ವೀರಕಪುತ್ರ ಶ್ರೀನಿವಾಸ್ ಅವರು ಸುಮಾರು ಹತ್ತು ವರ್ಷಗಳ ಪರಿಚಯ. ಕನ್ನಡ ಮಾಣಿಕ್ಯ ಪತ್ರಿಕೆ, ವಿಷ್ಣುವರ್ಧನ್ ಕಾರ್ಯಕ್ರಮ ಎಂದೆಲ್ಲ ಶುರುವಾದ ಈ ಪರಿಚಯ ಅಲ್ಲಿಗೇ ನಿಂತುಹೋಗಿದ್ದು ಆ ದಿನಗಳ ನನ್ನ ದುರಿತಕಾಲದ ಕಾರಣದಿಂದ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಈಗೆರಡು ವರ್ಷದ ಕೆಳಗೆ ಶ್ರೀನಿವಾಸ್ ಒಂದು ಪಬ್ಲಿಕೇಶನ್ ಶುರು ಮಾಡಿದ್ದಾರೆ, ಹೊಸಬರ ಪುಸ್ತಕಗಳನ್ನು ತರುತ್ತಿದ್ದಾರೆ, ದೊಡ್ಡ ದೊಡ್ಡ ಮೊತ್ತದ ಬಹುಮಾನ ಇಟ್ಟು ಸ್ಪರ್ಧೆ ನಡೆಸುತ್ತಿದ್ದಾರೆ ಎಂದೆಲ್ಲ ಸುದ್ದಿ ಕೇಳಿಬಂತು. ಆಗಿಂದಲೂ ಅದರ ಪ್ರತಿಯೊಂದು ನಡೆ ಗಮನಿಸುತ್ತಲೇ ಇದ್ದೆ. ನನ್ನ ತಕರಾರು ಅವತ್ತಿಗೂ ಇವತ್ತಿಗೂ ಬಹುಮಾನದ ಮೊತ್ತಕ್ಕೆ ದೊಡ್ಡ ಹೈಪ್ ಕೊಟ್ಟು ಪ್ರಚಾರ ಮಾಡುವುದರ ಕುರಿತು. ಅದು, ಮೊತ್ತ ಎಷ್ಟೇ ಕೊಟ್ಟರೂ ಹಣದ ಹೆಸರಲ್ಲಿ ಪ್ರಚಾರ ನಿಲ್ಲುವ ತನಕ ಇದ್ದೇ ಇರುತ್ತದೆ. ಈಗ ವಿಷಯ ಅದಲ್ಲ…
ಸುಮಾರು ತಿಂಗಳ ಕೆಳಗೆ ಗೆಳೆಯರ ಜೊತೆ ಪಬ್ಲಿಕೇಶನ್ ಜಗತ್ತಿನ ರಾಜಕಾರಣದ ಬಗ್ಗೆ ಮಾತಾಡುವಾಗ ಪಂಥಗಳು, ಸಿದ್ಧಾಂತಗಳು, ಜಾತಿಗಳು, ಎಲ್ಲ ಕಡೆಯ ವಿಪರೀತಗಳು ಎಂದೆಲ್ಲ ಚರ್ಚೆಯಾಯಿತು. ಆಗ ಮೊದಲ ಸಲ ವೀರಲೋಕ ಪಬ್ಲಿಕೇಶನ್ನಿನ ಕ್ಯಟಲಾಗ್ ತರಿಸಿಕೊಂಡ ನನಗೆ ಅಚ್ಚರಿ ಕಾದಿತ್ತು. ಎಷ್ಟೊಂದು ಹೊಸ ಬರಹಗಾರರ ಪುಸ್ತಕಗಳನ್ನು ತಂದಿದ್ದರು! ಅದೂ ಎಷ್ಟು ವಿಭಿನ್ನ ಪುಸ್ತಕಗಳು!! ಜೊತೆಗೆ ಹಿರಿಯ – ಎಸ್ಟಾಬ್ಲಿಶ್ಡ್ ಬರಹಗಾರರ ಪುಸ್ತಕಗಳೂ ಇದ್ದವು. ಆದರೆ ಪ್ರಾಮುಖ್ಯ ಹೊಸ ಬರಹಗಾರರ ಮೇಲೆ ಇದ್ದಂತೆ ತೋರುತ್ತಿತ್ತು.

ಹೊಸಬರಿಂದ ಹಣ ಪಡೆಯದೆ / ಅವರಿಗೆ ರಾಯಲ್ಟಿಯನ್ನೂ ಕೊಟ್ಟು / ಅವರಿಗೆ ಪ್ರಚಾರವನ್ನೂ ಕೊಟ್ಟು / ಸಮಾರಂಭ ಮಾಡಿ / ಅದನ್ನು ಸರಿಯಾದ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ (ಮಾರ್ಕೆಟಿಂಗ್ ವಿಷಯದಲ್ಲಿ ಒಂದು ಪುಸ್ತಕ ಪ್ರಕಾಶನ ಮಾಡಿರುವ ಖುದ್ದು ನಾನೂ ನಾಲಾಯಕ್) ಗೌರವದಿಂದ ನಡೆಸಿಕೊಳ್ಳೋರು – ದಯವಿಟ್ಟು ಕ್ಷಮೆ ಇರಲಿ – ಬಹಳ ಕಡಿಮೆ ನಮ್ಮ ಕನ್ನಡ ಪ್ರಕಾಶನ ಜಗತ್ತಿನಲ್ಲಿ. ಶ್ರೀನಿವಾಸ್, ಆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ಕೆಲವೇ ಪ್ರಕಾಶಕರಲ್ಲಿ ಒಬ್ಬರು.
ಶ್ರೀನಿವಾಸ್ ಅವರಿಗೆ ನನ್ನಂಥವರ ಮೆಚ್ಚುಗೆಯ, ಶಿಫಾರಸಿನ, ನಾಲ್ಕು ಮಾತಿನ ಅಗತ್ಯವಿಲ್ಲ. ಪುಸ್ತಕ ತರುವ ವಿಚಾರದಲ್ಲಿ ಕಡು ಸೋಮಾರಿ ಮತ್ತು ಯಾವುದೇ ಮಹತ್ವಾಕಾಂಕ್ಷೆ ಇಲ್ಲದ ನನಗೂ ಪ್ರಕಾಶಕರೊಬ್ಬರ ಬಗ್ಗೆ ಪೋಸ್ಟ್ ಹಾಕುವ ಅಗತ್ಯ ಇಲ್ಲ. ಆದರೂ ಈ ಹೊತ್ತು ಈ ಪೋಸ್ಟ್ ಇಲ್ಲಿ ಇರಲು ಕಾರಣ, ಶ್ರೀನಿವಾಸ್ ಅವರ ಮಾತಿನಲ್ಲಿದ್ದ ಪ್ರಾಮಾಣಿಕತೆ. ಕನ್ನಡ ಪುಸ್ತಕಗಳನ್ನು ದೊಡ್ಡ ಮಟ್ಟದಲ್ಲಿ, ದೊಡ್ಡ ವಿಸ್ತಾರದೊಂದಿಗೆ ತರುವ ಹಂಬಲ ಮತ್ತು ಓದುವ ಸಂಸ್ಕೃತಿಯ ಕುರಿತಾದ ಕಾಳಜಿ – ಇವೆಲ್ಲವನ್ನೂ ಕಂಡ ಖುಷಿ.

ಯಾವುದೋ ಒಂದು ಪಬ್ಲಿಕೇಶನ್, ಯಾವುದೋ ಪತ್ರಿಕೆ, ಯಾವುದೋ ವಾಹಿನಿ ಇತ್ಯಾದಿಗಳಲ್ಲಿ ಒಬ್ಬರಲ್ಲ ಒಬ್ಬರು ಗುರುತಿಸಿಕೊಂಡಿರುತ್ತಾರೆ. ಸೈದ್ಧಾಂತಿಕ ಸ್ಪಷ್ಟತೆ ಇದ್ದವರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ಹೀಗೆ ಗುರುತಿಸಿಕೊಳ್ಳುವುದು ನನಗೂ ಇಷ್ಟ ಆಗುವುದಿಲ್ಲ. ಆದರೆ, ಅವರ ಆಯ್ಕೆಗಳನ್ನು ನಾನು ಗೌರವಿಸುತ್ತೇನೆ. ಯಾಕೆಂದರೆ, ಅಂಥವರನ್ನು ವೈಯಕ್ತಿಕವಾಗಿ ನಿಂದಿಸಿ / ಪ್ರಶ್ನಿಸಿ / ಆರೋಪಿಸಿ ಹೀಗಳೆದು ಮಾತಿನ ಕಲ್ಲು ಬೀಸುವ ಕೈಗಳು ಎಷ್ಟು ಕೊಳೆಯಾಗಿವೆ ಅನ್ನುವ ಅಂದಾಜು ನನಗಿದೆ. ಅದನ್ನು ಅಳೆಯುವಷ್ಟು ಸೂಕ್ಷ್ಮತೆಯನ್ನು ಇಷ್ಟು ವರ್ಷದ ಬದುಕು ಧಾರಾಳವಾಗಿ ಕೊಟ್ಟಿದೆ. ಆದ್ದರಿಂದ, ತೀರಾ ಒಂದು ಸೈದ್ಧಾಂತಿಕ ಸಂಸ್ಥೆಯೊಡನೆ ಗುರುತಿಸಿಕೊಂಡಿಲ್ಲದ ಪ್ರಕಾಶಕರನ್ನೂ ಜನರನ್ನೂ ಶೂಲಕ್ಕೆ ಏರಿಸುವ ಕ್ರಮವನ್ನು ನಾನು ಖಂಡಿಸುತ್ತೇನೆ. ಹೀಗೆ ಪ್ರಶ್ನೆ ಮಾಡುವ ಜನರು ಖುದ್ದು ಪ್ರಾಮಾಣಿಕರಾಗಿದ್ದರೆ ಸರಿ; ಅಂಥವರು ಇದ್ದಾರಾ? ಇದು ಮುಖ್ಯ ಪ್ರಶ್ನೆ.
ಇರಲಿ. ಕನ್ನಡ ಪುಸ್ತಕ ಪ್ರಕಾಶನ ಲೋಕದ ಎಲ್ಲರಿಗೂ ಒಳಿತಾಗಲಿ.
– ಚೇತನಾ ತೀರ್ಥಹಳ್ಳಿ, ಕವಿ




