ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಕಳುಹಿಸಿದರು ಯಾವುದಕ್ಕೂ ಜಗ್ಗುವುದಿಲ್ಲ: ರಾಹುಲ್ ಗಾಂಧಿ

3 years ago

ಕೋಲಾರ: ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮನ್ನು ಜೈಲಿಗೆ ಹಾಕಿದರೂ ಕೂಡ ಹೆದರುವುದಿಲ್ಲ. ಅಕ್ರಮಗಳ ಕುರಿತು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಕೋಲಾರದಲ್ಲಿ ಏರ್ಪಡಿಸಿದ್ದ ಜೈ ಭಾರತ್ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉದ್ಯಮಿ ಅದಾನಿ ಅವರ ನಕಲಿ ಕಂಪೆನಿಗಳಲ್ಲಿ ಇರುವ 20 ಸಾವಿರ ಕೋಟಿ ರೂಪಾಯಿಗಳು ಎಲ್ಲಿಯದು ಎಂಬ ಪ್ರಶ್ನೆಯವನ್ನು ಕೇಳುತ್ತಲೇ ಇರುತ್ತೇನೆ. ಉತ್ತರ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ. ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಕಳುಹಿಸಿದರು ಯಾವುದಕ್ಕೂ ಜಗ್ಗುವುದಿಲ್ಲ ಎಂದರು.

ಅದಾನಿ ಮೋದಿ ಭ್ರಷ್ಟಾಚಾರಕ್ಕೆ ಮಾದರಿಯಾಗಿದ್ದಾರೆ. ಭಾರತದ ಎಲ್ಲಾ ಮೂಲ ಸೌಲಭ್ಯಗಳನ್ನು ಅದಾನಿಗೆ ನೀಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಅದಾನಿ ಕಂಪೆನಿಗೆ ಬಂದು ಸೇರುತ್ತಿದೆ. ದೇಶದ ರಕ್ಷಣಾ ಇಲಾಖೆಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಅದಾನಿಯ ಸೆಲ್ ಕಂಪೆನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಅವರನ್ನು ಯಾಕೆ ಅಲ್ಲಿ ಕೂರಿಸಿಕೊಂಡಿದ್ದೀರಾ ಎಂದು ಯಾರು ಪ್ರಶ್ನೆ ಮಾಡುತ್ತಿಲ್ಲ. ಈ ಬಗ್ಗೆ ನಾನು ಪ್ರಶ್ನೆ ಕೇಳಿದರೆ, ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ನಾನು ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದ್ದೇನೆ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ನಾವು ದಲಿತರ, ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡಲು ಶುರು ಮಾಡೋಣ. ಇಲ್ಲಿ ಪ್ರಮುಖ ಪ್ರಶ್ನೆ ಏನೆಂದರೆ ದೇಶದಲ್ಲಿ ಎಲ್ಲಾ ಹುದ್ದೆಗಳಲ್ಲಿ ಯಾವ ಸಮುದಾಯದ ಜನ ಹೆಚ್ಚಿದ್ದಾರೆ ಎಂಬುದನ್ನು ಗಮನಿಸಬೇಕಿದೆ. ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿರುವ ಹುದ್ದೆಗಳಲ್ಲಿ ದಲಿತರು, ಹಿಂದುಳಿದ ವರ್ಗಗಳ ಜನ ಕೇವಲ ಶೇ.7ರಷ್ಟು ಮಾತ್ರ ಇದ್ದಾರೆ. ದೇಶದಲ್ಲಿ ಹಿಂದುಳಿದ, ದಲಿತ, ಆದಿವಾಸಿಗಳು ಜನಸಂಖ್ಯೆ ಎಷ್ಟಿದ್ದಾರೆ ಅಷ್ಟು ಪ್ರಮಾಣದಲ್ಲಿ ಅವಕಾಶಗಳನ್ನು ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2011ರಲ್ಲಿ ಜನಗಣತಿ ಮಾಡಿ, ಎಲ್ಲಾ ಜಾತಿವಾರು ಅಂಕಿ ಅಂಶಗಳನ್ನು ಕಲೆ ಹಾಕಿದೆ. ಮೋದಿ ಅವರಿಗೆ ಧೈರ್ಯವಾಗಿದ್ದರೆ ಆ ಜನಗಣತಿ ವರದಿಯನ್ನು ಬಹಿರಂಗ ಮಾಡಿ. ಯಾರ ಜನಸಂಖ್ಯೆ ಎಷ್ಟಿದೆ, ಎಷ್ಟು ಸೌಲಭ್ಯ ಸಿಕ್ಕಿದೆ ಎಂದು ಜನರಿಗೆ ಗೋತ್ತಾಗಲಿ ಎಂದು ಆಗ್ರಹಿಸಿದರು.

ಜಾತಿವಾರು ಮಾಹಿತಿಯನ್ನು ಬಹಿರಂಗ ಮಾಡದಿದ್ದರೆ ಮೋದಿ ಸರ್ಕಾರ ಹಿಂದುಳಿದ ವರ್ಗಗಳಿಗೆ ಅಪಮಾನ ಮಾಡಿದೆ ಎಂದು ಭಾವಿಸಬೇಕಾಗುತ್ತದೆ. ಬಾಯಿ ಮಾತಿನಲ್ಲಿ ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಭಾಷಣ ಮಾಡಿದರೆ ಸಾಲದು. ದಲಿತರಿಗೂ ಜನಸಂಖ್ಯೆ ಆಧಾರಿತವಾಗಿ ಅವಕಾಶಗಳನ್ನು ನೀಡಬೇಕು. ದೇಶದಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ.50ರಷ್ಟಕ್ಕೆ ಸೀಮಿತಗೊಳಿಸಲಾಗಿದೆ. ಅದನ್ನು ತೆಗೆದು ಹಾಕಿ, ಬಳಿಕ ಹಿಂದುಳಿದ ವರ್ಗಗಳ ಕುರಿತು ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಮೊದಲ ಸಭೆಯಲ್ಲಿ ಆದೇಶ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣೆಯಲ್ಲಿ ನೀಡಿರುವ ನಾಲ್ಕು ಭರವಸೆಗಳನ್ನು ಮೊದಲ ಸಚಿವ ಸಂಪುಟದಲ್ಲೇ ಈಡೇರಿಸಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೋರಾಟ ನಡೆಸುತ್ತಿದೆ. ಶೇ.40ರಷ್ಟು ಕಮಿಷನ್ ಸರ್ಕಾರವನ್ನು ತೆಗೆದು ಹಾಕಲಿದೆ. ಮುಂದಿನ ಚುನಾವಣೆಯ ನಂತರವೂ ಚುನಾಯಿತ ಸರ್ಕಾರವನ್ನು ಇದೇ ಭ್ರಷ್ಟಚಾರದ ಹಣದಿಂದ ಅತಂತ್ರಗೊಳಿಸಲು ಯತ್ನಿಸಲಾಗುವುದು. ಅದಕ್ಕೆ ಅವಕಾಶ ನೀಡದಂತೆ ಕಾಂಗ್ರೆಸ್‍ಗೆ 150 ಸ್ಥಾನಗಳನ್ನು ಗೆಲಿಸಿ. ಕಾಂಗ್ರೆಸ್‍ನ ಹೆಬ್ಬುಲಿಗಳು ಬಿಜೆಪಿ ವಿರುದ್ಧ ಹೋರಾಟವನ್ನು ಮುಂದುವರೆಸಬೇಕು ಎಂದು ಕರೆ ನೀಡಿದರು.

Leave a Reply