ಹೆಣ್ಣನ್ನು ದಮನಿಸುವ ಹುನ್ನಾರದ ಬೀಜಗಳು

3 years ago

#seeds #against #women #arunjaladakudligi

ಮಾನಸಿಕ ಅಸ್ವಸ್ಥರಾಗಿ ಅಂಡಲೆಯುವ ಗಂಡಸರಿಗೆ ಈ ‘ಹುಚ್ಚು’ ಹೇಗೆ ಬಂದಿದೆ ಎನ್ನುವ ಕಾರಣಕ್ಕೆ ಜನರಲ್ಲಿ ಹುಟ್ಟಿಕೊಳ್ಳುವ ಕಟ್ಟುಕಥೆಗಳಲ್ಲಿ ‘ಹೆಣ್ಣು’ ಕಾರಣ ಎನ್ನುವಂತಿರುತ್ತವೆ. ಪ್ರೀತಿಸಿ ಕೈಕೊಟ್ಟ ಹುಡುಗಿಯಿಂದಲೋ.. ಹೆಂಡತಿಯ ಅನೈತಿಕ ಸಂಬಂಧದಿಂದಲೋ.. ಹೀಗೆ ತರಾವರಿ ಕತೆಗಳು ಹುಟ್ಟಿಕೊಳ್ಳುತ್ತವೆ..

ಇದರಂತೆ ಹೆಣ್ಣು ಮಾನಸಿಕ ಅಸ್ವಸ್ಥೆಯಾಗಿ ಹುಚ್ಚಿಯಾಗಿದ್ದಕ್ಕೆ ‘ಗಂಡಸು’ ಕಾರಣ ಎನ್ನುವುದಕ್ಕಿಂತ ಆಗಲೂ ಮಗಳು ಅನ್ಯಜಾತಿಯವನನ್ನು ಮದುವೆಯಾದ ಕಾರಣವೋ.. ಪ್ರೇಮಿಸಿ ಓಡಿ ಹೋದ ಮಗಳ‌ ಕಾರಣವೋ.. ವಿಪರೀತ ಕಾಟ ಕೊಟ್ಟ ಅತ್ತೆಯ ಕಾರಣದಿಂದಲೋ.. ಗಂಡ ಮತ್ತೊಬ್ಬಳ ಜತೆ ಸಂಬಂಧ ಹೊಂದಿದ್ದರಿಂದಲೋ ಎನ್ನುವ ಹೆಣ್ಣಿನ‌ ಹುಚ್ಚಿಗೂ ಬಹುಪಾಲು ಹೆಣ್ಣೇ ಕಾರಣ ಎನ್ನುವ ಕತೆಗಳು ಹುಟ್ಟುತ್ತವೆ.

ಮೇಲು ಜಾತಿಯವರ ಕ್ರೌರ್ಯಕ್ಕೆ ಬಲಿಯಾದ ದಲಿತ ದಮನಿತರು ಹುಚ್ಚರಾಗುವುದು… ಕೋಮು ಗಲಭೆಗಳಲ್ಲಿ ಘಾಸಿಗೊಂಡು ಮಾನಸಿಕ ಅಸ್ವಸ್ತರಾಗುವುದು… ಗಂಡಸಿನ ಕ್ರೌರ್ಯಕ್ಕೆ ಹೆಣ್ಣು ಜರ್ಜರಿತವಾಗಿ ಮಾನಸಿಕ‌ ಸ್ಥಿಮಿತತೆ ಕಳೆದುಕೊಳ್ಳುವುದು.. ಉಳ್ಳವರ ದರ್ಪಗಳಿಗೆ ಬಲಿಯಾದವರು, ಕೆಲವೊಮ್ಮೆ ಪ್ರಭುತ್ವದ ಕ್ರೌರ್ಯಕ್ಕೂ ಬಲಿಯಾಗುವುದು..

ಹೀಗೆ ಮಾನಸಿಕ ಅಸ್ವಸ್ಥತೆಗೆ ವ್ಯವಸ್ಥೆಯೊಳಗಿನ ಹಲವು ಬಗೆಯ ಮೇಲುಜಾತಿ, ಮೇಲ್ವರ್ಗ, ಅಧಿಕಾರಶಾಹಿ, ಇವೆಲ್ಲವನ್ನೂ ಒಳಗೊಂಡಂತೆ ಪುರುಷ ಪಾರಮ್ಯದ ಕ್ರೌರ್ಯಗಳನ್ನು ಮುಚ್ಚಿಹಾಕಲು ಹುಚ್ಚುತನಕ್ಕೆ ಹೆಣ್ಣು‌ ಕಾರಣ ಎನ್ನುವ ಕಟ್ಟುಕತೆ ಕಟ್ಟಲಾಗುತ್ತದೆ.

ಹೀಗೆ ಕತೆ ಕಟ್ಟಿ ಹರಡಿಸುವ ಮೂಲಕ ಮೇಲಿನ ಅಪರಾಧಿಗಳ ಬಗ್ಗೆ ಸಮಾಜದಲ್ಲಿ ಹುಟ್ಟಬಹುದಾಗಿದ್ದ ಸಿಟ್ಟು ಆಕ್ರೋಶವನ್ನು ಹೆಣ್ಣಿನ ಕಡೆ ತಿರುಗಿಸಿ ಮತ್ತೆ ಅವಳನ್ನು ದಮನಿಸುವ ಹುನ್ನಾರದ ಬೀಜಗಳನ್ನು ಬಿತ್ತಲಾಗುತ್ತದೆ.

  • ಅರುಣ್ ಜೋಳದಕೂಡ್ಲಿಗೆ, ಜಾನಪದ ವಿದ್ವಾಂಸರು

Leave a Reply