ಪಹಣಿಗಳಿಗೆ ಆಧಾರ್ ಜೋಡಣೆ ಆರಂಭ
ಆಟೋಮ್ಯುಟೇಷನ್‌ಗೆ ಚಾಲನೆ
ಭಾನುವಾರವೂ ತೆರೆದಿರಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ
ಬೆಂಗಳೂರು: ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದಿಂದ ಈ ಮಹತ್ವದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೆಲವೆಡೆ ಪೈಲಟ್ ಆಗಿ ಮಾಡಲಾಗಿದೆ. ಇದನ್ನು ಇಂದಿನಿಂದ ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದರು.
ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಸಂಬಂಧ ನಮ್ಮ ಗ್ರಾಮಾಧಿಕಾರಿಗಳು 19 ಲಕ್ಷ ರೈತರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ 6 ಲಕ್ಷ ಪಹಣಿಗಳಿಗೆ ಸಂಬಂಧಿಸಿದಂತೆ ಅದರ ಖಾತೆದಾರರು ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳು ಇದ್ದರೆ ದುರುಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಆಧಾರ್ ಜೋಡಣೆ ಮಾಡುವುದರಿಂದ ಯಾರದ್ದೋ ಆಸ್ತಿ ಮತ್ತಾರೋ ನೋಂದಣಿ ಮಾಡಿಸಿಕೊಳ್ಳುವಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹದು ಎಂದರು.
ಆಸ್ತಿಗಳ ನೋಂದಣಿ ಸಮಯದಲ್ಲಿಯೂ ಸಹ ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತದೆ. ಆಗ ಆಧಾರ್ ಸಂಖ್ಯೆ ಕೊಡದಿದ್ದರೆ ಅದು ಅನುಮಾನಕ್ಕೆ ಕಾರಣವಾಗಿ ಅದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತದನಂತರ ನೋಂದಣಿ ಮಾಡಿದರೆ ಒಂದಷ್ಟು ಅಕ್ರಮಗಳನ್ನು ತಡೆದಂತಾಗುತ್ತದೆ ಎಂದು ಆಧಾರ್ ಜೋಡಣೆಯ ಅಗತ್ಯತೆಯನ್ನು ವಿವರಿಸಿದರು.
ಲೋಕಸಭಾ ಚುನಾವಣೆ ಘೋಷಣೆಯಾದರೂ ಸಹ ಅದರ ಮಧ್ಯೆಯೂ ಆಧಾರ್ ಜೋಡಣೆ ಕಾರ್ಯ ಮಾಡಬೇಕು ಎಂದು ಗ್ರಾಮಾಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮ ಗ್ರಾಮಾಧಿಕಾರಿಗಳೇ ಮನೆ ಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರೂ ಸಹ ತಮ್ಮ ಸಮೀಪದ ಕಂದಾಯ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಸಲು ಸಹ ಅವಕಾಶ ನೀಡಲಾಗಿದೆ ಎಂದರು.
ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ಸಾಲ ತೀರುವಳಿಯಾದರೆ, ವಿಭಾಗ ಮಾಡಿಕೊಂಡರೆ, ಆಸ್ತಿಯನ್ನು ಅಡಮಾನ ಇಟ್ಟರೆ, ಎಸಿ ನ್ಯಾಯಾಲಯದ ಆದೇಶಗಳಾಗಿದ್ದರೆ; ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆದಾಗ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸುವುದನ್ನು ಸ್ವಯಂಚಾಲಿತ ಮಾಡಲಾಗಿದೆ. ಇದಕ್ಕಾಗಿ ಗ್ರಾಮಾಧಿಕಾರಿಗಳು ಧೃಢೀಕರಣ (ಥಂಬ್ ಕೊಡುವುದು) ಮಾಡುವುದು ಅಗತ್ಯವಿಲ್ಲ ಎಂದರು.
ಆಯಾ ಪಹಣಿ ಮೇಲೆ ಬ್ಯಾಂಕ್‌ಗಳು, ನ್ಯಾಯಾಲಯಗಳು ಹೀಗೆ ವಿವಿಧ ಮೂಲಗಳಿಂದ ನೀಡುವ ಮಾಹಿತಿಯನ್ನು ನೇರವಾಗಿ ಪಡೆದು ಅದನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡುವ ಅಗತ್ಯವನ್ನು ತಪ್ಪಿಸಲಾಗುತ್ತಿದೆ. ಇದರಿಂದ ರೈತರ ಸಮಯ, ಅಧಿಕಾರಿಗಳ ಸಮಯ ಪೋಲಾಗುವುದು ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಈಗಾಗಲೇ 14,21,116 ಪಹಣಿಗಳಲ್ಲಿ ಈ ರೀತಿ ಸ್ವಯಂಚಾಲಿತ ದಾಖಲೀಕರಣ ಮಾಡಲಾಗಿದೆ. ಇದರಲ್ಲಿ ಶೇ.72ರಷ್ಟು ಸ್ವಯಂ ಚಾಲಿತ ಮಾಡಿದರೆ, ಉಳಿದ ಶೇ.28ರಷ್ಟು ಪ್ರಕರಣಗಳ ಪಹಣಿಗಳನ್ನು ಹಳೆಯ ವ್ಯವಸ್ಥೆಯಲ್ಲಿ ಉಳಿಸಿಕೊಳ್ಳಲಾಗಿದೆ. ಕಾರಣ ಹಕ್ಕು ಬದಲಾವಣೆ, ಇಂಡೀಕರಣ, ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವಂತಹ ಪ್ರಕರಣಗಳಲ್ಲಿ 15 ದಿನಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ಒದಗಿಸಿ ಆ ಬಳಿಕ ದಾಖಲೀಕರಣ ಮಾಡಬೇಕಾಗಿರುತ್ತದೆ. ಆದ್ದರಿಂದ ಇದರಲ್ಲಿ ಹಳೆಯ ವ್ಯವಸ್ಥೆ ಇಟ್ಟುಕೊಂಡು, ಮುಂದೆ ಎಲ್ಲಾ ಪಹಣಿಗಳಿಗೆ ಆಧಾರ್ ಜೋಡಣೆ ಪೂರ್ಣಗೊಂಡ ಬಳಿಕ ಇವುಗಳನ್ನು ಸಹ ಆಟೋಮ್ಯೂಟೇಷನ್ ವ್ಯಾಪ್ತಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.




