ಸದಭಿರುಚಿಯ ಚಲನಚಿತ್ರಗಳನ್ನು ನೋಡುವ ಅಭ್ಯಾಸ ಇರುವ ಮತ್ತು ಸಿನೆಮಾಗಳಲ್ಲಿ ಕತೆ/ಸಂದೇಶ/ಜನಪರ ಕಾಳಜಿಯನ್ನು ಬಯಸುವ ಪ್ರೇಕ್ಷಕರು ನೋಡಲೇಬೇಕಾದ ಸಿನೆಮಾ 19.20.21.
ಪೊಲೀಸರ ಸುಳ್ಳು ಆರೋಪಗಳ ಕಾರಣದಿಂದಾಗಿ ಜೈಲು ಪಾಲಾಗಿದ್ದ ಬೆಳ್ತಂಗಡಿ ತಾಲ್ಲೂಕಿನ ಪಶ್ಚಿಮ ಘಟ್ಟಗಳ ಕಾಡುವಾಸಿ ಸಮುದಾಯದ ವಿಠಲ ಮಲೆಕುಡಿಯ ಮತ್ತು ಆತನ ತಂದೆಯ ಬಂಧನ ಹಾಗೂ ಅವರ ನ್ಯಾಯಾಂಗ ಹೋರಾಟದ ನೈಜಘಟನೆಯನ್ನು ಆಧರಿಸಿ ನಿರ್ದೇಶಕ Manso Re ನಿರ್ದೇಶಿಸಿರುವ ಸಿನೆಮಾ ಇದು. ಕನ್ನಡ ನೆಲದ ಕತೆಗಳೇ ನಮ್ಮ ಸಿನೆಮಾಗಳಲ್ಲಿ ಇಲ್ಲ ಎನ್ನುವ ಕೊರಗಿನ ಸಂದರ್ಭದಲ್ಲಿ ಬಂದಿರುವ ಈ ಸಿನೆಮಾ, ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಇಂತಹ ಸಿನೆಮಾಗಳು ಹೆಚ್ಚಾಗಲು ಕಾರಣವೂ ಆಗಬಹುದು.
ಮನ್ಸೋರೆ ಒಬ್ಬ ಸಂವೇದನಾಶೀಲ ಮತ್ತು ಪ್ರತಿಭಾವಂತ ನಿರ್ದೇಶಕ. ಅವರ ಚಿಂತನೆ, ಸಂವೇದನೆ ಮತ್ತು ಕಾಳಜಿಗೆ ಈ ಸಿನೆಮಾದಲ್ಲಿ ನ್ಯಾಯ ಒದಗಿಸಿದ್ದಾರೆ. ಆದರೆ ಬಹುಶಃ ಬಜೆಟ್‌ನ ಒತ್ತಡ ಮತ್ತು ನೈಜಘಟನೆಗೆ ನಿಷ್ಟವಾಗಿ ಇರಬೇಕು ಎನ್ನುವ ಒತ್ತಡಗಳ ಕಾರಣಕ್ಕೆ ಅವರಲ್ಲಿರುವ ಪ್ರತಿಭಾವಂತ ಇಲ್ಲಿ ಹೆಚ್ಚಾಗಿ ಪ್ರಕಟವಾಗಿಲ್ಲ. ಹಾಗಾಗಿಯೇ ಇದು ಒಂದು ಮಾಸ್ ಸಿನೆಮಾ ಆಗುವಲ್ಲಿ ಸೋಲುತ್ತದೆ. ಅತಿಯಾದ ಫ್ಲ್ಯಾಶ್‌ಬ್ಯಾಕ್‌ಗಳ ಬಳಕೆ, ಹಿಂಸೆ ಮತ್ತು ಕ್ರೌರ್ಯವನ್ನು ತೋರಿಸಲು ಬಳಸಿರುವ ಅನಗತ್ಯ ಸಂಯಮ, ಅರೆಬರೆ ಬೆಳಕಿನ ಛಾಯಾಗ್ರಾಹಣ, ಮುಂತಾದವು ಚಿತ್ರಕ್ಕೆ ಸಮಸ್ಯೆ ಆಗಿದೆ. ಆದರೆ ಬಹುತೇಕ ಎಲ್ಲಾ ನಟರ ಅದ್ಭುತ ನಟನೆ, ಆದರಲ್ಲಿಯೂ ಶೃಂಗ, ಮಹದೇವ ಹಡಪದ್, ಪಲ್ಲವಿಯವರ ನಟನೆ ಬಹಳ ಚೆನ್ನಾಗಿದೆ. ಕೊನೆಯ ಅರ್ಧ ಗಂಟೆಯಲ್ಲಿ ಬರುವ ನ್ಯಾಯಾಲಯದ ದೃಶ್ಯ ಮತ್ತು ಸಂಭಾಷಣೆಗೆ ಪ್ರೇಕ್ಷಕರು ಶಿಳ್ಳೆ ಮತ್ತು ಚಪ್ಪಾಳೆ ಹೊಡೆದರು. ಹಿಂಸೆ ಮತ್ತು ನೋವನ್ನು ಮತ್ತಷ್ಟು ಗಾಢವಾಗಿ ತೋರಿಸಿ, ಕಾಲಾನುಕ್ರಮಣಿಕೆಯಲ್ಲಿ ನಿರೂಪಿಸಿ, ಮತ್ತಷ್ಟು crisp ಮಾಡಿದ್ದರೆ ಚಿತ್ರ ಮತ್ತಷ್ಟು ಗಾಢವಾಗುತ್ತಿತ್ತು. ಇವೆಲ್ಲದರ ಹೊರತಾಗಿಯೂ ಒಳ್ಳೆಯ ಸಿನೆಮಾ, ನೋಡಬೇಕಾದ ಸಿನೆಮಾ.
