15 ಬೇಡಿಕೆ ಈಡೇರಿಕೆ ಭರವಸೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 15 ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಿಬಿಎಂಪಿ ಕೆಲಸ ಕಾರ್ಯಗಳಿಗೆ ಸಾಮೂಹಿಕ ರಜೆ ಹಾಕುವ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಅವರ ನೇತೃತ್ವದಲ್ಲಿ ಸಾಯಿಶಂಕರ್, ಬಾಬಣ್ಣ, ಉಪಾಧ್ಯಕ್ಷರುಗಳಾದ ಡಾ.ಶೋಭಾ, ಡಿ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜಿ.ರವಿ, ಕಾರ್ಯಾಧ್ಯಕ್ಷ ರುದ್ರೇಶ್, ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ನ್ಯಾಯಯುತ ಬೇಡಿಕೆಗಳ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೌಕರರ ಸಂಘ, ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ನೌಕರರ ಸಂಘ, ಮೈಸೂರು ಮಹಾನಗರ ಪಾಲಿಕೆ ನೌಕರರ ಸಂಘ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘ, ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ನೌಕರರ ಸಂಘ, ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ದಿ ಸಂಘ, ದಾವಣಗೆರೆ ಮಹಾನಗರಪಾಲಿಕೆ ನೌಕರರ ಸಂಘ, ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್, ಮಂಗಳೂರು ಹೋರಾಟದಲ್ಲಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನೌಕರರ 15 ಬೇಡಿಕೆಗಳನ್ನು ಸರಕಾರದ ಜೊತೆಯಲ್ಲಿ ಚರ್ಚಿಸಿ ಈಡೇರಿಸುವ ಭರವಸೆ ನೀಡಿದರು. ಅಧಿಕಾರಿ ಮತ್ತು ನೌಕರರಿಗೆ ಯಾವುದೇ ಸಮಸ್ಯೆ ಎದುರದಂತೆ ಕ್ರಮ ಕೈಗೊಳ್ಳಲಾಗುವುದು ಪ್ರತಿಭಟನೆಯನ್ನ ಕೈಬಿಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಮಾತಾಡಿದ ಎ.ಅಮೃತ್ ರಾಜ್, ಕಂದಾಯ ಇಲಾಖೆ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹ ಹೆಚ್ಚಳಮಾಡಿದರೂ ಅಧಿಕಾರಿ, ನೌಕರರ ಮೇಲೆ ವಿನಾಕಾರಣ ಕಿರುಕುಳ ಅಮಾನತು ಮಾಡುತ್ತಿದೆ. 2022-20ನೇ ಸಾಲಿನಲ್ಲಿ 3,339 ಕೋಟಿ ರೂ. ಮತ್ತು 2023-24ರ ಸಾಲಿನಲ್ಲಿ 3,598 ರೂ. ಕೋಟಿ ರೂ. ಸಂಗ್ರಹ ಮಾಡಲಾಗಿದೆ ಎಂದರು.
ಸಹಾಯಕ ಕಂದಾಯ ಅಧಿಕಾರಿ ಲಕ್ಷ್ಮೀ ಅವರ ವಿರುದ್ಧ 5 ವರ್ಷದಿಂದ ಇಲಾಖೆ ವಿಚಾರಣೆ ಅಂತಿಮ ಆದೇಶ ನೀಡದೇ ಅಮಾನತು ಮಾಡಲಾಗಿದೆ. ಆರ್.ಆರ್.ನಗರ ವಲಯದಲ್ಲಿ ಆರೋಗ್ಯಧಿಕಾರಿ ದೇವಿಕಾರಾಣಿಯವರಿಗೆ ಸ್ಥಳ ನಿಯೋಜನೆ ಮಾಡಿಲ್ಲ. ಆಂಗ್ಲ ಭಾಷೆ ಫಲಕಕ್ಕೆ ಅನಾಮಧೇಯರು ಕಲ್ಲು ತೂರಿ ಹಾನಿ ಮಾಡಿದ ಪ್ರಕರಣದಲ್ಲಿ ವಿನಾಕಾರಣದಿಂದ ಹಿರಿಯ ಆರೋಗ್ಯ ಪರಿವೀಕ್ಷಕ ಕೆ.ಎಲ್.ವಿಶ್ವನಾಥ್ ಅವರನ್ನು ಅಮಾನತು ಮಾಡಲಾಗಿದೆ ಎಂದರು.
ಪಾಲಿಕೆ ಅಧಿಕಾರಿ ಮತ್ತು ನೌಕರರ ಕಛೇರಿ ಹೊರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಹೆಚ್ಚು. ಅದ್ದರಿಂದ ಬಯೋಮೆಟ್ರಿಕ್ ಮೂಲಕ ಬೆಳಗ್ಗೆ 10 ಗಂಟೆಗೆ ಲಾಗ್ ಇನ್ ಮತ್ತು ಸಂಜೆ 5-30 ಕ್ಕೆ ಲಾಗ್ ಆಫ್ ನಿಬಂಧನೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಬಿಎಂಪಿ ಕಿರಿಯ ಅಭಿಯಂತರುಗಳ 108 ಹುದ್ದೆಗಳ ನೇಮಕಾತಿ ಮತ್ತು ಮುಂಬಡ್ತಿಗಾಗಿ ಅಧೀಕ್ಷಕ ಅಭಿಯಂತರರ ಹುದ್ದೆ 10, ಕಾರ್ಯಪಾಲಕ ಅಭಿಯಂತರ ಹುದ್ದೆ 20 ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂಜಿನಿಯರ್ ವಿಭಾಗಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸರ್ಕಾರಕ್ಕೆ ಪ್ರಸ್ತಾವನೆ ಕೊಡಲೆ ಕಳುಹಿಸಬೇಕು ಎಂದರು.
ಬಿಬಿಎಂಪಿ ಎ. ಶ್ರೇಣಿಯ ಅಧಿಕಾರಿಗಳ ಮುಂಬಡ್ತಿ ಪಡೆಯಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಸರ್ಕಾರದ ಹಂತದಲ್ಲಿ ವಿಳಂಬವಾಗುತ್ತಿರುವುದರಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಎ.ಶ್ರೇಣಿ ಅಧಿಕಾರಗಳಿಗೆ ಮುಂಬಡ್ತಿ ಅಧಿಕಾರ ನೀಡಬೇಕು. 198 ವಾರ್ಡ್ ಗಳಿಂದ 225 ಅಧಿಕಾರಿ, ಸಿಬ್ಬಂದಿ ಕೊರತೆ ಇದೆ. ಸಕಾಲಕ್ಕೆ ಸಿಬ್ಬಂದಿ ನೇಮಕ ಮಾಡಬೇಕು ಎಂದರು.
ಬಿಬಿಎಂಪಿಯಲ್ಲಿ 5,219 ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಮಂಜೂರಾತಿ ನೀಡಿಲ್ಲ. ಕಳೆದ ನಾಲ್ಕು ವರ್ಷಗಳಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಅಚರಣೆ ಮಾಡಿಲ್ಲ ಎಂದರು.
ಬೆಂಗಳೂರು ನಗರದಲ್ಲಿ 1ಕೋಟಿ 30ಲಕ್ಷ ಜನಸಂಖ್ಯೆ ಇದೆ. ಇದರ ಅನುಗುಣವಾಗಿ ಅಧಿಕಾರಿ, ಸಿಬ್ಬಂದಿ ಸಂಖ್ಯೆ ಇದ್ದಾಗ ಸುಲಭ ಕಾರ್ಯನಿರ್ವಹಣೆ ಮಾಡಬಹುದು. ಡಿಸಿಎಂ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಬಿಬಿಎಂಪಿ ಮುಖ್ಯ ಆಯುಕ್ತರು ಈ ಕೂಡಲೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ್, ಸಂತೋಷ್ ಕುಮಾರ್,ಹೆಚ್.ಬಿ.ಹರೀಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.



