರಾಜಕಾರಣ: ಕೆಪಿಸಿಸಿ
ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಗುಲಾಮನಾಗಿ ಸೇವೆ ಸಲ್ಲಿಸಿದ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಬಿಜೆಪಿ ಸರ್ಕಾರ ದೇಶದ ಮಹಾನ್ ನಾಯಕನಂತೆ ಬಿಂಬಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಗಣಪತಿ ಉತ್ಸವದಲ್ಲಿ ಗಣೇಶನ ಸರಿಸಮಾನವಾಗಿ ಮೆರೆಸಲು ತಯಾರಿ ನಡೆಸಿದೆ. ಇದರ ಹಿಂದಿನ ಕಾರಣಗಳೇನು..? ಎಂದು ಕೆಪಿಸಿಸಿ ಪ್ರಶ್ನಿಸಿದೆ.
ಪ್ರಚಲಿತ ವಿದ್ಯಮಾನಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದಿವೆ. ಈ ವೇಳೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಹೇಳಿಕೊಳ್ಳುವಂತ ಒಂದೇ ಒಂದು ಸಾಧನೆಯನ್ನೂ ಮಾಡಿಲ್ಲ, ಬದಲಿಗೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಗಳು ಜಾರಿಗೆ ತಂದಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸಲಿಲ್ಲ. ಅಷ್ಟೇ ಅಲ್ಲದೇ ಇವರ ಅಧಿಕಾರ ಅವಧಿಯಲ್ಲಿ ಸಾಲು ಸಾಲು ವೈಫಲ್ಯಗಳು ಎಂದು ಪಟ್ಟಿಯನ್ನು ನೀಡಿದೆ.
♦️ 40%, 50% ಕಮಿಷನ್ ಹಗರಣ
➡️ ಬಿಜೆಪಿ ಸರ್ಕಾರ ಎಲ್ಲ ಕಾಮಗಾರಿಗಳಲ್ಲೂ 40%, 50% ಕಮಿಷನ್ ಪಡೆಯುತ್ತಿದ್ದು, ಈ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘಗಳು ನೇರವಾಗಿ ಆರೋಪ ಮಾಡಿವೆ.
♦️ ಭ್ರಷ್ಟಾಚಾರ
➡️ವರ್ಗಾವಣೆಯಲ್ಲಿ ಲಂಚ, ಕೊರೊನ ಹೆಣದ ಮೇಲೆ ಹಣ, ಬೆಡ್ ಬ್ಲಾಕಿಂಗ್, ಲಸಿಕೆ ಬ್ಲಾಕಿಂಗ್, ಬೋರ್ ವೆಲ್, ಮೊಟ್ಟೆ, ಸ್ವೆಟ್ಟರ್ ಗಳಲ್ಲಿ ಹಗರಣ, PSI, KPSC, KPTCL ಸೇರಿದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ
♦️ ರಸ್ತೆ ಗುಂಡಿಗಳು
➡️ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯವೇ ರಸ್ತೆ ಗುಂಡಿಗಳ ರಾಜ್ಯವಾಗಿದೆ. ಪ್ರಧಾನಮಂತ್ರಿಗಳೇ ಬರಲಿ, ಮುಖ್ಯಮಂತ್ರಿಗಳೇ ಸುತ್ತಾಡಲಿ 1 ದಿನದ ಜಾತ್ರೆ ಮಾತ್ರ. ಮತ್ತೆ ಮತ್ತೆ ಬಾಯ್ತೆರೆದ ಗುಂಡಿಗೆ ಜಾವಗಳು ಬಲಿಯಾಗುತ್ತಿವೆ.
♦️ ನಿರುದ್ಯೋಗ
➡️ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಕೋಟ್ಯಾಂತರ ಉದ್ಯೋಗಗಳು ನಷ್ಟವಾದವು, ಹೊಸ ಉದ್ಯೋಗಗಳು ಸೃಷ್ಟಿಯಾಗಲಿಲ್ಲ, ಬೀದಿ ಬಿದ್ದಿರುವ ಯುಜನರ ಬದುಕು ಮಣ್ಣುಪಾಲಾಗಿದೆ, ಉದ್ಯೋಗ ಕನಸಿನ ಮಾತಾಗಿದೆ.
♦️ ಪ್ರವಾಹ
➡️ ಕಳೆದ ಜೂನ್ ತಿಂಗಳಿನಿಂದ ಸುರಿದ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆ, ಗ್ರಾಮಗಳು ಪ್ರವಾಹ ಪೀಡಿತವಾಗಿದ್ದು ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಸರ್ಕಾರ ಮಾತ್ರ ಸ್ಥಳಕ್ಕೆ ಹೋಗಲಿಲ್ಲ
♦️ ಹದಗೆಟ್ಟ ಕಾನೂನು ಸುವ್ಯವಸ್ಥೆ
➡️ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಒಂದಲ್ಲಾ ಒಂದು ಗಲಭೆಗಳು ನಡೆಯುತ್ತಲೇ ಇವೆ. ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಆತಂಕದಲ್ಲೇ ದಿನಗಳನ್ನು ದೂಡುತ್ತಿದ್ದಾರೆ.
♦️ ಬೆಲೆ ಏರಿಕೆ, ಆದಾಯ ಕುಸಿತ, ಅವೈಜ್ಞಾನಿಕ-ಅಪರಿಮಿತ ತೆರಿಗೆ ದರಗಳು
➡️ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಆದಾಯ ಮಾತ್ರ ಪಾತಾಳಕ್ಕೆ ಕುಸಿದಿದೆ, ಜನರು ಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಮನಸಿಗೆ ತೋಚಿದಂತೆ ತೆರಿಗೆ ವಸೂಲಿ ಮಾಡುತ್ತಿದ್ದಾರೆ.
♦️ ಸಂಕಷ್ಟದಲ್ಲಿ ಅನ್ನದಾತರು
➡️ ಅತಿವೃಷ್ಟಿಯಿಂದ ಬೆಳೆ ನೀರುಪಾಲಾಗಿದೆ, ಬಿತ್ತನ ಬೀಜ, ರಸಗೊಬ್ಬರ ಸಿಗುತ್ತಿಲ್ಲ, ಸರ್ಕಾರ ಹೇಳಿದಂತೆ ರೈತರ ಆದಾಯ ಡಬ್ಬಲ್ ಆಗಲಿಲ್ಲ, ಕೃಷಿ ಪರಿಕರಗಳ ಬೆಲೆಯೂ ಗಗನಕ್ಕೇರಿದೆ, ಸಾಲದ ಶೂಲಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಹೇಳಿದೆ.
ಹೀಗೆ ಒಂದಲ್ಲ ಎರಡಲ್ಲ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಭಿವೃದ್ಧಿ ಶೂನ್ಯ ಆಡಳಿತ, ಸಾಧನೆ ರಹಿತ ಸರ್ಕಾರ, ಸರಣಿ ವೈಫಲ್ಯಗಳು ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿವೆ. ಬಿಜೆಪಿ ಸರ್ಕಾರದ ವಿರುದ್ಧದ ಜನಾಭಿಪ್ರಾಯ ಈಗಾಗಲೇ ಜನಮಾನಸದಲ್ಲಿ ರೂಪುಗೊಂಡಿದೆ. ಇದರಿಂದಾಗಿ ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲವನ್ನು ಜನರ ಮನಸಿನಿಂದ ಮಾಸುವಂತೆ ಮಾಡಲು, ಚರ್ಚಿಸುವ ವಿಷಯಗಳನ್ನು ಬದಲಿಸಲು, ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ಗಣಪತಿ ಹಬ್ಬದ ವಿಚಾರವನ್ನು ಮುಂದಿಟ್ಟುಕೊಂಡು ಸಾವರ್ಕರ್ ವಿಷಯವನ್ನು ಎಳೆದು ತರುತ್ತಿದೆ ಎಂದಿದೆ.
ಜನರ ಸಮಸ್ಯೆಗಳನ್ನು ಪರಿಹರಿಸಿ ಹಬ್ಬವನ್ನು ಮತ್ತಷ್ಟು ಸಂಭ್ರದಿಂದ ಆಚರಿಸುವಂತ ವಾತಾವರಣವನ್ನು ಸೃಷ್ಟಿಸುವುದರ ಬದಲಿಗೆ ದೇವರ ಹೆಸರಲ್ಲೂ ಬಿಜೆಪಿ ಸರ್ಕಾರ ಕೊಳಕು ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದೆ.




