10 ಕೆಜಿ ಅಕ್ಕಿ ಮತ್ತು ಉಚಿತ ಇಂಟರ್ ನೆಟ್, ರಿಯಾಯಿತಿ ಮಾರಾಟಗಳ ನಡುವೆ ಆಯ್ಕೆ ಯಾವುದು?
ಯಥಾಸ್ಥಿತಿವಾದಿಗಳು ಬಡವರಿಗೆ ಅನ್ನಭಾಗ್ಯ ವಿರೋಧಿಸುವುದಕ್ಕೆ ಮನುಧರ್ಮಶಾಸ್ತ್ರವೇ ಆಧಾರ
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಂಗ್ರೆಸ್ ಪಕ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ನೀಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕರು ಈ ಯೋಜನೆ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಗಮನಿಸಬೇಕಾದ ಕೆಲವು ಸಂಗತಿಗಳಿವೆ.
ವೈಯಕ್ತಿಕ ಉದಾಹರಣೆ: ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣವನಾದ ನಾನು 1999ರ ಹೊತ್ತಿಗೆ ಅನೇಕ ಕಾರಣಕ್ಕೆ ಬೆಂಗಳೂರು ಸೇರಿದೆ. 1999ರಲ್ಲಿ ಎಸ್.ಎಂ.ಕೃಷ್ಣ ಅವರು ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದು ಹೇಳುತ್ತಿದ್ದ ಅವಧಿಯದು. ಆಗ ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಅವರ ಮುಂದಾಲೋಚನೆಯಿಂದ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗುವತ್ತ ಧೃಡವಾದ ಹೆಜ್ಜೆ ಇಟ್ಟ ಅವಧಿಯದು. ಬೆಂಗಳೂರು ಸಿಂಗಾಪುರ ಆಯಿತೋ ಇಲ್ಲವೋ ಆಮೇಲೆ ನೋಡಬಹುದು. 1999-2004ರ ಅವಧಿಯಲ್ಲಿ ರಾಜ್ಯವನ್ನು ಬರಗಾಲ ಬಾಧಿಸಿತ್ತು. ಮೋಡಬಿತ್ತನೆಯ ಸರ್ಕಸ್ ಮೂಲಕ ಮಳೆ ತರಿಸುವ ಯೋಜನೆಯನ್ನು ಸರ್ಕಾರ ಯತ್ನಿಸಿತ್ತು. ಬೆಂಗಳೂರಿನಿಂದ ರಾತ್ರಿ ರೈಲಿನಲ್ಲಿ ಸಾಮಾನ್ಯ ಬೋಗಿಯಲ್ಲಿ ದಾವಣಗೆರೆಗೆ ಹೋಗಿ, ಅಲ್ಲಿಂದ ನವದುರ್ಗ ಬಸ್ ಹಿಡಿದು ಬಸವಾಪಟ್ಟಣಕ್ಕೆ ತಲುಪುತ್ತಿದ್ದೆ. ಆಗ ನನ್ನ ಜೀವಿತಾವಧಿಯಲ್ಲಿ ಒಮ್ಮೆಯೂ ಬತ್ತದ ಐತಿಹಾಸಿಕ ಹದಡಿ ಕೆರೆ ಕೂಡ ಬತ್ತಿಹೋಗಿತ್ತು. ಪ್ರತಿ ಬಾರಿ ಹೀಗೆ ಊರಿಗೆ ಹೋದ ಸಮಯದಲ್ಲಿ ಬಸ್ ಇಳಿದ ವೇಳೆ, ಊರಿನಲ್ಲಿ ತಿರುಗಾಡುತ್ತಿದ್ದ ಸಮಯದಲ್ಲಿ, ಗೆಳೆಯರೊಂದಿಗೆ ಬೇಕರಿಗೋ, ಹೋಟೆಲ್ ಗೊ ಚಹಾ ಕುಡಿಯಲು ಹೋದ ಸಮಯದಲ್ಲಿ ಚಹಾಗೆ ದುಡ್ಡು ಕೊಡು, ಟಿಫನ್ ಕೊಡಿಸು ಎಂದು ತಲೆಕೆರೆದು ನನ್ನೂರಿನ ತಳಸಮುದಾಯದವರು ನನ್ನ ಮುಂದೆ ಕೈಚಾಚಿ, ಅಸಹಾಯಕತೆಯಿಂದ ನಿಲ್ಲುತ್ತಿದ್ದ ಪ್ರಸಂಗಗಳು ಸಾಮಾನ್ಯವಾಗಿದ್ದವು. ಆದರೆ 2013ರಲ್ಲಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಅನ್ನಭಾಗ್ಯ ಯೋಜನೆ ಜಾರಿಯಾದ ನಂತರ ನಮ್ಮ ಊರು ಬಸವಾಪಟ್ಟಣಕ್ಕೆ ಹೋದಾಗ ಈ ಹಿಂದಿನಂತೆ ಚಹಾ ಕೊಡಿಸು, ಟಿಫನ್ ಕೊಡಿಸು ಎಂದು ಯಾರೂ ನನ್ನ ಮತ್ತು ನನ್ನಂತಹವರ ಬಳಿ ದೈನೇಸಿ ಸ್ಥಿತಿಯಲ್ಲಿ ಅಸಹಾಯಕತೆಯಿಂದ ತಲೆಕೆರೆದುಕೊಂಡು ನಿಲ್ಲುವ ಪ್ರಸಂಗಗಳು ಕಣ್ಮರೆಯಾದವು.
ಇನ್ನು ಅನ್ನಭಾಗ್ಯ ಯೋಜನೆಯ ಜೊತೆಗೆ ಇಂದಿರಾ ಕ್ಯಾಂಟೀನ್ ಮೂಲಕ 5 ರೂ.ಗೆ ಉಪಾಹಾರ, 10 ರೂ.ಗೆ ಊಟ ಯೋಜನೆಯೂ ಜಾರಿಗೆ ಬಂತು. ಇಂತಹ ಜನೋಪಯೋಗಿ ಯೋಜನೆಗಳಿಗೆ ಭಾರತದಲ್ಲಿ ಯಾವಾಗಲೂ “ಜನಪ್ರಿಯ ಯೋಜನೆ”ಯ ಲೇಬಲ್ ಹಚ್ಚಿ ಅದರ ವಿರುದ್ಧ ಜನಾಭಿಪ್ರಾಯ ರೂಪಿಸುವ ಯಥಾಸ್ಥಿತಿವಾದಿಗಳ ಖೆಡ್ಡಾಕ್ಕೆ ಎಲ್ಲರೂ ಬೀಳುತ್ತಾರೆ. ಈ ಸಮಯದಲ್ಲಿ ನಾನು ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ತನ್ನ ಕೆಲವು ಸಹೋದ್ಯೋಗಿಗಳು ಈ ಯೋಜನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆಗ ನೋಡುತ್ತಾ ಇರಿ, ಈಗ ಈ ಯೋಜನೆ ಪರವಾಗಿ ಸುದ್ದಿಗಳನ್ನು ಪ್ರಸಾರ ಮಾಡದ ಮಾಧ್ಯಮಗಳು, ಇನ್ನು ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಜಿರಲೆ ಪಲಾವ್, ಹಲ್ಲಿ ಬಾತ್ ಎಂದು ಸುದ್ದಿಗಳನ್ನು ಪ್ರಸಾರ ಮಾಡುತ್ತವೆ ಎಂದು ಹೇಳಿದ್ದೆ. ಕೆಲವೇ ದಿನಗಳಲ್ಲಿ ಇದು ನಿಜವಾಗಿತ್ತು.
ದೇಶದಲ್ಲಿರುವ ಯಥಾಸ್ಥಿತಿ, ಮನುವಾದಿ ಮನಸ್ಥಿತಿಯ ಜನ ನಮ್ಮ ಒಬಿಸಿ, ಶೂದ್ರ, ದಲಿತ, ಅಲ್ಪಸಂಖ್ಯಾತರನ್ನು ತಮ್ಮ ಬುಟ್ಟಿಗೆ ಕೆಡವಿಕೊಳ್ಳುವುದು ಸುಲಭ. ಇದಕ್ಕೆ ಪೂರಕವಾಗಿ ಜನಾಭಿಪ್ರಾಯವನ್ನು ರೂಪಿಸುವ ಕೆಲಸವನ್ನು ತಮ್ಮ ಕೈಗಳಲ್ಲಿರುವ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇದನ್ನು ಯಶಸ್ವಿಯಾಗಿ ಮಾಡುತ್ತಾರೆ. ಇಲ್ಲಿ ದಲಿತರು, ಶೂದ್ರರ ಹೆಗಲ ಮೇಲೆ ಬಂದೂಕನ್ನು ಇಡುವವರು ಮನುವಾದಿಗಳು. ಬಲಿಯಾಗುವವರು ಮತ್ತು ಗುಂಡು ಹಾರಿಸುವವರು ಜನೋಪಯೋಗಿ ಯೋಜನೆಯ ಫಲಾನುಭವಿಗಳು.
ಇನ್ನು ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಖಾಸಗಿ ಟೆಲಿಕಾಂ ಕಂಪನಿಯಾದ ಜಿಯೋಗೆ ಬ್ರಾಂಡ್ ಅಂಬಾಸೆಡರ್ ಆದರು. ಆಗ ಜಿಯೋ ಕಂಪನಿ ದೇಶದ ನಾಗರಿಕರಿಗೆ ಉಚಿತ ಇಂಟರ್ ನೆಟ್ ಯೋಜನೆ ಘೋಷಿಸಿತು. ಇದರ ಜೊತೆಗೆ, ಬೆಂಗಳೂರು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತಲೆ ಎತ್ತಿದ ಶಾಪಿಂಗ್ ಮಾಲ್ ಗಳಲ್ಲಿ ಶೇ. 10 – 85ರವರೆಗೆ ರಿಯಾಯಿತಿ ಮಾರಾಟದ ಬೋರ್ಡ್ ಗಳು ಮತ್ತು ಈ ಕುರಿತ ಜಾಹೀರಾತುಗಳ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ಪ್ರಕಟವಾದವು. ಇನ್ನು ಅಮೆಜಾನ್, ಫ್ಲಿಪ್ ಕಾರ್ಟ್ ಮೊದಲಾದ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಕೂಡ ಆಕರ್ಷಕವಾದ ಆಫರ್ ಗಳ ಮಾರಾಟ ನಡೆಯತೊಡಗಿತು. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ವಿರುದ್ಧ ಜನಾಭಿಪ್ರಾಯ ರೂಪಿಸುವ ಮಾಧ್ಯಮಗಳು, ಮಧ್ಯಮ ವರ್ಗ, ಶೂದ್ರ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯ ಈ ಬಿಟ್ಟಿ, ರಿಯಾಯಿತಿ ಯೋಜನೆಗಳ ವಿರುದ್ಧ ಮಾತಾಡಿದ್ದನ್ನು ಎಲ್ಲಾದರೂ ಕೇಳಿದ್ದೀರಾ?
ಯಥಾಸ್ಥಿತಿವಾದಿಗಳಿಗೆ ತಳಸಮುದಾಯದವರಿಗೆ ಗೌರವಯುತ ಬದುಕನ್ನು ಕೊಟ್ಟು ಗೊತ್ತಿಲ್ಲ. ಮನುಧರ್ಮಶಾಸ್ತ್ರದ ಪ್ರಕಾರ ಈ ದೇಶದ ಶೂದ್ರರು, ದಲಿತರು, ಮಹಿಳೆಯರು ಘನತೆಯಿಂದ ಬದುಕಬಾರದು. ಅವರನ್ನು ಶಿಕ್ಷಣದಿಂದ ವಂಚಿಸಿ, ಉದ್ಯೋಗದಿಂದ, ರಾಜಕೀಯದಿಂದ ದೂರವಿಟ್ಟು ಶಾಶ್ವತ ಗುಲಾಮರನ್ನಾಗಿಸಬೇಕು ಎಂಬುದೇ ಯಥಾಸ್ಥಿತಿವಾದಿಗಳ ಹುನ್ನಾರ. ಆದರೆ ಇದನ್ನು ಅರಿಯದ ನಮ್ಮ ವಿದ್ಯಾವಂತರಾಗಿದ್ದೂ ವಿವೇಕ ಶೂನ್ಯ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ವಿರುದ್ಧ ಜನಾಭಿಪ್ರಾಯ ರೂಪಿಸುವ ಕೆಲಸದಲ್ಲಿ ತೊಡಗಿರುವುದೇ ಈ ದೇಶದ ದುರಂತ.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಟ್ಟರೆ ಮುಗಿಯಿತೆ? ಎಣ್ಣೆ, ಬೇಳೆ, ಕಾಳು, ಸೊಪ್ಪು, ತರಕಾರಿ, ತೆಂಗಿನಕಾಯಿ, ಬೆಲ್ಲ, ದಿನಸಿ, ಮಾಂಸ, ಮೊಟ್ಟೆ ಜನರಿಗೆ ಅಗತ್ಯವಿಲ್ಲವೇ? ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ, ಆರೋಗ್ಯಕ್ಕೆ, ಸಾವುನೋವುಗಳ ಸಮಯದಲ್ಲಿ ಸಂಚರಿಸಲು ಬಸ್ ಚಾರ್ಜ್ ಬೇಡವೇ? ಅಕ್ಕಿ ಕೊಟ್ಟರೆ ಜನ ಸೋಮಾರಿಗಳಾಗುವುದಾದರೆ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಗೌತಮ್ ಅದಾನಿ ಯಾಕೆ ಸೋಮಾರಿಗಳಾಗಿಲ್ಲ? ಇಡೀ ದೇಶವನ್ನೇ ಕೊಂಡುಕೊಳ್ಳುವಷ್ಟು ಆಸ್ತಿ ಸಂಪಾದಿಸಿರುವವರು ಸೋಮಾರಿಗಳಾಗದೆ ಇರುವಾಗ ಬಡವರು ಮಾತ್ರ ಸೋಮಾರಿಗಳಾಗುವುದು ಹೇಗೆ? ಇತ್ತೀಚಿನ ಅಧ್ಯಯನದ ವರದಿಗಳ ಪ್ರಕಾರ, ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ, ಉದ್ಯಮಿಗಳ ಸುಮಾರು 14.5 ಲಕ್ಷ ಕೋಟಿ ರೂ.ಗಳನ್ನು ವಸೂಲಾಗದ ಸಾಲದ ಹೆಸರಿನಲ್ಲಿ ಮನ್ನಾ ಮಾಡಿದೆ. ಒಟ್ಟು ಎನ್.ಪಿ.ಎ ಪ್ರಮಾಣ 2014-15 ರಿಂದ 2021-22ರ ವರೆಗೆ ಸುಮಾರು 66.5 ಲಕ್ಷ ಕೋಟಿಗಳಿಗೆ ಏರಿಕೆಯಾಗಿಗಿದೆ ಎಂದು ವರದಿಯಾಗಿದೆ.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ವಿರುದ್ಧ ಜನಾಭಿಪ್ರಾಯ ರೂಪಿಸಲು ಹೆಣಗುತ್ತಿರುವ ಶೂದ್ರ, ದಲಿತ, ಅಲ್ಪಸಂಖ್ಯಾತ ಸಮುದಾಯದವರು, ಬಿಟ್ಟಿ ಇಂಟರ್ ನೆಟ್, ಮಾಲ್ ಮತ್ತು ಆನ್ಲೈನ್ ರಿಯಾಯಿತಿ ವಿರುದ್ಧ ಜನಾಭಿಪ್ರಾಯ ರೂಪಿಸಿದ್ದಾರೆಯೇ? ಶಾಸಕರು, ಸಚಿವರು, ಸಿಎಂ, ಪ್ರಧಾನಿ, ರಾಷ್ಟ್ರಪತಿ ಮೊದಲಾದ ಜನಪ್ರತಿನಿಧಿಗಳಿಗೆ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್, ಉಚಿತ ನೈಸರ್ಗಿಕ ಅನಿಲ, ಉಚಿತ ದೂರವಾಣಿ, ಭತ್ಯೆಗಳ ಮತ್ತು ಇತರ ಸವಲತ್ತುಗಳ ಕುರಿತು ಆಲೋಚಿಸಿದ್ದಾರೆಯೇ? ವಸೂಲಾಗದ ಸಾಲದ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ಕೃಪಾಪೋಷಣೆಯನ್ನು ಪ್ರಶ್ನಿಸುತ್ತಾರೆಯೇ?
ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಫಲಾನುಭವಿಗಳು ಬಡವರು. ಬಿಟ್ಟಿ ಇಂಟರ್ ನೆಟ್, ಮಾಲ್, ಆನ್ಲೈನ್ ರಿಯಾಯಿತಿ ಪಡೆಯುವವರು ಸಿರಿವಂತರು, ಮಧ್ಯಮವರ್ಗದ ಜನರು. ನಿಮ್ಮ ಆಯ್ಕೆ ಯಾವುದು???
– ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ



