10 ದಿನಗಳಲ್ಲಿ ಮೂರು ಬಾರಿ ಏರಿಕೆ; ಬೆಂಗಳೂರಿನಲ್ಲಿ ಪೆಟ್ರೋಲ್ ₹107 ದಾಟಿ ಜನರಿಗೆ ಬೆಲೆ ಶಾಕ್

4 months ago

ಬೆಂಗಳೂರು: ರಾಜ್ಯದಲ್ಲಿ ಇಂಧನ ದರ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 10 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವು ಸತತ ಮೂರು ಹಂತಗಳಲ್ಲಿ ಏರಿಕೆಯಾಗಿದೆ. ಒಟ್ಟಾರೆ ಪ್ರತಿ ಲೀಟರ್‌ಗೆ ಸುಮಾರು ₹5ರವರೆಗೆ ಹೆಚ್ಚಳವಾಗಿರುವುದು ವಾಹನ ಸವಾರರ ಕಂಗಾಲಿಗೆ ಕಾರಣವಾಗಿದೆ.

ಮೊದಲ ಹಂತವಾಗಿ ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸುಮಾರು ₹3ರಷ್ಟು ಏರಿಕೆ ಮಾಡಲಾಗಿತ್ತು. ಬಳಿಕ ಮೇ 19ರಂದು ಮತ್ತೆ ಸುಮಾರು 90 ಪೈಸೆ ಹೆಚ್ಚಳವಾಗಿತ್ತು. ಇದೀಗ ಮೇ 23ರಂದು ಮತ್ತೊಮ್ಮೆ ಪೆಟ್ರೋಲ್ ದರದಲ್ಲಿ 87 ಪೈಸೆ ಹಾಗೂ ಡೀಸೆಲ್ ದರದಲ್ಲಿ 91 ಪೈಸೆ ಏರಿಕೆ ಮಾಡಲಾಗಿದೆ.

ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರವು ₹107.15 ರಿಂದ ₹107.16 ಪ್ರತಿ ಲೀಟರ್‌ಗೆ ತಲುಪಿದ್ದು, ಡೀಸೆಲ್ ದರ ₹95.04 ಪ್ರತಿ ಲೀಟರ್ ಆಗಿದೆ. ಸತತ ದರ ಏರಿಕೆಯಿಂದ ದಿನನಿತ್ಯ ವಾಹನ ಬಳಸುವ ಸಾಮಾನ್ಯ ಜನತೆ ಹಾಗೂ ಸಾರಿಗೆ ಕ್ಷೇತ್ರದ ಮೇಲೂ ಹೆಚ್ಚುವರಿ ಹೊರೆ ಬೀಳುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ರೂಪಾಯಿ ಮೌಲ್ಯದ ಕುಸಿತ ಇಂಧನ ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.

ಇದೇ ವೇಳೆ, ಪಂಚರಾಜ್ಯ ಚುನಾವಣೆಗಳ ಮುನ್ನ ಕೇಂದ್ರ ಸರ್ಕಾರ ಇಂಧನ ದರ ಏರಿಕೆ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಇದೀಗ ಕೇವಲ 10 ದಿನಗಳಲ್ಲೇ ಮೂರು ಬಾರಿ ದರ ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇನ್ನೂ ಎಷ್ಟು ಬಾರಿ ಬೆಲೆ ಏರಿಕೆ ಆಗುತ್ತದೋ ಎಂಬ ಭಯ ಜನರಲ್ಲಿ ಮನೆ ಮಾಡಿದೆ” ಎಂದು ವಾಹನ ಸವಾರರು ಅಸಮಾಧಾನ ಹೊರಹಾಕಿದರು.

ಇಂಧನ ದರ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply