ಅಮಾಯಕರು ನಮ್ಮ ಹುಡುಗರು!

3 years ago

ಆತ ರ‍್ಯಾಂಕ್ ಬರುವಷ್ಟು ಜಾಣ. ಯಾರ ತಂಟೆಗೂ ಹೋಗದ, ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ ಹುಡುಗ. ಪಾಪ ಅವನು ಹಾಗೆಯೇ ಸಣ್ಣ ವಯಸ್ಸಿನಿಂದಲೂ ಓದಿನಲ್ಲಿ, ಕಲಿಕೆಯಲ್ಲಿ, ಅಧ್ಯಯನಾಸಕ್ತನೂ ಮತ್ತು ಮುಗ್ಧನು. ಅವನ ಅಧ್ಯಯನದ ಆಗಸವು ಹಾಗೆಯೇ ನಿರ್ಮಲಾಕಾಶವಾಗಿ ಇರಲಿಲ್ಲ. ಕಾಲೇಜಿನಲ್ಲಿ ಮುಂದೊಂದು ದಿನಗಳಲ್ಲಿ, ಗಾಢವಾದ ಕಾರ್ಮೋಡಗಳು ಮುಸುಕಿದವು. ಯಾವಾಗಲೂ ರ‍್ಯಾಂಕ್ ಬರುತ್ತಿದ್ದ ಹುಡುಗ ಫೇಲ್ ಆದ ಕೆಲವು ಸಬ್ಜೆಕ್ಟ್ ಗಳಲ್ಲಿ. ಒಂದೇ ಸಲಕ್ಕೆ ಓದುತ್ತಿದ್ದಂತಹ ಜಾಣ ಕಂತುಗಳಲ್ಲಿ ಕಟ್ಟಿ ಪಾಸ್ ಮಾಡಿಕೊಳ್ಳುವಂತಾದ.

ಅಧ್ಯಯನ ಚತುರನಾದ ಆ ಅಮಾಯಕನ ಬಾಳಿನಲ್ಲಿ ಫೇಲಾಗುವಂತೆ ಮಾಡಿದ ಆ ಕಾರ್ಮೋಡಗಳು ಯಾವವು? ಅವು ಹುಡುಗಿಯರಲ್ಲದೇ ಮತ್ತಾರೂ ಅಲ್ಲ!! ಅವರೋ ಅವನ ಕಲಿಕೆಯ ಸಾಮರ್ಥ್ಯವನ್ನು ಮತ್ತು ಪ್ರತಿಭೆಯನ್ನು ಮಿಸ್ಯೂಸ್ ಮಾಡಿಕೊಂಡರು. ಅವನ ನಿದ್ದೆಗೆಡಿಸಿದರು, ದಿಕ್ಕು ತಪ್ಪಿಸಿದರು, ದಾರಿಗೆಡಿಸಿದರು. ಕೊನೆಗೆ ನಪಾಸಾಗುವಂತೆ ಮಾಡಿದರು.

ಅವನ ಬದುಕಿನಲ್ಲಿ ಆ ಸ್ವಾರ್ಥಿ ಹುಡುಗಿಯರ ಪ್ರವೇಶವಾಗದಿದ್ದರೆ ಅವನು ಚೆನ್ನಾಗಿಯೇ ಇರುತ್ತಿದ್ದ. ಚಾನೆಲ್‌ಗೇನಾದರೂ ಸ್ಟೋರಿ ಮಾಡಿದ್ದರೆ ‘ಅಮಾಯಕನ ದಿಕ್ಕುಗೆಡಿಸಿದ ಅಪರಾಧಿಗಳು ಯಾರು?’ ಎಂದು ಟೈಟಲ್ಲಿಡಬಹುದಾಗಿತ್ತು.

ಇರಲಿ, ಇನ್ನೊಬ್ಬ ಹುಡುಗನ ತಂದೆ ತಾಯಿಯರು ಗೋಳಿಡುತ್ತಿದ್ದರು.

“ನಮ್ಮ ಹುಡುಗ ಚಿನ್ನದಂತವನು. ಅವನು ಯಾರ ತಂಟೆಗೂ ಹೋಗುತ್ತಿರಲಿಲ್ಲ. ಸ್ಕೂಲಾದರೆ ಮನೆ, ಮನೆಯಾದರೆ ಸ್ಕೂಲು ಅಂತಿದ್ದ. ಕಾಲೇಜಿಗೆ ಹೋದ ಮೇಲೆ ಕೆಲವು ಪೊರಕಿಗಳು, ಓದು ಬರಹ ಬೇಡವಾದವರು ಹೇಗಾದರೂ ಕಾಲೇಜು ಪಾಸ್ ಮಾಡಬೇಕಲ್ಲಾ. ಇವನ ಹತ್ತಿರ ಸಹಾಯ ಪಡ್ಕೊಳ್ತಿದ್ದರು. ಇವನು ಬೇಡಾ ಬೇಡಾ ಅಂದ್ರೂ ಅಲ್ಲಿಗೆ ಇಲ್ಲಿಗೆ ಕರ‍್ಕೊಂಡು ಹೋಗುತ್ತಿದ್ದರು. ಅದೆಂಗೋ ಕುಡಿಯೋದು ಕಲಿಸಿಬಿಟ್ಟರು. ಸಿಗರೇಟು ಸೇದೋದನ್ನೂ ಕಲಿಸಿಬಿಟ್ಟರು. ನಮ್ಮ ಅಮಾಯಕ ಹುಡುಗನನ್ನು ಹಾಳು ಮಾಡಿಬಿಟ್ಟರು. ಈಗ ಅವನು ಫುಲ್ ಟೈಟಾಗೇ ಬರ‍್ತಾನೆ. ಅವತ್ತಿನ ದಿನ ಹೇಳಿದ ಮಾತು ಕೇಳ್ಕೊಂಡು, ಒಂದೂ ಮಾತು ಎದುರಾಡದಿದ್ದವನು ನಮಗೆ ಬಾಯಿಗೆ ಬಂದಂಗೆ ಬೈಯ್ತಾನೆ. ಸಹವಾಸದಿಂದ ಸನ್ಯಾಸಿ ಕೆಟ್ಟ.”

ಅಮಾಯಕ ಸನ್ಯಾಸಿಗಳು!

ನಮ್ಮ ಮನೆಯ ಮಕ್ಕಳೆಲ್ಲಾ ಅಮಾಯಕವಾದ ಸನ್ಯಾಸಿಗಳೇ. ಏಕಾಗ್ರ ಚಿತ್ತದಿಂದ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರನೇ. ಅವಳ್ಯಾವಳೋ ಮೇನಕೆ ಬಂದು ಅವನ ತಪಸ್ಸನ್ನು ಕೆಡಿಸಿ, ಅವನನ್ನೂ ಕೆಡಿಸಿ, ಅವನ ಕಾರ್ಯಕ್ರಮಗಳೆಲ್ಲವನ್ನೂ ಕೆಡಿಸಿ ಬಿಟ್ಟಳು. ಅದಾದ ಮೇಲೆ ನಮ್ಮ ಸನ್ಯಾಸಿ ವಿಶ್ವಾಮಿತ್ರ ಟೋಟಲ್ ಕೇಡಿಯಾಗಿಬಿಟ್ಟಿದ್ದಾನೆ ಎಂಬುವ ಮಾತುಗಳನ್ನು ಪದೇ ಪದೇ ಕೇಳುತ್ತಿರುತ್ತೇನೆ.

ಗಂಡಂದಿರು ಕುಡುಕರಾಗುವುದಕ್ಕೂ ಬಹುಪಾಲು ಹೆಂಗಸರು ಕೆಂಗಣ್ಣನ್ನು ಬೀರುವುದು ಅವರ ಸ್ನೇಹಿತರ ಮೇಲೆಯೇ. ಇಂಥಾ ಡರ್ಟಿ ಸ್ನೇಹಿತರು ಇಲ್ಲದಿದ್ದರೆ ನಮ್ಮ ಹುಡುಗ, ಹುಡುಗಿ ಅಥವಾ ಗಂಡ ಕೆಡುತ್ತಿರಲಿಲ್ಲ ಎಂದು ಅವರ ಪ್ರೀತಿಪಾತ್ರರ ಅಳಲು.

ಈ ಅಮಾಯಕ ಸನ್ಯಾಸಿಗಳು ಯಾಕಾದರೂ ಅವರನ್ನು ಅನುಸರಿಸಬೇಕು ಅಂತ ಪ್ರಶ್ನಿಸಿದರೆ, ಅವರು ಅಮಾಯಕರಾಗಿರುವ ಕಾರಣದಿಂದಲೇ ಒಳ್ಳೇದು ಕೆಟ್ಟದು ತಿಳಿಯದೇ ಪ್ರೀತಿಯಿಂದ, ಸ್ನೇಹದಿಂದ, ವಿಶ್ವಾಸದಿಂದ, ನಮಗೇನೂ ದ್ರೋಹ ಮಾಡರು ಎಂಬ ನಂಬಿಕೆಯಿಂದ ಆ ಡರ್ಟಿ ಕಂಪನಿಯಲ್ಲಿ ಬಿದ್ದು ಬಿಡುತ್ತಾರೆ. ನಂತರ ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲದಂತಾಗಿಬಿಡುತ್ತದೆ!

ಆಯ್ಕೆ ಮತ್ತು ಅಪಹರಣ

ಅದೊಂದು ರಾತ್ರಿ. ಸನ್ಯಾಸಿನಿಯರ ಮಠ. ಸನ್ಯಾಸಿನಿಯರಿಬ್ಬರು ಯಾವುದೋ ತುರ್ತಾದ ಕೆಲಸಕ್ಕೆ ಪಕ್ಕದ ಹಳ್ಳಿಗೆ ಹೋಗಬೇಕಿತ್ತು. ನಿರ್ಜನವಾದ ಪ್ರದೇಶದಲ್ಲಿ ಹಾದುಹೋಗುತ್ತಿದ್ದ ಆ ಹೆಂಗಸಿಬ್ಬರನ್ನು ಯಾರೋ ಇಬ್ಬರು ದುರ್ಮಾರ್ಗಿಗಳು ಪೊದೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿಬಿಟ್ಟರು. ಅತ್ಯಾಚಾರಕ್ಕೊಳಗಾದ ಆ ಸನ್ಯಾಸಿನಿಯರು ಪ್ರಯಾಣ ಮುಂದುವರೆಸುತ್ತಾ ಮಾತಾಡಿಕೊಂಡರು.

“ಈಗೇನು ಮಾಡುವುದು?” ಒಬ್ಬಳು ಸನ್ಯಾಸಿನಿಯು ಮತ್ತೊಬ್ಬ ಸನ್ಯಾಸಿನಿಯನ್ನು ಕೇಳಿದಳು.

“ಎಲ್ಲಾ ಆಗಿ ಹೋದ ಮೇಲೆ ಮಾಡುವುದೇನು? ಮಠಕ್ಕೆ ಹೋಗಿ ಪಾಪ ನಿವೇದನೆ ಮಾಡಿಕೊಂಡು ಬಿಡೋಣ. ಹೀಗೀಗೆ ನಮಗೆ ಎರಡು ಬಾರಿ ಅತ್ಯಾಚಾರಗಳಾದವು ಎಂದು ಶುದ್ಧೀಕರಣದ ವಿಧಿಗೆ ಒಳಗಾಗೋಣ” ಎಂದಳು ಮತ್ತೊಬ್ಬ ಸನ್ಯಾಸಿನಿ.

“ಎರಡು ಬಾರಿ ಎಲ್ಲಾಯಿತು? ಒಂದೇ ಸಾರಿ ತಾನೇ?” ಪ್ರಶ್ನಿಸಿದಳು ಮೊದಲಿನವಳು.

“ಈಗ ಮತ್ತೆ ನಾವು ಅದೇ ಮಾರ್ಗದಲ್ಲಿ ವಾಪಸ್ಸು ಹೋಗಬೇಕಲ್ಲಾ” ಎಂದಳು ಎರಡನೆಯವಳು. ಎಂಬ ಜೋಕನ್ನು ಕೇಳಿರುವುದು ಮಾತ್ರವಲ್ಲ, ಈ ಜೋಕನ್ನು ಹಲವು ರೀತಿಗಳಲ್ಲಿ ಪ್ರತಿನಿತ್ಯ ನೋಡುತ್ತಿರುತ್ತೇನೆ. ತಾವು ಅತ್ಯಾಚಾರವೆಂದು ದೂರುವಂತಹ ಸ್ಥಿತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ನಮ್ಮ ಬಂಧುಮಿತ್ರರಿಗೇನೂ ಕಡಿಮೆಯಿಲ್ಲ.

ನನಗೆ ಸನ್ಮಾನ ಬೇಡ, ನಾನು ವೇದಿಕೆಯ ಮೇಲೆ ಬರಲೊಲ್ಲೆ ಎಂದು ನಿರಾಕರಿಸುತ್ತಾ ಬಹು ಒತ್ತಾಯದಿಂದ ವೇದಿಕೆಗೆ ಕರೆಯಿಸಿಕೊಳ್ಳಲ್ಪಡುವ ಮಿತ್ರರು ಮೊದಲ ಬಾರಿ ಕರೆದಾಗಲೇ ಬರುವುದಕ್ಕೆ ಅದೇಕೋ ಅವರಿಗೆ ಬೋಮಾನ. ಒಲ್ಲೆ ಒಲ್ಲೆ ಅಂತ ಹೇಳುತ್ತಾ ಬಲಾತ್ಕಾರ ಮಾಡಿಸಿಕೊಳ್ಳುತ್ತಾ ಕೊಳದಪ್ಪಲೆ ಉಣ್ಣುವ ಸಂಕೋಚದವರೇನೂ ಅಪರೂಪವಲ್ಲ.

ಆಸೆಯ ಹೇಳಲು ಸಂಕೋಚ. ಆಶಿಸುವುದನ್ನು ಬೇಡವೆನ್ನುತ್ತಾ ಒತ್ತಾಯಕ್ಕೆ ಒಳಗಾಗುವುದು ಮಾತ್ರ ಸಂತೋಷ!

ಆಗಿನವನು ಮತ್ತು ಈಗಿನವನು

ತಾವು ಬಾಲ್ಯದಿಂದಲೂ ನೋಡುತ್ತಾ ಇರುವ ಬಾಲಕನು ಈಗ ಬಾಲಕನಾಗಿಯೇ ಉಳಿದಿಲ್ಲ ಎಂಬ ಸತ್ಯ ಎಷ್ಟೋ ಜನ ಪೋಷಕರಿಗೆ ಅರ್ಥವಾಗುವುದೇ ಇಲ್ಲ. ಒಬ್ಬ ಯುವಕನ ಅಥವಾ ಯುವತಿಯ ಸಂಬಂಧವು ಎಲ್ಲರೊಡನೆಯೂ ಒಂದೇ ತೆರನಾಗಿರುವುದಿಲ್ಲ ಎಂದೂ ತಿಳಿಯುವುದಿಲ್ಲ.

ಪ್ರತಿಯೊಬ್ಬರಿಗೂ ಅವರವರ ಪಾತ್ರ ನಿರ್ವಹಣೆಯನ್ನು ಯಾರಾರ ಬಳಿ ಹೇಗೆ ಮಾಡಬೇಕೆಂದು ತಿಳಿದಿರುತ್ತದೆ. ತಂದೆ ತಾಯಿ ಅಥವಾ ಅಣ್ಣ ಅಕ್ಕಂದಿರ ಬಳಿ ಕುಡುಕತನದ ಅಭಿಲಾಷೆಯನ್ನು ವ್ಯಕ್ತಪಡಿಸುವುದಾದರೂ ಆತನಿಗೆ ಹೇಗೆ ಸಾಧ್ಯ? ಅಥವಾ ಏಕಾಗಿ? ಆ ಕಂಪನಿ ಅದಕ್ಕಲ್ಲ. ತನ್ನ ಸ್ನೇಹಿತರೊಡನೆ ಮನಬಿಚ್ಚಿ, ಮುಕ್ತ ಕಾಮುಕತನದ ಅಥವಾ ಲೈಂಗಿಕಾಭಿಲಾಷೆಗಳ ಹಸಿ ಹಸಿ ಬಿಚ್ಚು ಮಾತುಗಳನ್ನು ಆಡುವಂತೆ ಮನೆಯವರೊಂದಿಗೆ ಯಾಕಾದರೂ ಆಡುತ್ತಾನೆ. ಆ ಅಭ್ಯಾಸವನ್ನು ಸಾಮಾಜಿಕವಾಗಿ ನಾವು ಕಂಡವರಲ್ಲ. ಅವನು ತನ್ನ ಅಭಿರುಚಿಗೆ ಮತ್ತು ಮನಸ್ಥಿತಿಗೆ ಹೊಂದುವ ಸ್ನೇಹಿತರೊಡನೆ ಕ್ರಿಯಾತ್ಮಕವಾಗಿರುವುದನ್ನು ಕಂಡಾಗ ಅವನ ಮನೆಯವರಿಗೆ ಅನ್ನಿಸುವುದು ಏನೆಂದರೆ, ನಮ್ಮ ಹುಡುಗ ಅಮಾಯಕ ಸನ್ಯಾಸಿಯಾಗಿದ್ದ, ಸ್ನೇಹಿತರ ಸಹವಾಸದಿಂದ ಕೆಟ್ಟ ಎಂದು.

ಬೀಜವಿಲ್ಲದಿದ್ದರೆ ಸಸಿ ಹುಟ್ಟುವುದಿಲ್ಲ. ಮರವಾಗಿ ಕಂಡಿದ್ದು ಸಸಿಯಾಗಿ ಇದ್ದಿರಲೇ ಬೇಕು. ಯಾರೊಬ್ಬನೂ ತನ್ನ ಒಳಗೆ ಗುಪ್ತವಾಗಿರುವ ಬಯಕೆಗಳನ್ನು ಪೂರೈಸಿಕೊಳ್ಳಲು ಅನುಕೂಲಕರವಾದ ವಾತಾವರಣಕ್ಕೆ, ಸಹವಾಸಕ್ಕೆ ಹಾತೊರೆಯುತ್ತಿರುತ್ತಾನೆ. ತನ್ನ ಸಂಪರ್ಕಕ್ಕೆ ಬರುವ ವ್ಯಕ್ತಿಯಲ್ಲಿ ತನ್ನದೇ ಆಸಕ್ತಿ ಮತ್ತು ಅಭಿರುಚಿಗಳನ್ನು ಕೊಂಚವಾದರೂ ಗುರುತಿಸಿದಲ್ಲಿ, ಕಾಯುತ್ತಾನೆ. ಪರಸ್ಪರ ಸುಳುಹುಗಳನ್ನು ಕೊಟ್ಟುಕೊಳ್ಳುತ್ತಾರೆ. ಸಂಕೇತಗಳು ಪಾಸಿಟಿವ್ ಆದ ಕೂಡಲೇ ಸಿಗರೇಟು ಹಚ್ಚುತ್ತಾರೆ, ಬಾಂಗ್ ಹೊಡೆಯುತ್ತಾರೆ, ಬಾಟಲೆತ್ತುತ್ತಾರೆ ಹಾಗೆಯೇ ಬಟ್ಟೆಯೂ ಬಿಚ್ಚುತ್ತಾರೆ.

ನಮ್ಮ ಹುಡುಗರೂ ಕೂಡ ದೂರುವುದರಲ್ಲಿ ಕಡಿಮೆಯೇನಿಲ್ಲ.

ಸಭ್ಯನಾಗಿರುವಂತೆಯೇ ತೋರಿಸಿಕೊಂಡಿದ್ದು ಸಿಕ್ಕಿ ಹಾಕಿಕೊಂಡು ಬಿಟ್ಟರೆ ಪುಟ್ಟ ಮಗುವಿನಂತೆ ಚಾಡಿ ಹೇಳುತ್ತಾ ದೂರುತ್ತಾರೆ. ‘ನನ್ನ ಪಾಡಿಗೆ ನಾನು ಇದ್ದೆ. ಅವನೇ ಕರೆದುಕೊಂಡು ಹೋಗಿದ್ದು’ ಎಂದು ಮಿಕಿಮಿಕಿ ನೋಡುತ್ತಾರೆ. ಪಾಪ ಅಮಾಯಕರು ನಮ್ಮ ಹುಡುಗರು!

– ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply