ನಾಡಿನ ಪ್ರಸಿದ್ಧ ಕವಿಯಿತ್ರಿಯಾಗಿ ಗುರುತಿಸಿಕೊಂಡಿರುವ ಸಹೋದರಿ ರೂಪಾ ಹಾಸನ ಅವರು ಕಳೆದ ಮೂರೂವರೆ ದಶಕಗಳಿಂದಲೂ ಸ್ತ್ರೀವಾದಿ ಚಿಂತಕಿಯಾಗಿ ಮತ್ತು ಸಮಾಜ ಸುಧಾರಕಿಯಾಗಿ ಕನ್ನಡದ ನೆಲದಲ್ಲಿ ಗುರುತಿಸಿಕೊಂಡವರು. ಸ್ತ್ರೀವಾದಿ ಲೇಖಕಿಯಾಗಿದ್ದರೂ ಸಹ ರೂಪಾ ಅವರು ಕೇವಲ ಬರಹ ಮತ್ತು ವೇದಿಕೆಯ ಮೇಲಿನ ಭಾಷಣಗಳಿಗೆ ತಮ್ಮನ್ನು ಸೀಮಿತಗೊಳ್ಳದೆ, ಈ ನೆಲದಲ್ಲಿ ಹೆಣ್ಣು ಜೀವಕ್ಕೆ ಆಗುತ್ತಿರುವ ಎಲ್ಲಾ ಬಗೆಯ ಅನ್ಯಾಯ ಮತ್ತು ಅಸಮಾನತೆಗಳ ವಿರುದ್ಧ ಸಿಡಿದು ನಿಂತವರು. ಜೊತೆಗೆ ಅಮಾಯಕ ಜೀವಗಳಿಗೆ ಬದುಕಿನುದ್ದಕ್ಕೂ ಆಸರೆಯಾದವರು.

ಇಂತಹದ್ದೇ ಮನೋಭಾವ ಹೊಂದಿರುವ ಹಾಗೂ ಕಳೆದ ಎರಡು ದಶಕದಿಂದ ಹತ್ತಿರದಿಂದ ಒಡನಾಡುತ್ತಾ, ನಾನು ನೋಡಿರುವ ಕಲ್ಬುರ್ಗಿಯ ಕೆ.ನೀಲಾ ಗುಲ್ಬರ್ಗ, ಡಾ.ಮೀನಾಕ್ಷಿ ಬಾಳಿ, ಧಾರವಾಡದ ಶಾರದಾ ದಾಬಡೆ ಹಾಗೂ ಜೋಯಿಡಾದಲ್ಲಿ ಕುಣಬಿ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಯಮುನಾ ಗಾಂವ್ಕರ್ ಈ ಸಹೋದರಿಯರ ಮೇಲೂ ನನಗೆ ಅಪಾರ ಗೌರವಿದೆ ಏಕೆಂದರೆ, ಇವರೆಲ್ಲರೂ ಮಾತಿನ ಜೊತೆಗೆ ಕ್ರಿಯೆಗೂ ಮಹತ್ವ ನೀಡಿದವರು.
