“ಮೀಸಲಾತಿ” ಅನ್ನ ನೀಡುವ ವಿಧಾನವೋ ಅಥವಾ ಮತಗಳಿಕೆಯ ಯಂತ್ರವೋ?

8 months ago

ಅವನು ಮೈಕ್ ಕೈಗೆತ್ತಿಕೊಂಡ, ಬಾಯಿ ತೆರೆದ, ಮಾತು ಹೊರಬರಲಿಲ್ಲ, ಗಂಟಲು ಕಟ್ಟಿತ್ತು, ಅವನ ಜೀವನದಂತೆ ಅದೂ ಒಣಗಿ ಹೋಗಿರಬಹುದು. ಬಾಯಿಂದ ಮಾತು ಹೊರಡದೆ ಕಣ್ಣಿಂದ ಪ್ರಾರಂಭಿಸಿದ, ಕಣ್ಣೀರು ದಳದಳ ಉರುಳಿದವು. ಸಭೆಯಲ್ಲಿದ್ದವರ ದೃಷ್ಟಿ ಅವನತ್ತ. “ಅಳಬೇಡಿ, ನಿಮ್ಮ ಹಕ್ಕಿಗಾಗಿ ಧ್ವನಿ ಎತ್ತಿ, ನೀವು ಭಿಕ್ಷೆ  ಬೇಡಬೇಕಾಗಿಲ್ಲ. ನೀವು ನಿಮ್ಮ ಹಕ್ಕು ಕೇಳುತ್ತಿದ್ದೀರಿ, ಮಾತಾಡಿ” ಬೆನ್ನು ತಟ್ಟಿದರು. ಸಂಘಟಕರು.

ಅವನ ನಾಲಿಗೆ ಚಲಿಸಲಾರಂಭಿಸಿತು. ಅವನು ನುಡಿದ ಮೊದಲ ಶಬ್ದವೇ “ನಮಗೆ ಅನ್ನ ನೀಡಿ, ನಮಗೆ ಜೀವನ ನೀಡಿ, ನಮಗೆ ಶಿಕ್ಷಣ ನೀಡಿ, ನಮ್ಮನ್ನೂ ಮಾನವರನ್ನಾಗಿ ಕಾಣಿ ಸಿದ್ದರಾಮಯ್ಯ ಸಾಹೇಬರೆ”. ಮುಂದುವರೆಸಿದ “ನಮ್ಮವರು ಎಷ್ಟಿದ್ದಾರೆಂದು ನಮಗೆ ತಿಳಿಯದು. ಕಾರಣ ನಾವೂ ಒಂದೂರಲ್ಲಿ ಇಲ್ಲ, ನಮಗೆ ದಿನಕ್ಕೊಂದೂರು. ದಿನ ನಿತ್ಯ ನಡೆದೇ ಬೆರೊಂದು ಊರು ಸೇರುತ್ತೇವೆ, ವೇಶ ಹಾಕುತ್ತೇವೆ, ದೇವರಾಗುತ್ತೇವೆ. ಜನರನ್ನು ರಂಜಿಸುತ್ತೇವೆ. ಅವರು ಕೊಟ್ಟ ಚಿಲ್ಲರೆ ಕಾಸಿನಲ್ಲಿ ಅಂಬಲಿ ಕಾಯಿಸಿ, ಮುಂದಿನೂರಿಗೆ ಹೋಗುತ್ತೇವೆ. ನಮ್ಮ ಮಕ್ಕಳು ನಮ್ಮ ಬೆನ್ನೇರುತ್ತಾರೆ, ನಡೆಯಲು ಪ್ರಾರಂಭಿಸಿದ ಮೇಲೆ ಅವರು ಲವ- ಕುಶರಾಗುತ್ತಾರೆ. ನನ್ನಂತೆ ವಯಸ್ಸಿಗೆ ಬಂದನಂತರ ರಾಮ-ಲಕ್ಷಮಣರಾಗುತ್ತಾರೆ. ಹೆಣ್ಣಾದರೆ ಸೀತೆ-ಸಾವಿತ್ರಿಯಾಗುತ್ತಾರೆ. ನಮ್ಮ ಜೀವನ ಶತಶತಮಾನಗಳಿಂದ ಹೀಗೆ ಸಾಗಿದೆ” ಎದೆ ಉಬ್ಬಿ ಬಂದು ಕಣ್ಣಿರು ಒರೆಸಿಕೊಂಡು ಮುಂದುವರೆಸಿದ

