ಪ್ರೊ ಎಂಡಿಎನ್ ರೈತ ಸತ್ಯಾಗ್ರಹಿಗಳ ರೂಪದಲ್ಲಿ ನಮ್ಮ ನಡುವೆಯೇ ಇದ್ದಾರೆ

2 years ago

ಪ್ರೊ.ಎಂ.ಡಿ.ಎನ್ ನಮ್ಮನ್ನಗಲಿ ಇಂದಿಗೆ ಹತ್ತೊಂಬತ್ತು ವರ್ಷಗಳು ಉರುಳಿದವು. ಆದರೆ ನಿತ್ಯವೂ ನಿಜ ರೈತ ಸತ್ಯಾಗ್ರಹಿಗಳ ಹೋರಾಟಗಳಲ್ಲಿ ಜೀವಂತವಾಗಿದ್ದಾರೆ. ನಮ್ಮೊಳಗೆ ಬೆಳೆಯುತ್ತಲಿದ್ದಾರೆ.

ಸಾಮಾನ್ಯವಾಗಿ ಪ್ರಭುತ್ವದ ಅವಿವೇಕದ ನೀತಿಗಳು, ಅಸಂಬದ್ಧ ಯೋಜನೆಗಳು ಜಾರಿಯಾದಾಗ ಎಂಡಿಎನ್ ಗೈರು ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತದೆ. ಪ್ರಶ್ನಿಸುವವರಿಲ್ಲದ ಈ ಕಾಲದಲ್ಲಿ ಅಥವಾ ಪ್ರಶ್ನಿಸುವ ನೈತಿಕತೆ ಉಳಿಸಿಕೊಳ್ಳದ ಹೋರಾಟಗಾರರ (ಬಹುತೇಕರು) ನಡುವೆ, ನಿಜ ರೈತ ಸತ್ಯಾಗ್ರಹಿಗಳು ಗೂಡು ಸೇರಿರುವ ಸಂದರ್ಭದಲ್ಲಿ ಪ್ರೊ.ನಂಜುಂಡಸ್ವಾಮಿ ಭರವಸೆಯಾಗಿ ಸಮಾಜದಲ್ಲಿ ಇಣುಕುತ್ತಲೇ ಇರುತ್ತಾರೆ. ಅವರನ್ನು ಎಟಕಿಸಿಕೊಳ್ಳುವ ಶಕ್ತಿ ನಾವು ಉಳಿಸಿಕೊಳ್ಳಬೇಕಿದೆ. ಅವರೊಮ್ಮೆ ಹೇಳಿದ್ದರು “ಈಗ ಎಂದೆಂದಿಗೂ ಸಣ್ಣತನಕ್ಕಿಳಿಯದ ಕಾರ್ಯಕರ್ತರ ನಿರ್ಮಾಣ ಆಗಬೇಕು” ಎಂದು.

ಮೊನ್ನೆಯಷ್ಟೇ ಕಿರಿಯ ಗೆಳೆಯ ಪತ್ರಕರ್ತ ಪ್ರಶಾಂತ್ ಹುಲ್ಕೋಡ್ ನನಗೆ ತಮ್ಮೂರಿನ ರೈತ ಸತ್ರಾಗ್ರಹಿಗಳನ್ನು ಭೇಟಿಮಾಡಿಸಬೇಕೆಂದು ಪ್ರೆಸ್ ಕ್ಲಬ್ಬಿಗೆ ಕರೆದುಕೊಂಡು ಬಂದಿದ್ದರು. ವಿಷಯ ಇಷ್ಟೇ ಶಿವಮೊಗ್ಗದ ತೀರ್ಥಹಳ್ಳಿಯ ಬಳಿ ಜಲ ಜೀವನ್ ಮಿಷನ್ ಯೋಜನೆ ಅವೈಜ್ಞಾನಿಕವಾಗಿ ರೂಪುಗೊಂಡಿದೆ. ಅದನ್ನು ಸ್ಥಗಿತಗೊಳಿಸಬೇಕು ಎಂಬುದು ಅವರ ತಕರಾರು. ಆ ಬಗ್ಗೆ ಸರ್ಕಾರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಿ ಮುಂದಿನದ್ದು ನೋಡೋಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕರೆದಿದ್ದರಂತೆ.

ಬಂದಿದ್ದ ರೈತ ಸತ್ಯಾಗ್ರಹಿಗಳಲ್ಲಿ 70 ದಾಟಿದವರಿದ್ದರು ಮಧ್ಯವಯಸ್ಕರಿದ್ದರು 30-40ರ ಆಜೂಬಾಜೂ ಇದ್ದವರೂ ಇದ್ದರು. ಅವರ ಮಾತುಗಳಲ್ಲಿ ಪ್ರೊಫೆಸರ್ ಬಿತ್ತಿ ಬೆಳೆಸಿ ಹೋದ ಲಾಜಿಕ್, ವೈಜ್ಞಾನಿಕ ಚಿಂತನೆ ಸ್ಪಷ್ಟವಾಗಿ ಕಾಣತೊಡಗಿತು. ಒಬ್ಬ ಯುವಕ ಹೇಳಿದ ಈ ಯೋಜನೆಯ ಮೊತ್ತವನ್ನು ಈಗ ಅವರು ನೀರು ಕೊಡಲು ಯೋಜಿಸಿರುವ ಪ್ರತಿ ಮನೆಗೂ ಹಂಚಿದರೆ ತಲಾ ಒಂದೂಮುಕ್ಕಾಲು ಲಕ್ಷ ಕೊಡಬಹುದು. ಮತ್ತೊಬ್ಬ ಹೇಳಿದ ಮಲೆನಾಡಿನ ಜನಕ್ಕೆ ನೀರು ರೇಷನ್ ರೂಪದಲ್ಲಿ ಕೊಡಲು ಯೋಚಿಸಿರುವ ಇವರಿಗೆ ನಮ್ಮ ಭಾಗದ ಸಂಸ್ಕೃತಿಯ ಬಗ್ಗೆ ಅರಿವಿದೆಯೇ ಎಂದು. ಇನ್ನು ನೀರು ಗ್ರಾವಿಟಿಯಲ್ಲಿ ಹರಿಸುವ ಬದಲು ಮೋಟರ್ ಅಳವಡಿಸಿರುವ ಬಗ್ಗೆ ಮತ್ತೊಬ್ಬರ ತಕರಾರು. ಒಟ್ಟಾರೆ ಯೋಜನೆಯು ಅವೈಜ್ಞಾನಿಕವಾದದ್ದು ಎಂದು ಪ್ರೂವ್ ಮಾಡಲು ಬೇಕಾದ ತಾಂತ್ರಿಕ, ಭಾವನಾತ್ಮಕ ಹಾಗೂ ನೈಸರ್ಗಿಕ ಕಾರಣಗಳಿದ್ದವು.

ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಮನವರಿಕೆ ಮಾಡಿ ಹಿಂದಿರುಗಿದ್ದಾರೆ. ಮುಂದಿನದ್ದು ಕಾದು ನೋಡೋಣ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಾರ್ವಜನಿಕ ಜೀವನಕ್ಕೆ ಕಾಲಿರಿಸಿದ್ದು ರೈತ ಸಂಘದ ಮುಖೇನ. ಇನ್ನು ರೈತರ ಅಹವಾಲು ಆಲಿಸಲು ಪ್ರಿಯಾಂಕ್ ಖರ್ಗೆ ಮತ್ತು ಅಧಿಕಾರಿಗಳು ಸಮಯ ನೀಡಿರುವುದು ಒಳ್ಳೆಯ ಬೆಳವಣಿಗೆ. ಮುಖ್ಯಮಂತ್ರಿಗಳು ಮತ್ತು ಸಚಿವ ಪ್ರಿಯಾಂಕ್ ರೈತರ ಅಹವಾಲಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡೋಣ.

ಪ್ರೊ. ಇಲ್ಲದ ಈ ಹೊತ್ತಿನಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆವ ನಿಜ ರೈತ ಸತ್ಯಾಗ್ರಹಿಗಳಿಗೆ ಜಯವಾಗಲಿ. ರೈತ ಸಂಘಕ್ಕೆ- ರೈತ ಹೋರಾಟಕ್ಕೆ ಜಯವಾಗಲಿ

  • ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು

Leave a Reply