ನೋಂದಣಿ ತಿದ್ದುಪಡಿ ವಿಧೇಯಕ-2024 ಮಂಡಿಸಿ ಸಚಿವರು
• ಎರಡೂ ಕಡೆಯವರ ಉಪಸ್ಥಿತಿಗೆ ವಿನಾಯಿತಿ
• ತಿದ್ದುಪಡಿಯಲ್ಲಿ ಪೇಪರ್ ಖಾತಾ ನೋಂದಣಿಗೆ ತಡೆ
• ಅಕ್ರಮಗಳಿಗೆ ತಡೆ-ಉತ್ತಮ ಆಡಳಿತಕ್ಕೆ ಒತ್ತು
ಬೆಂಗಳೂರು: ನೋಂದಣಿ ಪ್ರಕ್ರಿಯೆಯಲ್ಲಿ ನಾಗರೀಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶದಿಂದ ನೋಂದಣಿ ತಿದ್ದುಪಡಿ ವಿಧೇಯಕ-2024 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ನೋಂದಣಿ ತಿದ್ದುಪಡಿ ವಿಧೇಯಕ-2024 ಅನ್ನು ಮಂಡಿಸಿ ಮಾತನಾಡಿದ ಅವರು, “ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಆ ಪೈಕಿ ಮೊದಲ ತಿದ್ದುಪಡಿ ಆಸ್ತಿ ಮಾರಾಟಗಾರರು ಹಾಗೂ ಕೊಳ್ಳುವವರು ಇಬ್ಬರ ಉಪಸ್ಥಿತಿಯೂ ಇಲ್ಲದೆ ತಾವಿದ್ದಲ್ಲಿದಂಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಈ ಹಿಂದೆ ಉಪ ನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರ ಉಪಸ್ಥಿತಿ ಅನಿವಾರ್ಯವಾಗಿತ್ತು. ಹೀಗಾಗಿ ಸರ್ಕಾರಿ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ಎಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಜನಸಾಮಾನ್ಯರು ಅನಗತ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಓಡಾಡುವುದನ್ನು ತಪ್ಪಿಸುವ ಸಲುವಾಗಿ ತಾಂತ್ರಿಕ ನೋಂದಣಿಗೆ ಅಂಕಿತ ಹಾಕಲಾಗಿದೆ ಎಂದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ಹೌಸಿಂಗ್ ಬೋರ್ಡ್, ಸ್ಲಂ ಬೋರ್ಡ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಂತಹ ನಂಬಿಕಾರ್ಹ ಮೂಲಗಳ ಸಹಾಯದಿಂದ ನಾಗರೀಕರು ತಾಂತ್ರಿಕವಾಗಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಈ ಹೊಸ ಮಾದರಿ ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂಸಹ ಜನರಿಗೆ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೇಪರ್ ಖಾತಾ ನೋಂದಣಿಗೆ ತಡೆ: ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಹಣ ಸೋರಿಕೆಯನ್ನು ತಡೆಯುವ ಸಲುವಾಗಿ ಪೇಪರ್ ಖಾತಾ ನೋಂದಣಿಗೆ ತಡೆಯೊಡ್ಡಲು ವಿಧೇಯಕದಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸದನದಲ್ಲಿ ತಿಳಿಸಿದರು.
ಸದನಕ್ಕೆ ಈ ಕುರಿತು ಮಾಹಿತಿ ನೀಡಿದ ಅವರು,“ನಗರ ಭಾಗದಲ್ಲಿ ಪೇಪರ್ ಖಾತಾ ಮೂಲಕವೂ ನೋಂದಣಿ ನಡೆಸಲಾಗುತ್ತಿದೆ. ಅನೇಕ ಪ್ರಕರಣಗಳಲ್ಲಿ ನಕಲಿ ಪೇಪರ್ ಖಾತಾ ಬಳಸಿ ನೋಂದಣಿ ಮಾಡುತ್ತಿರುವುದು ತಿಳಿದುಬಂದಿದೆ. ಅಲ್ಲದೆ, ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ರೆವೆನ್ಯೂ ಲೇಔಟ್ಗಳಲ್ಲಿ ಮೂಲ ಮಾರ್ಗಸೂಚಿ ದರವನ್ನೇ ಇಳಿಸಿ ನೋಂದಣಿ ಮಾಡಲಾಗಿತ್ತು. ಪರಿಣಾಮ ಸರ್ಕಾರಕ್ಕೆ 400 ಕೋಟಿ ರೂ. ನಷ್ಟ ಉಂಟಾಗಿತ್ತು ಎಂದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ದರಾಮಯ್ಯನವರು 28 ಜನ ಉಪನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸಿದ್ದರು. ಆದರೆ, ವಿಚಾರಣೆ ನಡೆಸಿದ್ದ ಸಮಿತಿ, ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿರುವುದು ಕಂಡುಬಂದಿಲ್ಲ ಎಂದು ವರದಿ ನೀಡಿದ್ದರು. ಪರಿಣಾಮ ಎಲ್ಲಾ 28 ಜನ ಉಪ ನೋಂದಣಾಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿತ್ತು ಎಂದು ವಿಷಾದಿಸಿದರು.
ಇಂತಹ ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿಯನ್ನು ಅಮಾನತು ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಏಕೆಂದರೆ ಅವರು ಒಂದೇ ದಿನದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಪರಿಣಾಮ ಸರ್ಕಾರದ ಮರ್ಯಾದೆ ಹರಾಜಾಗುತ್ತದೆ. ಹೀಗಾಗಿ ಸಮಸ್ಯೆಯ ಮೂಲವನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡಬೇಕಿದೆ. ಇದೇ ಕಾರಣಕ್ಕೆ ವಿಧೇಯಕದಲ್ಲಿ ಮತ್ತೊಂದು ತಿದ್ದುಪಡಿಯನ್ನು ತರಲಾಗಿದೆ ಎಂದರು.
ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೌಸಿಂಗ್ ಬೋರ್ಡ್ ಹಾಗೂ ಕಾವೇರಿ ಡೇಟಾಬೇಸ್ನಿಂದ ಅಸಲಿ ಖಾತಾ ಪರಿಶೀಲನೆ ನಡೆಸಿದ ನಂತರವೇ ನೋಂದಣಿ ಮುಂದುವರೆಯಲಿದೆ. ಆ ಮೂಲಕ ಇ-ಖಾತಾವನ್ನು ನೀಡಲಾಗುವುದು. ಇಂತಹ ಕ್ರಮಗಳಿಂದ ಅಕ್ರಮಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಸದನಕ್ಕೆ ಮಾಹಿತಿ ನೀಡಿದರು.




