ಬಿಹಾರ ರಾಜ್ಯದ ಸಮಸ್ಥಿಪುರದ ಜಿಲ್ಲೆಯಲ್ಲಿ 100 ವರ್ಷಗಳ ಹಿಂದೆ ಬಾಲಕನೊಬ್ಬ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾನೆ. ಇವರು ಕಡುಬಡತನದ ಕುಟುಂಬ ಕ್ಷೌರಿಕ ಸಮಾಜಕ್ಕೆ ಸೇರಿದವರು. ಬಾಲಕನ ತಂದೆ ಸಂತೋಷದಿಂದ ತನ್ನ ಮಗನನ್ನ ಕರೆದುಕೊಂಡು ಊರಿನ ಪ್ರಮುಖರ ಮುಂದೆ ನಿಲ್ಲಿಸಿ ನನ್ನ ಮಗ ಪ್ರಥಮ ದರ್ಜೆಯಲ್ಲಿ ಮೆಟ್ರಿಕ್ಯೂಲೇಷನ್ ಪಾಸಾಗಿದ್ದಾನೆ ಎಂದು ಹೇಳಿಕೊಂಡು ಹಿರಿಯರ ಮಾತಿಗಾಗಿ ನಿರೀಕ್ಷಿಸುತ್ತಾನೆ.
ಇದಕ್ಕೆ ಪ್ರತಿಯಾಗಿ ಊರಿನ ಪ್ರಮುಖ “ಏನು ಓದಿದರೇನು ನಮ್ಮ ಕಾಲು ಒತ್ತಿಕೊಂಡು ನಮ್ಮ ಸೇವೆ ಮಾಡಿಕೊಂಡು ಬಿದ್ದಿರಬೇಕಷ್ಟೆ” ಎಂದು ವ್ಯಂಗ್ಯದಿಂದ ಮಾತನಾಡುತ್ತಾರೆ.
ಈ ಒಂದು ಮಾತು ಬಾಲಕನ ಮನಸ್ಸಿನ ಮೇಲೆ ಪರಿಣಾಮ ಬೀರಿ ತನ್ನ ಸಾಧನೆ, ತನ್ನ ಸೇವೆ ಹೋರಾಟದ ಮೂಲಕ ಬಿಹಾರ ರಾಜ್ಯದ ಚರಿತ್ರೆಯಲ್ಲಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿದ ನಾಯಕನಾಗುತ್ತಾರೆ. ಈ ಬಾಲಕ ಮತ್ತಾರು ಅಲ್ಲ ಬಿಹಾರದ ಮಾಜಿ ಮುಖ್ಯಮಂತ್ರಿ ಜನನಾಯಕ ಕರ್ಪೂರಿ ಠಾಕೂರ್.
ದಿನಾಂಕ: 24-01-1924ರಲ್ಲಿ ಬಿಹಾರ ಜಿಲ್ಲೆಯ ಸಮಸ್ಥಿಪುರದ ಪಿತೋಜಿಯ ಎಂಬ ಗ್ರಾಮದಲ್ಲಿ ಜನಿಸಿದಂತಹ ಕರ್ಪೂರಿ ಠಾಕೂರ್ ಅವರು ದಿನಾಂಕ: 17-02-1988ರಲ್ಲಿ ನಿಧನರಾಗಿರುತ್ತಾರೆ. ಇವರು ಅತ್ಯಂತ ಹಿಂದುಳಿದ ವರ್ಗದ ಸಮಾಜಕ್ಕೆ ಸೇರಿದವರಾಗಿದ್ದರು.
ಇವರ ತಂದೆ ಜೀವನ ನಿರ್ವಹಣೆಗೆ ಕ್ಷೌರಿಕ ವೃತ್ತಿಯನ್ನು ಅವಲಂಬಿಸಿದ್ದರು. ಕಡುಬಡತನದಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ಮಾಸಲು ಬಟ್ಟೆ ಧರಿಸುತ್ತಾ ಪ್ರತಿದಿನ ಆರು ಕಿಲೋ ಮೀಟರ್ ನಡೆದುಕೊಂಡು ಮೆಟ್ರಿಕ್ಯೂಲೇಷನ್ ಪಡೆದಂತಹ ಇವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ.