ಇಂತಹ ಕಾರಣದಿಂದಾಗಿ ರೂಪಾ ಹಾಸನ ಅವರು ಉಳಿದವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅವರು ಮಾತುಗಳು, ಅಕ್ಷರಗಳು ಮತ್ತು ಚಿಂತನೆಗಳಲ್ಲಿ ಕಿಂಚಿತ್ತೂ ಕೃತಕ ಭಾವನೆಗಳು ಇಲ್ಲದಿರುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ಕಳೆದ ಎರಡು ದಶಕಗಳಿಂದ ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಕಲನವಾದ ‘’ಇವಳ ಭಾರತ’’ ಕೃತಿಯು ಒಂದು ರೀತಿಯಲ್ಲಿ ಭಾರತದ ಹೆಣ್ಣುಗಳ ಸಂಕಟದ ಸಂಕಂಥನವೂ ಹೌದು. ಈ ಕೃತಿಯಲ್ಲಿನ ಲೇಖನಗಳು ನಮ್ಮೆದುರು ತೆರೆದಿಡುವ ಕರಾಳ ಸತ್ಯಗಳು ನಮ್ಮ ಎದೆಯ ಕದವನ್ನು ತಟ್ಟುವುದರ ಮೂಲಕ ಕ್ಷಣಕಾಲ ಚಿಂತನೆಗೆ ದೂಡುತ್ತವೆ. ಈ ಕೃತಿಯಲ್ಲಿನ ಬಹುತೇಕ ಲೇಖನಗಳನ್ನು ನಾನು ಈ ಮೊದಲು ಓದಿದ್ದೆ; ಆದರೆ ಇಡಿಯಾಗಿ ಓದುವಾಗ ಭಾರತವೆಂಬ ಬಹುಸಂಸ್ಕೃತಿಯ ಈ ನೆಲದಲ್ಲಿ ವಿವಿಧ ಪದ್ಧತಿಗಳು ಹಾಗೂ ಆಚರಣೆಗಳ ನೆಪದಲ್ಲಿ ಹೆಣ್ಣು ಜೀವ ನರಳುತ್ತಿರುವ ಬಗೆಯನ್ನು ಓದುತ್ತಿದ್ದರೆ ಮನಸ್ಸು ಭಾರವಾಗುತ್ತದೆ.

ರೂಪಾ ಹಾಸನ ಅವರು ಎಂದಿಗೂ ಪ್ರಚಾರ ಪಡೆಯುವ ಹಂಬಲದಿಂದ ಅಥವಾ ಸಾಮಾಜಿಕ ನಾಯಕಿಯಾಗಬೇಕು ಎಂಬ ಕಾರಣಕ್ಕಾಗಿ ಸಮಾಜ ಸೇವೆಗೆ ಇಳಿಯಲಿಲ್ಲ. ಅವರು ಕಾಲೇಜು ದಿನಗಳಿಂದಲೇ ಎನ್.ಎಸ್.ಎಸ್. ಶಿಬಿರದಲ್ಲಿ ತೊಡಗಿಸಿಕೊಂಡು ಶ್ರಮದಾನದ ಮೂಲಕ ಸಮಾಜ ಸೇವೆಗೆ ತೆತ್ತುಕೊಂಡವರು. ರೂಪಾ ಅವರ ಇಡೀ ದೇಹದ ಮಾಂಸ, ಮಜ್ಜೆ ಮತ್ತು ರಕ್ತದ ಕಣಕಣಗಳಲ್ಲಿ ನನ್ನ ಕಣ್ಣ ಮುಂದೆ ಪರಿತಪಿಸುವ ಜೀವಗಳನ್ನು ಉಳಿಸಬೇಕು, ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿ ನಿಲ್ಲಬೇಕು ಎಂಬ ಪ್ರತಿಜ್ಞೆಯ ಭಾವ ಸದಾ ಜೀವಂತವಾಗಿದೆ. ಹಾಗಾಗಿ ಅವರ ಕಾವ್ಯದ ಸಾಲುಗಳಲ್ಲಿ ಮತ್ತು ಚಂತನೆಗಳ ಮೂಲದಲ್ಲಿ ಮಾನವೀಯತೆ ಎಂಬುದು ಸದಾ ಉಸಿರಾಡುತ್ತಿದೆ. ಈ ಕೃತಿಯ ಪ್ರಸ್ತಾವನೆಯಲ್ಲಿ ಸಹೋದರಿ ರೂಪಾ ಅವರು ಬರೆದುಕೊಂಡಿರುವ ಈ ಸಾಲುಗಳು ಅವರ ನಿಷ್ಕಲ್ಮಶ ಹೃದಯಕ್ಕೆ ಸಾಕ್ಷಿಯಾಗಿವೆ.
‘’ಹೆಣ್ಣಿನ ಘನತೆ ಮತ್ತು ಅಸ್ಮಿತೆಯನ್ನು ಚೂರಾಗಿಸಲು ಸುತ್ತಲೂ ಕತ್ತಿ ಹಿಡಿದು ನಿಂತಿರುವ ಈ ಎಲ್ಲಾ ದುಷ್ಟಶಕ್ತಿಗಳನ್ನು ಎದುರಿಸುವ ಬಗೆಗಳನ್ನು ಅನಾದಿ ಕಾಲದಿಂದಲೂ ಹೆಜ್ಜೆ ಹೆಜ್ಜೆಗೂ ಹುಡುಕುತ್ತಾ ಬಂದಿದ್ದೀವಿ. ಆದರೆ, ಈಗ ಅದನ್ನು ಮತ್ತಷ್ಟು ತೀವ್ರವೂ, ಸೂಕ್ಷ್ಮವೂ, ಹರಿತವೂ ಆಗಿಸಬೇಕಿದೆ. ಸಮತ್ವ ಮತ್ತು ಸಮತೋಲನದ ಘನತೆಯ ಕನಸಿನ ಸಾಕಾರಕ್ಕಾಗಿ ಕ್ರೌರ್ಯವನ್ನು ಹಿಮ್ಮೆಟ್ಟಿಸುವ ದಾರಿಗಳನ್ನು ತುರ್ತಾಗಿ ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ. ಹೀಗಾಗಿ ಪ್ರತಿ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಪ್ರತ್ಯಕ್ಷ ಘಟನೆಯನ್ನು ಬಿಡಿ ಘಟನೆಯಾಗಿ ನೋಡುತ್ತಲೇ, ಅದಕ್ಕೆ ಜೊತೆಯಾಗುತ್ತಾ ಅದನ್ನು ಕಾಲ ಮತ್ತು ಇತಿಹಾಸದ ಪ್ರಕ್ರಿಯೆಯೊಂದಿಗೆ ಇಡಿಯಾಗಿ, ಸಮಗ್ರವಾಗಿ ಅರ್ಥೈಸಿಕೊಂಡರಷ್ಟೇ ಅದರ ಹಿಂದೆ ಸೂಕ್ಷ್ಮ ಕುಣಿಕೆಯಾಗಿ ಹರಡಿರುವ ಪುರುಷ ಪ್ರಾಧಾನ್ಯ, ಕೋಮು, ಜಾತಿ, ಸಮಾಜ, ರಾಜಕಾರಣ ಹಾಗೂ ಬಂಡವಾಳಶಾಹಿಯ ಕರಾಳ ಕೈಗಳು ಗೋಚರಿಸಲು ಸಾಧ್ಯವಾಗುತ್ತದೆ.’’
ಇಂದು ನಾವು ಬದುಕುತ್ತಿರುವ ವರ್ತಮಾನದ ಸಮಾಜಕ್ಕೆ ರೂಪಾ ಅವರು ಹಿಡಿದ ಕೈಗನ್ನಡಿ ಎಂಬಂತೆ ಅವರ ಮಾತುಗಳು ಗೋಚರಿಸುತ್ತವೆ.
ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಭಾರತದಲ್ಲಿ ಇಂದು ಮೊದಲಿನ ಹಾಗೆ ಅನಕ್ಷರತೆ ತಾಂಡವವಾಡುತ್ತಿಲ್ಲ. ಆದರೆ, ನೈತಿಕತೆಯು ತಳಕಚ್ಚಿದೆ. ಇಲ್ಲಿನ ಕಾನೂನುಗಳು ಎಷ್ಟೇ ಬಲಿಷ್ಠವಾಗಿದ್ದರೂ ಅತ್ಯಾಚಾರಗಳು ನಡೆಯುತ್ತಲೇ ಇವೆ. ಅದರಲ್ಲೂ ವಿಷೇಷವಾಗಿ ಅಮಾಯಕ ಮುಗ್ಧ ಬಾಲಕಿಯರು ಅತ್ಯಾಚಾರದ ಅಮಾನುಷ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ. ಈ ಲೇಖನವನ್ನು ಬರೆಯುತ್ತಿರುವ ಈ ಕ್ಷಣದಲ್ಲಿ ನಿನ್ನೆ ತುಮಕೂರಿನ ಸಿದ್ಧಗಂಗಾ ಜಾತ್ರೆಯಲ್ಲಿ ಮೂವರಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಮತ್ತು ಹುಲಿಯೂರು ದುರ್ಗ ಸಮೀಪದ ಚೌಡೇಶ್ವರಿ ಮಠದ ಸ್ವಾಮೀಜಿಯೊಬ್ಬನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯ ಚಿತ್ರಣ ಮನದಲ್ಲಿ ಹರಿದಾಡುತ್ತಿದೆ. ಶತಮಾನಗಳು ಕಳೆದರೂ ಸಹ ಹೆಣ್ಣು ಜೀವವೊಂದನ್ನು ಮನರಂಜನೆಯ ವಸ್ತುವಾಗಿ ಹಾಗೂ ಕಾಮದ ತೃಷೆಯ ಗೊಂಬೆಯಾಗಿ ನೋಡುವ ಈ ಜಗದ ದೃಷ್ಟಿಕೋನ ಬದಲಾಗದೆ ಇರುವುದು ವರ್ತಮಾನದ ದುರಂತವಲ್ಲದೆ ಬೇರೇನೂ ಅಲ್ಲ.
ಸುಮಾರು ನಾಲ್ಕನೂರು ಅರವತ್ತು ಪುಟಗಳಿಷ್ಟು ಇರುವ ಇವಳ ಭಾರತ ಕೃತಿಯಲ್ಲಿ ರೂಪಾ ಹಾಸನ ಅವರ ಸಾಹಿತ್ಯ ಕೃತಿಗಳ ಕುರಿತಾಗಿ ಬರೆದ ಲೇಖನ, ಮುನ್ನುಡಿಗಳು, ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು, ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳು ಹಾಗೂ ಸಂದರ್ಶನಗಳಿವೆ. ಅವರ ಲೇಖನ, ಪ್ರಬಂಧ, ಅಂಕಣ ಬರಹಗಳ ವಿಶೇಷವೆಂದರೆ, ಅವರು ‘’ನಾನು ಟೈಮ್ ಪಾಸ್ ಸಂತತಿಯ ಲೇಖಕಿಯಲ್ಲ’’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಾಗ ಒಂದರಲ್ಲಿ ಅಸ್ಮಿತೆಯ ಸವಾಲುಗಳನ್ನು ಎದುರಿಸುತ್ತಾ, ಭಾಗ ಎರಡರಲ್ಲಿ ಸಾಂದರ್ಭಿಕ ದನಿ, ಭಾಗ ಮೂರರಲ್ಲಿ ನಾವೂ ಇದ್ದೇವೆ, ಭಾಗ ನಾಲ್ಕರಲ್ಲಿ ಜಾತಿ ಮತಗಳ ಸಂಕೋಲೆ, ಭಾಗ ಐದರಲ್ಲಿ ಸಮಸ್ಯೆಗಳ ಸುಳಿ, ಭಾಗ ಆರರಲ್ಲಿ ಜೀವ ತಳಮಳ, ಭಾಗ ಏಳರಲ್ಲಿ ದಮನಿತರ ಲೋಕ ಇವುಗಳಲ್ಲಿನ ಬಹುತೇಕ ಲೇಖನಗಳು ಆಳವಾದ ಅಧ್ಯಯನ ಮತ್ತು ಖಚಿತವಾದ ಅಂಕಿ ಅಂಶಗಳಿಂದ ಕೂಡಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಒಂದು ರೀತಿಯಲ್ಲಿ ಈ ಕೃತಿಯು ಭಾರತೀಯ ಹೆಣ್ಣು ಜೀವಗಳ ಸಮಗ್ರ ದಾಖಲೆ ಎನ್ನಬಹುದು.
ಎಸ್.ಎಲ್. ಬೈರಪ್ಪನವರ ಕವಲು ಕಾದಂಬರಿಯನ್ನು ಅತ್ಯಂತ ಸಮರ್ಥವಾಗಿ ವಿಶ್ಲೇಷಣೆ ಮಾಡಿರುವ ರೂಪಾ ಅವರು ಈ ಕೃತಿಯನ್ನು ‘’ಮನುವಾದದ ಮರು ಪ್ರತಿಷ್ಠಾಪನೆಯ ಪ್ರಯತ್ನ’’ ಎಂದು ಹೇಳುವುದರ ಮೂಲಕ ಕಾದಂಬರಿಕಾರನ ಎದೆಯೊಳಗೆ ಹುದುಗಿರುವ ವಿಷವನ್ನು ಅನಾವರಣಗೊಳಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕುರಿತು ಬರೆದ ‘’ಕಂದ ನಿಮ್ಮವಳೆಂದು ಕಾಣಿರೆ’’ ಲೇಖನದಲ್ಲಿ ಓರ್ವ ಅನಕ್ಷರಸ್ಥ ಯುವತಿಯ ನೋವಿನ ಕಥನವನ್ನು ದಾಖಲಿಸಿದ್ದಾರೆ.
ಅದೇ ರೀತಿ ‘’ಬಸಿರು ವ್ಯಾಪಾರಿ ರಾಜಕಾರಣದ ಸರಕು’’ ಹೆಸರಿನಲ್ಲಿ ಬರೆದಿರುವ ಲೇಖನದಲ್ಲಿ ಸರಿಯಾದ ಆರೋಗ್ಯ ವ್ಯವಸ್ಥೆ ಮತ್ತು ಚಿಕಿತ್ಸೆ ಇಲ್ಲದೆ ಸಾಯುತ್ತಿರುವ ನೂರಾರು ತಾಯಂದಿರು ಮತ್ತು ಕಂದಮ್ಮಗಳ ಕಥೆ ಹೇಳಿದ್ದಾರೆ. ಇಂತಹ ದರಿದ್ರ ಭಾರತದ ವ್ಯವಸ್ಥೆಯಲ್ಲಿ ಜೀವಂತ ಶವಗಳಾಗಿ ಬದುಕುತ್ತಿರುವ ಹೆಣ್ಣು ಮಕ್ಕಳ ಕಥನ ನಿಜಕ್ಕೂ ಘನಘೋರವಾಗಿದೆ.
ಭಾರತದ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುತ್ತಿರುವ ರಾಜಕಾರಣಿಗಳಿಗೆ ಭಾರತದಲ್ಲಿ ಲಿಂಗ ಅಸಮಾನತೆ ಮುಗಿಲು ಮುಟ್ಟಿರುವುದು ಗೋಚರಿಸುತ್ತಿಲ್ಲ. ಹೆಣ್ಣು ಮಕ್ಕಳು ಜನಿಸುವುದು ಕುಟುಂಬಕ್ಕೆ ಹೊರೆ ಎಂಬ ಅಪನಂಬಿಕೆಯೊಂದು ದಿನೇದಿನೆ ವೃದ್ಧಿಸುತ್ತಿದೆ. ಇದು ಭಾರತದ ಸಾಮಾಜಿಕ ಬದುಕನ್ನು ಈಗಾಗಲೇ ಅನಾಹುತದತ್ತ ಕೊಂಡೊಯ್ದಿದೆ. ಹಲವಾರು ಸಮುದಾಯಗಳಲ್ಲಿ ಪ್ರಾಯಕ್ಕೆ ಬಂದ ಯುವಕರಿಗೆ ವಿವಾಹವಾಗಲು ಯುವತಿಯರು ದೊರೆಯುತ್ತಿಲ್ಲ.
ರೂಪಾ ಹಾಸನ ಅವರು ‘’ಹೆಣ್ಣು ಉಳಿದರೆ, ನಾಡು ಉಳಿದೀತು’’ ಎಂಬ ಲೇಖನದಲ್ಲಿ ಭಾರತದ ವಿವಿಧ ಸಮುದಾಯಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಜನನದ ದಾಖಲೆಯ ಅಂಕಿ ಅಂಶ ನೀಡುತ್ತಾರೆ. ಹಿಂದೂ ಸಮಾಜದಲ್ಲಿ ಪ್ರತಿ ಒಂದು ಸಾವಿರ ಗಂಡು ಮಕ್ಕಳಿಗೆ ಪ್ರತಿಯಾಗಿ 925 ಹೆಣ್ಣು ಮಕ್ಕಳು ಜನಿಸಿದ್ದರೆ, ಸಿಖ್ ಧರ್ಮದಲ್ಲಿ 786, ಜೈನ ಧರ್ಮದಲ್ಲಿ 870, ಬೌದ್ಧ ಧರ್ಮದಲ್ಲಿ 942 ಮುಸ್ಲಿಂ ಧರ್ಮದಲ್ಲಿ 950 ಹಾಗೂ ಕ್ರೈಸ್ತಧರ್ಮದಲ್ಲಿ 964 ಹೆಣ್ಣು ಮಕ್ಕಳು ಜನಿಸುತ್ತಿರುವುದನ್ನು ದಾಖಲಿಸುವುದರ ಮೂಲಕ ಆಧುನಿಕ ಪುರುಷ ಜಗತ್ತಿನ ವಿಕೃತ ಆಲೋಚನೆಯ ಲೋಕವೊಂದನ್ನು ನಮ್ಮೆದುರು ತೆರೆದಿಟ್ಟಿದ್ದಾರೆ.
ಜೈನ ಸಮುದಾಯದಲ್ಲಿ ಜನಿಸಿದ ರೂಪಾ ಅವರದು ಧರ್ಮ ಮತ್ತು ಜಾತಿಗಳನ್ನು ಮೀರಿದ ವ್ಯಕ್ತಿತ್ವ ಹಾಗೂ ಅಪ್ಪಟ ಮನುಷ್ಯತ್ವವನ್ನು ನಂಬುವ ಮನೋಧರ್ಮ. ಹಾಗಾಗಿ ಒಂದೆಡೆ ಹೆಣ್ಣು ಜೀವಗಳ ರಕ್ಷಣೆಗಾಗಿ ಹೋರಾಡುತ್ತಲೇ, ಇನ್ನೊಂದೆಡೆ ಹಾಸನ ಜಿಲ್ಲೆಯಲ್ಲಿ ಭೂಮಿ ಟ್ರಸ್ಟ್ ಅಡಿಯಲ್ಲಿ ಪರಿಸರ ರಕ್ಷಣೆಗ ಮುಂದಾಗಿದ್ದಾರೆ. ಅಲ್ಲಿನ ಕೆರೆ ಕಟ್ಟೆಗಳ ಉಳಿವಿಗಾಗಿ ಸಮಾನ ಮನಸ್ಕರ ಜೊತೆ ಕೈ ಜೋಡಿಸಿರುವ ಈ ಸಹೋದರಿಯ ಬರಹ ಮತ್ತು ಬದುಕು ಎರಡೂ ಇಂದಿನ ಯುವ ತಲೆಮಾರಿಗೆ ಮಾದರಿಯಾಗುವಂತಹದ್ದು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




