ಕೃಷಿ ಬಿಕ್ಕಟ್ಟಿಗೆ ಮೀಸಲಾತಿ ಪರಿಹಾರವೇ?
ವಿಪರೀತವಾಗಿ ರಸಗೊಬ್ಬರ, ಕಳೆನಾಶಕ, ಕೀಟನಾಶಕಗಳ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜೀವ ವೈವಿಧ್ಯತೆ ನಾಶವಾಗಿದೆ. ಹೈಬ್ರಿಡ್ ಬೀಜಗಳ ಬಳಕೆಯಿಂದ ಬೀಜ ಕಣಜ ಧ್ವಂಸವಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿ ಫಸಲಿಗೆ ಸರಿಯಾದ ಬೆಲೆ ಸಿಗದೆ ರೈತರು ಸಾಲದ ಬಲೆಯಲ್ಲಿ ಸಿಕ್ಕಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ನೂರಾರು ರೋಗ-ರುಜಿನ ಕಾಡುತ್ತಿವೆ.
ಸರ್ಕಾರಗಳು ತಂದಿರುವ ಹೊಸ ಕೃಷಿ ಕಾಯ್ದೆಗಳನ್ನು ಮತ್ತು ಹಳೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು.ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು. ರೈತರು ಬೆಳೆದ ಫಸಲಿಗೆ ಕನಿಷ್ಠ ಉತ್ಪಾದನಾ ವೆಚ್ಚ ಕಡಿಮೆ ಮಾಡಬೇಕು. ರೈತರು ಬೆಳೆದ ಫಸಲಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಕೃಷಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು.
ಜನಹಿತಕ್ಕೆ ಶರಣಾಗಬೇಕಾದವರು ಜಾತಿ ಹಿತಕ್ಕೆ ಶರಣಾದರು!
ಅನೇಕ ಧರ್ಮಗುರುಗಳು ಮತ್ತು ಧರ್ಮಪೀಠಗಳು ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅನೇಕ ಧರ್ಮಗುರುಗಳು ಚುನಾವಣಾ ಕಣದಲ್ಲಿದ್ದಾರೆ. ರಾಜಕೀಯ ಅಧಿಕಾರ ಧರ್ಮಗುರುಗಳ ಕೈಗೆ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೆಲವು ಮಠಾಧೀಶರು ರಾಜಕಾರಣದ ಕೈಗೊಂಬೆಗಳಾಗಿ ವರ್ತಿಸುತ್ತಿರುವುದು ಸಹ ಆರೋಗ್ಯಕರವಾದ ಬೆಳವಣಿಗೆಯಲ್ಲ. ದೇಶದ ಸಂಪತ್ತು ಕೆಲವೆ ಜನರ ಕೈಸೇರುತ್ತಿರುವುದು ಸಹ ಸರ್ವಾಧಿಕಾರಕ್ಕೆ ದಾರಿಯಾಗಲಿದೆ.
ಅನೇಕ ಮಠಾಧೀಶರು ತಮ್ಮ ತಮ್ಮ ಜಾತಿಗಳ ಪರವಾಗಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಈ ಹೋರಾಟ ಯಾತಕ್ಕಾಗಿ, ಯಾವ ಕಾರಣಕ್ಕಾಗಿ, ಯಾವ ಉಪಯೋಗಕ್ಕಾಗಿ, ಈ ಹೋರಾಟಗಳು ಸಂವಿಧಾನಾತ್ಮಕವಾಗಿವೆಯೇ, ಆಗುವಂತಹ ಅನುಕೂಲಗಳೇನು, ಪ್ರತಿಕೂಲಗಳೇನು ಎಂಬ ಅರಿವಿಲ್ಲದೆ ನಡೆಯುತ್ತಿರುವುದು ದುರದೃಷ್ಟಕರ. ಈ ಜಾತಿ ಹೋರಾಟದ ಬೇಡಿಕೆಗಳನ್ನು ಪೂರೈಸಿದರೂ ಸಹ ತಮ್ಮ ಜಾತಿಯಲ್ಲಿರುವ ಎಷ್ಟು ಜನರಿಗೆ ಉಪಯೋಗವಾಗುವುದೆಂಬ ಕನಿಷ್ಠ ಅಂದಾಜಿಲ್ಲದೆ ಹೋರಾಟಗಳು ನಡೆಯುತ್ತಿವೆ.
ಸಂವಿಧಾನದ ಅನುಚ್ಛೇದ 341ರಲ್ಲಿ ಪರಿಶಿಷ್ಟ ಜಾತಿಗಳ ಮತ್ತು 342ರಲ್ಲಿ ಪರಿಶಿಷ್ಟ ಪಂಗಡಗಳ ಯಾವುದೇ ಜಾತಿಯನ್ನು ಮೀಸಲು ಪಟ್ಟಿಯಿಂದ ತೆಗೆಯಲು ಅಥವಾ ಸೇರಿಸಲು ಶಾಸನಬದ್ಧ ಕ್ರಮಗಳ ಬಗ್ಗೆ ತಿಳಿಯಪಡಿಸಲಾಗಿದೆ. ಯಾವುದೇ ರಾಜ್ಯ ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಸಂಬಂಧಿತ ಜಾತಿಯ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ನಡೆಸಿ ವರದಿಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿದ ಬಳಿಕ ಸಂಬಂಧಿಸಿದ ರಾಷ್ಟ್ರೀಯ ಆಯೋಗಕ್ಕೆ ಶಿಫಾರಸು ಮಾಡಬೇಕು. ಸಂಬಂಧಿಸಿದ ರಾಷ್ಟ್ರೀಯ ಆಯೋಗವು ರಾಜ್ಯ ಸರ್ಕಾರದ ವರದಿಯನ್ನು ಯಥಾಸ್ಥಿತಿ ಒಪ್ಪಬಹುದು ಅಥವಾ ಸ್ವತಂತ್ರ ತನಿಖೆ ನಡೆಸಿ ತನ್ನ ವರದಿಯನ್ನು ಕೇಂದ್ರ ಸರ್ಕಾರದ ಸಚಿವ ಸಂಪುಟಕ್ಕೆ ಕಳುಹಿಸಬೇಕು. ತದನಂತರ ಕೇಂದ್ರ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿದ ಮೇಲೆ ಮಸೂದೆಯಾಗಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ನೀಡಿದ ನಂತರ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಂತಿಮವಾಗಿ ರಾಷ್ಟ್ರಪತಿಗಳು ಸಹಿ ಮಾಡಿದ ನಂತರ ಒಂದು ಜಾತಿಯನ್ನು ಮೀಸಲು ಪಟ್ಟಿಯಲ್ಲಿ ಸೇರಿಸಬಹುದು ಇಲ್ಲವೇ ತೆಗೆದು ಹಾಕಬಹುದು.
ಕರ್ನಾಟಕದ ಹಿಂದುಳಿದ ವರ್ಗದ 207 ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ ಶೇ.32ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಪ್ರವರ್ಗ ಶೇ. 2, 2ಎ – ಶೇ.16, 2ಬಿ – ಶೇ.5, 3ಎ ಶೇ.4 ಮತ್ತು 3ಬಿ-ಶೇ.5 ಇಂದು ಪಂಚಮಸಾಲಿ ಲಿಂಗಾಯತರು ತಮ್ಮನ್ನು ಪ್ರವರ್ಗ 3ಬಿಯಿಂದ 2ಎಗೆ ಸೇರಿಸಿ ಎಂದು ಹೋರಾಟ ನಡೆಸುತ್ತಿದ್ದಾರೆ. ಸುಮಾರು 43 ಜಾತಿಗಳು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಿ ಎಂದು ಬೇಡಿಕೆಯನ್ನು ಇಟ್ಟಿವೆ. ಇವರು ಕಡಿಮೆ ಜನಸಂಖ್ಯೆ ಇರುವ ಸಣ್ಣ ಸಣ್ಣ ಜಾತಿಗಳು ಮತ್ತು ಅವರ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ. ಹಿಂದುಳಿದ ವರ್ಗಗಳ ಆಯೋಗ ಕೇವಲ ಪಂಚಮಸಾಲಿ ಲಿಂಗಾಯತರ ಬಗ್ಗೆ ಅಧ್ಯಯನ ಮಾಡುವುದರ ಜತೆಗೆ ಸಣ್ಣ ಜಾತಿಗಳ ಬಗ್ಗೆಯೂ ಅಧ್ಯಯನ ಮಾಡಿ ವರದಿ ನೀಡಬೇಕು.
ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ
ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆ, ಅನಾಥ ಮಕ್ಕಳನ್ನು ಯಾವ ಧರ್ಮ, ಜಾತಿ ಮತ್ತು ಪ್ರವರ್ಗಕ್ಕೆ ಸೇರಿಸಬೇಕು, ಮತಾಂತರಗೊಂಡವರಿಗೆ ಮೀಸಲಾತಿ ನೀಡಬೇಕೆ, ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ವಿಸ್ತರಿಸಬೇಕೆ ಇತ್ಯಾದಿ ಹಲವು ಸವಾಲುಗಳು ಇವೆ.
ಖಾಸಗಿ ಸಂಸ್ಥೆಗಳು ಒಂದೇ ಜಾತಿ ಅಥವಾ ಕೆಲವು ಮೇಲು ಜಾತಿ ನೌಕರರನ್ನು ನೇಮಿಸಿಕೊಂಡು ತಮ್ಮ ಉದ್ಯಮಗಳನ್ನುನಡೆಸುತ್ತಿರುವುದು ವರ್ಣಭೇದವಲ್ಲವೆ?
ಸಮಸ್ಯೆಗೆ ಶಾಶ್ವತ ಪರಿಹಾರವೇನು?
75 ವರ್ಷಗಳಲ್ಲಿ ಒಂದು ಹಿಡಿಯಷ್ಟು ಪ.ಜಾ, ಪ.ಪಂ. ಹಿಂದುಳಿದ ವರ್ಗಗಳವರು ಮತ್ತು ಮಹಿಳೆಯರು ಮೇಲು ಸ್ತರದತ್ತ ಚಲಿಸಲು ಸಾಧ್ಯವಾಗಿದೆ. ಉಳಿದಂತೆ ಬೃಹತ್ ಪ್ರಮಾಣದ ಜನರ ಸ್ಥಿತಿಗತಿ ಹೀನಾಯವಾಗಿದೆ.
ದಿನೇದಿನೇ ನಿರುದ್ಯೋಗವು ಹೆಚ್ಚುತ್ತಿದೆ. ಉತ್ತಮ ಸ್ಥಿತಿಯಲ್ಲಿರುವ ಪ.ಜಾ/ಪ.ಪಂ./ಹಿಂದುಳಿದ ವರ್ಗದ ಜನರು ತಮ್ಮ ಸಮುದಾಯದಲ್ಲಿ ದುಸ್ಥಿತಿಯಲ್ಲಿರುವವರಿಗೆ ಸಹಾಯ ಮಾಡುವ ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಾರಕ್ಕೆ ಒಂದು ದಿವಸ ಸಮುದಾಯದ ಹಿತಕ್ಕಾಗಿ ಬಳಸಿ, ವರಮಾನದ ಒಂದಷ್ಟು ಪಾಲನ್ನು ಬಡವರ ಅಭಿವೃದ್ಧಿಗಾಗಿ ಬಳಸಿ, ತಮ್ಮ ಅನುಭವ ಮತ್ತು ಜ್ಞಾನವನ್ನು ಮುಂದಿನ ತಲೆಮಾರಿಗೆ ಧಾರೆ ಎರೆಯಬೇಕು. ಮೂ ‘ಟಿ’ ಗಳನ್ನು ಸಮಾಜಕ್ಕೆ ನೀಡಬೇಕು. (Time tolent, Tresury)ನೈತಿಕ (Pay back to Society) ಜೀವನವನ್ನು ನಡೆಸಿ ಯುವ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಬೇಕು.ಈ ರೀತಿಯಲ್ಲಿ ಯುವ ಪೀಳಿಗೆಯನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಬೇಕಾಗಿದೆ.
ವಿಶ್ವ ಸಂಸ್ಥೆ ಘೋಷಿಸಿರುವ ಮಾನವ ಹಕ್ಕುಗಳು
- ಜಗತ್ತಿನ ಎಲ್ಲ ಜನರೂ ಸಮಾನರು.
- ಧರ್ಮ, ಜಾತಿ, ಲಿಂಗ, ವರ್ಗ ಆಧಾರದ ಮೇಲೆ ತಾರತಮ್ಯ ತೋರಬಾರದು.
- ಜೀವಿಸುವ, ಸ್ವತಂತ್ರವಾಗಿರುವ ಮತ್ತು ವೈಯಕ್ತಿಕ ಭದ್ರತೆ ಪಡೆಯುವ ಹಕ್ಕು.
- ಗುಲಾಮತನದಿಂದ ವಿಮೋಚನೆ ಪಡೆಯುವ ಹಕ್ಕು.
- ಚಿತ್ರಹಿಂಸೆ ಮತ್ತು ಕ್ರೌರ್ಯಕ್ಕೆ ಒಳಪಡದಿರುವ ಹಕ್ಕು.
- ಕಾನೂನಿನ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಹಕ್ಕು.
- ಕಾನೂನಿನ ದೃಷ್ಟಿಯಲ್ಲಿ ಸಮಾನತೆಯ ಹಕ್ಕು.
- ತ್ವರಿತ ವಿಚಾರಣೆಯ ಹಕ್ಕು.
- ಇಚ್ಛಾನುಸಾರ ಬಂಧಿಸಿಡುವ ಅಥವಾ ಗಡೀಪಾರು ಮಾಡದಿರುವ ಹಕ್ಕು.
- ನ್ಯಾಯಯುತವಾದ ಸಾರ್ವಜನಿಕ ವಿಚಾರಣಾ ಹಕ್ಕು.
- ಅಪರಾಧಿಯೆಂದು ರುಜುವಾತುಪಡಿಸುವವರೆಗೂ ನಿರ್ದೋಷಿಯೆಂದು ಪರಿಗಣಿಸುವ ಹಕ್ಕು.
- ತನ್ನ ಖಾಸಗಿ ವಿಚಾರಗಳಲ್ಲಿ, ಕೌಟುಂಬಿಕ ವಿಚಾರಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಇತರರು ಅತಿಕ್ರಮಿಸದೆ ಇರುವ ಹಕ್ಕು.
- ದೇಶದಲ್ಲಿ ಅಥವಾ ವಿದೇಶಗಳಲ್ಲಿ ಸಂಚರಿಸುವ ಹಕ್ಕು.
- ಇತರೆ ದೇಶಗಳಲ್ಲಿ ಆಶ್ರಯ ಪಡೆಯುವ ಹಕ್ಕು.
- ಒಂದು ರಾಷ್ಟ್ರದ ಪೌರತ್ವವನ್ನು ಪಡೆಯುವ ಅಥವಾ ಬದಲಾಯಿಸಿಕೊಳ್ಳುವ ಹಕ್ಕು.
- ಮದುವೆ ಮಾಡಿಕೊಂಡು ಸಂಸಾರ ಮಾಡುವ ಹಕ್ಕು.
- ಖಾಸಗಿ ಆಸ್ತಿಯನ್ನು ಹೊಂದುವ ಹಕ್ಕು.
- ಧಾರ್ಮಿಕ ಹಕ್ಕು.
- ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು.
- ಶಾಂತಿಯುತವಾಗಿ ಸಭೆ ಸೇರುವ ಮತ್ತು ಸಂಘಟಿಸುವ ಹಕ್ಕು.
- ಸರ್ಕಾರದ ಕಾರ್ಯದಲ್ಲಿ ಮತ್ತು ಚುನಾವಣೆಗಳಲ್ಲಿ ಭಾಗವಹಿಸುವ ಹಕ್ಕು.
- ಸಾಮಾಜಿಕ ಭದ್ರತೆಯ ಹಕ್ಕು.
- ಐಚ್ಛಿಕ ಕೆಲಸ ಮಾಡುವ ಮತ್ತು ಕಾರ್ಮಿಕ ಸಂಘ ಸೇರುವ ಹಕ್ಕು.
- ವಿಶ್ರಾಂತಿ ಪಡೆಯುವ ಹಕ್ಕು.
- ಜೀವನದ ಕನಿಷ್ಠ ಅವಶ್ಯಕತೆಗಳನ್ನು ಹೊಂದುವ ಹಕ್ಕು.
- ಶಿಕ್ಷಣದ ಹಕ್ಕು.
- ಸಮುದಾಯದ ಸಾಂಸ್ಕೃತಿಕ ಜೀವನದಲ್ಲಿ ಭಾಗವಹಿಸುವ ಹಕ್ಕು.
- ಸಾಮಾಜಿಕ ನೆಮ್ಮದಿಯ ಹಕ್ಕು.
- ಬೆಳವಣಿಗೆಯ ಹಕ್ಕು.
- ಈ ಮೇಲೆ ಹೇಳಿರುವ ಹಕ್ಕುಗಳಲ್ಲಿ ಸರ್ಕಾರ ಮಧ್ಯ ಪ್ರವೇಶಿಸದಿರುವ ಹಕ್ಕು.
- ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞರು ಮತ್ತು ಪ್ರಗತಿಪರ ಚಿಂತಕರು
- (ಮುಕ್ತಾಯ)




