ಬೆಂಗಳೂರು: ರಾಜ ಬಿಜೆಪಿಯಲ್ಲಿ ನಡೆದಿರುವ ವಿದ್ಯಮಾನಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ವಕ್ಫ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ತಯಾರಾಗುತ್ತಿದ್ದ ವಿಪಕ್ಷ ನಾಯಕ ಆರ್ ಅಶೋಕ್ ವರಿಷ್ಠರ ಕರೆ ಮೇರೆಗೆ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ತೆರಳಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿ, ರಾಜ್ಯದ ವಿದ್ಯಮಾನಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಮತ್ತೊಂದೆಡೆ ದೆಹಲಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ವಕ್ಫ್ ಕಾನೂನು ತಿದ್ದುಪಡಿಯ ಜಂಟಿ ಸದನ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಕಲಬುರಗಿ, ಬೀದರ್, ಬಿಜಾಪುರ, ಯಾದಗಿರಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಸಂಗ್ರಹಿಸಿದ ಮಾಹಿತಿ ವರದಿಯಲ್ಲಿದೆ. ಅಲ್ಲದೇ ವಕ್ಫ್ ಇತ್ತಿಚೆಗೆ ನೋಟಿಸ್ ನೀಡಿದ ಆಸ್ತಿಗಳ ಬಗ್ಗೆ ಜಗದಾಂಬಿಕಾ ಪಾಲ್ ಅವರಿಗೆ ನೀಡಲಾಗಿದೆ ಎಂದರು.
ನಂತರ ಬಸನಗೌಡ ಪಾಟೀಲ ಅವರು ಬಿಜೆಪಿ ಶಿಸ್ತು ಸಮಿತಿಯ ಮುಖಂಡ ಓಂ ಪಾಠಕ್ ಅವರನ್ನು ಭೇಟಿ ಮಾಡಿ, ತಮಗೆ ನೀಡಿರುವ ನೋಟಿಸ್ ಗೆ ಸುದೀರ್ಘ ವಿವರಣೆಗಳನ್ನು ಒಳಗೊಂಡ ಆರು ಪುಟಗಳ ಸಮಜಾಯಿಷಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ಗಂಟೆಗಳ ಕಾಲ ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳು, ಪಕ್ಷದ ಮುಖಂಡರ ಹೊಂದಾಣಿಕೆ ರಾಜಕಾರಣ ಹಾಗೂ ತಾವು ಆಸ್ತಿ ತೆರವು ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆಯನ್ನು ವಿವರಿಸಿದ್ದೇನೆ. ಎಲ್ಲವನ್ನು ಕೇಳಿಸಿಕೊಂಡ ಪಕ್ಷದ ಶಿಸ್ತು ಸಮಿತಿ ಮುಖಂಡರು ನನ್ನ ವಿವರಣೆಯಿಂದ ಸಮಾಧಾನಗೊಂಡಿದ್ದಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕಾರಣ ಬಗೆಹರಿಸುವ ಸಂಬಂಧ ಕೇಂದ್ರ ಸಚಿವರು ಮತ್ತು ರಾಜ್ಯದ ಬಿಜೆಪಿ ಸಂಸದರೊಂದಿಗೆ ಕಳೆದ ರಾತ್ರಿ ಸಮಲೋಚನೆ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಜೆ ಪಿ ನಡ್ಡಾ ಬಿಕ್ಕಟ್ಟನ್ನು ಪರಸ್ಪರ ಸಂಧಾನದಿಂದ ಬಗೆಹರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಪಕ್ಷದ ಎಲ್ಲ ಮುಖಂಡರಿಗೂ ಸಂದೇಶ ರವಾನಿಸಿರುವ ನಡ್ಡಾ, ಯಾವುದೇ ಕಾರಣಕ್ಕೂ ಯಾವುದೇ ಬಣದ ಮುಖಂಡರು ಆರೋಪ ಪ್ರತ್ಯಾರೋಪದಲ್ಲಿ ತೊಡಗಬಾರದು. ತಮ್ಮ ವೈಮನಸ್ಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಯತ್ನಾಳ್ ಹೊರಗಿನವರಲ್ಲ, ನಮ್ಮವರೇ. ಯಾವುದೋ ಕಾರಣಕ್ಕೆ ಅವರು ಹಾಗೆ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಹೈ ಕಮಾಂಡ್ ಕೂತು ಬಗೆಹರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ನಮ್ಮ ಶಾಸಕರು ಜಾಗೃತಿ ಮೂಡಿಸಲಿದ್ದಾರೆ. ಮುಡಾ ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ಎಲ್ಲ ವಿವರಗಳು ಹೊರಗೆ ಬರುತ್ತಿವೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಬಂಡಾಯ ಪಕ್ಷಕ್ಕೆ ಹಾನಿಯಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಒಟ್ಟಾಗಿ ಪಕ್ಷವನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ಏನೇ ಭಿನ್ನಾಭಿಪ್ರಾಯವಿದ್ದರೂ ಎದುರುಬದುರು ಕೂತು ಚರ್ಚಿಸಿ, ಒಟ್ಟಾಗಿ ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲವೂ ಸರಿಯಾಗುತ್ತದೆ ಎಂದರು.




