ನಿನ್ನೆ ಸಂಜೆ 7-10 ರ ಸಮಯದಲ್ಲಿ ಪಂಡಿತ್ ರಾಜೀವ ತಾರಾನಾಥರು ನಿಧನರಾದ ಸುದ್ದಿ ತಿಳಿದಾಕ್ಷಣ ಇಡೀ ರಾತ್ರಿ ಅವರ ಜೀವನ, ಸಾಧನೆ ಮತ್ತು ಸಂಗೀತ ಕಲಿತ ಕಲಿಸಿದ ಗುರು ಹಾಗೂ ಅವರ ಮನೆತನದ ಹಿನ್ನಲೆಯ ಬಗ್ಗೆ ಯೋಚಿಸುತ್ತಾ ಕುಳಿತೆ. ಇಂದು ಬೆಳಿಗ್ಗೆ ಕುವೆಂಪು ನಗರದ ಅವರ ನಿವಾಸಕ್ಕೆ ಹೋಗಿ ಮೈಸೂರು ಮಲ್ಲಿಗೆ ಹೂವಿನ ಹಾರ ಹೊದ್ದು ತಣ್ಣಗೆ ಮಲಗಿದ್ದ ಆ ಹಿರಿಯ ಜೀವಕ್ಕೆ ನಮಸ್ಕರಿಸಿ ಬಂದೆ. ಮೈಸೂರಿಗೆ ಬಂದು ಮೂರು ವರ್ಷವಾದರೂ ಒಮ್ಮೆಯೂ ಅವರನ್ನು ನಾನು ಭೇಟಿಯಾಗಲಿಲ್ಲ. ಆ ಪಾಪಪ್ರಜ್ಞೆಯೂ ಸಹ ಆ ಕ್ಷಣದಲ್ಲಿ ನನ್ನನ್ನು ಕಾಡಿತು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ರಾಜೀವ್ ತಾರನಾಥರು ನನಗೆ ಧಾರವಾಡದಲ್ಲಿ ಪರಿಚಯ. ಅಲ್ಲಿನ ಮನೋಹರ ಗ್ರಂಥಮಾಲೆಯ ಜಿ.ಬಿ.ಜೋಶಿ, ಅವರ ಪುತ್ರ ರಮಾಕಾಂತಜೋಶಿಯವರ ಜೊತೆ ಅನೋನ್ಯವಾದ ಸಂಬಂಧ ಅವರಿಗಿತ್ತು. ಜೊತೆಗೆ ಧಾರವಾಡದಲ್ಲಿ ಒಂದಿಷ್ಟು ಕಾಲ ಇಂಗ್ಲೀಷ್ ಉಪನ್ಯಾಸಕರಾಗಿದ್ದ ಕಾರಣ ಅವರಿಗೆ ಧಾರವಾಡದ ಬಗ್ಗೆ ಇನ್ನಿಲ್ಲದ ಮೋಹ. ನಾಲ್ಕು ವರ್ಷಗಳ ಹಿಂದೆ ಪಂಡಿತ್ ಬಾಲೇಖಾನ್ ಪ್ರಶಸ್ತಿ ಎಂದು ನೆನಪು. ಪ್ರಶಸ್ತಿ ಸ್ವೀಕರಿಸಲು ಅವರು ಬಂದಿದ್ದಾಗ, ಒಂದು ಗಂಟೆಯ ಕಾಲ ಸರೋದ್ ನುಡಿಸಿದ್ದರು. ಅವರು ಕಾರ್ಯಕ್ರಮಕ್ಕೆ ಆಗಮಿಸುವ ವೇಳೆಗೆ ನಾನು ಚಹಾ ಕುಡಿದು ಗೇಟಿನ ಬಳಿ ಗೆಳೆಯರ ಜೊತೆ ಸಿಗರೇಟ್ ಸೇದುತ್ತಾ ನಿಂತಿದ್ದೆ.
ನಮ್ಮನ್ನು ನೋಡಿದ ಅವರು ಅಪ್ಪಟ ಧಾರವಾಡ ಭಾಷೆಯಲ್ಲಿ ‘’ ದಮ್ ಹೊಡಿಯಲಿಕ್ ಹತ್ತೀರಿ, ನನಗೂ ಇಡಿ. ನಾ, ಚಹಾ ಕುಡಿದು ಬತ್ತೀನಿ’’ ಎಂದರು. ನಾನು ಕೂಡಲೇ ‘’ ನಿಮ್ಮ ಸಂಗೀತ ಕೇಳಲಿಕ್ಕೆ ದಮ್ ಬೇಕು ಸಾರ್. ಅದಕ್ಕೆ ಧಮ್ ತೆಗೆದುಕೊಳ್ತಾ ಇದ್ದೀವಿ’’ ಎಂದು ಹೇಳಿದಾಗ ಅವರು ಬಾಯ್ತುಂಬಾ ನಕ್ಕರು. ಅದೇ ಅವರ ಪಾಲಿಗೆ ಧಾರವಾಡದ ಕೊನೆಯ ಭೇಟಿಯಾಯಿತು. ಅವರು ಸಾಮಾನ್ಯವಾಗಿ ಧಾರವಾಢದ ಸಂಗೀತ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ, ಅಪ್ಪಟ ಅಲ್ಲಿನ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಾನು ಧಾರವಾಡಕ್ಕೆ ಬಂದೀನಿ ಎಂದು ಹೇಳಬ್ಯಾಡ್ರಿ, ಹಿಂದಿರುಗಿದ್ದೀನಿ ಎಂದು ಹೇಳ್ರಲಾ ’’ ಎನ್ನುತ್ತಿದ್ದರು.
ಇಡೀ ದಕ್ಷಿಣ ಭಾರತದಲ್ಲಿ ಅಗ್ರಗಣ್ಯ ಸರೋದ್ ವಾದಕರಾಗಿದ್ದ ರಾಜೀವ್ ತಾರಾನಾಥರು ಕರ್ನಾಟಕ ಸಂಗೀತದ ತೊಟ್ಟಿಲು ಎಂಬಂತಿರುವ ದಕ್ಷಿಣ ಭಾರತ ಮತ್ತು ಮೈಸೂರು ನಗರದಲ್ಲಿ ಹಿಂದೂಸ್ತಾನಿ ಸಂಗೀತದ ಘಮಲು ಹರಡಿದ ಕಲಾವಿದರಲ್ಲಿ ಬಹು ಮುಖ್ಯರಾದವರು. ಸಂಗೀತ ಲೋಕದ ಗುರುಗಳಿಗೆ ಪಂಡಿತ್ ಎಂಬ ಶಬ್ದವನ್ನು ಬಳಸಲಾಗುತ್ತದೆ. ಆದರೆ, ರಾಜೀವ ತಾರನಾಥರು ನಿಜವಾದ ಅರ್ಥದಲ್ಲಿ ಸಂಗೀತ ಮತ್ತು ಸಾಹಿತ್ಯ ಲೋಕದ ಸಮರ್ಥ ಪಂಡಿತರಾಗಿದ್ದರು. ಅವರು ಬೆಂಗಳೂರು ಸೆಂಟ್ರಿಲ್ ಕಾಲೇಜಿನಲ್ಲಿ ಇಂಗ್ಲೀಷ್ ಭಾಷೆಯನ್ನು ಐಚ್ಚಿಕ ವಿಷಯವನ್ನಾಗಿ ತೆಗೆದುಕೊಂಡು ಪ್ರಥಮ ಸ್ಥಾನ ಪಡೆದರು. ನಂತರ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಎಂ.ಎ. ನಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದರು. ಪ್ರೊಫೆಸರ್ ಸಿ.ಡಿ.ನರಸಿಂಹಯ್ಯನವರ ಮಾರ್ಗದರ್ಶನದಲ್ಲಿ ಟಿ.ಎಸ್.ಎಲಿಯಟ್ ಕಾವ್ಯ ಕುರಿತಂತೆ ಅಧ್ಯಯನ ಮಾಡಿ 1962 ರಲ್ಲಿ ಪಿ. ಹೆಚ್.ಡಿ. ಪದವಿ ಪಡೆದರು.
ರಾಜೀವ ತಾರಾನಾಥರು ಅಧ್ಯಾಪಕ ವೃತ್ತಿಯಲ್ಲಿ ಮುಂದುವರಿದಿದ್ದರೆ, ಇಂದು ಕನ್ನಡ ಸಾಹಿತ್ಯದ ಅಗ್ರಗಣ್ಯರಾದ ಲಂಕೇಶ್, ಯು.ಆರ್.ಅನಂತಮೂರ್ತಿ, ತೇಜಸ್ವಿ ಮತ್ತು ಗಿರೀಶ್ ಕಾರ್ನಾಡ್ ಅವರ ಸಾಲಿನಲ್ಲಿ ನಿಲ್ಲುತ್ತಿದ್ದರು. ಅವರ ಓದು ಮತ್ತು ಸಾಹಿತ್ಯ ಕೃತಿಗಳ ವಿಶ್ಲೇಷಣೆ ಅದ್ಭುತವಾಗಿತ್ತು. 1972 ರ ಸಮಯದಲ್ಲಿ ಒಮ್ಮೆ ಬೆಂಗಳೂರು ನಗರದಲ್ಲಿ ರವಿಶಂಕರ್ ಅವರ ಸಿತಾರ್ ವಾದನ ಕೇಳಿ ಸಂಗೀತಕ್ಕೆ ಒಲಿದರು. ರವಿಶಂಕರ್ ಕಲಿತ ಗುರುಪರಂಪರೆಯಲ್ಲಿ ಅಂದರೆ, ಪಂಡಿತ್ ಅಕ್ಬರ್ ಆಲಿ ಖಾನ್ ಅವರ ಬಳಿ ಕಲಿತರು . ( ಆ ಕುರಿತು ಕೇಳೆದೆ ಉಳಿದ ಸ್ವರ ಮಾಧುರ್ಯ ಎಂಬ ಲೇಖನವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದೀನಿ ಗಮನಿಸಿ.) ಇಡೀ ಬದುಕಿನುದ್ದಕ್ಕೂ ಸಂಗೀತವನ್ನು ಧ್ಯಾನಿಸಿದರು.
ಸಂಗೀತಕ್ಕೆ ಅಂತಹ ಮಾಂತ್ರಿಕ ಶಕ್ತಿಯಿದೆ. ಸಂಗೀತವೆಂದರೆ, ಕೇವಲ ಮನರಂಜೆಯ ಮಾಧ್ಯಮವಲ್ಲ, ಅದು ಒಂದು ರೀತಿಯ ಧ್ಯಾನ, ಮನುಷ್ಯರನ್ನು, ಮನಸ್ಸುಗಳನ್ನು ಮತ್ತು ಜಾತಿ ಹಾಗೂ ಧರ್ಮಗಳನ್ನು ಒಂದೂಗೂಡುವಂತೆ ಬೆಸೆಯುವ ಅಗೋಚರ ಶಕ್ತಿ ಸಂಗೀತದ ರಾಗಗಳಿಗೆ ಹಾಗೂ ಸ್ವರ ಮತ್ತು ಆಲಾಪನೆಗಳಿಗೆ ಇದೆ. ಇದನ್ನು ಅರ್ಥೈಸಿಕೊಂಡವರು ಮಾತ್ರ ನಿಜವಾದ ಕಲಾವಿದರಾಗಲು ಸಾಧ್ಯ. ಈ ಸಾಮಾರ್ಥ್ಯ ರಾಜೀವ ತಾರನಾಥರಿಗೆ ಇತ್ತು.
ಇವರ ಕುರಿತು ಹಾಗೂ ಮಿತ್ರ ಗಣೇಶ್ ಅಮೀನಗಡ ಹೊರಂದಿರುವ ರಾಜೀವ ತಾರಾನಾಥರ ಕೃತಿಯ ಕುರಿತು ಮತ್ತೊಮ್ಮೆ ವಿವರವಾಗಿ ಬರೆಯುತ್ತೇನೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು
( ಫೇಸ್ಬುಕ್ ಬರಹ)