“ನಾವೂ ಮನುಷ್ಯರಲ್ಲವೆ? ನಮಗೂ ಜೀವಿಸುವ ಹಕ್ಕಿಲ್ಲವೆ? ನಿಮ್ಮ ಮಕ್ಕಳಂತೆ ನಮ್ಮ ಮಕ್ಕಳಿಗೂ ಶಿಕ್ಷಣ ಬೇಡವೆ? ಅವರಿಗೂ ಗೌರವದ ಜೀವನ ಬೇಡವೆ?  ನನ್ನ ಮಕ್ಕಳೂ ನನ್ನಂತೆ ಭಿಕ್ಷುಕರಾಗೇ ಸಾಯಬೇಕಾ ಸಿದ್ದರಾಮಯ್ಯ ಸಾಹೇಬರೆ? ನಮಗೂ ಗೌರವವಾಗಿ ಬದುಕಲು ಅವಕಾಶ ನೀಡಿ, ಅದಕ್ಕಾಗಿ ಮಿಸಲಾತಿ ನೀಡಿ, ಜನರೊಂದಿಗೆ ಸ್ಪರ್ಧಾತ್ಮಕ ಬದುಕಿನಲ್ಲಿ ಬಾಳಲು ಸ್ವಲ್ಪ ದಿನ ನಮಗೂ ಕಲಿಯಲು ಶಾಲೆಯ ಬಾಗಿಲು ತಗೆಯಿರಿ. ಹೊಟ್ಟೆಗೆ ಅನ್ನ ನೀಡಿ. ಇಲ್ಲದಿದ್ದಲ್ಲಿ ಭಿಕ್ಷೆ ಎತ್ತಲೂ ಕಾನೂನಿನ ಅವಕಾಶ ನೀಡಿ. ಅದೂ ಆಗದಿದ್ದರೆ ಇಚ್ಛಾ ಮರಣದ ಒಪ್ಪಿಗೆ ಕೊಡಿ” ಎಂದು ಗಳಗಳ ಅತ್ತನೊಬ್ಬ ಅಲೆಮಾರಿ.

ಈ ಕಣ್ಣೀರಿನ ನೈಜ ಘಟನೆ ನಡೆದದ್ದು ಶಾಸಕರ ಭವನದ ಒಂದು ಕೋಣೆಯಲ್ಲಿ. ೫,೯೧,೦೦೦ ಅಲೆಮಾರಿಗಳ ಒಂದು ಕುಟುಂಬದ ಜೀವಗಾಥೆಯಿದು. ಇದಕ್ಕಿಂತ ಕನಿಷ್ಠ ಜೀವನ ಸಾಗಿಸುವ ಅಲೆಮಾರಿ ಕುಟುಂಬಗಳು ಬೆಂಗಳೂರನ್ನೇ ಕಂಡಿಲ್ಲ. ಶಾಸಕ ಭವನ ಹೇಗೆ ಕಂಡಾರು? ಅವರು ಜೀವಿಸುವುದನ್ನು ನಾವು  ಕಲ್ಪಿಸಿಕೊಳ್ಳಬಹುದಷ್ಟೇ.

ಇತ್ತೀಚಿನ ಒಳ ಮೀಸಲಾತಿ ಹೋರಾಟಗಳು ಇತ್ಯರ್ಥಗೊಂಡವು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಒರೆಸಿದ್ದರು ಸಿದ್ದರಾಮಯ್ಯನವರು. ಸಂಘಂಟಿತ ಸಮಾಜಗಳಾದ ಎಡಗೈ (ಮಾದಿಗ) ಬಲಗೈ (ಹರಿಜನ) ಸಮಾಜಗಳು ತಮ್ಮ ಸಾಂಘಿಕ ಬಲಪ್ರದರ್ಶಿಸಿ ಮೀಸಲಾತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾದರು.  ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯ ಮುಕ್ಕಾಲು ಭಾಗವನ್ನು ಸರಕಾರ ಒಪ್ಪಿಕೊಂಡಿತು. ಬಹು ಮುಖ್ಯವಾದ ಕಾಲು ಭಾಗದ ಅಲೆಮಾರಿಗಳ ಮೇಲೆ ಕಲ್ಲು ಚಪ್ಪಡಿ ಎಳೆದು ಬಿಟ್ಟಿತು ಚಪ್ಪಡಿ ಹೃದಯದ ಕರ್ನಾಟಕ ಸರಕಾರ.  

ಅಲೆಮಾರಿಗಳಿಗೂ ೧% ಮೀಸಲಾತಿ ಕೊಡಿ ಎಂದಿದ್ದರು ನ್ಯಾಯಮೂರ್ತಿಗಳು. ಇವರನ್ನು ಹುಡುಕಿ ಹುಡುಕಿ ಇವರ ಸಂಖ್ಯೆಯನ್ನು ಅವರು ಗುರುತಿಸಿದ್ದರು. ಇವರಲ್ಲಿರುವ ಬೈರಾಗಿ, ಬಾಲಸಂತೋಷಿ, ಬಾಜಿಗರ್, ಬಾರ್ ಡಿ, ಚಾರ್, ಚಿತ್ರಕಥಿ, ಜೋಷಿ, ದೊಂಬರಿ, ಸಾರನಿಯ, ತಿರುಮಲಿ, ವಾಯ್ಡು, ವಾಸುದೇವ, ವಾಡಿ, ವಾಗ್ರಿ, ವೀರ್, ಇವರೊಂದಿಗೆ ಹಾವಾಡಿಗ, ನಾಥಪಂತಿ, ಡವರಿ, ಬಜೇನಿಯ, ಗೊಂದಲಿಗ ಎಂಬ ೫೯ ಅಲೆಮಾರಿ ಜಾತಿಗಳನ್ನು ಗುರುತಿಸಿದ್ದರು. ಅವರ ಸಂಖ್ಯೆ, ಇವರ ಆರ್ಥಿಕ-ಸಾಮಾಜಿಕ ಜೀವನ ಅಭ್ಯಸಿಸಿದರು. ನ್ಯಾಯವಾಗಿ ಸಲ್ಲಬೇಕಾದ ಮೀಸಲಾತಿ ಇವರಿಗೆ ಸಿಗಲಿ ಎಂದಿದ್ದರು. ಆದರೆ ಉಳ್ಳವರ ಕೈ ಮೇಲಾಯಿತು. ಸಂಘಟಿತ ಸಮಾಜದ ಮಂತ್ರಿಗಳು ತಮ್ಮವರ ಬಗ್ಗೆ ಮಾತ್ರ ಯೋಚಿಸಿದರು. ತಮ್ಮವರಿಗಾಗಿ ಮಾತ್ರ ಮೀಸಲಾತಿ ಇರಲೆಂದರು. ತಮಗಿಂತ ಕೆಳಗಿರುವವರಿಗೆ “ದೇವರಿದ್ದಾನೆ” ಎಂದರು. ಬಲಾಢ್ಯರ ಒತ್ತಾಯಕ್ಕೆ ಸಿದ್ಧರಾಮಯ್ಯ ಮಣಿದರು. ನಿಜವಾಗಿ ಮೀಸಲಾತಿ ಸಿಗಬೇಕಾದವರಿಗೆ ನಿಮಗಿಲ್ಲ ಸ್ಥಾನವೆಂದರು.

“ಉಳ್ಳವರು ಶಿವಾಲಯ ಕಟ್ಟುವರು ಬಡವ ನಾನೇನು ಮಾಡಲಯ್ಯ”ಎಂದಿತ್ತು ನನ್ನ ಮನಸ್ಸು.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply