ಭಾರತದ ಸಂವಿಧಾನ: ಅಧ್ಯಾಯ – II : ಸಂಸತ್ತು ಸಾಮಾನ್ಯ
ಸಂಸತ್ತಿನ ಅಧಿಕಾರಿಗಳು
89. ರಾಜ್ಯ ಸಭೆಯ ಸಭಾಪತಿ ಮತ್ತು ಉಪಸಭಾಪತಿ:– (1) ಭಾರತದ ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು. (2) ರಾಜ್ಯಸಭೆಯು ಆದಷ್ಟು ಬೇಗನೆ ಆ ಸದನದ ಒಬ್ಬ ಸದಸ್ಯನನ್ನು ಅದರ ಉಪಸಭಾಪತಿಯಾಗಿ ಆಯ್ಕೆ ಮಾಡತಕ್ಕದ್ದು ಮತ್ತು ಉಪಸಭಾಪತಿಯ ಪದವು ಖಾಲಿ ಆದಾಗಲೆಲ್ಲಾ ರಾಜ್ಯ ಸಭೆಯು ಮತ್ತೊಬ್ಬ ಸದಸ್ಯನನ್ನು ಅದರ ಉಪಸಭಾಪತಿಯಾಗಿ ಆಯ್ಕೆಮಾಡತಕ್ಕದ್ದು.
90. ಉಪಸಭಾಪತಿಯು ಪದವನ್ನು ಖಾಲಿ ಮಾಡುವುದು ಮತ್ತು ಪದಕ್ಕೆ ರಾಜೀನಾಮೆ ನೀಡುವುದು ಮತ್ತು ಪದದಿಂದ ಅವನನ್ನು ತೆಗೆದುಹಾಕುವುದು:– ರಾಜ್ಯಸಭೆಯ ಉಪಸಭಾಪತಿಯಾಗಿ ಪದಧಾರಣ ಮಾಡಿರುವ ಸದಸ್ಯನು – (ಎ) ರಾಜ್ಯಸಭೆಯ ಸದಸ್ಯನಾಗಿರುವುದು ನಿಂತುಹೋದಲ್ಲಿ ತನ್ನ ಪದವನ್ನು ಖಾಲಿ ಮಾಡತಕ್ಕದ್ದು; (ಬಿ) ತಾನು ಸಹಿ ಮಾಡಿದ ಪತ್ರವನ್ನು ಸಭಾಪತಿಗೆ ಬರೆದು ಯಾವುದೇ ಕಾಲದಲ್ಲಿ ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; ಮತ್ತು (ಸಿ) ರಾಜ್ಯಸಭೆಯ ಆಗಿನ ಎಲ್ಲ ಸದಸ್ಯರ ಬಹುಮತದಿಂದ ಅಂಗೀಕೃತವಾದ ರಾಜ್ಯಸಭೆಯ ನಿರ್ಣಯದ ಮೂಲಕ ಪದದಿಂದ ತೆಗೆದುಹಾಕಲ್ಪಡಬಹುದು: ಪರಂತು, (ಸಿ) ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಆಶಯದ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ.
91. ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸಲು ಅಥವಾ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಉಪಸಭಾಪತಿಯ ಅಥವಾ ಇತರ ವ್ಯಕ್ತಿಯ ಅಧಿಕಾರ:– (1) ಸಭಾಪತಿಯ ಪದವು ಖಾಲಿಯಾಗಿರುವಾಗ ಅಥವಾ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಅವಧಿಯಲ್ಲಿ ಉಪಸಭಾಪತಿಯು ಅಥವಾ ಉಪಸಭಾಪತಿಯ ಪದವೂ ಖಾಲಿಯಾಗಿರುವಲ್ಲಿ, ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸುವ ಉದ್ದೇಶಕ್ಕಾಗಿ ರಾಷ್ಟ್ರಪತಿಯು ನೇಮಕ ಮಾಡಬಹುದಾದಂಥ ರಾಜ್ಯಸಭೆಯ ಸದಸ್ಯನು ಆ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು. (2) ರಾಜ್ಯಸಭೆೆಯ ಯಾವುದೇ ಉಪವೇಶನದಲ್ಲಿ ಸಭಾಪತಿಯು ಗೈರುಹಾಜರಾಗಿರುವಾಗ ಉಪಸಭಾಪತಿಯು ಅಥವಾ ಅವನೂ ಗೈರುಹಾಜರಾಗಿರುವಾಗ ರಾಜ್ಯಸಭೆಯ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಥವಾ ಅಂಥ ಯಾವ ವ್ಯಕ್ತಿಯೂ ಹಾಜರಿಲ್ಲದಿದ್ದರೆ ರಾಜ್ಯಸಭೆಯು ನಿರ್ಧರಿಸಬಹುದಾದಂಥ ಇತರ ಯಾರೇ ವ್ಯಕ್ತಿಯು ಸಭಾಪತಿಯಾಗಿ ಕಾರ್ಯನಿರ್ವಹಿಸತಕ್ಕದ್ದು.
92. ಸಭಾಪತಿಯನ್ನು ಅಥವಾ ಉಪಸಭಾಪತಿಯನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ:– (1) ರಾಜ್ಯಸಭೆಯ ಯಾವುದೇ ಉಪವೇಶನದಲ್ಲಿ ಉಪರಾಷ್ಟ್ರಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಸಭಾಪತಿಯು ಹಾಜರಿದ್ದರೂ ಅವನು, ಅಥವಾ ಉಪಸಭಾಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಉಪಸಭಾಪತಿಯು ಹಾಜರಿದ್ದರೂ ಅವನು, ಅಧ್ಯಕ್ಷತೆ ವಹಿಸತಕ್ಕದ್ದಲ್ಲ ಮತ್ತು 91ನೆಯ ಅನುಚ್ಫೇದದ (2)ನೆಯ ಖಂಡದ ಉಪಬಂಧಗಳು ಸಭಾಪತಿಯು ಅಥವಾ ಸಂದರ್ಭಾನುಸಾರ ಉಪಸಭಾಪತಿಯು ಗೈರುಹಾಜರಾಗಿರುವ ಉಪವೇಶನದ ಸಂಬಂಧದಲ್ಲಿ ಅನ್ವಯಿಸುವಂತೆಯೇ ಅಂಥ ಪ್ರತಿಯೊಂದು ಉಪವೇಶನದ ಸಂಬಂಧದಲ್ಲಿ ಅನ್ವಯಿಸತಕ್ಕದ್ದು. (2) ಉಪರಾಷ್ಟ್ರಪತಿಯನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ರಾಜ್ಯಸಭೆಯಲ್ಲಿ ಪರ್ಯಾಲೋಚನೆಯಲ್ಲಿರುವಾಗ, ಸಭಾಪತಿಯು ರಾಜ್ಯಸಭೆಯಲ್ಲಿ ಮಾತನಾಡುವ ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸುವ ಹಕ್ಕನ್ನು ಹೊಂದಿರತಕ್ಕದ್ದು; ಆದರೆ 100ನೆಯ ಅನುಚ್ಫೇದದಲ್ಲಿ ಏನೇ ಇದ್ದಾಗ್ಯೂ, ಅಂಥ ನಿರ್ಣಯದ ಮೇಲೆ ಅಥವಾ ಅಂಥ ವ್ಯವಹರಣೆಗಳ ಅವಧಿಯಲ್ಲಿ ಇತರ ಯಾವುದೇ ವಿಷಯದ ಮೇಲೆ ಮತ ನೀಡಲು ಅವನು ಹಕ್ಕನ್ನು ಹೊಂದಿರತಕ್ಕದ್ದಲ್ಲ.
93. ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ:– ಲೋಕಸಭೆಯು ತನ್ನ ಸದಸ್ಯರಲ್ಲಿ ಇಬ್ಬರನ್ನು ಅನುಕ್ರಮವಾಗಿ ಆ ಸದನದ ಅಧ್ಯಕ್ಷನಾಗಿ ಮತ್ತು ಉಪಾಧ್ಯಕ್ಷನಾಗಿ ಆದಷ್ಟು ಬೇಗನೆ ಆಯ್ಕೆ ಮಾಡತಕ್ಕದ್ದು ಮತ್ತು ಅಧ್ಯಕ್ಷನ ಅಥವಾ ಉಪಾಧ್ಯಕ್ಷನ ಪದವು ಖಾಲಿ ಆದಾಗಲೆಲ್ಲ ಅಧ್ಯಕ್ಷನಾಗಿ ಅಥವಾ ಸಂದರ್ಭಾನುಸಾರ ಉಪಾಧ್ಯಕ್ಷನಾಗಿ ಮತ್ತೊಬ್ಬ ಸದಸ್ಯನನ್ನು ಸದನವು ಆಯ್ಕೆ ಮಾಡತಕ್ಕದ್ದು.
94. ಲೋಕಸಭೆಯ ಅಧ್ಯಕ್ಷನು ಮತ್ತು ಉಪಾಧ್ಯಕ್ಷನು ಪದಗಳನ್ನು ಖಾಲಿ ಮಾಡುವುದು, ಅವುಗಳಿಗೆ ರಾಜೀನಾಮೆ ನೀಡುವುದು ಮತ್ತು ಆ ಪದಗಳಿಂದ ಅವರನ್ನು ತೆಗೆದುಹಾಕುವುದು:– ಲೋಕಸಭೆಯ ಅಧ್ಯಕ್ಷನಾಗಿ ಅಥವಾ ಉಪಾಧ್ಯಕ್ಷನಾಗಿ ಪದಧಾರಣ ಮಾಡಿರುವ ಸದಸ್ಯನು – (ಎ) ಲೋಕಸಭೆಯ ಸದಸ್ಯನಾಗಿರುವುದು ನಿಂತುಹೋದಲ್ಲಿ ತನ್ನ ಪದವನ್ನು ಖಾಲಿ ಮಾಡತಕ್ಕದ್ದು; (ಬಿ) ಅಧ್ಯಕ್ಷನಾಗಿದ್ದರೆ ಉಪಾಧ್ಯಕ್ಷನಿಗೆ ಅಥವಾ ಅವನು ಉಪಾಧ್ಯಕ್ಷನಾಗಿದ್ದರೆ ಅಧ್ಯಕ್ಷನಿಗೆ ತಾನು ಸಹಿಮಾಡಿದ ಪತ್ರವನ್ನು ಬರೆದು ಯಾವುದೇ ಕಾಲದಲ್ಲಿ ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; ಮತ್ತು (ಸಿ) ಲೋಕಸಭೆಯ ಆಗಿನ ಎಲ್ಲ ಸದಸ್ಯರ ಬಹುಮತದಿಂದ ಅಂಗೀಕೃತವಾದ ನಿರ್ಣಯದ ಮೂಲಕ ಪದದಿಂದ ತೆಗೆದುಹಾಕಲ್ಪಡಬಹುದು: ಪರಂತು, (ಸಿ) ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಆಶಯದ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ: ಮತ್ತೂ ಪರಂತು, ಲೋಕಸಭೆಯ ವಿಸರ್ಜನೆಯಾದಾಗಲ್ಲೆಲ್ಲ, ಹಾಗೆ ವಿಸರ್ಜನೆಯಾದ ತರುವಾಯ ನಡೆಯುವ ಲೋಕಸಭೆಯ ಮೊದಲನೆಯ ಅಧಿವೇಶನದ ನಿಕಟಪೂರ್ವದ ಸಮಯದವರೆಗೂ ಅಧ್ಯಕ್ಷನು ತನ್ನ ಪದವನ್ನು ಖಾಲಿ ಮಾಡತಕ್ಕದ್ದಲ್ಲ.
95. ಅಧ್ಯಕ್ಷ ಪದದ ಕರ್ತವ್ಯಗಳನ್ನು ನೆರವೇರಿಸಲು ಅಥವಾ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಉಪಾಧ್ಯಕ್ಷನ ಅಥವಾ ಇತರ ವ್ಯಕ್ತಿಯ ಅಧಿಕಾರ:– (1) ಅಧ್ಯಕ್ಷನ ಪದವು ಖಾಲಿಯಾಗಿರುವಾಗ ಆ ಪದದ ಕರ್ತವ್ಯಗಳನ್ನು ಉಪಾಧ್ಯಕ್ಷನು ನೆರವೇರಿಸತಕ್ಕದ್ದು ಅಥವಾ ಉಪಾಧ್ಯಕ್ಷನ ಪದವೂ ಖಾಲಿಯಾಗಿರುವಾಗ ಅಧ್ಯಕ್ಷನ ಪದದ ಕರ್ತವ್ಯಗಳನ್ನು ನೆರವೇರಿಸುವ ಉದ್ದೇಶಕ್ಕಾಗಿ ರಾಷ್ಟ್ರಪತಿಯು ನೇಮಕ ಮಾಡಬಹುದಾದಂಥ ಲೋಕಸಭೆಯ ಸದಸ್ಯನು ಆ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದು. (2) ಲೋಕಸಭೆಯ ಯಾವುದೇ ಉಪವೇಶನದಲ್ಲಿ ಅಧ್ಯಕ್ಷನು ಗೈರುಹಾಜರಾಗಿರುವಾಗ ಉಪಾಧ್ಯಕ್ಷನು ಅಥವಾ ಅವನೂ ಗೈರುಹಾಜರಾಗಿರುವಾಗ ಲೋಕಸಭೆಯ ಪ್ರಕ್ರಿಯಾ ನಿಯಮಗಳ ಮೂಲಕ ನಿರ್ಧರಿಸಬಹುದಾದಂಥ ವ್ಯಕ್ತಿಯು ಅಥವಾ ಅಂಥ ಯಾವ ವ್ಯಕ್ತಿಯೂ ಹಾಜರಿಲ್ಲದಿದ್ದರೆ ಸದನವು ನಿರ್ಧರಿಸಬಹುದಾದಂಥ ಇತರ ಯಾರೇ ವ್ಯಕ್ತಿಯು ಅಧ್ಯಕ್ಷನಾಗಿ ಕಾರ್ಯನಿರ್ವಹಿಸತಕ್ಕದ್ದು.
96. ಅಧ್ಯಕ್ಷನನ್ನು ಅಥವಾ ಉಪಾಧ್ಯಕ್ಷನನ್ನು ಪದದಿಂದ ತೆಗೆದುಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ:– (1) ಲೋಕಸಭೆಯ ಯಾವುದೇ ಉಪವೇಶನದಲ್ಲಿ ಅಧ್ಯಕ್ಷನನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಅಧ್ಯಕ್ಷನು ಹಾಜರಿದ್ದರೂ ಅವನು, ಅಥವಾ ಉಪಾಧ್ಯಕ್ಷನನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಉಪಾಧ್ಯಕ್ಷನು ಹಾಜರಿದ್ದರೂ, ಅವನು ಅಧ್ಯಕ್ಷತೆ ವಹಿಸತಕ್ಕದ್ದಲ್ಲ ಮತ್ತು 95ನೆಯ ಅನುಚ್ಫೇದದ (2)ನೆಯ ಖಂಡದ ಉಪಬಂಧಗಳು, ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಉಪಾಧ್ಯಕ್ಷನು ಗೈರುಹಾಜರಾಗಿರುವ ಉಪವೇಶನದ ಸಂಬಂಧದಲ್ಲಿ ಅನ್ವಯಿಸುವಂತೆಯೇ ಅಂಥ ಪ್ರತಿಯೊಂದು ಉಪವೇಶನದ ಸಂಬಂಧದಲ್ಲಿ ಅವು ಅನ್ವಯಿಸತಕ್ಕದ್ದು. (2) ಅಧ್ಯಕ್ಷನನ್ನು ಅವನ ಪದದಿಂದ ತೆಗೆದುಹಾಕುವ ಯಾವುದೇ ನಿರ್ಣಯವು ಲೋಕಸಭೆಯಲ್ಲಿ ಪರ್ಯಾಲೋಚನೆಯಲ್ಲಿರುವಾಗ ಅಧ್ಯಕ್ಷನು ಲೋಕಸಭೆಯಲ್ಲಿ ಮಾತನಾಡುವ ಮತ್ತು ಅದರ ವ್ಯವಹರಣೆಗಳಲ್ಲಿ ಅನ್ಯಥಾ ಭಾಗವಹಿಸುವ ಹಕ್ಕನ್ನು ಹೊಂದಿರತಕ್ಕದ್ದು ಮತ್ತು 100ನೆಯ ಅನುಚ್ಫೇದದಲ್ಲಿ ಏನೇ ಇದ್ದಾಗ್ಯೂ ಅಂಥ ನಿರ್ಣಯದ ಮೇಲೆ ಅಥವಾ ಅಂಥ ವ್ಯವಹರಣೆಗಳ ಅವಧಿಯಲ್ಲಿ ಇತರ ಯಾವುದೇ ವಿಷಯದ ಮೇಲೆ ಪ್ರಥಮತಃ ಮಾತ್ರ ಮತ ಕೊಡುವ ಹಕ್ಕುಳ್ಳವನಾಗಿರತಕ್ಕದ್ದು; ಆದರೆ ಮತಗಳು ಸಮನಾಗಿರುವ ಸಂದರ್ಭದಲ್ಲಿ ಮತಕೊಡಲು ಹಕ್ಕುಳ್ಳವನಾಗಿರತಕ್ಕದ್ದಲ್ಲ.
97. ಸಭಾಪತಿಯ ಮತ್ತು ಉಪಸಭಾಪತಿಯ ಹಾಗೂ ಅಧ್ಯಕ್ಷನ ಮತ್ತು ಉಪಾಧ್ಯಕ್ಷನ ಸಂಬಳಗಳು ಮತ್ತು ಭತ್ಯೆಗಳು:– ರಾಜ್ಯಸಭೆಯ ಸಭಾಪತಿಗೆ ಮತ್ತು ಉಪಸಭಾಪತಿಗೆ ಮತ್ತು ಲೋಕಸಭೆಯ ಅಧ್ಯಕ್ಷನಿಗೆ ಮತ್ತು ಉಪಾಧ್ಯಕ್ಷನಿಗೆ, ಸಂಸತ್ತು ಕಾನೂನಿನ ಮೂಲಕ ಅನುಕ್ರಮವಾಗಿ ನಿಗದಿಪಡಿಸಬಹುದಾದಂಥ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಸಂದಾಯಮಾಡತಕ್ಕದ್ದು ಮತ್ತು ಆ ಬಗ್ಗೆ ಉಪಬಂದsವನ್ನು ಹಾಗೆ ಮಾಡುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಅವರಿಗೆ ಸಂದಾಯಮಾಡತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 36 and 38




