8 ವರ್ಷದ ಪ್ರೇಮಕ್ಕೆ ಮದುವೆ ಹಂತದಲ್ಲಿ ಬ್ರೇಕ್!

5 months ago


ಯಾದಗಿರಿ: ಎಂಟು ವರ್ಷಗಳ ಪ್ರೇಮ ಸಂಬಂಧ ಮದುವೆ ಹಂತದಲ್ಲಿ ಮುರಿದು ಬಿದ್ದಿರುವ ಘಟನೆ ಇದೀಗ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಂಟಲಿಜೆನ್ಸ್ ವಿಭಾಗದ ಪಿಎಸ್‌ಐ ವೀರೇಶ್ ಆಲೂರು ಹಾಗೂ ರಾಯಚೂರು ಗ್ರಾಮೀಣ ಠಾಣೆಯ ಲೇಡಿ ಪೇದೆ ನಡುವಿನ ಪ್ರೇಮ ಸಂಬಂಧ ಇದೀಗ ವಿವಾದದ ರೂಪ ಪಡೆದುಕೊಂಡಿದೆ.


ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೋಚಿಂಗ್ ಸೆಂಟರ್‌ನಲ್ಲಿ ಇಬ್ಬರಿಗೂ ಪರಿಚಯವಾಗಿದ್ದು, ನಂತರ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ. ಕಳೆದ ಎಂಟು ವರ್ಷಗಳಿಂದ ಆತ್ಮೀಯ ಸಂಬಂಧ ಹೊಂದಿದ್ದ ಇಬ್ಬರೂ ಹಲವು ವರ್ಷ ಒಂದೇ ರೂಮಿನಲ್ಲಿ ವಾಸವಾಗಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.


ಇದೇ ವೇಳೆ, ರಾಯಚೂರಿನ ಬಾಲಮರೆಮ್ಮ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಮದುವೆ ಪ್ರತಿಜ್ಞೆ ಮಾಡಿಕೊಂಡಿದ್ದರು ಎಂಬ ಸಂಗತಿಯೂ ಹೊರಬಿದ್ದಿದೆ.


ಆದರೆ ಇದೀಗ ಮದುವೆ ವಿಷಯದಲ್ಲಿ ಲೇಡಿ ಪೇದೆ ನಿರಾಕರಣೆ ವ್ಯಕ್ತಪಡಿಸಿದ್ದು, ಪ್ರಕರಣ ತೀವ್ರ ತಿರುವು ಪಡೆದಿದೆ. ಈ ಕುರಿತು ಪಿಎಸ್‌ಐ ವೀರೇಶ್ ಆಲೂರು ಗಂಭೀರ ಆರೋಪಗಳನ್ನು ಮಾಡಿದ್ದು, ಲೇಡಿ ಪೇದೆ ಹಾಗೂ ಅವರ ಕುಟುಂಬಕ್ಕೆ ಸುಮಾರು 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದೇನೆ ಎಂದು ಹೇಳಿದ್ದಾರೆ.


ಮನೆ ನಿರ್ಮಾಣ, ಟ್ರಾಕ್ಟರ್ ಖರೀದಿ ಸೇರಿದಂತೆ ಹಲವು ರೀತಿಯಲ್ಲಿ ಸಹಾಯ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ. ಇಷ್ಟಾದರೂ ಇದೀಗ ಜಯಶ್ರೀ ಎಂಬ ಲೇಡಿ ಪೇದೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮೇ 7ರಂದು ರಾಯಚೂರಿನಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯಿತಿ ನಡೆಸಲು ಪ್ರಯತ್ನ ನಡೆದಿದ್ದು, ಮಾಜಿ ಶಾಸಕ ಶರಣಪ್ಪ ಸುಣಗಾರ ಸಮ್ಮುಖದಲ್ಲಿಯೂ ಮಾತುಕತೆ ನಡೆದಿದೆ. ಜೊತೆಗೆ ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿಯೂ ಸಮಾಧಾನ ಸಭೆ ನಡೆದರೂ ಯಾವುದೇ ಪರಿಹಾರ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.


ಈ ಹಿನ್ನೆಲೆಯಲ್ಲಿ “ನನಗೆ ನ್ಯಾಯ ಬೇಕು” ಎಂದು ಪಿಎಸ್‌ಐ ವೀರೇಶ್ ಆಲೂರು ಮನವಿ ಮಾಡಿದ್ದಾರೆ.


Leave a Reply