ಒಳ ಮೀಸಲಾತಿ
ಕಳೆದ 75 ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿದೆ. ಆದರೆ ಈ ವರ್ಗದ ಮಹಿಳೆಯರು, ಆದಿವಾಸಿಗಳು ಮತ್ತು ಅಲೆಮಾರಿಗಳ ಪರಿಸ್ಥಿತಿ ಬಹಳ ಗಂಭೀರವಾಗಿದೆ.
ಚಾರಿತ್ರಿಕ ಹಿನ್ನೆಲೆ
ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ರಾಜ್ಯ ಸಂಸ್ಥಾನದಲ್ಲಿ ಬ್ರಾಹ್ಮಣೇತರರಿಗೆ ಶೇ.75ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಆದರೆ ಯಾವ ಜಾತಿ/ಪಂಗಡಗಳಿಗೆ ಎಷ್ಟು ಎಂದು ವರ್ಗೀಕರಣ ಮಾಡಿರಲಿಲ್ಲ. ಸ್ವಾತಂತ್ರ್ಯಾ ನಂತರ 1950ರಲ್ಲಿ ಸಂವಿಧಾನವು ಜಾರಿಗೆ ಬಂದಾಗ ಪ.ಜಾ. ಮತ್ತು ಪ.ಪಂ.ಗಳನ್ನು ಒಟ್ಟಿಗೆ ಸೇರಿಸಿ ಶೇ.18ರಷ್ಟು ಮೀಸಲಾತಿಯನ್ನು ನೀಡಲಾಯಿತು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಮರು ವಿಂಗಡಣೆಯ ನಂತರ ಪ.ಜಾ.ಗೆ ಶೇ.15ರಷ್ಟು ಮತ್ತು ಪ.ಪಂ.ಕ್ಕೆ ಶೇ.3ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನೀಡಲಾಯಿತು. ಹಿಂದುಳಿದ ವರ್ಗಗಳಿಗೆ 1958ರಿಂದ ರಾಜ್ಯದಲ್ಲಿ ಮೀಸಲಾತಿಯನ್ನು ನೀಡಲಾಯಿತು. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಿ ಪ್ರವರ್ಗ-3ಎಗೆ ಶೇ.4 ಮತ್ತು ಪ್ರವರ್ಗ-3ಬಿಗೆ ಶೇ.5 ಎಂಬುದಾಗಿ ಮೀಸಲಾತಿ ನೀಡಲಾಗಿದೆ. ಒಂದು ರೀತಿಯ ಒಳಮೀಸಲಾತಿಯನ್ನು ನೀಡುತ್ತಲೇ ಬರಲಾಗಿದೆ.
2012ರಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಸರ್ಕಾರಕ್ಕೆ ವರದಿ ಮಂಡಿಸಿದೆ. 9 ವರ್ಷ ಕಳೆದ ನಂತರವೂ ಸರ್ಕಾರ ಇದನ್ನು ಪರಿಶೀಲನೆ ಮಾಡಿಲ್ಲ. ಪ್ರಸ್ತುತ ವಾಲ್ಮಿಕಿ ಪ್ರಸನ್ನ ನಂದ ಸ್ವಾಮೀಜಿ ಅವರು ಮೀಸಲಾತಿಗೆ ಒತ್ತಾಯಿಸಿ ಧರಣಿ ನಡೆಸಿದ್ದಾರೆ.
ಸಾಮಾಜಿಕ ನ್ಯಾಯವು ಸರ್ಕಾರಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಖಾಸಗಿ ವಲಯಕ್ಕೂ ಇದರ ಜವಾಬ್ದಾರಿಯಿದೆ. ದೇಶದಲ್ಲಿ ನಾಗರಿಕರು ಕೊಡುವ ಕೋಟ್ಯಾಂತರ ರೂಪಾಯಿಗಳ ತೆರಿಗೆ ಹಣವನ್ನು ಸರ್ಕಾರವು ಖಾಸಗಿ ಉದ್ಯಮಗಳ ಪ್ರೋತ್ಸಾಹಕ್ಕೆ ಬಳಸುತ್ತಿದೆ.ಇಲ್ಲಿನ ನೆಲ, ಜಲ, ಸಂಪನ್ಮೂಲ, ಮೂಲಭೂತ ಸೌಕರ್ಯಗಳು, ಗಣಿ ಸಂಪನ್ಮೂಲಗಳು, ಅರಣ್ಯ ಸಂಪನ್ಮೂಲ ಮುಂತಾದವುಗಳನ್ನು ಬಳಸಿಕೊಂಡೇ ಖಾಸಗಿ ಕ್ಷೇತ್ರವು ಬೆಳೆದಿದೆ. ಇದಲ್ಲದೆ ಸಕಾರವು ನೀಡುವ ಅನುದಾನ, ಸಬ್ಸಿಡಿ, ವಿಶೇಷ ತೆರಿಗೆ ರಿಯಾಯಿತಿ, ರಸ್ತೆ, ರೈಲು, ಸಾರಿಗೆ ಸೌಲಭ್ಯ ಮುಂತಾದವುಗಳ ಅನುಕೂಲಗಳನ್ನೂ ಅದು ಪಡೆಯುತ್ತದೆ. ಆದ್ದರಿಂದ ಖಾಸಗಿ ಕ್ಷೇತ್ರಕ್ಕೂ ಸಾಮಾಜಿಕ ಕ್ಷೇತ್ರಕ್ಕೂ ಸಾಮಾಜಿಕ ಜವಾಬ್ದಾರಿಯಿದೆ.ಸಂವಿಧಾನದತ್ತ ಸಾಮಾಜಿಕ ನ್ಯಾಯದ ಆಶಯಗಳನ್ನು ಈಡೇರಿಸುವ ಕರ್ತವ್ಯವನ್ನು ಖಾಸಗಿ ಕ್ಷೇತ್ರ ನಿರ್ವಹಿಸಬೇಕಾಗಿದೆ ಎಂಬ ಧ್ವನಿ ದೇಶದಲ್ಲಿ ಕೇಳಿಬರುತ್ತಿದೆ.
ಇಲ್ಲಿ ಕಾನೂನುಗಳ ತೊಡಕುಗಳಿವೆ. ಮಾರುಕಟ್ಟೆ ಸ್ಪರ್ಧೆಯ ಸಮಸ್ಯೆಯಿದೆ. ರಾಜ್ಯಮಟ್ಟದಲ್ಲಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಒಂದು ರಾಜ್ಯವು ಖಾಸಗಿ ವಲಯಕ್ಕೆ ಮೀಸಲಾತಿ ವಿಸ್ತರಿಸಿದರೆ ಅಲ್ಲಿಂದ ಬಂಡವಾಳ ಬೇರೆ ರಾಜ್ಯಗಳಿಗೆ ಪಲ್ಲಟವಾಗಬಹುದು. ಖಾಸಗಿ ವಲಯಕ್ಕೆ ಮೀಸಲಾತಿ ವಿಸ್ತರಣೆ ಪ್ರಶ್ನೆಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರ್ಧರಿಸಬೇಕು.
ಮೀಸಲಾತಿಗೆ ಸಂಬಂಧಿಸಿದ ವರದಿಗಳು
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು 1918ರಲ್ಲಿ ಜಸ್ಟೀಸ್ ಸರ್ ಲೆಸ್ಲಿ ಮಿಲ್ಲರ್‌ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿ “ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ”ನೀಡುವುದಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಶಿಫಾರಸುಗಳನ್ನು ಸೂಚಿಸಲು ತಿಳಿಸಿದರು. ಅದರಂತೆ ಮಿಲ್ಲರ್ ಆಯೋಗ 1919ರಲ್ಲಿ ತನ್ನ ವರದಿಯನ್ನು ನೀಡಿತು.
1963ರಲ್ಲಿ ನಾಗನಗೌಡ ವರದಿ, 1975ರಲ್ಲಿ ಎಲ್.ಜಿ. ಹಾವನೂರ್ ವರದಿ, 1986ರಲ್ಲಿ ವೆಂಕಟಸ್ವಾಮಿ ವರದಿ ಮತ್ತು 1990ರಲ್ಲಿ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರ ವರದಿ. ಈ ವರದಿಗಳ ಬಗ್ಗೆ ಪರವಿರೋಧ ಚರ್ಚೆಗಳು, ಸಂವಾದಗಳು ಮತ್ತು ಚಳುವಳಿಗಳು ನಡೆದು ರಾಜ್ಯ ಸರ್ಕಾರ ಹಲವು ಮಾರ್ಪಾಡುಗಳೊಂದಿಗೆ ಕೆಲವು ಶಿಫಾರಸುಗಳನ್ನು ಜಾರಿಗೆ ತಂದಿದೆ.
ತದನಂತರ ಇದೇ ರೀತಿ ನ್ಯಾ. ಕುದೂರ್ ನಾರಾಯಣ ರೈ, ಪ್ರೊ.ರವಿವರ್ಮ ಕುಮಾರ್, ಶ್ರೀ ಎಸ್. ಮುನಿರಾಜು, ಶ್ರೀ ಎಸ್. ಸಿದ್ದಗಂಗಯ್ಯ, ಡಾ ಸಿ.ಎಸ್. ದ್ವಾರಕಾನಾಥ್ ಮತ್ತು ಶ್ರೀ ಎನ್. ಶಂಕರಪ್ಪ ಆಯೋಗಗಳು ನೀಡಿರುವ ವರದಿಗಳ ಬಗ್ಗೆ ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಮತ್ತು ಈ ವರದಿಗಳನ್ನು ಬಹಿರಂಗಪಡಿಸಲಿಲ್ಲ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವುದರ ಬಗ್ಗೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು 2012ರಲ್ಲಿ ವರದಿ ನೀಡಿದರು. 9 ವರ್ಷಗಳ ನಂತರವೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್‌ರವರು 2020 ರಲ್ಲಿ ನೀಡಿರುವ ವರದಿಯ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ(ರಾಜ್ಯ ಸರ್ಕಾರ ಈ ಕುರಿತು ಸರ್ವಪಕ್ಷ ಸಭೆ ನಡೆಸಿ ವರದಿಯನ್ನು ಅಕ್ಟೋಬರ್ 2022ರಲ್ಲಿ ಅಂಗೀಕರಿಸಿದೆ). ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕಾಂತರಾಜ್‌ರವರು ತಯಾರಿಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲೇ ಇಲ್ಲ.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ
ಆಕ್ಸ್ ಫಾಮ್ ಇಂಡಿಯಾ ಸಂಸ್ಥೆಯು 2019ರಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಂತೆ ಸಮೀಕ್ಷೆ ಮಾಡಿದ ಖಾಸಗಿ ಸುದ್ದಿ ಸಂಸ್ಥೆಗಳಲ್ಲಿನ ಒಟ್ಟು 121 ಉನ್ನತ ಹುದ್ದೆಗಳ ಪೈಕಿ 106 (ಶೇ.87.6) ಹುದ್ದೆಗಳನ್ನು ಉನ್ನತ ಜಾತಿ ವರ್ಗದವರು ಆಕ್ರಮಿಸಿಕೊಂಡಿದ್ದಾರೆ.
ನ್ಯಾಯಾಂಗ ಮತ್ತು ಮೀಸಲಾತಿ
- 1948 ರಲ್ಲಿ ಅಂದಿನ ಮದ್ರಾಸ್ ಸರ್ಕಾರವು ಪ.ಜಾ., ಪ.ಪಂ., ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಕಾಲೇಜುಗಳಲ್ಲಿ ಮೀಸಲಾತಿಯನ್ನು ಒದಗಿಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ನಿಯಮಗಳನ್ನು ರೂಪಿಸಿತು.
ಕೇಂದ್ರ ಸರ್ಕಾರವು 1951 ರಲ್ಲಿ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ತಂದು ಅನುಚ್ಛೇದ 15(4) ನ್ನು ಸೇರಿಸುವ ಮೂಲಕ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಶೂನ್ಯೀಕರಿಸಿತು.
ಅನುಚ್ಛೇದ 15(4) ಈ ರೀತಿ ಇದೆ.
29ನೆಯ ಅನುಚ್ಛೇದದ (2) ನೆಯ ಖಂಡದಲ್ಲಿ ಇರುವ ಯಾವುದೂ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಅಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
- 1962ರಲ್ಲಿ ಅಂದಿನ ಮೈಸೂರು ಸರ್ಕಾರವು ಪ.ಜಾ. ಪ.ಪಂ. ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದೆ ಶೇ.68ರಷ್ಟು ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯ ಬಾಲಾಜಿ ಪ್ರಕರಣದಲ್ಲಿ ರದ್ದುಪಡಿಸಿ ಎಲ್ಲಾ ವರ್ಗಗಳಿಗೂ ಸೇರಿ ಒಟ್ಟು ಮೀಸಲಾತಿ ಶೇ.50ರಷ್ಟನ್ನು ಮೀರಬಾರದೆಂದು ನಿಬಂಧನೆಯನ್ನು ವಿಧಿಸಿತು.
- ಮುಂದೆ ಕೇಂದ್ರ ಸರ್ಕಾರವು ಮಂಡಲ್ ವರದಿಯನ್ನು ಆಧರಿಸಿ 1990ರಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ನೀಡಿತು.
- ಸರ್ಕಾರಿ ಸೇವೆಗೆ ಪ್ರವೇಶಿಸುವ ಪ್ರಾಥಮಿಕ ಹಂತದಲ್ಲಿ ಮಾತ್ರ ಮೀಸಲಾತಿ ಇರಬೇಕು.
- ಸೇವೆಗೆ ಸೇರಿದ ನಂತರ ಬಡ್ತಿ ವಿಚಾರದಲ್ಲಿ ಮೀಸಲಾತಿ ಇರಕೂಡದು.
- ಒಟ್ಟು ಮೀಸಲಾತಿ ಶೇ.50ನ್ನು ಮೀರಬಾರದು.
- ಕೆನೆಪದರ ಎಂಬ ನೀತಿ ಕೇವಲ ಹಿಂದುಳಿದ ಜಾತಿಗಳಿಗೆ ಅನ್ವಯವಾಗುತ್ತದೆ.
- ಕೆನೆಪದರ ಎಂಬ ನೀತಿ ಪ.ಜಾ. ಮತ್ತು ಪ.ಪಂ.ಗಳಿಗೆ ಅನ್ವಯವಾಗುವುದಿಲ್ಲ.
- ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು ಮತ್ತು ಪ್ರಗತಿಪರ ಚಿಂತಕರು
- (ಮುಂದುವರೆಯುವುದು)




