ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿಗೆ ಆರ್ ಜಿ ಹಳ್ಳಿ ನಾಗರಾಜ್ ಬಹಿರಂಗ ಪತ್ರ

10 months ago

ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌ. ಕಾರ್ಯದರ್ಶಿ ಪ್ರಿಯ ಎಚ್.ಬಿ.  ಮದನಗೌಡ್ರೆ,

ಬೆಳಗ್ಗೆ ಪತ್ರಿಕೆ ನೋಡಿ ಬೇಸರ ಹಾಗೂ ನೋವಿನಂದ ಈ ಕೆಲವು ಮಾತು ಬರೆಯುವುದು ಅನಿವಾರ್ಯ ಆಗಿದೆ. “ಹಾಳೂರಿಗೆ ಉಳಿದವನೆ ಗೌಡ” ಎಂಬ ಗಾದೆ ಮಾತನ್ನು ನೀವು ನಿಮ್ಮ ಮಿತ್ರರು ನಿಜ ಮಾಡಿದಿರಿ. ಹಾಳಾದ ಪರಿಷತ್ತಿಗೆ ಇಬ್ಬರು ಗೌಡರೆ ಗತಿ!

ನಿಮಗಿದು ಬೇಕಿತ್ತಾ ಗೌಡ್ರೆ?
ಯಾರ ಒತ್ತಾಯಕ್ಕೆ ಈ ಗೌರವ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡಿರಿ? ಆ ಕುರ್ಚಿ ಮುಳ್ಳಿನ ಕುರ್ಚಿ. ಅದು ಅಧಕ್ಷನೊಬ್ಬನ ಭ್ರಷ್ಟತೆಗೆ ಸಾಕ್ಷಿಯಾದ, ಸ್ವಾತಂತ್ರ್ಯವಿಲ್ಲದ ಗುಲಾಮಗಿರಿಯ ಕುರ್ಚಿ. ನಾಲ್ವರು ಈ ಮೂರು ವರ್ಷದಲ್ಲಿ ಖಾಲಿಮಾಡಿ ಹೋದ ಕುರ್ಚಿ ಇದು! ಇದರ ಮಹಿಮೆ ಅಪಾರ. ಸ್ವಾಭಿಮಾನ ಮಾರಿಕೊಂಡು, ಆತ ಹೇಳಿದಂತೆ ಕೋಲೆ ಬಸವನ ಥರಾ ತಲೆ ಹಾಕಿ ನಡೆದರೆ ನಿಮಗೆ ಉಳಿಗಾಲ. ಇಲ್ಲವಾದರೆ ಅವರ ಸೇವೆಯೇ ಭಾಗ್ಯ (ಕನ್ನಡ ಹಾಗೂ ಸಾಹಿತ್ಯದ ಸೇವೆ ಅಲ್ಲ!) ಅಂದುಕೊಂಡರೆ ನಾನು ಅಸಹಾಯಕ!

ಈಚೆಗೆ ಹೊರಬಂದ ಇಬ್ಬರು ಗೌರವ ಕಾರ್ಯದರ್ಶಿಗಳ ಅನುಭವ ಕೇಳಿ ಈ ಮುಳ್ಳಿನ ಕುರ್ಚಿಯಲ್ಲಿ ಕುಳಿತುಕೊಳ್ಳಿ. ಈಗಾಗಲೆ ಹಿಂದೆ ಇದ್ದ ಗೌ. ಕಾರ್ಯದರ್ಶಿ ಶ್ರೀಮತಿ ಪದ್ಮಿನಿ ನಾಗರಾಜು ಅವರು ಬೆಂಗಳೂರು ಟೌನ್ ಹಾಲಿನ ಸಭೆಯಲ್ಲಿ ಮಾತಾಡಿದ ಆಡಿಯೋ ಹರಿದಾಡುತ್ತಿದೆ. ನಾನೆ ಅದನ್ನು ನಿಮಗೆ ಕಳುಹಿಸುವೆ. ಕೇಳಿರದಿದ್ದರೆ ಮತ್ತೊಮ್ಮೆ ಈ ಕುರ್ಚಿಯಲ್ಲಿ ಕೂತು ಕೆಲವು ನಿಮಿಷ ಬಿಡುವು ಮಾಡಿಕೊಂಡು ಕೇಳಿ. ಮುಂದಿನ ನಿರ್ಧಾರ ನಿಮಗೆ ಬಿಟ್ಟಿದ್ದು.

ನಿಮ್ಮ ಸನ್ಮಾನ್ಯ ಅಧ್ಯಕ್ಷರು ಆರ್ಥಿಕ ಅಶಿಸ್ತಿನ ಆಪಾದನೆಗೆ ಗುರಿಯಾಗಿ ಎರಡು ಹಂತದಲ್ಲಿ ಸರ್ಕಾರದ ವಿಚಾರಣೆ ಒಳಪಟ್ಟಿರುವಾಗ ನಿಮಗೆ ಈ ಸ್ಥಾನ ಬೇಕು ಅಂತ ಏಕೆ ಅನ್ನಿಸಿತು? ಅವನನ್ನು ಈ ಆಪಾದನೆಯಿಂದ ಮುಕ್ತಗೊಳಿಸಲು ಬಂದಿರಾ? ಈ ಅಧ್ಯಕ್ಷ ತಪ್ಪಿತಸ್ಥ ಆದರೆ, ಸರ್ಕಾರದಿಂದ ಆಡಳಿತಾಧಿಕಾರಿ ಬರುತ್ತಾರೆ. ನಿಮ್ಮ ಅಲ್ಪಕಾಲದ ಈ ಹುದ್ದೆ ಹೋಗುತ್ತದೆ. ಆಗ ಈ ಸ್ಥಾನಕ್ಕೆ ಅರ್ಥ ಇರಬಲ್ಲುದೆ? ನಿಮ್ಮ ಭಾವಿ ರಾಜ್ಯಾಧ್ಯಕ್ಷ ಕನಸು ಭಗ್ನವಾಗುತ್ತವೆ ಅಲ್ಲವೆ? ಎಲ್ಲಾ ಗೊತ್ತಿದೆಯೋ, ಗೊತ್ತಿಲ್ಲವೋ…

ಬೆಂಗಳೂರು, ಮಂಡ್ಯ, ರಾಮನಗರ, ಶಿವಮೊಗ್ಗ, ಭಾಗಶಃ ಹಾಸನ ಜಿಲ್ಲೆಗಳಲ್ಲಿ ಜೋಸಿ ವಿರುದ್ಧ ಬಹುದೊಡ್ಡ ಕೂಗು, ಪ್ರತಿರೋಧ ಎದ್ದಿರುವುದು ಗೊತ್ತಿಲ್ಲವೆ? ನೀವು ಒಬ್ಬ ಪತ್ರಕರ್ತರಾಗಿ ನಮ್ಮ ಸಾಹಿತಿಗಳು, ಕನ್ನಡಪರ ಹೋರಾಟಗಾರರ ಸಂಘಟಿತ ಹೋರಾಟದ ಬಗ್ಗೆ ಅರಿವಿಲ್ಲವೆ? ಅನ್ಯಾಯ ಹಾಗೂ ಭ್ರಷ್ಟತೆ ವಿರುದ್ಧ ದನಿ ಎತ್ತಿದ ನಮಗೆ ಲಾಯರ್ ನೋಟೀಸು, ಕೋಟಿಗಟ್ಟಲೆ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವ ಸಣ್ಣ ಮನಸ್ಸಿನ ಅಸಾಹಿತಿಗೆ ಮೈತುಂಬ ದ್ವೇಷದ ವಿಷವೇ ತುಂಬಿದೆ. ಸಾಹಿತ್ಯದ ಗಂಧಗಾಳಿ ಇಲ್ಲದ ಈತ, ಆಜೀವ ಸದಸ್ಯತ್ವ ರದ್ದು ಮಾಡುವ ಸಣ್ಣತನದ ಕಹಿ ಬುದ್ಧಿಯ ಮನುಷ್ಯ. ಈತ ದೂರದರ್ಶನದಲ್ಲಿ ಇದ್ದಾಗಲೂ ಅಲ್ಲಿ ಎಷ್ಟೊಂದು ಜನರ ಗೋಳು ಹುಯ್ಕೊಂಡಿದ್ದ ಗೊತ್ತೆ? ಅಲ್ಲಿನ ತಪ್ಪಿಗೆ ಕೋರ್ಟು ಇವನಿಗೆ (ಎನ್.ಕೆ. ಮೋಹನ ರಾಂ ಕೇಸಲ್ಲಿ) ರೂ.1.20 ಲಕ್ಷ ದಂಡ ವಿಧಿಸಿತ್ತು. ಅವನು ತಪ್ಪಿತಸ್ಥ ಅಲ್ಲವೆ? (ಇದಕ್ಕೆ ತಡೆ ತಂದಿರಬಹುದು… ಅದು ಬೇರೆ ವಿಚಾರ)

ನಿಮ್ಮ ಹುಸಿನಗೆಯ ಹಿಂದೆ ಈ ಸ್ಥಾನದಿಂದ ಮುಂದೆ ಉನ್ನತ ಹುದ್ದೆಗೆ ಏರುವ ಕನಸಿನಿಂದ ಬಂದಿದ್ದರೆ ನಿಮಗೆ ಭಾರಿ ನಿರಾಶೆ ಕಾದಿದೆ – ಮದನಗೌಡ್ರೆ. ಜನ ಎಲ್ಲಾ ಗಮನಿಸುತ್ತಿದ್ದಾರೆ. ನಾವು ರಾಜ್ಯದಲ್ಲಿ ಬಲವಾಗಿ ಸಂಘಟಿತರಾಗುತ್ತಿದ್ದೇವೆ.

ನಾನು, ನೀವು ಹಿರಿಯ ಸಾಹಿತಿ ಡಾ. ನಲ್ಲೂರು ಪ್ರಸಾದ್ ಕಸಾಪ ಅಧ್ಯಕ್ಷರಾಗಲು ಅವರ ಜೊತೆ ಇಡೀ ರಾಜ್ಯ ಸುತ್ತಿದವರು. ಅದರಲ್ಲಿ ನನ್ನ ಶ್ರಮವೂ ಇತ್ತು. ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಯಲ್ಲಿ ನಾನು, ನೀವು ಭಾಗಿಯಾಗಿದ್ದೇವೆ. ಒಟ್ಟಿಗೇ ಪ್ರಶಸ್ತಿ ಪಡೆದಿದ್ದೇವೆ. ಈ ಮೂಲಕ ಎಲ್ಲವನ್ನೂ ಬಲ್ಲ ನನಗೆ ನಿಮ್ಮ ನಡೆ ಆಶ್ಚರ್ಯ ಉಂಟು ಮಾಡಿದೆ. ನೀವು ಹೆಚ್ಚುಕಾಲ ಖಂಡಿತವಾಗಿಯೂ ಅಲ್ಲಿ ಇರಲಾರಿರಿ. ನಿಮಗೆ ಸಂತೋಷ, ನೆಮ್ಮದಿ ಹಾಳಾಗಿ ಬೇಗನೆ ನಿರ್ಗಮಿಸುತ್ತೀರಿ ಎಂದು ಭವಿಷ್ಯ ನುಡಿಯುತ್ತೇನೆ. ನನ್ನ ಭವಿಷ್ಯ ಸುಳ್ಳು ಮಾಡಲು ಇರುವುದಾದರೆ ನಿಮ್ಮತನ, ಸ್ವಾಭಿಮಾನ “ಅಡ ಇಟ್ಟು” ಇರಿ.

ನಿಮಗಾಗಲಿ, ಅಧಕ್ಷನಿಗಾಗಲಿ  ಶುಭವಾಗಲಿ ಎಂದು ಈ ಸ್ವಾತಂತ್ರ್ಯದಿನ ಹೇಳಲಾರೆ.

– ಆರ್ ಜಿ ಹಳ್ಳಿ ನಾಗರಾಜ, ಕಸಾಪ ಆಜೀವ ಸದಸ್ಯ ಹಾಗೂ ಪತ್ರಕರ್ತ, ಸಾಹಿತಿ

Leave a Reply