ಮಧ್ಯವರ್ತಿಗಳ ಹಾವಳಿಗೆ ಕಡಿವಾಣ
ಹಾವೇರಿಯಲ್ಲಿ 1.10 ಲಕ್ಷ ಹಕ್ಕುಪತ್ರ ವಿತರಣೆ
ಗದಗ: ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ತಹಶೀಲ್ದಾರ್ ಕಚೇರಿಗಳಲ್ಲಿ 10,774 ಅವಧಿ ಮೀರಿದ ಪ್ರಕರಣಗಳಿದ್ದವು. ವಿಶೇಷ ಅಭಿಯಾನ ಹಮ್ಮಿಕೊಂಡು ಅವುಗಳನ್ನು ವಿಲೇವಾರಿ ಮಾಡಲಾಗಿದ್ದು, ಸದ್ಯ 478 ಪ್ರಕರಣ ಮಾತ್ರ ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಎ.ಸಿ ನ್ಯಾಯಾಲಯಗಳಲ್ಲಿ 73,624 ಅವಧಿ ಮೀರಿದ ಪ್ರಕರಣಗಳಿದ್ದರೆ, ಈಗ ಅವು 11,605 ಕ್ಕೆ ಇಳಿದಿವೆ. ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇದ್ದ 32,782 ಪ್ರಕರಣಗಳಲ್ಲಿ ಕೇವಲ 3,155 ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಇವುಗಳನ್ನು ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಬಗರ್ ಹುಕುಂ ರೈತರ ಜಮೀನುಗಳ ಸರ್ವೆ ಮತ್ತು ಆರ್.ಟಿ.ಸಿ ಸಮಸ್ಯೆ ನಿವಾರಣೆಗೆ “ನನ್ನ ಭೂಮಿ ಅಭಿಯಾನ” ಆರಂಭಿಸಲಾಗಿದೆ. 2013-18 ಅವಧಿಯಲ್ಲಿ 5,842 ಪೋಡಿ ದುರಸ್ತಿ ಆಗಿದ್ದರೆ, 2018-23ರಲ್ಲಿ 8,500 ಪ್ರಕರಣಗಳು ವಿಲೇವಾರಿಯಾಗಿವೆ. ಜನವರಿ 2025ರಿಂದ ಆರಂಭವಾದ ಅಭಿಯಾನದಡಿ ಸದ್ಯ ರಾಜ್ಯಾದ್ಯಂತ 1,93,615 ಪ್ರಕರಣಗಳಲ್ಲಿ ಸರ್ವೆ ಮತ್ತು ಪೋಡಿ ದುರಸ್ತಿ ನಡೆಯುತ್ತಿದೆ. ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿರುವುದು ಸರ್ಕಾರದ ಬದ್ಧತೆಯ ಕಾರ್ಯ ಎಂದರು.
ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ. 14 ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಇದೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಉಳಿದಿದ್ದ 49 ಲಕ್ಷ ಜಮೀನುಗಳನ್ನು ಗುರುತಿಸಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ 50 ಸಾವಿರ ಪ್ರಕರಣಗಳಿದ್ದು, ಸದ್ಯ 12 ಸಾವಿರ ಮಾತ್ರ ಬಾಕಿ ಉಳಿದಿವೆ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಧನವಾಗಿ 5 ಕೋಟಿ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಹಳೆ ದಾಖಲೆಗಳ ನಕಲಿ ತಡೆಗಟ್ಟಲು “ಭೂಸುರಕ್ಷಾ” ಯೋಜನೆಯಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭೂಮಿಯ ಮಾಲಿಕತ್ವಕ್ಕೆ ಗ್ಯಾರಂಟಿ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ.
ಗ್ರಾಮ ಲೆಕ್ಕಾಧಿಕಾರಿಗಳಿಗೆ 5 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದು, ಅತ್ಯಾಧುನಿಕ ಸರ್ವೆ ಉಪಕರಣಗಳನ್ನು ಕೂಡ ಒದಗಿಸಲಾಗಿದೆ ಎಂದು ಸಚಿವರ ಕೃಷ್ಣ ಬೈರೇಗೌಡ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಉಪಸ್ಥಿತರಿದ್ದರು.




