ದಿ.20-12-2023 ಸಾಯಂಕಾಲ 7- 8 ಘಂಟೆ ಸುಮಾರಿಗೆ ಚನ್ನಮ್ಮ ಹಳ್ಳೀಕೇರಿ ತಮ್ಮ ವೃದ್ಧಾಪ್ಯದಿಂದ ನಾಗಪೂರ ಪವನಾರ ಆಶ್ರಮದಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಹಾವೇರಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಡಿನ ನಾಯಕರಾಗಿದ್ದ ಗುದ್ಲೆಪ್ಪ ಹಳ್ಳೀಕೇರಿ ಅವರ ಮೊಮ್ಮಗಳು ಈ ಚನ್ನಮ್ಮ ನವರು. ಕರ್ನಾಟಕ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯಾ ನಂತರ ವಿಧಾಯಕ ಕಾರ್ಯಮಾಡಿದರು.
ನಾಗಪುರ ಪವನಾರ ವಿನೋಬಾಜಿ ಆಶ್ರಮದಲ್ಲಿ ವಾಸವಾಗಿ ಕಾಯಕ ಮಾಡಿಯೇ ಬದುಕುತ್ತಿದ್ದರು. ಅವರು ಸೇವಾದಳದ ಕಾರ್ಯಕರ್ತರಾಗಿದ್ದರು. ವಿನೋಬಾಜಿ ಅವರ ಭೂದಾನ ಚಳುವಳಿಯ ಪಾದಯಾತ್ರೆಯಲ್ಲಿ ದೇಶದ ಉದ್ದಗಲಕ್ಕೂ ವಿನೋಬಾಜಿ ಅವರ ಜೊತೆಗೆ ಇವರೂ ಪಾದಯಾತ್ರೆ ಮಾಡಿದ್ದು ವಿಶೇಷವಾದ ಸಂಗತಿ.
ವಿನೋಬಾಜಿಯವರ ತಾಯಿಯ ತವರು ಊರು ಜಮಖಂಡಿ ಆದ ಕಾರಣ ಜಮಖಂಡಿ ಸನಿಹ ಮುಧೋಳ ಹತ್ತಿರ 1982-83ರಲ್ಲಿ ವಾತ್ಸಲ್ಯ ಧಾಮ ಎಂಬ ಆಶ್ರಮ ಆರಂಭಿಸಿದರು. ಸ್ವತಃ ಶಿವಾಜಿ ಭಾವೆ (ವಿನೋಬಾಜಿ ಸಹೋದರ ) ಈ ಆಶ್ರಮದ ಉದ್ಘಾಟನೆಗೆ ಆಗಮಿಸಿದ್ದರು.
ಇವರ ದೇಶ ಸೇವೆ ಮೆಚ್ಚಿ 2013ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಗಾಂಧೀ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇವರ ಕುರಿತು ಗದಗ ತೋಂಟದಾರ್ಯ ಮಠದ ಅಂದಿನ ಪರಮ ಪೂಜ್ಯರಾದ ಜಗದ್ಗುರು ಡಾ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿನಂದನಾ ಗ್ರಂಥ ಸಂಪಾದಿಸಿ ಬಿಡುಗಡೆ ಮಾಡಿದ್ದರು.
ಚನ್ನಮ್ಮ ತಾಯಿ ಸ್ವತಃ ಲೇಖಕರಾಗಿದ್ದರು. “ಕನ್ನಡ ದೇವನಾಗರಿ” ಪತ್ರಿಕೆಯ ಸಂಪಾದಕರಾಗಿದ್ದರು. 21-12-2023 ರಂದು ಮುಂಜಾನೆ ಪವನಾರ ಆಶ್ರಮದ ಸನಿಹದಲ್ಲಿ ಇರುವ ಧಾಮ ನದಿಯ ತಟದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು.
– ಬಸವರಾಜ ಮ ಹಟ್ಟಿಗೌಡರ, ನಿವೃತ್ತ ರಾಜ್ಯ ದಳಪತಿ, ಭಾರತ ಸೇವಾದಳ, ಘಟಪ್ರಭಾ



