ಮನೆಯಿಂದಲೇ ಇ-ಖಾತಾ ಪಡೆಯಲು ಅವಕಾಶ
ಇ-ಖಾತಾ ಪಡೆಯಲು ಪಾಲಿಕೆಯಿಂದ ಹೆಲ್ಪ್ಡೆಸ್ಕ್
ಮಧ್ಯವರ್ತಿಗಳ ಹಾವಳಿ-ನಕಲಿ ನೋಂದಣಿಗೆ ಶಾಶ್ವತ ಪರಿಹಾರ
ಸಣ್ಣ-ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಯಾವುದೇ ಡೆಡ್ಲೈನ್ ಇಲ್ಲ. ಹೀಗಾಗಿ ಸಾರ್ವಜನಿಕರು ಗಾಬರಿಯಾಗುವ ಅಥವಾ ಆತುರಪಡುವ ಅಗತ್ಯ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬೆನ್ನಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗಧಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡಿರುವ ಘಟನೆ ಗಮನಕ್ಕೆ ಬಂದಿದೆ ಎಂದರು.
ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಸಮಯ ನಿಗದಿ ಮಾಡಿಲ್ಲ. ಹೀಗಾಗಿ ಸಾರ್ವಜನಿರಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಕೊಟ್ಟು ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
ನಕಲಿ ನೋಂದಣಿ ಪ್ರಕರಣಗಳಿಗೆ ತಡೆಯೊಡ್ಡುವ ಸಲುವಾಗಿಯೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಇ-ಖಾತಾ ಪಡೆಯಲು ಆತುರ ಬೇಕಿಲ್ಲ. ನಿವೇಶನಗಳನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆಯಲ್ಲಿ ಮಾತ್ರ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪಾಲಿಕೆಯ ವಿಶೇಷ ಆಯುಕ್ತರ ಜೊತೆ ಚರ್ಚಿಸಿ ಇ-ಖಾತಾ ಪ್ರಕ್ರಿಯೆಯನ್ನೂ ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸೂಕ್ತ ಕ್ರಮ ಜರುಗಿಸಲಾಗಿದೆ ಎಂದರು.
ಮನೆಯಿಂದಲೇ ಪಡೆಯಬಹುದು ಇ-ಖಾತಾ ..!: ಇ-ಖಾತಾ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಬರುವ ಅಗತ್ಯ ಇಲ್ಲ. ಬದಲಾಗಿ ಮನೆಯಿಂದಲೇ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ 21 ಲಕ್ಷ ನಿವೇಶನಗಳಿವೆ. ಈ ನಿವೇಶನಗಳ ಡ್ರಾಪ್ಟ್ಗಳನ್ನು ಬಿಬಿಎಂಪಿ ಈಗಾಗಲೇ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. ಆಸ್ತಿ ಮಾಲೀಕರು ಈ ಡ್ರಾಪ್ಟ್ ಗಳನ್ನು ನೋಡಿ, ಅಗತ್ಯ ದಾಖಲೆಗಳನ್ನು ವೆಬ್ಸೈಟ್ ನಲ್ಲೇ ಲಗತ್ತಿಸುವ ಮೂಲಕ ಯಾವುದೇ ಕಚೇರಿಗೆ ಹೋಗದೆ ಮನೆಯಿಂದಲೇ ಶಾಶ್ವತ ಇ-ಖಾತಾ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಇ-ಖಾತಾ ಹೆಲ್ಪ್ ಡೆಸ್ಕ್: ಇ-ಖಾತಾ ಪಡೆಯುವ ಸಂಬಂಧ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ಗಮನದಲ್ಲಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ತೆರೆಯುವ ಮೂಲಕ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಅವರು ತಿಳಿಸಿದರು.
ಆಸ್ತಿ ಮಾಲೀಕರು ಯಾವುದೇ ಗೊಂದಲವಿಲ್ಲದೆ, ಸುಲಭವಾಗಿ ಇ-ಖಾತಾ ಪಡೆಯುವ ಸಲುವಾಗಿ ತತಕ್ಷಣ ಜಾರಿಯಾಗುವಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಸಹಾಯಕ ಕಂದಾಯ ಅಧಿಕಾರಿ (ARO Office) ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ ಎಂದರು.
ಅಲ್ಲದೆ, ಇ-ಖಾತಾ ಪಡೆಯಲು ಆಸ್ತಿ ಮಾಲೀಕರು ಕೆಲವು ದಾಖಲೆಗಳನ್ನು ನೀಡುವುದು ಅಗತ್ಯವಾಗಿದ್ದು, ಅವುಗಳನ್ನು ʼಬೆಂಗಳೂರು ಒನ್ʼ ಕಚೇರಿಗಳ ಮುಖಾಂತರ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಇ-ಖಾತೆಯನ್ನು ಪಡೆದುಕೊಳ್ಳಬಹುದು. ಮುಂದಿನ ಎರಡು-ಮೂರು ದಿನಗಳಲ್ಲಿ ಬೆಂಗಳೂರು-ಒನ್ ಕಚೇರಿಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ಮಧ್ಯವರ್ತಿಗಳ ಹಾವಳಿ-ನಕಲಿ ನೋಂದಣಿಗೆ ಶಾಶ್ವತ ಪರಿಹಾರ: ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ನಕಲಿ ನೋಂದಣಿಗಳನ್ನು ತಪ್ಪಿಸಿ, ಆಸ್ತಿ ಮಾಲೀಕರ ಮಾಲೀಕತ್ವವನ್ನು ರಕ್ಷಿಸಲು ಇ-ಖಾತಾ ವ್ಯವಸ್ಥೆ ಶಾಶ್ವತ ಪರಿಹಾರ ನೀಡಲಿದೆ ಎಂದರು.
ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದು ನಿಜ. ಆದರೆ, ಆಸ್ತಿ ಮಾಲೀಕರು ಒಂದು ಬಾರಿ ಇ-ಖಾತಾ ಮಾಡಿಸಿಕೊಂಡರೆ ಯಾವ ಮಧ್ಯವರ್ತಿಗಳ ಮುಲಾಜಿಲ್ಲದೆ ಬದುಕಬಹುದು. ಸಾರ್ವಜನಿಕರ ಅನುಕೂಲಕ್ಕಾಗಿಯೇ ಹಲವು ಸವಾಲುಗಳ ನಡುವೆಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದು ನಕಲಿ ನೋಂದಣಿಗಳನ್ನು ತಡೆಯುವುದಕ್ಕೂ ಇದು ಸಹಕಾರಿಯಾಗಲಿದೆ ಎಂದರು.
ಇ-ಖಾತಾ ವ್ಯವಸ್ಥೆಯನ್ನು ಒಂದು ಬಾರಿ ಅನುಷ್ಠಾನ ಮಾಡಿದರೆ, ಇಡೀ ದೇಶದಲ್ಲಿ ಅತ್ಯುತ್ತಮ ಮಾದರಿ ಖಾತಾ ವ್ಯವಸ್ಥೆಯನ್ನು ನೀಡಿದಂತಾಗುತ್ತದೆ. ಸಣ್ಣ ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ ಎಂದರು.




