ನಿಗಮಗಳಲ್ಲಿ ಇರುವ ಯೋಜನೆಗಳ ಬಗ್ಗೆ ಮರು ಚಿಂತನೆ ಆಗಲಿ

1 year ago

ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಅಭಿವೃದ್ಧಿ ನಿಗಮಗಳಿವೆ, ಜಾತಿ ಮತ್ತು ಉಪಜಾತಿಗಳಿಗೂ ಅಭಿವೃದ್ಧಿ ನಿಗಮವಿದೆ, ಬಹಳಷ್ಟು ಅಭಿವೃದ್ಧಿ ನಿಗಮಗಳ ಯೋಜನೆಗಳೆಲ್ಲವೂ ಒಂದೇ ಸ್ವರೂಪದಲ್ಲಿದೆ, ಹಾಲಿ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ಮರು ಚಿಂತನೆ ಅವಶ್ಯವಿದೆ.

ಎಲ್ಲ ನಿಗಮಗಳ ಯೋಜನೆಗಳಲ್ಲಿ ಪ್ರಮುಖವಾದದ್ದು ಸಾಲ ನೀಡುವುದು ಮತ್ತು ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡುವುದು ಹಾಗೂ ಶೈಕ್ಷಣಿಕ ಉತ್ತೇಜನಕ್ಕೆ ಹಣಕಾಸಿನ ನೆರವು ನೀಡುವುದು. ಇವುಗಳಲ್ಲಿ ಶೈಕ್ಷಣಿಕ ಉದ್ದೇಶಗಳಿಗಾಗಿ ಸಹಾಯಧನವನ್ನು ನೀಡುವುದು ಸ್ಕಾಲರ್ಶಿಪ್ ನೀಡುವುದು ಉತ್ತಮವಾದಂತಹ ಕಾರ್ಯವಾಗಿರುತ್ತದೆ. ಹಾಗೆಯೇ ವಾಹನಗಳಿಗೆ ಸಬ್ಸಿಡಿ ನೀಡುವುದು ಸಹ ಸ್ವಲ್ಪ ಮಟ್ಟಿಗೆ ಅನುಕೂಲಕರವಾದ ಯೋಜನೆಯಾಗಿದೆ. ಆದರೆ ಉದ್ಯಮಗಳಿಗೆ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ನೀಡುವ ಯೋಜನೆ ಎಂದು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗವಾಗುತ್ತಿದೆ.

ತಾವು ಹೇಳುವ ಉದ್ದೇಶಗಳಿಗೆ ಸಾಲವನ್ನು ಪಡೆದವರು ಆ ಉದ್ದೇಶಗಳಿಗೆ ಅದನ್ನು ಬಳಸುತ್ತಿಲ್ಲ,  ಬಳಸುತ್ತಿದ್ದರು ಸಹ ಅದರ ಪ್ರಮಾಣ ಅತ್ಯಲ್ಪವಾದದ್ದಾಗಿರುತ್ತದೆ. ಸಾಲದಿಂದ ಉದ್ಯಮಿಗಳಾಗಿ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಂಡವರು ಬೆರಳೆಣಿಕೆಯಷ್ಟು. ಇಲ್ಲಿ ಸಾಲವನ್ನ ಪಡೆದವರು ಮರು ಪಾವತಿ ಮಾಡುವ ಪ್ರಮಾಣವೂ ಸಹ ಸಮಾಧಾನಕರವಾದದ್ದಲ್ಲ. ಸಾಲವನ್ನು ಪಡೆದವರು ಸಾಲದ ರದ್ದತಿಯ ಯೋಜನೆಗಾಗಿ ಕಾಯುತ್ತಲೇ ಇರುತ್ತಾರೆ. ಕೆಲವು ಸಂದರ್ಭದಲ್ಲಿ ಸರ್ಕಾರಗಳು ಇಂತಹ ನಿಗಮಗಳಲ್ಲಿ ಸಾಲ ಪಡೆದವರ ಸಾಲವನ್ನು ಮನ್ನಾ ಮಾಡಿದ ಉದಾಹರಣೆಗಳಿರುವುದರಿಂದ ಮತ್ತೆ ಇಂತಹ ಕನಸುಗಳನ್ನು ಕಾಣುತ್ತಲೇ ಇರುತ್ತಾರೆ.

ಕಳೆದ 20 ವರ್ಷದಲ್ಲಿ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಹಾಗೂ ಹಿಂದುಳಿದ ವರ್ಗದ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಾಗೂ ಅಲ್ಪಸಂಖ್ಯಾತ ಇಲಾಖೆಗಳಲ್ಲಿ ವಿವಿಧ ಉದ್ದೇಶಗಳಿಗೆ ನೀಡಿರುವ ಸಾಲವೆಷ್ಟು ಮರುಪಾವತಿಯಾಗಿರುವ ಪ್ರಮಾಣವೆಷ್ಟು ಎಂಬುದನ್ನ ದಯಮಾಡಿ ಮಾಹಿತಿಯನ್ನ ಸಂಗ್ರಹಿಸಿ ನಂತರ ಸರ್ಕಾರ ಇದರ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ಚಿಂತಿಸಲಿ.

ಸಾಲವನ್ನ ಕೊಡುವುದರ ಬದಲಿಗೆ ನಿಗಮಗಳೇ ಸ್ವಯಂ ಉದ್ಯೋಗಕ್ಕೆ ಬೇಕಾದ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಡಲಿ, ಅವರುಗಳು ಅಂತಹ ವ್ಯವಸ್ಥೆಯ ಅನುಕೂಲವನ್ನು ಪಡೆದುಕೊಂಡು ಅದರ ಲಾಭವನ್ನು ಪಡೆದುಕೊಳ್ಳಲಿ. ರಾಜ್ಯ ಸರ್ಕಾರದ ನೂರಾರು ಕೋಟಿ ರೂಪಾಯಿಗಳು ದುರುಪಯೋಗವುದು ಮತ್ತು ಅನಾವಶ್ಯಕವಾದ ರೀತಿಯಲ್ಲಿ ಮಧ್ಯವರ್ತಿಗಳ ಪೋಲಾಗುವುದು ತಪ್ಪಿಸಲು ಸೂಕ್ತವಾದ ರೀತಿಯಲ್ಲಿ ದೂರದೃಷ್ಟಿತ್ವದ ಮತ್ತು ಪರಿಣಾಮಕಾರಿಯಾದ ಯೋಜನೆಗಳನ್ನ ರೂಪಿಸಬೇಕಾಗಿದೆ.

ಬಹಳಷ್ಟು ನಿಗಮಗಳು ಸರ್ಕಾರ ಕೊಡುವ ಅನುದಾನದಲ್ಲಿ ತಮ್ಮ ಸಿಬ್ಬಂದಿ ಮತ್ತು ನಿಗಮದ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಸಾರಿಗೆ ಸಂಬಳ ಪ್ರವಾಸ ಬಗ್ಗೆ ಇವುಗಳಿಗೆ ಮಾತ್ರವೇ ಹೆಚ್ಚು ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ನಿಗಮಗಳು ಬೇಕೆ ಎಂಬುದನ್ನು ಸಹ ಚಿಂತಿಸಬೇಕಾದ ಕಾಲವಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply