ರವಿಕೆ ಪ್ರಸಂಗದ ಸಂತೋಷ್ ಕೊಡಂಕೇರಿ ಹೊಸ ಸಾಹಸ

3 months ago

ಸಾಮಾಜಿಕ ಕಾಮಿಡಿ ಡ್ರಾಮಾದೊಂದಿಗೆ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಟ್ಟ ನಿರ್ದೇಶಕ

ಉತ್ತರ ಕರ್ನಾಟಕದ ಜವಾರಿ ನಟರಿಗೆ ನಟಿಸಲು ಅವಕಾಶ

ನಾವು ಫಾರ್ಮುಲಾಗಳ ಹಿಂದೆ ಓಡುವುದಿಲ್ಲ… ಕಥೆಗಳನ್ನು ಕಟ್ಟುತ್ತೇವೆ.
— ಸಂತೋಷ್ ಕೊಡೆಂಕೇರಿ, ನಿರ್ದೇಶಕ

ಬೆಂಗಳೂರು: ಫಾರ್ಮುಲಾಗಳ ಹಿಂದೆ ಓಡದೆ, ಕಥೆಗಳನ್ನು ಕಟ್ಟುವ ಪ್ರಯತ್ನವೇ ನಮ್ಮ ಸಿನಿಮಾಗಳ ಮೂಲ ತಳಹದಿ ಎಂದು ನಿರ್ದೇಶಕ ಸಂತೋಷ್ ಕೊಡೆಂಕೇರಿ ಹೇಳಿದ್ದಾರೆ.

ರವಿಕೆ ಪ್ರಸಂಗ ಚಿತ್ರದ ನಂತರ ಹೊಸ ಚಿತ್ರವನ್ನು ಘೋಷಿಸಿರುವ ಅವರು, ಈ ಬಾರಿ ಉತ್ತರ ಕರ್ನಾಟಕದ ಬದುಕು, ಸಂಸ್ಕೃತಿ ಮತ್ತು ದೈನಂದಿನ ಜೀವನ ಆಧರಿಸಿದ ಸಾಮಾಜಿಕ ಕಾಮಿಡಿ -ಡ್ರಾಮಾ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆ ನಡೆಸಿದ್ದಾರೆ.

ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಅವರ ಪತ್ನಿ ಹಾಗೂ ಲೇಖಕಿ ಪಾವನಾ ಸಂತೋಷ್ ಬರೆಯುತ್ತಿದ್ದಾರೆ. ಉತ್ತರ ಕರ್ನಾಟಕದ ಸಾಮಾನ್ಯ ಬದುಕಿನ ಸನ್ನಿವೇಶಗಳು, ಪರಿಚಿತ ಪಾತ್ರಗಳು ಮತ್ತು ದಿನನಿತ್ಯದ ಅನುಭವಗಳ ಮೂಲಕ ಕಥೆಯನ್ನು ಕಟ್ಟುವ ಪ್ರಯತ್ನ ಈ ಚಿತ್ರದಲ್ಲಿದೆ. ಉತ್ತರ ಕರ್ನಾಟಕದ ಸಾಮಾಜಿಕ ವಾತಾವರಣ, ಸಾಂಸ್ಕೃತಿಕ ಆಚರಣೆಗಳು ಹಾಗೂ ನೈಸರ್ಗಿಕ ಸೌಂದರ್ಯ ಈ ಚಿತ್ರದ ಪ್ರಮುಖ ಅಂಶಗಳಾಗಿವೆ.

ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡ ಸಂತೋಷ್ ಕೊಡೆಂಕೇರಿ, ವಿಷಯಕ್ಕೆ ನಿಷ್ಠವಾಗಿರುವುದೇ ತಮ್ಮ ಮೊದಲ ಆದ್ಯತೆ. ನಾವು ಫಾರ್ಮುಲಾಗಳ ಹಿಂದೆ ಓಡುವುದಿಲ್ಲ, ಕಥೆಗಳನ್ನು ಕಟ್ಟುತ್ತೇವೆ. ವಿಷಯಾಧಾರಿತ ಸಿನಿಮಾ ಮಾಡುವುದಕ್ಕೆ ಧೈರ್ಯ ಬೇಕು. ನಿಜವಾದ ಕಥೆಗಳನ್ನು ಹೇಳುವ, ಕಠಿಣ ಪ್ರಶ್ನೆಗಳನ್ನು ಎತ್ತುವ ಮತ್ತು ಪ್ರೇಕ್ಷಕರ ಮನಸ್ಸಿಗೆ ತಲುಪುವ ಧೈರ್ಯ ಇಂದಿನ ಅಗತ್ಯ. ಅದಮ್ಮೇ ನಾನು ನನ್ನ ಸಿನಿಮಾದಲ್ಲಿ ಹಿಡಿದಡಬೇಕು ಎಂದಿದ್ದಾರೆ. 

ಅತಿರಂಜಿತ ದೃಶ್ಯಗಳು ಮತ್ತು ಗಿಮಿಕ್‌ಗಳ ಬದಲು, ಮಾನವೀಯ ಕ್ಷಣಗಳು, ಸ್ಥಳೀಯ ಸಂಪ್ರದಾಯಗಳು ಮತ್ತು ಉತ್ತರ ಕರ್ನಾಟಕದ ಬದುಕಿನ ನೈಜ ಸೌಂದರ್ಯದಿಂದಲೇ ಈ ಚಿತ್ರ ತನ್ನ ಶಕ್ತಿ ಗಳಿಸುತ್ತದೆ. ಪ್ರೇಕ್ಷಕರು ತಮ್ಮದೇ ಬದುಕಿನ ಪ್ರತಿಬಿಂಬವನ್ನು ಪರದೆಯ ಮೇಲೆ ಕಾಣುವಂತೆ ಮಾಡುವುದೇ ನಮ್ಮ ಈ ಚಿತ್ರದ ಉದ್ದೇಶ ಎಂದರು.

ಲೇಖಕಿ ಪಾವನಾ ಸಂತೋಷ್ ಕುರಿತು ಮಾತನಾಡಿ, ಕಥೆಗೆ ಭಾವನಾತ್ಮಕ ಸ್ಪರ್ಶ ಕೊಡುವವಲ್ಲಿ ನಿರ್ದೇಶಕರ ಪಾತ್ರ ಅತ್ಯಂತ ಪ್ರಮುಖ. ಹಾಸ್ಯದ ಲಘು ಕ್ಷಣಗಳು ಮತ್ತು ಸಾಮಾಜಿಕ ಅವಲೋಕನದ ನಡುವೆ ಸಮತೋಲನ ಸಾಧಿಸುವ ರೀತಿಯಲ್ಲಿ ಕಥೆಯನ್ನು ಅವರು ತೆರೆಮೇಲೆ ತರಲು ಯೋಜನೆ ರೂಪಿಸಿದ್ದಾರೆ ಎಂದರು.

ಕೌಟುಂಬಿಕ ಪ್ರೇಕ್ಷಕರು, ಯುವಜನ ಹಾಗೂ ವಿಷಯಾಧಾರಿತ ಸಿನಿಮಾಗಳನ್ನು ಮೆಚ್ಚುವ ಪ್ರಾದೇಶಿಕ ಪ್ರೇಕ್ಷಕರಿಗೆ ಈ ಚಿತ್ರ ಖಂಡಿತವಾಗಿ ತಲುಪಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ.

ಜೊತೆಗೆ, ನಿರ್ಮಾಣ ಸಂಸ್ಥೆ ಉತ್ತರ ಕರ್ನಾಟಕದ ನಟರು ಮತ್ತು ನಟಿಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಆಯ್ಕೆ ಮಾಡುತ್ತಿದೆ. ಸ್ಥಳೀಯ ಪ್ರತಿಭೆಗಳು ಮತ್ತು ಹೊಸ ಮುಖಗಳು ಚಿತ್ರದ ನೈಜತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂಬುದು ನಿರ್ಮಾಪಕರ ಅಭಿಪ್ರಾಯವಾಗಿದೆ.

ಪ್ರಸ್ತುತ ಚಿತ್ರದ ಪೂರ್ವ ತಯಾರಿ ಹಂತದಲ್ಲಿದ್ದು, ಮುಂದಿನ ಹಂತದ ಚಿತ್ರೀಕರಣದತ್ತ ತಂಡ ಭರದ ಸಿದ್ಧತೆ ನಡೆಸಿದೆ. ಪಾತ್ರಗಳ ಆಯ್ಕೆ ಮತ್ತು ಚಿತ್ರೀಕರಣ ವೇಳಾಪಟ್ಟಿ ಕುರಿತು ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ ಎಂದು ತಂಡ ಹೇಳಿದೆ.

One Response

Leave a Reply