ಶೆಟ್ಟರ್, ಸವದಿ ಬಂಡವಾಳ ಬಯಲು ಮಾಡುವೆ: ಯಡಿಯೂರಪ್ಪ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿ ರಾಜಕೀಯ ನಿವೃತ್ತಿ ಪಡೆಯುವಂತೆ ಸಲಹೆ ಮಾಡಿದ ಬಿಜೆಪಿ ಹೈಕಮಾಂಡ್ ಕ್ರಮ ವಿರೋಧಿಸಿ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಗದೀಶ್ ಶೆಟ್ಟರ್ ವಿರುದ್ಧ ಇದೀಗ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.

ಪಕ್ಷದ ಅಧ್ಯಕ್ಷ, ಪ್ರತಿಪಕ್ಷ ನಾಯಕ,ಮುಖ್ಯಮಂತ್ರಿ ಸೇರಿದಂತೆ ಪಕ್ಷದಲ್ಲಿ ಎಲ್ಲಾ ಸ್ಥಾನಮಾನವನ್ನು ಅನುಭವಿಸಿ ಈಗ ನಂಬಿದ ಪಕ್ಷಕ್ಕೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿಯವರೇ ಯಾವುದೇ ಕಾರಣಕ್ಕೂ ನಿಮ್ಮನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಸದ್ಯದಲ್ಲೇ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ ಎಂದು ಎಚ್ಚರಿಸಿದರು.

ನಿಮಗೆ ಪಕ್ಷ ಏನು ಕಡಿಮೆ ಮಾಡಿತ್ತು. ಜಗದೀಶ್ ಶೆಟ್ಟರಿಗೆ ಮುಖ್ಯಮಂತ್ರಿ ಸ್ಥಾನ, ಸಚಿವ ಸ್ಥಾನ, ಪಕ್ಷದ ನಾಯಕ ಸ್ಥಾನ, ಕೋರ್ ಕಮಿಟಿ ಎಲ್ಲವನ್ನೂ ಕೊಟ್ಟಿದ್ದೆವು. ವಿಶ್ವಾಸ ದ್ರೋಹ ಮಾಡಿರುವ ನಿಮ್ಮನ್ನು ಯಾವುದೇ ಕಾರಣ ಕ್ಷಮಿಸುವುದಿಲ್ಲ. ಇದು ನಂಬಿಕೆ ದ್ರೋಹ ಎಂದು ಗುಡುಗಿದರು.

ಹಿರಿಯ ನಾಯಕ ಬಿ.ಬಿ.ಶಿವಪ್ಪ ಅವರನ್ನ ಎದುರು ಹಾಕಿಕೊಂಡು ಶೆಟ್ಟರ್ ಅವರಿಗೆ ವಿರೋಧ ವಿರೋಧ ಪಕ್ಷದ ಸ್ಥಾನ ಕೊಡಲಾಗಿತ್ತು. ನಾನು ಹಾಗೂ ಅನಂತ್‍ಕುಮಾರ್  ಬೆನ್ನಿಗೆ ನಿಂತು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ವಿಶ್ವಾಸ ಘಾತಕತನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶೆಟ್ಟರ್ ಮನೆಗೆ ಹೋಗಿ ಪಕ್ಷ ಬಿಡದಂತೆ ಮನವೊಲಿಸಿದರು. ಅವರಿಗೆ ರಾಜ್ಯಸಭಾ ಸದಸ್ಯರಾಗಿ ಮಾಡಿ ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದರೂ ಒಪ್ಪಲಿಲ್ಲ. ಇದು ಅಕ್ಷಮ್ಯ ಅಪರಾಧ ಇದು ಪಕ್ಷಕ್ಕೆ ಮಾಡಿದ ದ್ರೋಹ ಎಂದು ಕಿಡಿ ಕಾರಿದರು.

ನನಗೆ 80 ವರ್ಷ ಆಗಿದ್ದರೂ ಓಡಾಡುತ್ತಿರುವುದು, ಬಲಿಷ್ಠ ಸರ್ಕಾರ ಬರಬೇಕೆಂಬ ಕಾರಣಕ್ಕಾಗಿ, ದೇಶದಲ್ಲಿ ಮತ್ತೆ ಪ್ರಧಾನಿ ಮೋದಿಯವರು ಅಕಾರಕ್ಕೆ ಬರಬೇಕು. ಜಗತ್ತಿನ ಯಾವುದೇ ಶಕ್ತಿ ಕೂಡ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.

ಚುನಾವಣೆಯಲ್ಲಿ ಸೋತು ಮೂಲೆ ಗುಂಪಾಗಿದ್ದ ಲಕ್ಷ್ಮಣ್ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡು ಉಪಮುಖ್ಯಮಂತ್ರಿ ಮಾಡಲಾಯಿತು. ನಮ್ಮ ಪಕ್ಷಕ್ಕೆ ಬಂದಿದ್ದ ಶಾಸಕ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡಿಲ್ಲ. ಲಕ್ಷ್ಮಣ್ ಸವದಿಗೆ ಡಿಸಿಎಂ ಮಾಡಿ ವಿಧಾನಪರಿಷತ್ ಸದಸ್ಯ ಮಾಡಿ, ಸದ್ಯ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಇಂದು ಅದನ್ನೆಲ್ಲಾ ತ್ಯಜಿಸಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಿಜೆಪಿಗೆ ಬರಲಿದೆ. ನಾನು ಇನ್ನೂ ಗಟ್ಟಿಯಿದ್ದೇನೆ. ಒಂದೇ ಒಂದು ಕ್ಷಣ ವಿರಮಿಸುವುದಿಲ್ಲ. ನಾನು ಹಗಲು- ಇರುಳು ಕೆಲಸ ಮಾಡುತ್ತೇನೆ. ಹೊಸ ಹುರುಪಿನಿಂದ ಕೆಲಸ ಮಾಡಬೇಕು. ಬಿಜೆಪಿ ಅಕಾರಕ್ಕೆ ತರುವುದು ನಮ್ಮೆಲ್ಲರ ಉದ್ದೇಶ ಎಂದರು

Leave a Reply