ಪಂಚಿಂಗ್ ಡೈಲಾಗ್ ಹೊಡೆದರೆ ಪಂಚರ್ ಆಗಿರುವ ಆರ್ಥಿಕತೆ ಹಾದಿಗೆ ಬರುವುದೆ?

3 years ago

ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥಭಾಷಣ ಭೀತ ಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ (೮೧)

– ಕುಮಾರವ್ಯಾಸ, ಕರ್ಣಾಟ ಭಾರತ ಕಥಾ ಮಂಜರಿ

ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷಗಳ ನಾಯಕರು ಅದಾನಿ ಅವ್ಯವಹಾರ ಆರೋಪದ ಕುರಿತು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ನುಣುಚಿಕೊಂಡು ತಮ್ಮ ವಂದಿಮಾಗಧರ ಚಪ್ಪಾಳೆಗಳ ನಡುವೆ “ನೆಹರು ಸರ್ ನೇಮ್ ಏಕೆ ಇಟ್ಟುಕೊಂಡಿಲ್ಲ?” ಎಂದು ರಾಹುಲ್ ಗಾಂಧಿಯವರಿಗೆ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಇದಕ್ಕೆ ಸಂಸತ್ತಿನಲ್ಲಿ ಆಡಳಿತ ಪಕ್ಷದವರಿಂದ ಭಾರೀ ಚಪ್ಪಾಳೆ, ನಗು, ಕುಹಕ, ವ್ಯಂಗ್ಯಮಿಶ್ರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇವೆಲ್ಲವುಗಳ ನಡುವೆ ಕುಸಿದ ಆರ್ಥಿಕತೆಯನ್ನು ಮೇಲೆತ್ತುವ ಯಾವ ಸಕಾರಾತ್ಮಕ ನಿರ್ಧಾರಗಳೂ ಸರ್ಕಾರದ ಬತ್ತಳಿಕೆಯಲ್ಲಿ ಇಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ತೆಗೆದುಕೊಂಡಿರುವ ಅವೈಜ್ಞಾನಿಕ ಮತ್ತು ಸಂವಿಧಾನ ವಿರೋಧಿ ನಿಲುವುಗಳಿಂದಾಗಿ ದೇಶದ ಆರ್ಥಿಕತೆ ಕುಸಿದಿರುವುದನ್ನು ಇಂತಹ ಪಂಚಿಂಗ್ ಡೈಲಾಗ್ ಹೊಡೆಯುವುದರಿಂದ ತಡೆಯಲು ಸಾಧ್ಯವಿಲ್ಲ.

ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅದಾನಿ ಸಮೂಹ ಸಂಸ್ಥೆ ಕುರಿತು ಎದ್ದಿರುವ ಸಂಶಯಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ವಿಷಯವನ್ನು ಪ್ರಸ್ತಾಪಿಸಿ ಪ್ರಮುಖ ಪ್ರಶ್ನೆಗಳನ್ನು ಕೇಳಿದರು. ದೇಶದ ಪ್ರಧಾನಿಗೂ ಮತ್ತು ಷೇರು ಮೌಲ್ಯಗಳನ್ನು ಹೆಚ್ಚಿಸಿರುವ ಆರೋಪ ಹೊತ್ತಿರುವ ಉದ್ಯಮಿಗೂ ಇರುವ ಸಂಬಂಧಗಳ ಕುರಿತು ಇಡೀ ದೇಶ ಮಾತನಾಡುತ್ತಿದೆ ಎಂದ ಅವರು, ಮೋದಿಯವರು ಯಾವೆಲ್ಲ ದೇಶಗಳಿಗೆ ಹೋದರು? ಹೋದಾಗ ಯಾರು ಜೊತೆಗಿದ್ದರು? ಮೋದಿ ಹೋಗಿ ಬಂದ ದೇಶಗಳಿಗೆ ಆರೋಪ ಎದುರಿಸುತ್ತಿರುವ  ಅದಾನಿ ಏಕೆ ಹೋದರು? ಇತ್ಯಾದಿ ಪ್ರಶ್ನೆಗಳನ್ನು ಸದನದಲ್ಲಿ ರಾಹುಲ್ ಗಾಂಧಿ ಇಟ್ಟಿದ್ದರು. ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಂಡ ನರೇಂದ್ರ ಮೋದಿಯವರು, 2004ರಿಂದ 2014ರ ವಿಷಯ ಪ್ರಸ್ತಾಪಿಸಿ ದೇಶದ ದಿಕ್ಕು ತಪ್ಪಿಸುವ ಕೆಲಸ ನಡೆಸಿದರು.

ಜೊತೆಗೆ, ನೆಹರು, ಗಾಂಧಿ ಹೆಸರಿನ ವಿಷಯ ಪ್ರಸ್ತಾಪಿಸಿದರು. ಆರ್.ಎಸ್.ಎಸ್. ಮತ್ತು ಬಿಜೆಪಿ ತಮ್ಮದು ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ಎಂದು ಅವಕಾಶ ಇಲ್ಲದಿದ್ದ ಸಮಯದಲ್ಲೂ ಸೃಷ್ಟಿಸಿಕೊಂಡು ಮಾತಾಡುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಮದುವೆಯಾದ ಹೆಣ್ಣುಮಗಳು ತವರಿನಿಂದ ಗಂಡನ ಮನೆಗೆ ತೆರಳಿ, ಅವರ ಕುಟುಂಬದೊಂದಿಗೆ ಬದುಕುವುದು ರೂಢಿ. ಅದರಂತೆಯೇ ತನ್ನ ತವರಿನ ಹೆಸರನ್ನು ಕಳಚಿಕೊಂಡು, ಗಂಡನ ಕುಟುಂಬದ ಉಪನಾಮ ಧರಿಸುತ್ತಾರೆ. ಇದೇ ಸಂಪ್ರದಾಯದಂತೆ ಪಾರ್ಸಿ (ಫಿರೋಜ್ ಗಾಂಧಿ ಬಿಜೆಪಿ ಮತ್ತು ಆರ್.ಎಸ್.ಎಸ್. ನವರು ಹೇಳುವಂತೆ ಮುಸ್ಲಿಮರಲ್ಲ) ಸಮುದಾಯಕ್ಕೆ ಸೇರಿದ್ದ ಫಿರೋಜ್ ಗಾಂಧಿಯವರನ್ನು ವಿವಾಹವಾದ ಇಂದಿರಾ ಅವರು ಗಂಡನ ಕುಟುಂಬದ ಉಪನಾಮ ಗಾಂಧಿಯನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ಭಾಗ. ಆದರೆ ದೇಶದ ಪ್ರಧಾನಿಯೊಬ್ಬರು ಇಂತಹ ಕನಿಷ್ಠ ಜ್ಞಾನವಿಲ್ಲದವರಂತೆ ಸಂಸತ್ತಿನಲ್ಲಿ ಮಾತನಾಡುವುದು, ಅದನ್ನು ಅವರ ವಂದಿಮಾಗದರು ಚಪ್ಪಾಳೆ ತಟ್ಟಿ ಅಪಹಾಸ್ಯ ಮಾಡುವುದು ದೇಶದ ಸಂಸ್ಕೃತಿಗೆ, ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ, ಸದನದ ಪಾವಿತ್ರ್ಯತೆಗೆ ಧಕ್ಕೆ.

ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿ ಮೊದಲಾದ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಗರಿಷ್ಠಮಟ್ಟ ಮೀರಿದ ಸಮಯದಲ್ಲಿ ಅದಾನಿ ಸಮೂಹದ ಮೇಲೆ ಆರೋಪ ಕೇಳಿಬಂದಿದೆ. ಇದಕ್ಕೆ ಉತ್ತರಿಸುವ ಹೊಣೆಗಾರಿಕೆಯನ್ನು ಒಕ್ಕೂಟ ಸರ್ಕಾರ ತೋರಿಸುವುದನ್ನು ಬಿಟ್ಟು, ಸುಳ್ಳು ನರೇಟೀವ್ ಗಳನ್ನು ಸೃಷ್ಟಿಸಿದರೆ ಇತಿಹಾಸ ಎಂದಿಗೂ ಅಂತಹ ಮೋಸ ಮಾಡಿದವರನ್ನು ಕ್ಷಮಿಸದು.

ಇನ್ನು ವಿಪಕ್ಷಗಳ ನಾಯಕರು ಮಾಡಿದ ಭಾಷಣವನ್ನು ಕಡತದಿಂದ ತೆಗೆಸಿಹಾಕುವ ಕುಸಂಪ್ರದಾಯಕ್ಕೆ ಕೂಡ ಮೋದಿ ಸರ್ಕಾರ ಕುಖ್ಯಾತವಾಗಿದೆ. ಆಡಳಿತ ಪಕ್ಷದ ಸದಸ್ಯರು ವಿಪಕ್ಷ ಮತ್ತು ಸೈದ್ಧಾಂತಿಕ ವಿರೋಧಿಗಳ ವಿರುದ್ಧ ಮಾನಹಾನಿಕರವಾದ ರೀತಿಯಲ್ಲಿ ಸ್ವತಃ ಪ್ರಧಾನಿ ಆಡಿರುವ ಮಾತುಗಳನ್ನು ಉಳಿಸಿ, ವಿಪಕ್ಷಗಳ ನಾಯಕರ ಮಾತುಗಳನ್ನು ತೆಗೆದುಹಾಕುವುದು ಪ್ರಜಾಪ್ರಭುತ್ವ ವಿರೋಧಿ ಲಕ್ಷಣ. ಅಸಂಸದೀಯ ಪದಗಳನ್ನು ಬಳಸುವ ತಪ್ಪುಗಳನ್ನು ಯಾರು ಮಾಡಿದ್ದರೂ ಅದನ್ನು ತೆಗೆದುಹಾಕಬೇಕು. ಆದರೆ ಇಲ್ಲಿ ನಡೆಯುತ್ತಿರುವುದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಆಸಿಡ್ ಸುರಿಯುವ ಕೆಲಸ.

ಲೋಕಸಭೆ, ರಾಜ್ಯಸಭೆ ಕಲಾಪಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಗುಣಮಟ್ಟವನ್ನು ಕಾಪಾಡುವುದು ಸಭಾನಾಯಕರ, ಸಭಾಧ್ಯಕ್ಷ, ಸಭಾಪತಿಗಳ ಕರ್ತವ್ಯ. ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಉನ್ನತ ಹುದ್ದೆಯಲ್ಲಿರುವವರು ಬೀದಿಗೂಂಡಾಗಳಂತೆ ಸೈದ್ಧಾಂತಿಕ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸುವುದು ತರವಲ್ಲ.

ಭವಿಷ್ಯದಲ್ಲಿ ಇತಿಹಾಸ ಪಠ್ಯಗಳಲ್ಲಿ ಇಂತಹ ಸಂಗತಿಗಳನ್ನು ಒಕ್ಕೂಟ ಸರ್ಕಾರ ಕಾಣಿಸದಂತೆ ತಡೆಯಬಹುದು. ಆದರೆ ಡಿಜಿಟಲ್ ಮಾಧ್ಯಮಗಳ ಕಾರಣದಿಂದಾಗಿ ಇಂತಹ ಸಂಗತಿಗಳನ್ನು ಬಹಳ ಕಾಲ ಮರೆಮಾಚಲಾಗುವುದಿಲ್ಲ. ಮುಂದೊಂದು ದಿನ ನಮ್ಮ ಪೂರ್ವಜರು ಇಂತಹ ಕೆಲಸಗಳನ್ನು ಮಾಡಿದ್ದರೆ? ಆ ಕಾಲದಲ್ಲಿ ಪ್ರಜ್ಞಾವಂತ ನಾಗರಿಕರು ಸುಮ್ಮನಿದ್ದರೆ? ಎಂಬ ಪ್ರಶ್ನೆಗಳನ್ನು ಮುಂದಿನ ತಲೆಮಾರು ಕೇಳದೆ ಇರದು.

ಏಕೆಂದರೆ ನೆಹರೂ ಏನೂ ಮಾಡಿಲ್ಲ ಎಂಬ ಆರೋಪ ಅತ್ಯಂತ ದೊಡ್ಡ ಸುಳ್ಳು. ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿಸಿದ್ದು, ವೈಜ್ಞಾನಿಕ ದೃಷ್ಟಿಕೋನ ಬೆಳೆಸಿದ್ದು, ಕೃಷಿ, ಕೈಗಾರಿಕೆ, ವ್ಯಾಪಾರ, ವ್ಯವಹಾರ, ಶಿಕ್ಷಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇತ್ಯಾದಿ ವಿಷಯಗಳಲ್ಲಿ ನೆಹರು ಅವರ ಕೊಡುಗೆಯನ್ನು ಪ್ರಾಥಮಿಕ ಇತಿಹಾಸವನ್ನು ಕಲಿತ ಯಾರೂ ಅಲ್ಲಗಳೆಯಲಾರರು. ಆದರೆ 2014ರಿಂದ ಅಧಿಕಾರಲ್ಲಿರುವ ಮೋದಿ ಮತ್ತವರ ಗುಂಪು ಪದೇಪದೇ ಅದೇ ಪ್ರಶ್ನೆಗಳನ್ನು ಕೇಳುತ್ತಿದೆ. ಇದು ದೇಶದ ಜನರ ದಿಕ್ಕು ತಪ್ಪಿಸುವ ನಡೆ.

ಮೋದಿ ಮತ್ತವರ ಗುಂಪು 2014ಕ್ಕೆ ಮುನ್ನ ಸಂಸತ್ತು, ಸುಪ್ರೀಂಕೋರ್ಟ್, ಸಂವಿಧಾನ ಯಾವುದೂ ಇರಲಿಲ್ಲವೇನೋ ಎಂಬಷ್ಟು ಮಟ್ಟದ ಅತಿರೇಕದ ಸುಳ್ಳುಗಳನ್ನು ಬಿತ್ತುವಷ್ಟು ಸಮರ್ಥವಾಗಿ ಕೆಟ್ಟ ನಡೆಯನ್ನು ಇಡುತ್ತಿದೆ. ಇವೆಲ್ಲವೂ ಉದ್ದೇಶಪೂರ್ವಕವಾಗಿ ಮಾಡುತ್ತಿರುವುದು ಏಕೆಂದರೆ, ಸದ್ಯದ ಸಮಸ್ಯೆಗಳಾದ ನಿರುದ್ಯೋಗ, ಶಿಕ್ಷಣದಿಂದ ಬಡವರು, ತಳಸಮುದಾಯದವರನ್ನು ವಂಚಿಸಿರುವುದು, ಬೆಲೆ ಏರಿಕೆ ಮೊದಲಾದ ಜ್ವಲಂತ ಸಮಸ್ಯೆಗಳಿಂದ ಜನರ ದಾರಿಯನ್ನು ಹೊರಳಿಸುವುದೇ ಆಗಿದೆ. ಇದರ ಮುಂದುವರಿದ ಭಾಗವಾಗಿಯೇ ಫೆ. 14ರಂದು “ದನಗಳನ್ನು ಅಪ್ಪಿಕೊಳ್ಳಿ” ಎಂಬ ಕರೆಯಾಗಿತ್ತು. ವ್ಯಾಪಕ ವಿರೋಧ ಹಿನ್ನೆಲೆಯಲ್ಲಿ ಇದೀಗ ಮುಜುಗರಕ್ಕೆ ಒಳಗಾಗಿ ಆದೇಶವನ್ನು ಹಿಂಪಡೆಯಲಾಗಿದೆ. ಸಾರ್ವಜನಿಕರು ಸರ್ಕಾರಗಳ ಇಂತಹ ನಡೆಗಳನ್ನು ವ್ಯಾಪಕವಾಗಿ ವಿರೋಧಿಸುವುದೊಂದೆ ಸದ್ಯಕ್ಕೆ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸುವ ಕಡೆಗೆ ಇಡುವ ಒಂದೊಂದು ಹೆಜ್ಜೆಯಾಗಿದೆ.

ಅವೈಜ್ಞಾನಿಕ ನೋಟು ನಿಷೇಧ, ಜಿ.ಎಸ್.ಟಿ. ಜಾರಿ, ವಿಭಜಕ ರಾಜಕಾರಣದಿಂದ ದೇಶದ ಆರ್ಥಿಕತೆ ಪಾತಾಳದತ್ತ ಮುಖಮಾಡಿದೆ. ಇದು ವಿಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತ ಕಾಲಹರಣ ಮಾಡುವ ಸಮಯವಲ್ಲ. ಬಡತನ, ಅನಕ್ಷರತೆ, ಕೋಮುವಾದ, ಬೆಲೆ ಏರಿಕೆ, ನಿರುದ್ಯೋಗ, ಅವಕಾಶ ವಂಚನೆ, ಜಾತಿ – ಲಿಂಗ – ವರ್ಣ ತಾರತಮ್ಯಗಳ ವಿರುದ್ಧ ಆಡಳಿತಾರೂಢ ಸರ್ಕಾರ ಸಮರ ಸಾರಬೇಕಿದೆ. ಇಂತಹ ಸಮಸ್ಯೆಗಳ ವಿರುದ್ಧದ ಹೋರಾಟ ಮಾಡಿದವರು ಮಾತ್ರ ಇತಿಹಾಸದಲ್ಲಿ ಸಕಾರಾತ್ಮಕವಾಗಿ ದಾಖಲಾಗಿದ್ದಾರೆ. ಹಿಟ್ಲರ್ ನಂತವರನ್ನು ಅವರ ದೇಶದ ನಾಗರಿಕರೇ ಇತಿಹಾಸದಿಂದ ಮಾತ್ರವಲ್ಲ; ತಮ್ಮ ಮನಸಿನಿಂದ ಕೂಡ ಬಲವಂತವಾಗಿ ಅಳಿಸಿಹಾಕಲು ಯತ್ನಿಸಿದ್ದಾರೆ. ಅರಿತರೆ ಬದುಕು, ಮರೆತರೆ ಜನರ ಸ್ಮರಣೆಯಿಂದಲೇ ಕಣ್ಮರೆ. ಆಯ್ಕೆ ನಿಮ್ಮದೇ.

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply