
ಬೆಳಗಾವಿ: ನಗರದ ಕಾಲೇಜ್ ರಸ್ತೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ರೀತಿಯಲ್ಲಿ ರಿವಾಲ್ವರ್ ಹಿಡಿದು ಸಂಚರಿಸುತ್ತಿದ್ದ ವ್ಯಕ್ತಿಯನ್ನು ಖಡೇಬಜಾರ್ ಪೊಲೀಸರು ಬಂಧಿಸಿದ್ದಾರೆ.
ನಗರದ ಕಾಲೇಜ್ ರಸ್ತೆಯಲ್ಲಿರುವ ಸೆಂಟ್ರಲ್ ಸರ್ಜಿಕಲ್ ಮೆಡಿಕಲ್ ಅಂಗಡಿ ಸಮೀಪ ಈ ಘಟನೆ ನಡೆದಿದೆ. ಶಂಕರ ಬಂಡಿವಡ್ಡರ ಎಂಬಾತ ಸಾರ್ವಜನಿಕ ರಸ್ತೆಯಲ್ಲಿ ರಿವಾಲ್ವರ್ ಹಿಡಿದು ಓಡಾಡುತ್ತಿದ್ದು, ಇದರಿಂದ ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಖಡೇಬಜಾರ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಅವನ ಬಳಿ ಇದ್ದ ರಿವಾಲ್ವರ್ ಅನ್ನು ಜಪ್ತಿ ಮಾಡಿದ್ದಾರೆ.
ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗನ್‌ಗೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರೆ ಮಾಹಿತಿಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.


