ಅಂಬೇಡ್ಕರ್ ಸಾಹೇಬರ ಸ್ಪೂರ್ತಿಯ ಸಂಕೇತ ರಮಾಬಾಯಿ: ಡಾ.ಎಚ್.ಎಲ್.ಪುಷ್ಪ

2 years ago

ಜನಮನ ಮಿಡಿದ ಮಿಸ್ಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನ

ಚಾಮರಾಜನಗರ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕಿನ ಸಾಧನೆಯ ಹಾದಿಯಲ್ಲಿ ಸದಾ ಬೆನ್ನೆಲುಬಾಗಿ ನಿಂತ ಮಹಾಮಾತೆ ರಮಾಬಾಯಿ ಅವರು ಭಾರತದ ಆದರ್ಶ ಮಹಿಳೆ. ಇಂತಹ ತ್ಯಾಗಮಯಿ ತಾಯಿಯ ಬದುಕು ಪ್ರತಿಯೊಬ್ಬರಿಗೂ ಆದರ್ಶಮಯವಾಗಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೆಚ್.ಎಲ್.ಪುಷ್ಪ ಹೇಳಿದರು.

ನಗರದ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಂಸ ಥಿಯೇಟರ್, ರಂಗಧರ್ಮ ಸಾಂಸ್ಕೃತಿಕ ಸಂಸ್ಥೆ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ರಮಾಬಾಯಿ ಅಂಬೇಡ್ಕರ್ 125ನೇ ಜನ್ಮ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆಯುವ ಆ ದಿನಗಳಲ್ಲಿ ಸುಖ ಸಂತೋಷ ನೆಮ್ಮದಿ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಂಬೇಡ್ಕರ್ ಯಶಸ್ಸಿಗೆ ಸಹಕರಿಸಿದ ಮಹಾತ್ಯಾಗಿ ರಮಾಬಾಯಿ. ಪ್ರಸ್ತುತ ವಿಷಮ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ಇಂತಹ ಆದರ್ಶ ಮಹನೀಯರನ್ನು ನೆನೆಯುವ ಮೂಲಕ ಆರೋಗ್ಯಕರ ಸಮಾಜವನ್ನು ಕಟ್ಟಬೇಕಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಮಹದೇವ ಮಾತನಾಡಿ, ಸಂವಿಧಾನ ಪಿತಾಮಹ ಮಹಾಜ್ಞಾನಿಯಾಗಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಪುಸ್ತಕ ಪ್ರೇಮಿಯಾಗಿದ್ದರು. ಪತಿಯ ಆಸೆಯಂತೆ ಓದು ಬರಹ ಕಲಿತ ರಮಾಬಾಯಿ ಅವರು ಸಂಸಾರದ ನೊಗ ಹೊತ್ತು ಮುನ್ನಡೆಸಿದವರು. ರಮಾಬಾಯಿಯವರು ಕೋಟ್ಯಂತರ ಶೋಷಿತ ಜನರ ಮಹಾತಾಯಿಯಾಗಿದ್ದಾರೆ. ಅವರ ಸಾಮಾಜಿಕ ಕೊಡುಗೆ ಅನನ್ಯವಾದುದು ಎಂದರು.

ಸಮಾರಂಭದಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್, ಸ್ತ್ರೀರೋಗ ತಜ್ಞೆ ಡಾ.ರೇಣುಕಾದೇವಿ, ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂಎಸ್ ಮಾದಯ್ಯ , ಕಿರುತೆರೆ ನಟ, ರಂಗನಿರ್ದೇಶಕ ಪ್ರದೀಪ್ ತಿಪಟೂರು, ಕರ್ನಾಟಕ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಎ.ಶಿವಣ್ಣ, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಸಂಸ ಥಿಯೇಟರ್ ನ ರಂಗ ಸಂಘಟಕ ಸಂಸ ಸುರೇಶ್ ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರಿನ ಸಂಸ ಥಿಯೇಟರ್, ರಂಗಧರ್ಮ ಸಾಂಸ್ಕೃತಿಕ ಸಂಸ್ಥೆ ಕಲಾವಿದರು ಪ್ರಸ್ತುತ ಪಡಿಸಿದ ಮಿಸ್ಸೆಸ್ ಅಂಬೇಡ್ಕರ್ ನಾಟಕ ಜನ-ಮನ ಮಿಡಿಯಿತು. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply