ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಸಂಬಂಧ ಕೇಂದ್ರ ಸರ್ಕಾರ ಹೊಸ ವಿವಾದ ಒಂದರಲ್ಲಿ ಸಿಲುಕಿಕೊಂಡಿತ್ತು. 2,000 ಮತ್ತು 500 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣ ಕಾರ್ಯ ನಡೆದ ಸಂದರ್ಭದಲ್ಲಿ ರಘುರಾಮ್ ರಾಜನ್ ಅವರು ಆರ್ಬಿಐ ಗವರ್ನರ್ ಆಗಿದ್ದರು. ಆದರೆ, ನೋಟುಗಳಲ್ಲಿ ನೂತನ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇತ್ತು. ಈ ಕುರಿತು ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿ, ರಘುರಾಮ್ ರಾಜನ್ ಅವಧಿಯಲ್ಲೇ ಹೊಸ ನೋಟುಗಳನ್ನು ಮುದ್ರಿಸಲಾಗಿತ್ತು ಎಂದಿತು.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿಯವರು 8 ನವೆಂಬರ್ 2016ರ ರಾತ್ರಿ 8 ಗಂಟೆಗೆ ಘೋಷಿಸಿದ್ದರು. ಹೊಸ ಗವರ್ನರ್ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಿ ಕೇವಲ 2 ತಿಂಗಳಾಗಿತ್ತು. ಆದರೂ ಅವರ ಸಹಿ ಇರುವ 2,000 ಮತ್ತು 500ರ ಹೊಸ ನೋಟುಗಳು ಅಕ್ಟೋಬರ್ 10ರಂದು ದೇಶದ ಎಲ್ಲ ಬ್ಯಾಂಕುಗಳಿಗೆ ಚಲಾವಣೆಗೆ ಬಂದಿದ್ದವು.
ಈ ಕುರಿತು ಆರ್ಬಿಐ ಮತ್ತು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರಘುರಾಮ್ ರಾಜನ್ ಅವರು ಗವರ್ನರ್ ಆಗಿದ್ದ ಅವಧಿಯಲ್ಲಿ ಮುದ್ರಣವಾಗಿರುವ ನೋಟುಗಳಲ್ಲಿ, ಅವರ ಸಹಿ ಏಕಿಲ್ಲ ಎಂದು ಕೇಳಲಾದ ಪ್ರಶ್ನೆಗೆ ಇದುವರೆಗೆ ಉತ್ತರ ಲಭ್ಯವಾಗಿಲ್ಲ. ಇದೇ ಪ್ರಶ್ನೆಯನ್ನು ರಾಜನ್ ಅವರಿಗೂ ಕಳುಹಿಸಲಾಗಿತ್ತು. ಆದರೆ ಅವರು ಕೂಡ ಈ ಕುರಿತು ಪ್ರತಿಕ್ರಿಯಿಸಲಿಲ್ಲ. ಆದರೆ, ಹಿಂದುಸ್ತಾನ್ ಟೈಮ್ಸ್, ರಾಜನ್ ಅವರ ಅವಧಿಯಲ್ಲೇ ಊರ್ಜಿತ್ ಪಟೇಲ್ ಅವರ ಸಹಿ ಇರುವ ನೋಟುಗಳನ್ನು ಮುದ್ರಿಸಲಾಗಿದೆ. ಹಣಕಾಸು ಸಂಸದೀಯ ಸಮಿತಿ ಹೊಸ 2,000 ನೋಟುಗಳನ್ನು ಮುದ್ರಿಸಲು ಜೂನ್ 7, 2016ರಂದು ಅನುಮತಿ ಪಡೆದಿದೆ. ಅಲ್ಲದೇ, ಆರ್ಬಿಐನ ನೋಟು ಮುದ್ರಣ ಘಟಕಗಳಿಗೆ ಜೂನ್ 2016ರಲ್ಲೆ ಹೊಸ ನೋಟುಗಳನ್ನು ಮುದ್ರಿಸಲು ಸೂಚನೆ ನೀಡಲಾಗಿದೆ. ಈ ಕುರಿತು ತಮ್ಮ ಬಳಿ ಅಧಿಕೃತ ಪತ್ರವಿದೆಯೆಂದು ವರದಿ ಮಾಡಿತ್ತು. ಜೊತೆಗೆ ಹೊಸ 500 ರೂ. ಮುಖಬೆಲೆಯ ಮರುವಿನ್ಯಾಸದ ನೋಟುಗಳ ಮುದ್ರಣವನ್ನು ನವೆಂಬರ್ 23, 2016ರಲ್ಲಿ ಆರಂಭಿಸಲಾಗಿದೆ ಎಂದು ಬಿಆರ್ಬಿಎನ್ಎಂಪಿಎಲ್ ತಿಳಿಸಿದೆ ಎಂದು ಪತ್ರಿಕೆ ವರದಿ ಹೇಳಿತ್ತು.
ಸಾಮಾನ್ಯವಾಗಿ ಆರ್ಬಿಐ ಹೊಸ ನೋಟುಗಳನ್ನು ಮುದ್ರಿಸಲು ಆದೇಶ ನೀಡಿದ ತಕ್ಷಣ ಮುದ್ರಣ ಘಟಕಗಳಲ್ಲಿ ಮುದ್ರಣ ಕಾರ್ಯ ಆರಂಭವಾಗುತ್ತದೆ. ಇನ್ನು 2,000 ಮತ್ತು 500ರ ಮುಖಬೆಲೆಯ ನೋಟುಗಳ ಮುದ್ರಣ ಕಾರ್ಯ, ಊರ್ಜಿತ್ ಅವರು ಆರ್ಬಿಐ ಗವರ್ನರ್ ಆಗುವ ಎರಡೂವರೆ ತಿಂಗಳ ಮೊದಲೇ ಅಂದರೆ, ಆಗಸ್ಟ್ 22ರಂದು ಮುದ್ರಣ ಕಾರ್ಯ ಆರಂಭವಾಗಿದೆ ಎಂಬ ಮಾಹಿತಿ ಬಹಿರಂಗವಾಗಿತ್ತು.
ಮೊದಲು ಆರ್ಬಿಐ ನೋಟು ಮುದ್ರಣ ವಿಷಯದಲ್ಲಿ ಭದ್ರತೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಅನಂತರ ಅದನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ನಿಯಮಿತದ (ಬಿಆರ್ಬಿಎನ್ಎಂಪಿಎಲ್) ಮಂಡಳಿಯಲ್ಲಿಟ್ಟು ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಆರ್ಬಿಐನ ಮಾಜಿ ಸದಸ್ಯ ವಿಪಿನ್ ಮಲಿಕ್ ಮಾಹಿತಿ ನೀಡಿದ್ದರು. ಸರ್ಕಾರ ಮತ್ತು ಆರ್ಬಿಐಗಳೆರೆಡೂ ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಕುರಿತ ವಿವರವನ್ನು ನೀಡಲು ವಿಫಲವಾಗಿವೆ.
– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ




