ಬೆಂಗಳೂರು: ಗಡಿ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ಕನ್ನಡ ನಾಡಿನ ಒಂದಿಚು ನೆಲವನ್ನಾಗಲಿ, ಒಂದು ಹನಿ ನೀರನ್ನಾಗಲಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಪರಿಷ್ಕರಣೆ ನಿಯೋಗ ಶೀಘ್ರದಲ್ಲಿಯೇ ಬೆಳಗಾವಿಗೆ ಭೇಟಿ ನೀಡಿ, ಹೋರಾಟಗಾರರ ಜೊತೆಗೆ ಮಾತುಕತೆ ನಡೆಸಲಿದೆ ಗಡಿಯಲ್ಲಿ ನಾಡು-ನುಡಿಗಾಗಿ ಹೋರಾಟ ನಡೆಸುತ್ತಿರುವರ ಜೊತೆ ಕನ್ನಡ ಸಾಹಿತ್ಯ ಪರಿಷತ್ತು ಇದೆ ಎನ್ನುವುದನ್ನು ತಿಳಿಸಲಾಗುವುದು ಎಂದರು.
ಗಡಿ ವಿವಾದವು ಮುಗಿದು ಹೋದ ಅಧ್ಯಾಯವಾಗಿದ್ದು, ಇದನ್ನು ಪದೇ ಪದೇ ಕೆದಕುವುದರಿಂದ ಎರಡೂ ರಾಜ್ಯಗಳ ಶಾಂತಿ ಕದಡುತ್ತದೆ. ಶಾಂತಿ ಪ್ರಿಯರಾದ ಕನ್ನಡಿಗರು ತಾವಾಗಿಯೇ ಎಂದಿಗೂ ಜಗಳಕ್ಕೆ ಹೋಗುವವರಲ್ಲ. ಆದರೆ, ತಮ್ಮ ಮೇಲೆ ಆಕ್ರಮಣ ನಡೆದರೆ ರಕ್ಷಿಸಿಕೊಳ್ಳುವ, ಸಮರ್ಥಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.
ನ್ಯಾಯಾಲಯದ ತೀರ್ಮಾನಗಳು ನಿಷ್ಪಕ್ಷಪಾತವಾಗಿ ನಡೆಯಲು ಎಲ್ಲರೂ ಅದಕ್ಕೆ ಬದ್ದವಾಗಿರಬೇಕು. ಆದರೆ, ವಿವಾದ ನ್ಯಾಯಾಲಯದಲ್ಲಿ ಇರುವಾಗ ನಡೆಯುವ ಇಂತಹ ಘಟನೆಗಳು ಖಂಡನೀಯ. ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ನಡುವೆ ಅವಿನಾಭಾವ ಸಂಬಂಧ ಬಹುಕಾಲದಿಂದಲೂ ಇದ್ದು, ಕೆಲವೇ ಕೆಲವು ಕಿಡಿಗೇಡಿಗಳಿಂದ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಎರಡೂ ರಾಜ್ಯದವರು ಇದನ್ನು ನಿರ್ಲಕ್ಷಿಸಿ, ಸೌಹಾರ್ದಯುತ ನಡವಳಿಕೆಯನ್ನು ಮುಂದುವರೆಸಬೇಕು ಎಂದು ಕರೆನೀಡಿದರು.
ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿ ವಿವಾದದ ಕುರಿತು ಗೋಷ್ಠಿಯೊಂದನ್ನು ನಡೆಸಿ, ಚಿಂತನ ಮಂಥನಕ್ಕೆ ಅವಕಾಶ ಮಾಡಿ ಕೊಡಲಾಗುವುದು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಪರವಾಗಿ ಪರಿಷತ್ತು ಸದಾ ಮಿಡಿಯುತ್ತದೆ ಎಂದರು.




