ಯಾವ ಸಮುದಾಯವೂ ಅಲೆಮಾರಿ ಸಮುದಾಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕಿಲ್ಲ

8 months ago

ಪ್ರಿಯ ಎಡ ಸಮುದಾಯದ ಸಹೋದರರೆ ನಮಸ್ಕಾರ.

ನಿನ್ನೆ ಶಾಸಕರ ಭವನದ ಸಭಾಂಗಣದಲ್ಲಿ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಹಂಚಿಕೆಯಲ್ಲಿ ಆದ ತಾರತಮ್ಯದ ಕುರಿತು ಒಂದು ಸಭೆ ನಡೆಯಿತು. ಈ ಸಭೆಯಲ್ಲಿ ಸಾಹಿತಿಗಳು, ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಾಮಾಜಿಕ ನ್ಯಾಯದ ಪರವಾಗಿ‌ ಯೋಚಿಸುವ ನಾಗರಿಕ ಸಮಾಜದ ಹಲವಾರು ಈ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಭೆಯಲ್ಲಿ ಸಹೋದರ ದಾಸನೂರು ಕೂಸಣ್ಣ ಅವರು ಮಾತನಾಡುತ್ತ ‘ಎಡಗೈ ಸಮುದಾಯಕ್ಕೆ ಸರಕಾರ ಕೊಟ್ಟಿರುವ ೬% ಮೀಸಲಾತಿಯಲ್ಲಿ ಅರ್ಧ ಪರ್ಸೆಂಟ್ ಮೀಸಲಾತಿಯನ್ನು ಅಲೆಮಾರಿಗಳಿಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ’ ಎಂದು ಹೇಳಿದರು. ಇದು ಉದಾರವಾಗಿ ಯೋಚಿಸಿ ನೀಡಿದ ಆಶಯಾತ್ಮಕ ಹೇಳಿಕೆ ಅಷ್ಟೇ.

ಕೂಸಣ್ಣ ಅವರ ವಿರುದ್ಧ ಕೆಲವು ದಲಿತ ಬಂಧುಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರಣಕ್ಕಾಗಿ ಅಲೆಮಾರಿ ಸಂಘಟನೆಗಳ ಪರವಾಗಿ ಈ  ಸ್ಪಷ್ಟನೆಯನ್ನು ನೀಡುತ್ತಿದ್ದೇವೆ.

ಶಾಸಕರ ಭವನದ ಈ ವೇದಿಕೆಯಲ್ಲಿದ್ದ ಅಲೆಮಾರಿ ಸಮುದಾಯದ ನಮಗೆ ಸಂಘಟಕರು ಮಾತನಾಡಲು ಅವಕಾಶ ನೀಡಿದಾಗ ‘ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಸರಕಾರ ಈಗ ನೀಡಿರುವ ಮೀಸಲಾತಿ ಪ್ರಮಾಣದಲ್ಲಿ ಅಲೆಮಾರಿಗಳಿಗೆ ಯಾವ ಪಾಲು ಬೇಡ’ ಎಂದು ಹೇಳಿದೆವು.

ಎಡಗೈ ಸಮುದಾಯದ ಬಂಧುಗಳ ೩೫ ವರ್ಷಗಳ ಹೋರಾಟದ ಫಲ ಅವರಿಗೆ ಸಿಕ್ಕಿದೆ. ಇದನ್ನು ಅಲೆಮಾರಿ ಸಮುದಾಯದ ಎಲ್ಲರೂ ಸ್ವಾಗತಿಸಿದ್ದಾರೆ. ಎಡಗೈ ಸಮುದಾಯಕ್ಕೆ ಹಂಚಿಕೆ ಮಾಡಿರುವ ೬% ನಲ್ಲಿ ಅಲೆಮಾರಿಗಳಾದ ನಮಗೆ  ಪಾಲು ಬೇಡ. ಬಲಗೈ ಸಮುದಾಯದ ಪಾಲಲ್ಲೂ‌ ನಾವು ಭಾಗ ಕೇಳುತ್ತಿಲ್ಲ.  ಸುಪ್ರೀಂ ಕೋರ್ಟ್ ನ ತೀರ್ಪನ್ನು ನಾವೂ ಓದಿದ್ದೇವೆ. ಯಾರ ಪಾಲಲ್ಲೂ ನಮಗೆ ಭಾಗ ಬೇಡ. ನೀವು ಕೊಡುವುದೂ ಬೇಡ. ಸರಕಾರವನ್ನೂ ಒಳಗೊಂಡಂತೆ ಯಾರೂ ನಮಗೆ ಭಿಕ್ಷೆ ನೀಡಬೇಕಿಲ್ಲ. ಯಾರೂ ಅವರವರ ಮನೆಯಿಂದಾಗಲಿ, ಖಾಸಗಿ ಆಸ್ತಿಯಿಂದಾಗಲಿ ಮೀಸಲಾತಿಯನ್ನು ಕೊಡುತ್ತಿಲ್ಲ. ಮೀಸಲಾತಿ ಎಂಬುದು ಎಲ್ಲ ಶೋಷಿತ ಸಮುದಾಯಗಳಿಗೆ ಸಂವಿಧಾನ ಕೊಡಮಾಡುವ ಅವಕಾಶವಷ್ಟೆ.

ಅಲೆಮಾರಿಗಳಾದ ನಾವೂ ಈ ದೇಶದ ಮಕ್ಕಳು. ನಮಗೂ ಈ ದೇಶದಲ್ಲಿ ಬದುಕುವ ಮತ್ತು ಪಾಲು ಪಡೆಯುವ ಹಕ್ಕಿದೆ. ಸಂವಿಧಾನಬದ್ಧವಾಗಿ ಮತ್ತು ನಮ್ಮ ಹಕ್ಕುಗಳ ಭಾಗವಾಗಿ ಮೀಸಲಾತಿಯಲ್ಲಿ ನಾವು ಪಾಲನ್ನು ಕೇಳುತ್ತಿದ್ದೇವೆ. ಮೀಸಲಾತಿ ಎಂಬುದು ಯಾವ ಸಮುದಾಯದ ಖಾಸಗಿ ಅಸ್ತಿಯಲ್ಲ. ಮೀಸಲಾತಿ ಎಂಬುದು ಸಂವಿಧಾನ ನಮಗೆ ನೀಡುವ ವಿಶೇಷ ಸವಲತ್ತು.

ಸುಪ್ರೀಂ ಕೋರ್ಟ್ ತೀರ್ಪು ಯಾವುದೋ ಸಮುದಾಯಕ್ಕೆ ಮೀಸಲಾತಿಯನ್ನು ಸೀಮಿತಗೊಳಿಸಿಲ್ಲ. ನಮಗೆ ಸಂವಿಧಾನವಿದೆ, ಅದರಲ್ಲಿ ನಮ್ಮಂತಹ ತಬ್ಬಲಿ ಸಮುದಾಯಗಳಿಗೂ ಪಾಲು ಪಡೆಯಲು ಅವಕಾಶವಿದೆ.

ಯಾವ ಸಮುದಾಯವೂ ಅಲೆಮಾರಿ ಸಮುದಾಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕಿಲ್ಲ. ನಾವೂ ನಿಮ್ಮ ಸಹೋದರರು, ಪ್ರೀತಿಯಿಂದ ನೋಡಿ. ಸಾಧ್ಯವಾದರೆ ನೆರವಿಗೆ ಬನ್ನಿ.  ಇಲ್ಲದಿದ್ದಲ್ಲಿ ಕೋರ್ಟ್ ಇದೆ, ಕಾನೂನು ಹೋರಾಟದ ಹಾದಿ ಎಲ್ಲರಿಗೂ ತೆರೆದುಕೊಂಡಿದೆ.

ಇಲ್ಲಿವರೆಗೂ ಅಲೆಮಾರಿಗಳ ಹೋರಾಟವನ್ನು ಮುನ್ನಡೆಸಿದ ಎಡಗೈ ಮತ್ತು ಬಲಗೈ ಸದಾಯದ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು.

ಇಂತಿ

ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವೇದಿಕೆ

Leave a Reply