ನೈಜ ಘಟನೆ ಆಧಾರಿತ ಸಿನೆಮಾಗಳಿಗೆ Erin Brockovich ಒಳ್ಳೆಯ ಮಾದರಿ. ಮೂಲ ಹೆಸರುಗಳನ್ನೇ ಬಳಸುವುದರಿಂದ ಹಿಡಿದು, ಕತೆಯ ನಿರೂಪಣೆಯ ವಿಚಾರದಲ್ಲಿ ಒಂದಷ್ಟು ಸ್ವಾತಂತ್ರ್ಯವನ್ನೂ ತೆಗೆದುಕೊಂಡರೆ ಮಾತ್ರ ಇಂತಹ ಚಿತ್ರವನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೆ ತಲುಪಿಸಲು ಸಾಧ್ಯವಾಗುತ್ತದೆ.
ಜನರ ಹಕ್ಕುಗಳ ಬಗ್ಗೆ ಮಾತನಾಡುವ ಇಂತಹ ಚಿತ್ರಗಳು ಹೆಚ್ಚೆಚ್ಚು ಬರಬೇಕು. ಜನರಿಗೆ ಕೇವಲ ಮನರಂಜನೆ ಅಥವ ಕಾಲಹರಣ ಮಾತ್ರವಲ್ಲದೆ ಸಿನೆಮಾಗಳು ಒಂದಷ್ಟು ಅರಿವು ನೀಡಬೇಕು ಮತ್ತು ಸಂವೇದನೆಗಳನ್ನು ರೂಪಿಸಬೇಕು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಬಿಡುಗಡೆಯಾದ ಇದೇ ನಿರ್ದೇಶಕರ “Act 1978” ಒಳ್ಳೆಯ ಪ್ರತಿಕ್ರಿಯೆ ಮತ್ತು ಜನಪ್ರಿಯತೆ ಪಡೆದ ಸಿನೆಮಾ. ಆ ನಿಟ್ಟಿನಲ್ಲಿ ಇದೂ ಸಹ ಮಹತ್ವದ ಸಿನೆಮಾ. ಅದರಂತೆಯೇ ಈಗಾಗಲೇ ಸದಭಿರುಚಿಯ ಪ್ರೇಕ್ಷಕರ ಮೆಚ್ಚುಗೆಯನ್ನೂ ಪಡೆದಿದ್ದು, OTT ವೇದಿಕೆಯಲ್ಲಿ ಈ ಸಿನೆಮಾ ಇನ್ನೂ ಹೆಚ್ಚು ಜನರನ್ನು ಮುಟ್ಟುತ್ತದೆ ಎಂದು ಅನ್ನಿಸುತ್ತದೆ.
KRS ಪಕ್ಷದ ಸೈನಿಕರು ಸಾಧ್ಯವಾದರೆ ಆದಷ್ಟು ಬೇಗ ಥಿಯೇಟರ್‌ನಲ್ಲಿ ಈ ಸಿನೆಮಾ ನೋಡಿ. ಈಗಾಗಲೇ ಕಾಗಕ್ಕ-ಗುಬ್ಬಕ್ಕ ಕತೆಗಳನ್ನು ಹೆಣೆದು ನಮ್ಮ ಮೇಲೆ ಹತ್ತಾರು ಕೇಸುಗಳನ್ನು ಹಾಕಿರುವ ಪೊಲೀಸರಿಗೆ ನಾವು ಯಾವ ಸಂದರ್ಭದಲ್ಲಿ ಯಾವ ಡೈಲಾಗ್ ಹೊಡೆಯಬೇಕು ಎನ್ನುವುದು ಇಲ್ಲಿದೆ.
ಒಳ್ಳೆಯ ಕತೆ ಇರುವ ಚಿತ್ರಗಳಿಗೆ ಹಣ ಹೂಡುವ ಮಾನಸಿಕ ಶ್ರೀಮಂತಿಕೆ ಇರುವ ಹಣವಂತರ ತೀವ್ರಕೊರತೆ ನಮ್ಮಲ್ಲಿದೆ. ಕೆಲವು ನಿರ್ದೇಶಕರಿಗೆ ಇರುವ social support system ನಿರ್ದೇಶಕ ಮನ್ಸೋರೆ’ಗೆ ಇದ್ದಂತಿಲ್ಲ. ಆದಾಗ್ಯೂ, ತಮ್ಮ ಪ್ರತಿಭೆಗೆ ಪೂರಕವಾಗಿ ತಮ್ಮ ಆಯಾಮಗಳನ್ನು ವಿಸ್ತರಿಸಿಕೊಳ್ಳಲು ಈಗವರು ಒಳ್ಳೆಯ ಕತೆ ಮತ್ತು ದೊಡ್ಡ ತಾರಾಗಣ ಇರುವ ಮಾಸ್ ಸಿನೆಮಾ ನಿರ್ದೇಶಿಸಬೇಕು. ಜನಪರ ಕಾಳಜಿಯುಳ್ಳ ಒಳ್ಳೆಯ ಸಿನೆಮಾ ಮಾಡುವ ತೃಪ್ತಿಯ ಜೊತೆಗೆ ಮಹತ್ವಾಕಾಂಕ್ಷಿಯೂ ಆಗಬೇಕು.
ಆದರೆ ಇಂತಹುದಕ್ಕೆ ಸ್ಪಂದಿಸುವ ಎಷ್ಟು ಜನ ನಿರ್ಮಾಪಕರು ನಮ್ಮಲ್ಲಿ ಇದ್ದಾರೆ? ಈ ದಾರಿದ್ರ್ಯದ ಬಗ್ಗೆ ನಾನು ಎರಡು ದಶಕದ ಹಿಂದೆಯೇ ಬರೆದಿದ್ದೆ. ಈಗಲೂ ಆ ದಾರಿದ್ರ್ಯ ತೊಲಗಿಲ್ಲ. ಮುಂದಾದರೂ ತೊಲಗಲಿ.
ಇಲ್ಲಿ ಲಗತ್ತಿಸಿರುವ ಚಿತ್ರದ ಕುರಿತು:
ನೆನ್ನೆ ಈ ಸಿನೆಮಾವನ್ನು ನೋಡಲು ನಾನು ಮತ್ತು KRS ಪಕ್ಷದ ಯುವ ಘಟಕದ ಅಧ್ಯಕ್ಷ Raghu Janagere ಬೆಂಗಳೂರಿನ ವೀರೇಶ್ ಚಿತ್ರಮಂದಿರಕ್ಕೆ ಹೋದಾಗ ಅಲ್ಲಿಗೆ ಪತ್ರಕರ್ತ ಮಿತ್ರರಾದ Naveen Soorinje ಮತ್ತು Irshad Uppinangady ಬಂದಿದ್ದರು. ಈಗಾಗಲೇ ಸಿನೆಮಾ ನೋಡಿದ್ದ ಅವರು ಮತ್ತೊಬ್ಬ ಪತ್ರಕರ್ತರಿಗೆ ಕಂಪನಿ ಕೊಡಲು ಬಂದಿದ್ದರು. ಈ ಸಿನೆಮಾದಲ್ಲಿ ಬರುವ ಪತ್ರಕರ್ತ ನವೀನ್ ಸೂರಿಂಜೆಯೆ. ಸಿನೆಮಾ ನೋಡಿ ಹೊರಬಂದಾಗ ನಿರ್ದೇಶಕ ಮನ್ಸೋರೆ ಸಹ ಸಿಕ್ಕರು. ಬಹಳಷ್ಟು ಮಾತುಕತೆ ಆಯಿತು. ಆಗ ತೆಗೆಸಿಕೊಂಡ ಚಿತ್ರ ಇದು.
– ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ, ಅಧ್ಯಕ್ಷ



