ನಮ್ಮ ಬಾಲ್ಯದ ದಿನಗಳಲ್ಲಿ ರಾಜಕೀಯ ಚುನಾವಣೆಯಲ್ಲಿ ನಾಡಿನ ತುