ಬ್ರಿಟಿಷ್ ಆಡಳಿತದಲ್ಲಿ ಮೀಸಲಾತಿ
1932 ರ ದುಂಡು ಮೇಜಿನ ಸಭೆಯಲ್ಲಿ ಇದು ಚರ್ಚೆಗೆ ಬಂದಿತು ಎಂಬುದು ವಿಶೇಷ. ಕೊಲ್ಲಾಪುರ ಸಂಸ್ಥಾನದಲ್ಲಿ ಮೀಸಲಾತಿ ಗಮನಿಸುವುದಾದರೆ, ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿದ್ದ ಬ್ರಾಹ್ಮಣರ ಪ್ರಾಬಲ್ಯವನ್ನು ಮನಗಂಡರು. ಈ ವ್ಯವಸ್ಥೆಯಿಂದ ಅಸಮಾಧಾನಗೊಂಡ ಮಹಾರಾಜರು ಬ್ರಾಹ್ಮಣೇತರರಿಗೆ ಉದ್ಯೋಗದಲ್ಲಿ ಮತ್ತು ಶಿಕ್ಷಣದ ಅವಕಾಶಗಳಲ್ಲಿ ಮೀಸಲಾತಿ ನೀಡುವ ಕ್ರಮವನ್ನು ತೆಗೆದುಕೊಂಡರು. ಈ ಬಗ್ಗೆ 1902 ರ ಜುಲೈ 26ರಂದು ಕೊಲ್ಲಾಪುರದ ಗೆಜೆಟ್ಟಿನಲ್ಲಿ ಈ ರೀತಿ ಆದೇಶಿಸಲಾಗಿದೆ. ಛತ್ರಪತಿ ಶಾಹುಮಹಾರಾಜರು ಅಸ್ಪೃಶ್ಯರ ಶಿಕ್ಷಣ ಪ್ರಸಾರಕ್ಕೆ ವಿಶೇಷ ಆದ್ಯತೆಯನ್ನು ನೀಡಿದರು. 1911 ರಲ್ಲಿ ಒಂದು ಆಜ್ಞೆಯನ್ನು ಹೊರಡಿಸಿ ಎಲ್ಲಾ ಅಸ್ಪೃಶ್ಯರಿಗೆ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತ ಮತ್ತು ಕಡ್ಡಾಯಗೊಳಿಸಿದರು.
1919 ಸೆಪ್ಟೆಂಬರ್ 28 ರಂದು ಒಂದು ಆಜ್ಞೆಯನ್ನು ಹೊರಡಿಸಿ ಅಸ್ಪೃಶ್ಯರಿಗೆ ಪ್ರತ್ಯೇಕವಾಗಿದ್ದ ಶಾಲೆಗಳನ್ನು ಮುಚ್ಛಿಸಿದರು. ಅಸ್ಪೃಶ್ಯತೆಯನ್ನು ಬುಡಸಹಿತ ತಮ್ಮ ಸಂಸ್ಥಾನದಲ್ಲಿ ಕಿತ್ತು ಹಾಕುವ ಸಲುವಾಗಿ ಶಾಹು ಮಹಾರಾಜರು ಜನವರಿ 1, 1919ರಲ್ಲಿ ಎರಡು ಘೋಷಣೆಗಳನ್ನು ಹೊರಡಿಸಿದರು. ಸ್ವತ: ದಲಿತನಿಗೆ ಹೋಟೆಲ್ ನಿರ್ಮಿಸಿ ತಾವು ರಾಜ ಪರಿವಾರ ಸಮೇತ ಆಹಾರ ಸೇವಿಸಿ ಆ ದಲಿತ ನೀಡುವ ಆಹಾರ ಸೇವಿಸಿದ ನಂತರ ಅವನು ನೀಡುವ ಶಿಫಾರಸ್ಸು ಪತ್ರದಂತೆ ಮೇಲ್ವರ್ಗಗಳಿಗೆ ಕೆಲಸ ಎಂಬ ಅಜ್ಞೆ ಮಾಡಿಸಿದ್ದರು. ಇದು ಕ್ರಾಂತಿಕಾರಿ ಸುಧಾರಣೆ.
ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ನೇಮಿಸಿದ್ದ ಜಸ್ಟೀಸ್ ಮಿಲ್ಲರ್ ಸಮಿತಿ ವರದಿಯು ಇದಕ್ಕೆ ಮುನ್ನುಡಿ ಬರೆಯಿತು. ಈ ಸಮಿತಿಯು 1919ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. 1921ರಲ್ಲಿ ಮಿಲ್ಲರ್ ವರದಿಯನ್ನು ಜಾರಿಗೊಳಿಸುವುದರ ಮೂಲಕ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅರ್ಧದಷ್ಟು ಮತ್ತು ಕೆಳ ದರ್ಜೆಯ ಹುದ್ದೆಗಳಲ್ಲಿ ಮೂರನೆಯ ಎರಡರಷ್ಟು ಬ್ರಾಹ್ಮಣೇತರರಿಗೆ ಮೀಸಲಿಡಲಾಯಿತು.
ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಇತರ ರಾಜ್ಯಗಳಲ್ಲಿ ಮೀಸಲಾತಿ
ಜಸ್ಟೀಸ್ ಪಾರ್ಟಿಯು ಬ್ರಾಹ್ಮಣೇತರರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸಿತು. ಈ ಪಕ್ಷವು 1920-26 ಮತ್ತು 1930-37ರಲ್ಲಿ ಅಧಿಕಾರದಲ್ಲಿದ್ದಾಗ ಜಾತಿವಾರು ಪ್ರಾತಿನಿಧ್ಯ ನೀತಿಯನ್ನು ಜಾರಿಗೆ ತಂದಿತು. ಜಸ್ಟೀಸ್ ಪಾರ್ಟಿಯು 1928ರಲ್ಲಿ ಹೊರಡಿಸಿದ ಕಮ್ಯುನಲ್ ರೆಪ್ರೆಸೆಂಟೇಶನ್ ಪ್ರಕಾರ ಸರ್ಕಾರಿ ಸೇವೆಯಲ್ಲಿನ ಪ್ರತಿ 12 ರ ಗುಂಪಿನಲ್ಲಿ ಬ್ರಾಹ್ಮಣೇತರರಿಗೆ 5, ಬ್ರಾಹ್ಮಣರಿಗೆ 2, ಮಹಮದೀಯರಿಗೆ 2, ಆಂಗ್ಲೋ ಇಂಡಿಯನ್ನರಿಗೆ 2 ಮತ್ತು ಇಂಡಿಯನ್ ಕ್ರಿಶ್ಚಿಯನ್ನರಿಗೆ 1 ಹುದ್ದೆಗಳನ್ನು ನಿಗದಿಪಡಿಸಿತು.
1935ರಲ್ಲಿ ತಿರುವಾಂಕೂರು ಮಹಾರಾಜರು ಮತ್ತು ತದನಂತರ ಕೊಚ್ಚಿನ್ ಮಹಾರಾಜರು ಮೀಸಲಾತಿ ಕ್ರಮಗಳನ್ನು ಜಾರಿಗೊಳಿಸಿದರು. ಬಾಂಬೆ ಪ್ರೆಸಿಡೆನ್ಸಿಯಲ್ಲಿ 1931ರಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಭಾರತದ ಎಲ್ಲ ಪ್ರಾಂತಗಳು ಮತ್ತು ಸಂಸ್ಥಾನಗಳು ಹಿಂದುಳಿದ ವರ್ಗಗಳಿಗೆ ಮತ್ತು ಪ.ಜಾ ಮತ್ತು ಪ.ಪಂಗಳಿಗೆ ಮೀಸಲಾತಿ ನೀಡುವ ಕ್ರಮಗಳು ಒಂದಲ್ಲ ಒಂದು ರೀತಿಯಲ್ಲಿ ಜಾರಿಗೊಂಡಿದ್ದವು ಎಂಬುದು ಗಮನಾರ್ಹ.
ಸಂವಿಧಾನ ಮತ್ತು ಮೀಸಲಾತಿ
ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. 1949 ನವೆಂಬರ್ 26 ರಂದು ಭಾರತ ಸರ್ಕಾರವು ಲಿಖಿತ ಸಂವಿಧಾನವನ್ನು ಒಪ್ಪಿತು. 1950 ಜನವರಿ 26 ರಂದು ಸಂವಿಧಾನವನ್ನು ಜಾರಿಗೆ ತರುವುದರ ಮುಖಾಂತರ ಭಾರತವು ಗಣರಾಜ್ಯವಾಯಿತು.
ಇದರಂತೆ, ಸಾಮಾಜಿಕ ನ್ಯಾಯ ಎಂದರೇನು?
ದುಡಿಯುವ ವರ್ಗದ ಹಿತವನ್ನು ಕಾಪಾಡುವ ಅಂಶಗಳನ್ನು ಹಲವಾರು ಅನುಚ್ಛೇದಗಳಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಮುಖವಾದ ಅನುಚ್ಛೇದಗಳೆಂದರೆ 14, 15, 16, 19, 21, 23, 24, 39, 41, 42 ಮತ್ತು ಈ ಅನುಚ್ಛೇದಗಳ ಅನುಸಾರ ದುಡಿಯುವ ವರ್ಗಕ್ಕೆ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವುದಕ್ಕೆ ಸಭೆ ಸೇರುವುದಕ್ಕೆ, ಶಾಂತಿಯುತವಾಗಿ ಪ್ರತಿಭಟಿಸುವುದಕ್ಕೆ, ಧರಣಿ ನಡೆಸಲು, ಮುಷ್ಕರ ಹೂಡಲು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಸ್ವಾತಂತ್ರ್ಯ ನೀಡಲಾಗಿದೆ.
ಸಂವಿಧಾನವು ಅಸ್ಪೃಶ್ಯತೆಯ ನಿರ್ಮೂಲನೆ ಮತ್ತು ಅಸ್ಪೃಶ್ಯರ ವಿಮೋಚನೆಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ. ಅನುಚ್ಛೇದ 15, 16, 17, 21, 23, 43, 45, 46, 243, 330, 332, 335, 338, 340, 341 ಮತ್ತು 342. ಈ ಅನುಚ್ಛೇದಗಳ ಪ್ರಕಾರ ಧರ್ಮ, ಜನಾಂಗ, ಜಾತಿ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸುವಂತಿಲ್ಲ; ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಬೇಕು, ಯಾರಿಗೂ ಯಾವುದೇ ರೀತಿಯ ತಾರತಮ್ಯ ತೋರುವಂತಿಲ್ಲ. ಅಸ್ಪೃಶ್ಯತೆಯ ಆಚರಣೆ ಶಿಕ್ಷಾರ್ಹ ಅಪರಾಧ, ರಾಜ್ಯ ಸರ್ಕಾರಗಳು ಇವರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವೃದ್ಧಿಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸತಕ್ಕದ್ದು ಎನ್ನುತ್ತದೆ.
ಇದೂ ಸಹ ಸಾಮಾಜಿಕ ನ್ಯಾಯವೇ, ಶೇ 8% ರಷ್ಟು ತೆರಿಗೆ ನೀಡುವ ದೇಶಗಳು ಉಚಿತ ಹಾಗೂ ಸಮಾನ ಶಿಕ್ಷಣವನ್ನು, ಉಚಿತ ಆರೋಗ್ಯ ಸೇವೆಯನ್ನು ತನ್ನ ಪ್ರಜೆಗಳಿಗೆ ಒದಗಿಸುತ್ತವೆ. ಆದರೆ ಶೇ.60 ರಿಂದ 70% ರಷ್ಟು ತೆರಿಗೆ ಪಡೆಯುವ ಭಾರತದಲ್ಲಿ ಈ ಸೌಲಭ್ಯ ಇಲ್ಲ. ಇದಿದ್ದರೆ ಭ್ರಷ್ಟಾಚಾರ ಸರಕಾರದ ವಿಶೇಷ ಸೌಲತ್ತು ನೀಡುವ ಅಗತ್ಯ ಬರುವುದಿಲ್ಲ. ಜೋತೆಗೆ ಚುನಾವಣೆ ಪಾರದರ್ಶಕವಾಗಬೇಕು.
ನಮ್ಮಲ್ಲಿ ಶೇ.90ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ವಯೋವೃದ್ಧರು ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಲಾಗಿಲ್ಲ, ಅಭಾಗ್ಯ ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ಹೊರತರಲು ಸಾಧ್ಯವಾಗಿಲ್ಲ. ಇಂತಹ ಅನೇಕರ ನೆರವಿಗೆ ಹೋಗುವುದು ಕೂಡ ಸಾಮಾಜಿಕ ನ್ಯಾಯವಾಗಬೇಕು.
ಮೀಸಲಾತಿ ಎಂದರೇನು?
ಭಾರತದಲ್ಲಿ ಅನೇಕ ಜಾತಿಗಳಿವೆ. ಇಲ್ಲಿ ಮೇಲ್ಜಾತಿಗಳು ಮೇಲ್ವರ್ಗಗಳು, ಕೆಳಜಾತಿಗಳು ಕೆಳವರ್ಗಗಳು. ಶತಮಾನಗಳ ಕಾಲ ಕೆಳಜಾತಿಯ ಜನರಿಗೆ ಶಿಕ್ಷಣ, ಆಸ್ತಿಯಲ್ಲಿ ಹಕ್ಕು, ಆಡಳಿತದಲ್ಲಿ ಭಾಗವಹಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಇತ್ಯಾದಿಗಳನ್ನು ನಿರಾಕರಿಸಿ ಶೋಷಿಸಿ ಗುಲಾಮರಂತೆ ನಡೆಸಿಕೊಂಡು ಬರಲಾಯಿತು. ಆದರೆ ಗ್ರೀಕ್ನ ಸಾಫೋಕ್ಲೀಸ್ ಬರೆದ ‘ಅಂತಿಗೊನೆ’ ನಾಟಕ ಮೊದಲಿಗೆ “ಮೂಲಭೂತ ಹಕು”ಗಳನ್ನು ಪ್ರತಿಪಾದಿಸಿದ ಫಲವಾಗಿ ಇದನ್ನು ಬಾಬಸಾಹೇಬರು ಸಂವಿಧಾನದಲ್ಲಿ ಸೇರ್ಪಡೆ ಮಾಡಲು ಅನುಕೂಲವಾಯಿತು.
ಜಾತಿ, ಜನಾಂಗ, ಧರ್ಮ ಹಾಗೂ ಲಿಂಗ ಅಸಮಾನತೆಗಳನ್ನು ತೊರೆದು ಎಲ್ಲರೂ ಸಮಾನವಾಗಿ ರಾಜ್ಯದ ಆಡಳಿತದಲ್ಲಿ ಭಾಗಿಯಾದಾಗ ಮತ್ತು ಎಲ್ಲ ರೀತಿಯ ತಾರತಮ್ಯಗಳನ್ನು ನಿವಾರಿಸಿದಾಗ ಸಂವಿಧಾನದ ಮೂಲತತ್ವಗಳಾದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯ.
“ಮೀಸಲಾತಿ ಎಂಬುದು ಬಡತನ ನಿರ್ಮೂಲನ ಕಾರ್ಯಕ್ರಮವೂ ಅಲ್ಲ ಅಥವಾ ಜಾತಿಗಳ ವಿನಾಶದ ಕಾರ್ಯಕ್ರಮವೂ ಅಲ್ಲ. ಪ್ರಾತಿನಿಧ್ಯ ವಂಚಿತರಿಗೆ ಪ್ರಾತಿನಿಧ್ಯವನ್ನು ನೀಡುವುದೇ ಮೀಸಲಾತಿ. ಇದೊಂದು ಭಿಕ್ಷೆಯಲ್ಲ ಬದಲಿಗೆ, ಅದೊಂದು ಮಾನವ ಹಕ್ಕು ಮತ್ತು ಸಂವಿಧಾನದ ಹಕ್ಕು.”
- ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು ಮತ್ತು ಪ್ರಗತಿಪರ ಚಿಂತಕರು
- (ಮುಂದುವರೆಯುವುದು)




