ನಕಲಿ ವಹಿವಾಟಿಗೆ ತಡೆ, ಪ್ರತಿಯೊಬ್ಬರ ಆಸ್ತಿ ಮಾಲೀಕತ್ವಕ್ಕೆ ಬಲ: ಕೃಷ್ಣ ಬೈರೇಗೌಡ

10 months ago

ಇ-ಖಾತಾ ಅಭಿಯಾನದಲ್ಲಿ ಸಚಿವರ ಅಭಿಮತ

ಅಭಿಯಾನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ

ಜನರ ಮನೆ ಮನೆಗೆ ತೆರಳಿ ಇ-ಖಾತಾ ಡ್ರಾಫ್ಟ್ ವಿತರಣೆ

ಬ್ಯಾಟರಾಯನಪುರದಲ್ಲಿ 50,000 ಇ-ಖಾತಾ ವಿತರಣೆ

ಬೆಂಗಳೂರು: ಕಷ್ಟಪಟ್ಚು ದುಡಿದ ಯಾರದ್ದೋ ಮನೆ-ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಇನ್ಯಾರೋ ಕಬಳಿಸುವುದನ್ನು ತಪ್ಪಿಸಲು ಹಾಗೂ ಪ್ರತಿಯೊಬ್ಬರ ಆಸ್ತಿ ಮಾಲೀಕತ್ವಕ್ಕೆ ಬಲ ತುಂಬಬೇಕು ಎಂಬ ಏಕೈಕ ಉದ್ದೇಶದಿಂದಲೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.

ಭಾನುವಾರ ಸಹಕಾರ ನಗರ ಮೈದಾನದಲ್ಲಿ ಆಯೋಜಿಸಲಾಗಿದ್ದ ಇ-ಖಾತಾ ಅಭಿಯಾನದಲ್ಲಿ ಮಾತನಾಡಿದ ಅವರು, ಪೇಪರ್ ಖಾತಾ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಯಾರು ಬೇಕಾದರೂ ನಕಲಿ ಖಾತಾ ಸೃಷ್ಟಿಸುವ ಅಪಾಯ ಇತ್ತು. ನಕಲಿ ಖಾತೆಗಳ ಮೂಲಕ ಭೂ ಮಾಫಿಯಾದವರು ಹಲವರ ಆಸ್ತಿಗಳನ್ನು ಲಪಟಾಯಿಸಿರುವ ಉದಾಹರಣೆಗಳೂ ಸಾಕಷ್ಟಿವೆ ಎಂದರು.

ಮಧ್ಯಮ ವರ್ಗದ ಜನ ಕಷ್ಟಪಟ್ಟು ದುಡಿದು ನಗರ ಭಾಗದಲ್ಲಿ ಆಸ್ತಿ ಖರೀದಿಸಿದರೆ, ಅದನ್ನ ಮತ್ಯಾರೋ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವುದನ್ನು ಸರ್ಕಾರ ನೋಡುತ್ತಾ ಕೂರಲಾಗದು. ಅಲ್ಲದೆ, ಇಂತಹ ಸಂದರ್ಭದಲ್ಲಿ ಆಸ್ತಿ ಮಾಲೀಕರ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಅಥವಾ ಮಾರಾಟ ಮಾಡಲು ಮಧ್ಯವರ್ತಿಗಳಿಗೆ ಲಕ್ಷಗಟ್ಟಲೆ ಹಣ ನೀಡಬೇಕಾದ ದುಸ್ಥಿತಿ ಇತ್ತು. ಇದೇ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಇ-ಖಾತಾ ವ್ಯವಸ್ಥೆಯನ್ನ ಜಾರಿಗೆ ತರಲಾಯಿತು ಎಂದರು.

ಒಮ್ಮೆ ಇ-ಖಾತಾ ಪಡೆದುಕೊಂಡರೆ ಆಸ್ತಿ ಮಾಲೀಕತ್ವಕ್ಕೆ ರಕ್ಷಣೆ ದೊರಕಲಿದೆ. ನಕಲಿ ವಹಿವಾಟು ಶಾಶ್ವತವಾಗಿ ಕೊನೆಗೊಳ್ಳಲಿದೆ. ಅಲ್ಲದೆ, ಭವಿಷ್ಯದಲ್ಲಿ ಆಸ್ತಿ ಮಾರಾಟ-ವಹಿವಾಟು ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿಯನ್ನೂ ತಡೆಯಬಹುದಾಗಿದೆ ಎಂದರು.

ನಾವು ಇ-ಖಾತಾ ಜಾರಿಗೆ ತಂದಾಗ ಕೆಲವರು ಟೀಕಿಸಿದ್ದರು. ಇದರಿಂದ ಸರ್ಕಾರದ ಆದಾಯ ಕಡಿತವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದರು. ಆದರೆ, ಸರ್ಕಾರ ಇಂತಹ ಅಕ್ರಮ ವಹಿವಾಟಿನಿಂದ ಹಣ ಮಾಡಬೇಕಾದ ಅಗತ್ಯ ಇದೆಯಾ? ಎಂದು ಪ್ರಶ್ನಿಸಿದರು.

ಸುಳ್ಳು ಸುದ್ದಿಗಳ ವಿರುದ್ಧ ಅಸಮಾಧಾನ: ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಳೆದ 5 ತಿಂಗಳಲ್ಲಿ 150ಕ್ಕೂ ಹೆಚ್ಚು ಇ-ಖಾತಾ ಅಭಿಯಾನ ನಡೆಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ತಮ್ಮ ಕೆಲಸ ಕಾರ್ಯ ಬಿಟ್ಟು 50,000 ಜನರಿಗೆ ಉಚಿತವಾಗಿ ಇ-ಖಾತಾ ಮಾಡಿಕೊಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಇ-ಖಾತಾ ವಿತರಿಸಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಬ್ಯಾಟರಾಯನಪುರ ಪಾತ್ರವಾಗಿದೆ. ಆದರೆ, ವಿಪಕ್ಷದ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಈ ಬಗ್ಗೆಯೂ ಸುಳ್ಳುಸುದ್ದಿ ಹಬ್ಬಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಆಸ್ತಿ ಮಾಲೀಕರಿಂದ ಅವರ ಆಸ್ತಿ ಮಾಹಿತಿ ಪಡೆದು ಲಪಟಾಯಿಸುವುದು ಇ-ಖಾತಾ ಅಭಿಯಾನದ ಉದ್ದೇಶ ಎಂದು ಬ್ಯಾಟರಾಯನಪುರ ಕ್ಷೇತ್ರದ ಕೆಲ ವಿಪಕ್ಷ ನಾಯಕರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬಿಜೆಪಿಗರಿಗಂತು ಸುಳ್ಳು ಸುದ್ದಿ ಹರಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಆದರೆ, ಈ ಸುಳ್ಳನ್ನೂ ನಂಬುವ ಜನರ ಬಗ್ಗೆ ಏನೆಂದು ಹೇಳುವುದು? ಎಂದು ಖೇದ ವ್ಯಕ್ತಪಡಿಸಿದರು.

ಮನೆ ಮನೆಗೆ ತೆರಳಿ ಇ-ಖಾತಾ ವಿತರಣೆ: ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇ-ಖಾತಾ ಅಭಿಯಾನಕ್ಕೂ ಮುನ್ನ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಇ-ಖಾತಾ ಡ್ರಾಫ್ಟ್ ವಿತರಿಸಿದರು. ಕಳೆದ 5 ತಿಂಗಳಿನಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರ ತಂಡ ಬ್ಯಾಟರಾಯನಪುರ ಕ್ಷೇತ್ರದಲ್ಲಿ 50,000ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಮನೆ ಮನೆಗೆ ತೆರಳಿ ಇ-ಖಾತಾ ಮಾಡಿಕೊಟ್ಟಿರುವುದು ವಿಶೇಷ.

Leave a Reply