ಇವರ ಹಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಪ್ರಮುಖ ಭಾಷಣಕಾರರಾಗಿ ಬರಬೇಕಾಗಿದ್ದ ಸಮಾಜವಾದಿ ನಾಯಕರಾದ ರಮಾನಂದನ್ ಮಿಶ್ರರವರು ಸಭೆಗೆ ತಡವಾಗಿ ಆಗಮಿಸಿದ ಕಾರಣದಿಂದ ಸ್ನೇಹಿತರ ಒತ್ತಾಯದ ಮೇರೆಗೆ ಅವರು ಬರುವ ತನಕ ಭಾಷಣವನ್ನು ಮಾಡಲು ಕರ್ಪೂರಿರವರಿಗೆ ಒತ್ತಾಯಿಸುತ್ತಾರೆ. ಇವರ ಅದ್ಭುತವಾದ ಭಾಷಣಕ್ಕೆ ನೆರೆದ ಮಂದಿ ಚಪ್ಪಾಳೆ ತಟ್ಟಿ ಅಭಿನಂದಿಸುತ್ತಾರೆ. ಭಾಷಣ ನಡೆಯುವ ವೇಳೆಯಲ್ಲಿ ಸಭೆಗೆ ಆಗಮಿಸಿದ ರಮಾನಂದನ್ ಮಿಶ್ರರವರು ಈ ಯುವಕನ ಭಾಷಣವನ್ನು ಕೇಳಿ ಸಂತೋಷಗೊಂಡು ನೀನು ಮುಂದಿನ ಪೀಳಿಗೆಯ ನಾಯಕ ಎಂದು ಹೇಳುತ್ತಾ ಇಂದಿನಿಂದ ಕರ್ಪೂರಿ ಕಾಕೂರ್ ಎಂದು ಕರೆಯಲ್ಪಡುತ್ತಾರೆ.
ಇವರು ಹುಟ್ಟಿದ ಹಳ್ಳಿ ನೂರಾರು ಮನೆಗಳು ಇದ್ದರೂ ಸಹ ಮೇಲ್ವರ್ಗದ ಜನ ಹಿಂದುಳಿದ ಮತ್ತು ದಲಿತ ಸಮುದಾಯದ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿದ್ದರು. ಇವರ ಮನೆಗಳ ಮುಂದೆ ಹೋಗುವ ಹಾಗಿಲ್ಲ, ಸೈಕಲ್ ಇದ್ದರೂ ಸೈಕಲ್ನಲ್ಲಿ ಹೋಗುವ ಹಾಗಿಲ್ಲ, ವಿದ್ಯೆ ಕಲಿಯುವ ಹಾಗಿಲ್ಲ. ಇಂತಹ ಶೋಷಣೆಯ ವ್ಯವಸ್ಥೆಯ ನಡುವೆ ಬೆಳೆದವರು ಇವರಾಗಿರುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಉಪಾಧ್ಯಾಯರಾಗಿ ಕೆಲವು ವರ್ಷಗಳ ಕಾಲ ದುಡಿದಿರುತ್ತಾರೆ. ಲೋಹಿಯಾರವರ ವಿಚಾರಧಾರೆಗಳಿಗೆ ಪ್ರಭಾವಿತರಾಗಿ ಸಮಾಜವಾದಿ ಕಾರ್ಯಕರ್ತರಾಗಿ, ನಾಯಕರಾಗಿ ಹಂತ ಹಂತವಾಗಿ ಬೆಳೆದ ಇವರು 1952 ರಿಂದ ಸತತವಾಗಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಒಂದು ಬಾರಿ ಲೋಕಸಭಾ ಸದಸ್ಯರು ಆಗಿ ಆಯ್ಕೆಯಾಗಿರುತ್ತಾರೆ.
ಕರ್ಪೂರಿ ಕಾಕೂರ್ರವರಿಗೆ ಬಿಹಾರದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಜೊತೆಗೆ ಶಿಕ್ಷಣ ಸಚಿವರಾಗಿ ದುಡಿಯುವ ಅವಕಾಶ ದೊರೆತ ಸಂದರ್ಭದಲ್ಲಿ ತಮ್ಮ ರಾಜ್ಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಳ್ಳಾಗಿದ್ದ ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿ ಕಲಿಯುವ ಪದ್ಧತಿಯನ್ನು ರದ್ದುಮಾಡಿ ಗ್ರಾಮೀಣ ಪ್ರದೇಶ ಮತ್ತು ಹಿಂದುಳಿದ ವರ್ಗದ ಮಕ್ಕಳಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಇದ್ದ ಭಯವನ್ನು ನಿವಾರಿಸಿದರು.
ಇವರು ಮುಖ್ಯಂತ್ರಿಯಾಗಿ 1970 ರಿಂದ 1971ರ ಅವಧಿಯಲ್ಲಿ ಮತ್ತು 1977 ರಿಂದ 1979ರ ಅವಧಿಯಲ್ಲಿ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಈ ಸಂದರ್ಭದಲ್ಲಿ ಇವರು ಮಾಡಿದ ಹಲವಾರು ಕಾರ್ಯಗಳು ಇವರನ್ನು ಇಂದಿಗೂ ಬಿಹಾರದ ಜನತೆ ಸ್ಮರಿಸುವಂತೆ ಮಾಡಿದೆ. ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ದುಡಿಯುವ ಜನರ ಆರ್ಥಿಕ ಅವನತಿಗೆ ಕಾರಣವಾಗಿದ್ದ ಮದ್ಯವನ್ನು ನಿಷೇಧಿಸಿ ಹೆಣ್ಣುಮಕ್ಕಳ ಮುಖದಲ್ಲಿ ಭರವಸೆಯನ್ನು ಮೂಡಿಸಿದರು.
ಪ್ರಥಮ ಬಾರಿಗೆ ಆಯೋಗವನ್ನು ರಚಿಸಿ ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ನೀಡಿದರು. ಆಡಳಿತದಲ್ಲಿ ಪ್ರಾಮಾಣಿಕತೆಯನ್ನು ಮೆರೆದರು. ಭೂ ರಹಿತರ ಪರವಾಗಿ ಕ್ರಾಂತಿಕಾರಿ ಕಾನೂನುಗಳನ್ನು ರೂಪಿಸಿದರು. ಇವರು ಅನೇಕ ಹಿಂದುಳಿದ ವರ್ಗದ ಮತ್ತು ದಲಿತ ನಾಯಕರ ಬೆಳವಣಿಗೆಗೆ ಕಾರಣಕರ್ತರಾದರು.
ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಹೀಗೆ ಅನೇಕ ನಾಯಕರು ಇವರ ಮಾರ್ಗದರ್ಶನದಲ್ಲಿ ಬೆಳೆದರು.
ಬಡತನವನ್ನು ಅಪ್ಪಿಕೊಂಡಿದ್ದ ಇವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಸಾಧಾರಣವಾದ ಜೀವನವನ್ನು ನಡೆಸುತ್ತಿದ್ದರು. ತಮ್ಮ ಉಡುಗೆ, ತೊಡುಗೆಯಲ್ಲಿ ಎಂದು ಸಹ ಆಡಂಬರವನ್ನು ತೋರಲಿಲ್ಲ. ಅದೆಷ್ಟೋ ಬಾರಿ ಇವರು ಧರಿಸುತ್ತಿದ್ದ ಬಟ್ಟೆ ಮಾಸಿರುತ್ತಿತ್ತು. ಹರಿದಿರುತ್ತಿತ್ತು, ಕಾಲಿನ ಚಪ್ಪಲಿ ಕಿತ್ತು ಹೋಗಿರುತ್ತಿತ್ತು. ಇವರು ಮುಖ್ಯಮಂತ್ರಿಯಾದರೂ ಸಹ ಇವರ ತಂದೆ ಮಗನಿಂದ ಏನನ್ನೂ ನಿರೀಕ್ಷಿಸದೆ ರಾಜ್ಯದ ಜನರಿಗೆ ಒಳಿತನ್ನು ಮಾಡಲೆಂದು ಬಯಸುತ್ತಾ ಸಾಧಾರಣವಾದ ಬದುಕು ಎಂದರೆ ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಜೀವನ ನಡೆಸಿದ್ದಾರೆ.
ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಹರಿದ ಚಪ್ಪಲಿಯನ್ನು ಧರಿಸುತ್ತಾ, ಮಾಸಿದ ರೂಮಾಲನ್ನು ಸುತ್ತಿಕೊಂಡು ಗುಡಿಸಿಲಿನ ವಾಸವನ್ನು ಮಾಡಿದ್ದಾರೆ. ಕರ್ಪೂರಿ ಠಾಕೂರ್ರವರ ನಿರ್ಧಾರದಿಂದಾಗಿ ಬಿಹಾರದಲ್ಲಿ ಹಿಂದುಳಿದ ವರ್ಗ ಮತ್ತು ಶೋಷಿತ ಜನರ ಪ್ರಮುಖ ವಾಹಿನಿಗೆ ಬರುವಂತಾದರು.
ಇವರನ್ನು ಬಿಹಾರದ ಜನತೆ ಜನನಾಯಕ ಎಂದು ಕರೆಯುತ್ತಾರೆ. ಇವರ ನಿಧನದ ನಂತರ ಇವರು ಹುಟ್ಟಿದ ಪಿತೋಜಿಯ ಗ್ರಾಮ ಕರ್ಪೂರಿ ಠಾಕೂರ್ ಗ್ರಾಮವಾಗಿ ಮರುನಾಮಕರಣವಾಯಿತು. ಇವರ ಹೆಸರಿನಲ್ಲಿ ಪ್ರತಿಮೆಗಳು ಅನಾವರಣಗೊಂಡವು, ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ನಿರ್ಮಾಣವಾದವು.
ದೇಶದ ಬಹುತೇಕ ಸಮಾಜವಾದಿ ನಾಯಕರಿಗೆ ಇವರ ಬದುಕು ಸ್ಫೂರ್ತಿಯಾಯಿತು. ಸಮಾಜವಾದದ ವಿಚಾರವನ್ನು ಮಾತನಾಡಿದಷ್ಟು ಸುಲಭವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕಠಿಣವಾದಂತಹ ಬದ್ಧತೆಯ ಸಮಾಜವಾದಿ ನಾಯಕರಾದ ಕರ್ಪೂರಿ ಠಾಕೂರ್ರವರ ಶತಮಾನೋತ್ಸವ ಸಮಾರಂಭ ಕರ್ನಾಟಕದಲ್ಲಿ ನಡೆಯುತ್ತಿದೆ.
– ಕೆ.ಎಸ್. ನಾಗರಾಜ್, ಬೆಂಗಳೂರು




