ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿರಂತರವಾಗಿ ಮಕ್ಕಳ ಪ್ರಮಾಣ ಕುಸಿತದ ನೆಪವೊಡ್ಡಿ ಆಡಳಿತಾರೂಢಸರ್ಕಾರಗಳು ಶಾಲೆಗಳ ವಿಲೀನ ಮತ್ತು ಅವುಗಳ ಮುಚ್ಚುವಿಕೆಗೆ ತುದಿಗಾಲ ಮೇಲೆ ನಿಂತಿವೆ. ಸರ್ಕಾರಿ ವ್ಯವಸ್ಥೆಯಡಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ನೋಂದಣಿ ಇಳಿಕೆಗೆ ಸರ್ಕಾರಿ ವ್ಯವಸ್ಥೆಯಷ್ಟೇ ಅಲ್ಲದೇ ಪೋಷಕರಇಂಗ್ಲಿಷ್‌ಬಗೆಗಿನ ಹುಸಿನಂಬಿಕೆ ಹಾಗೂ ಖಾಸಗಿ ಶಾಲೆಗಳ ಕುತಂತ್ರವೂ ಕಾರಣವಾಗಿರುತ್ತವೆ.

ಖ್ಯಾತ ಛಾಯಾಗ್ರಾಹಕ ಶಿವಶಂಕರ್ ಬಣಗಾರ್ ಅವರು ಸೆರೆಹಿಡಿದಿರುವ ಚಿತ್ರ
ಆಧುನಿಕೋತ್ತರ ಕಾಲಘಟ್ಟದಲ್ಲಿ ಸಮ್ಮತಿಯನ್ನೂಉತ್ಪಾದಿಸಲಾಗುತ್ತದೆ. ಇದಕ್ಕೆ ಸಿನಿಮಾ, ಧಾರಾವಾಹಿ, ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಇದರ ಮೂಲಕ ಮಹಾಕಥನಗಳನ್ನು ಕಟ್ಟಲಾಗುತ್ತದೆ. ಈ ಕಥನ ಸ್ವಲಾಭ, ವ್ಯಾಪಾರೀ ಮನೋಭಾವದಿಂದ ಕೂಡಿರುತ್ತದೆ. ವ್ಯಾಪಾರವೆಂದರೇ ದ್ರೋಹಚಿಂತನೆ. ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿದರೆ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಾಭ. ಇದಕ್ಕಾಗಿಇಂಗ್ಲಿಷ್‌ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ನಿಮ್ಮ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಕಥನವನ್ನು ಖಾಸಗಿ ಶಾಲೆಗಳು ರೂಪಿಸಿವೆ. ಇದಕ್ಕೆ ಪೂರಕವಾಗಿ ಖಾಸಗಿ ಶಾಲೆಗಳಿಗೆ ಪೂರಕ ವಾತಾವರಣವನ್ನು ಬಲಿಷ್ಠವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ರೂಪಿಸುವಲ್ಲಿ ಯಶಸ್ವಿಯಾಗುತ್ತವೆ. ಈ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಯಾರೆಂದರೆ ಬಹುತೇಕ ಮಠಾಧೀಶರು ಮತ್ತು ರಾಜಕಾರಣಿಗಳು. ಆಯ್ದ ಕೆಲವು ಮಠಗಳಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಲಿಷ್ಠರ ಕೈಯಲ್ಲಿವೆ. ಇನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಬಲಿಷ್ಠವಾದರೆ, ಸುವ್ಯವಸ್ಥಿತವಾದರೆ ಖಾಸಗಿ ಶಾಲೆಗಳಿಗೆ ಯಾರು ಮಕ್ಕಳನ್ನುಕಳಿಸುತ್ತಾರೆ. ಇದಕ್ಕಾಗಿಯೇ ವ್ಯವಸ್ಥಿತವಾಗಿ ಸರ್ಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ಶಾಲೆಯಲ್ಲಿ ಉನ್ನತ ಗುಣಮಟ್ಟದ ಇಂಗ್ಲಿಷ್‌ಮಾಧ್ಯಮದ ಶಿಕ್ಷಣವನ್ನು ಕೊಡಲಾಗುತ್ತದೆ ಎಂಬ ಕಥವನ್ನು ಈ ಶೈಕ್ಷಣಿಕ ಉದ್ಯಮಿಗಳು ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೇ ನಂಬಿದ ಬಡವರು, ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳಿಸುವ ಖೆಡ್ಡಾಗೆ ಬೀಳುತ್ತಾರೆ. ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿಯಂತಹ ಮುಂದುವರೆದ ದೇಶಗಳಲ್ಲಿ ಕೂಡ ನಿರುದ್ಯೋಗದ ಸಮಸ್ಯೆಇದೆ. ಇಂಗ್ಲಿಷ್ ಮಾಧ್ಯಮ ಅಥವಾ ಇಂಗ್ಲಿಷ್‌ಭಾಷೆ ಕಲಿತವರಿಗೆಲ್ಲ ಉದ್ಯೋಗ ಭದ್ರತೆ ಸಿಗುತ್ತದೆ ಎಂಬ ಆಧುನಿಕ ಮೂಢನಂಬಿಕೆಯನ್ನು ಉತ್ಪಾದಿಸಲಾಗಿದೆ. ಆದರೆ ಉದ್ಯೋಗ ಕಡಿತ, ವೆಚ್ಚನಿಯಂತ್ರಣದ ಹೆಸರಿನಲ್ಲಿ ಕಾರ್ಪೊರೇಟ್ ಮತ್ತು ಸಾಫ್ಟ್‌ವೇರ್‌ಕ್ಷೇತ್ರದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ. ಈ ಕ್ಷೇತ್ರದಲ್ಲಿ ದುಡಿಯುವ ವರ್ಗದವರಿಗೆ ಇಂಗ್ಲಿಷ್ ಭಾಷೆ ಕರತಲಾಮಲಕವಾಗಿರುತ್ತದೆ. ಆದರೂ ಅವರು ಉದ್ಯೋಗಕಳೆದುಕೊಳ್ಳುತ್ತಾರೆ. ಆದರೆ ಈ ವಾಸ್ತವ ಸಂಗತಿಯನ್ನು ಅರಿಯುವಲ್ಲಿ ನಮ್ಮ ಬೃಹತ್ ಜನಸ್ತೋಮ ವಿಫಲವಾಗಿದೆ.
ಇನ್ನು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವವರು ಬಡವರು, ಸ್ಲಂನಿವಾಸಿಗಳು ಎಂಬಂತಹ ಮನೋಭಾವನೆಯನ್ನು ಕೂಡ ಪೋಷಕರಲ್ಲಿ ಬಿತ್ತುವಲ್ಲಿ ಖಾಸಗಿ ಶಿಕ್ಷಣಸಂಸ್ಥೆಗಳು ಯಶಸ್ವಿಯಾಗಿವೆ. ಇದರೊಂದಿಗೆ ಸರ್ಕಾರಿ ಶಾಲೆಗಳ ವಾತಾವರಣವನ್ನು ಕೂಡ ಕಲುಷಿತಗೊಳಿಸುವ ಕೆಲಸವನ್ನು ಇವು ಮಾಡುತ್ತಿವೆ. ಉದಾಹರಣೆಗೆ ಬೆಂಗಳೂರಿನ ಸರ್ಕಾರಿ ಶಾಲೆಗಳ ಸುತ್ತಮುತ್ತ ಉದ್ದೇಶಪೂರ್ವಕವಾಗಿ ಕಸ ಎಸೆಯುವಂತಹ ಕೆಲಸವನ್ನು ಗಮನಿಸಬಹುದು. ಯಾವುದೇ ಪೋಷಕರೂ ತಮ್ಮ ಮಕ್ಕಳು ಓದುವ ಶಾಲೆಯ ವಾತಾವರಣವನ್ನೂ ಗಮನಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ವಾತಾವರಣ, ಆಟದ ಮೈದಾನ ಮತ್ತು ಅಗತ್ಯ ಬೋಧಕ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಪೋಷಕರು ಕಳಿಸುವುದಿಲ್ಲ. ಇದೇ ಕಾರಣಕ್ಕೇ ಇಡೀ ಸರ್ಕಾರಿ ಶಾಲೆಗಳಲ್ಲಿರುವ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡುವ ವ್ಯವಸ್ಥಿತ ಕುತಂತ್ರವನ್ನು ಕಾಣಬಹುದು. ಇದೊಂದು ಸಂಘಟಿತ ಅಕ್ರಮವಾಗಿದ್ದು, ಇದನ್ನು ತಡೆಯುವಲ್ಲಿ ಸರ್ಕಾರಿ ಯಂತ್ರಾಂಗ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳೂ ಈ ಸಮಸ್ಯೆಯನ್ನು ಪರಿಹರಿಸುವತ್ತ ತಮ್ಮ ಕನಿಷ್ಠ ಗಮನಹರಿಸಿಲ್ಲ.
ಸರ್ಕಾರಿ ಶಾಲೆ, ಕಾಲೇಜುಗಳ ಸಬಲೀಕರಣದ ಅವಕಾಶಗಳು: ದೆಹಲಿಯ ಆಪ್ ಸರ್ಕಾರ ಅಭಿವೃದ್ಧಿಪಡಿಸಿರುವ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವುದು ಸರ್ಕಾರ ಮತ್ತು ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಧ್ಯೇಯವಾಗಬೇಕು. ತಮಗೆ ಉದ್ಯೋಗ, ವೇತನ ನೀಡಿದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನಮ್ಮಆದ್ಯ ಕರ್ತವ್ಯ ಎಂಬ ಪ್ರಾಥಮಿಕ ಜ್ಞಾನ ಶಿಕ್ಷಣಸಚಿವರಿಗೆ, ಅಧಿಕಾರಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಬರಬೇಕು ಅಥವಾ ಈ ಜ್ಞಾನ ಅವರಲ್ಲಿ ಮೂಡುವಂತಹ ಪ್ರಯತ್ನಗಳನ್ನು ನಡೆಸಬೇಕು.
ಶೌಚಾಲಯ, ಶುದ್ಧ ಕುಡಿಯುವ ನೀರು, ಕಟ್ಟಡಗಳ ನವೀಕರಣ, ನೂತನ ಕಟ್ಟಡಗಳನಿರ್ಮಾಣ, ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ಮಾಧ್ಯಮದಲ್ಲಿ ಶಿಕ್ಷಣ, ಕಾಲಕಾಲಕ್ಕೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಇತ್ಯಾದಿಗಳನ್ನು ಮೊದಲ ಆದ್ಯತೆಯಾಗಿ ಸರ್ಕಾರ ಪರಿಗಣಿಸಬೇಕು.
ಉಚಿತಪಠ್ಯಪುಸ್ತಕಗಳ ವಿತರಣೆ, ಹಾಲು, ಮೊಟ್ಟೆ, ಬಾಳೆಹಣ್ಣು, ಬಿಸಿಯೂಟ, ಶೂ, ಸಾಕ್ಸ್ ಗಳನ್ನು ಕೊಟ್ಟರೂ ತಮ್ಮ ಮಕ್ಕಳನ್ನು ಪೋಷಕರು ಸರ್ಕಾರಿ ಶಾಲೆಗೆ ಕಳಿಸದೆ ಇರುವಂತಹ ವಾತಾವರಣವನ್ನು ಇಲ್ಲವಾಗಿಸಬೇಕು. ಇದಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಓದಿ ದೊಡ್ಡದೊಡ್ಡ ಹುದ್ದೆ, ರಾಜಕೀಯ, ಉದ್ಯೋಗ, ವ್ಯಾಪಾರ, ವಾಣಿಜ್ಯ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸರ್ಕಾರಿ ಶಾಲೆಗಳ ಪರವಾಗಿ ಮಾತನಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಅಂತಹ ಸಾಧಕರನ್ನು ಕರೆದು ಗೌರವಿಸಿ ಅವರ ಅನುಭವಗಳನ್ನು ಹಂಚಿಕೊಳ್ಳುವಂತಹ ಸಭೆಸಮಾರಂಭಗಳನ್ನು ಆಯೋಜಿಸಬೇಕು. ಈ ಕುರಿತ ಸುದ್ದಿಗಳು ಎಲ್ಲೆಡೆ ವ್ಯಾಪಕವಾಗಿ ಪ್ರಚಾರವಾಗಬೇಕು.
ಇವೆಲ್ಲವುಗಳ ಜೊತೆಗೆ ಪೋಷಕರು ಜಾಗೃತರಾಗಬೇಕು. ಕಳೆದ 30 ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 100ಕ್ಕೆ 100ರಿಂದ 99, 98, 97 ಶೇಕಡಾ ಅಂಗಳನ್ನು ಪಡೆದು ಪಾಸ್ ಆಗಿರುವ ಎಷ್ಟು ವಿದ್ಯಾರ್ಥಿಗಳು ರಾಜಕೀಯ ರಂಗದಲ್ಲಿ, ವಿಜ್ಞಾನಕ್ಷೇತ್ರದಲ್ಲಿ, ಉದ್ಯಮಕ್ಷೇತ್ರದಲ್ಲಿ, ಸಾಂಸ್ಕೃತಿಕ ರಂಗದಲ್ಲಿ, ಸಿನಿಮಾರಂಗದಲ್ಲಿ, ಸಾಹಿತ್ಯಕ ವಲಯದಲ್ಲಿ ಸಕ್ರಿಯವಾಗಿದ್ದು ಹೆಸರು ಗಳಿಸಿದ್ದಾರೆ ಎಂದು ಪುನರಾವಲೋಕನ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿ ಅಭೂತಪೂರ್ವ ಸಾಧನೆಗಳನ್ನು ಮೆರೆದು, ಮರೆಯಾಗಿರುವ ಮತ್ತು ಈಗಲೂ ಸಕ್ರಿಯವಾಗಿ ಕೆಲಸ ಮಾಡುತ್ತಿರುವವರ ಪಟ್ಟಿಯನ್ನು ನೋಡಬಹುದು. ಉದಾಹರಣೆಗೆ ವಿಜ್ಞಾನ ಕ್ಷೇತ್ರದಲ್ಲಿಅದ್ಭುತ ಸಾಧನೆ ಮಾಡಿದ ಅಬ್ದುಲ್‌ಕಲಾಂ, ಸಿ.ಎನ್.ಆರ್.ರಾವ್, ಪ್ರೊ.ಯು.ಆರ್.ರಾವ್, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾರಾಯಣಮೂರ್ತಿ, ಸಾಹಿತ್ಯ ಕ್ಷೇತ್ರದಲ್ಲಿಉನ್ನತ ಸಾಧನೆ ಮಾಡಿರುವ, ಕುವೆಂಪು, ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಯು.ಆರ್.ಅನಂತಮೂರ್ತಿ, ಗಿರೀಶ್‌ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ್, ಬರಗೂರು ರಾಮಚಂದ್ರಪ್ಪ, ರಾಜಪ್ಪದಳವಾಯಿ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಎಸ್.ನಿಜಲಿಂಗಪ್ಪ, ದೇವರಾಜ ಅರಸ್, ಆರ್.ಗುಂಡೂರಾವ್, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಎಸ್.ಆರ್.ಬೊಮ್ಮಾಯಿ, ಎಸ್.ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಎನ್.ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ, ಬಿ.ಎಸ್.ಯಡಿಯೂರಪ್ಪ, ಜಗದೀಶ್‌ಶೆಟ್ಟರ್, ಸದಾನಂದಗೌಡ, ಸಿದ್ದರಾಮಯ್ಯ, ಬಿ.ಟಿ.ಲಲಿತಾನಾಯಕ್, ಲೀಲಾದೇವಿಆರ್.ಪ್ರಸಾದ್, ಉಮಾಶ್ರೀ, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ನ್ಯಾಯಾಂಗ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ನ್ಯಾ.ನಾಗಮೋಹನ್‌ದಾಸ್, ಸಿನಿಮಾ ಮತ್ತು ಪತ್ರಿಕೋದ್ಯಮದಲ್ಲಿ ಹೆಸರು ಗಳಿಸಿದ ಲಂಕೇಶ್, ಎನ್.ಎಸ್.ಶಂಕರ್ ಮೊದಲಾದವರು ವಿದ್ಯಾಭ್ಯಾಸ ಮಾಡಿರುವುದು ಸರ್ಕಾರಿ ಶಾಲೆಗಳಲ್ಲಿ. ಇಂತಹ ಸಂಗತಿಗಳಿಗೆ ಆಯಾ ಸ್ಥಳೀಯ ಶಾಲೆ, ಕಾಲೇಜುಗಳು ಒತ್ತು ಕೊಟ್ಟು ತಮ್ಮ ಶಾಲೆಯಲ್ಲಿ ಓದಿ ಬೆಳೆದು ಸಾಧಕರಾಗಿರುವವರ ಪರಿಚಯವನ್ನು ಸ್ಥಳೀಯ ಮಟ್ಟದಲ್ಲೇ ಮಾಡಿದರೆ, ಅದರಿಂದ ಪೋಷಕರಲ್ಲಿ ಜಾಗೃತಿ ಮೂಡಿ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಬಹುದು.
ಸರ್ಕಾರಿ, ಗುತ್ತಿಗೆ ನೌಕರರು ಮತ್ತು ರಾಜಕಾರಣಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಓದಬೇಕು, ಇಲ್ಲವಾದಲ್ಲಿಅವರಿಗೆ ಸರ್ಕಾರಿ, ಗುತ್ತಿಗೆ ನೌಕರಿ ಮಾಡಲು ಮತ್ತು ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂಬಂತಹ ಮಸೂದೆಯನ್ನು ಜಾರಿಗೆ ತರಬೇಕು. ಐಎಎಸ್, ಐಪಿಎಸ್, ನ್ಯಾಯಮೂರ್ತಿಗಳು, ಉದ್ಯಮಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಿದರೆ ಇವುಗಳ ದುರವಸ್ಥೆ ತಂತಾನೇ ಸರಿಯಾಗುತ್ತದೆ. ಜೊತೆಗೆ, ಶಿಕ್ಷಣವನ್ನುಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿ, ಎಲ್ಲರಿಗೂಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ಕೊಡಬೇಕು. ಇವೆಲ್ಲ ಸಾಧ್ಯವಾದರೆ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗುತ್ತದೆ. ಆದರೆ, ಇದೀಗ ನಡೆಯುತ್ತಿರುವ ಸಂಗತಿಗಳು ಇದಕ್ಕೆ ತದ್ವಿರುದ್ಧವಾಗಿವೆ. ಬಿಜೆಪಿ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಿಂದ ಜಾರಿಗೆತಂದಿತು. ಸರ್ಕಾರದ ತರಾತುರಿಯ, ಯಾವುದೇ ಸಿದ್ಧತೆಗಳಿಲ್ಲದ ಮತ್ತು ಹೈಕಮಾಂಡ್, ನರೇಂದ್ರಮೋದಿ ಮತ್ತು ಸಂಘಪರಿವಾರವನ್ನು ಓಲೈಸುವ ಈ ಕ್ರಮ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಮನೆ ಕಟ್ಟಲು ಮೊದಲು ಮಾಡಬೇಕಾದ ಕೆಲಸ ಪಾಯ ತೆಗೆಯುವುದು. ಅನಂತರ ಕಟ್ಟಿದರೆ ಕಟ್ಟಡ ಸುಭದ್ರವಾಗಿರುತ್ತದೆ. ಆದರೆ ಸರ್ಕಾರದ ನಡೆ ಹೇಗಿತ್ತುಎಂದರೆ ಮೊದಲು ಮೇಲ್ಛಾವಣಿಯನ್ನುಹಾಕಿ, ಗೋಡೆಕಟ್ಟಿ, ಕಡೆಗೆ ಪಾಯ ತೆಗೆಯುವಂತಿತ್ತು. ಯಾವುದೇ ಶೈಕ್ಷಣಿಕ ನೀತಿ ಜಾರಿಗೆ ಬರಬೇಕಾದರೆ ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ ಹಂತದಿಂದ ಹಂತಹಂತವಾಗಿ ಅನ್ವಯಿಸಿ, ಅದರ ಸಾಧಕಬಾಧಕಗಳನ್ನು ಚರ್ಚಿಸಿ, ತಿದ್ದುಪಡಿಗಳೊಂದಿಗೆ ಜಾರಿಗೊಳಿಸಬೇಕು. ಆದರೆ ಈ ಯಾವ ಗೊಡವೆಗೂ ಹೋಗದೆ ಸರ್ವಾಧಿಕಾರಿ ಮಾದರಿಯಲ್ಲಿ ಹೊಸ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಿಂದಜಾರಿಗೆ ತರಲಾಯಿತು. ಈ ಹೊಸ ಶಿಕ್ಷಣನೀತಿಯಲ್ಲಿ ಗುರುಕುಲ ಪದ್ಧತಿಯ ಉಲ್ಲೇಖವಿದೆ. ಸಾಮಾನ್ಯ ಜ್ಞಾನ ಇರುವ ಯಾರಿಗೇ ಆದರೂ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಯಾರಿಗೆ ಸೀಮಿತವಾಗಿತ್ತು ಎಂಬ ಸಂಗತಿ ಅರಿವಿಗೆ ಬರುತ್ತದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸಮುದಾಯಕ್ಕೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಶೂದ್ರರು, ಆದಿವಾಸಿಗಳು, ಮಹಿಳೆಯರು ಮತ್ತು ದಲಿತರಿಗೆ ಈ ಶಿಕ್ಷಣ ಪದ್ಧತಿಯಡಿಯಲ್ಲಿಅಕ್ಷರ ಕಲಿಯಲು ಅವಕಾಶ ಇಲ್ಲ. ಇದನ್ನು ಸಮರ್ಥಿಸುವ ದೊಡ್ಡ ಹೊಗಳು ಭಟ್ಟರ ಪಡೆಯನ್ನೇ ಸೃಷ್ಟಿಮಾಡಿ, ಶಾಲೆಕಾಲೇಜುಗಳಲ್ಲಿ ಪ್ರಚಾರ ಮಾಡಲಾಯಿತು. ಇದಕ್ಕೆ ಶಿಕ್ಷಣ ತಜ್ಞರನ್ನೂ ಬಳಸಿಕೊಳ್ಳಲಾಯಿತು. ಇದರೊಂದಿಗೆ ಎಳೆಯ ಮಕ್ಕಳಿಗೆ ವೃತ್ತಿ ಕೌಶಲ್ಯ ಕಲಿಸುವ ಪ್ರಸ್ತಾಪ ಕೂಡ ಈ ಶಿಕ್ಷಣ ನೀತಿಯಲ್ಲಿದೆ. ಇದು ಇನ್ನೊಂದು ರೀತಿಯಲ್ಲಿ ಬಾಲಕಾರ್ಮಿಕರನ್ನು ಸೃಷ್ಟಿಸುವ ಹುನ್ನಾರ. ಸಂವಿಧಾನದ ಅಡಿಯಲ್ಲಿ ಬಾಲಕಾರ್ಮಿಕರನ್ನು ನಿಷೇಧಿಸಲಾಗಿದ್ದು, ಅದಕ್ಕೆ ತದ್ವಿರುದ್ಧವಾಗಿ ಬಾಲಕಾರ್ಮಿಕರ ಸೃಷ್ಟಿಯನ್ನು ಹಿಂಬಾಗಿಲ ಮೂಲಕ ನಡೆಸಲು ಯತ್ನಿಸಲಾಗುತ್ತಿದೆ. ಇಡೀ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಉದ್ದೇಶ ನಿಜವಾಗಿದ್ದರೆ ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರೊಡನೆ ಚರ್ಚಿಸಿ ನೂತನ ಶಿಕ್ಷಣ ನೀತಿಯನ್ನು ಜಾರಿಗೆತರಬೇಕು. ಆದರೆ ಇವಾವುದನ್ನೂ ಮಾಡದೆ, ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ, ಮುಚ್ಚುವ ಹೊಸ ಹುನ್ನಾರವನ್ನೂ ಈ ಶಿಕ್ಷಣ ನೀತಿ ಒಳಗೊಂಡಿದೆ. ಈಗಾಗಲೇ ಕೊನೆಯುಸಿರೆಳೆಯುವಂತಹ ಪರಿಸ್ಥಿತಿಯಲ್ಲಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಜೀವದ್ರವ್ಯಹರಿಸುವ ಬದಲು, ಜೀವ ಹೋಗುವಾಗ ಕಡೆಯ ಘಳಿಗೆಯಲ್ಲಿ ನೀರುಬಿಡುವ (ಗಂಗಾಜಲ!) ಪರಿಸ್ಥಿತಿಯನ್ನು ಸೃಷ್ಟಿಸಲು ಯತ್ನ ನಡೆಯುತ್ತಿದೆ.
- ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ




