ವಿದ್ಯುತ್ ತಗುಲಿ ಮನೆಯ ಮೇಲಿಂದ ಬಿದ್ದು 9 ವರ್ಷದ ಬಾಲಕಿ ಸಾವು

1 week ago

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ವಿದ್ಯುತ್ ತಗುಲಿ ಮನೆಯ ಮೇಲಿಂದ ಬಿದ್ದ ಪರಿಣಾಮ 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

ಇಂಗಳಿ ಗ್ರಾಮದ ಸಾನ್ವಿ ಕಾಂಬಳೆ (9) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಸಾನ್ವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಸಂಜೆ ವೇಳೆ ಮನೆಯ ಮೇಲ್ಭಾಗದಲ್ಲಿ ಆಟವಾಡುತ್ತಿದ್ದಾಗ, ಬಾಲಕಿ ಬಳಸುತ್ತಿದ್ದ ಸ್ಕೀಪ್ಪಿಂಗ್ ಹಗ್ಗ ಸಮೀಪದಲ್ಲಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಬಳಿಕ ಹಗ್ಗವನ್ನು ತೆಗೆಯಲು ಹೋಗಿದ್ದ ವೇಳೆ ಆಕೆಗೆ ವಿದ್ಯುತ್ ತಗುಲಿದ್ದು, ತಕ್ಷಣವೇ ಮನೆಯ ಮೇಲಿಂದ ಕೆಳಗೆ ಬಿದ್ದಿದ್ದಾಳೆ.

ಗಂಭೀರವಾಗಿ ಗಾಯಗೊಂಡ ಸಾನ್ವಿಯನ್ನು ಕುಟುಂಬಸ್ಥರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ಘಟನೆಯಿಂದ ಇಂಗಳಿ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಬಾಲಕಿಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

Leave a Reply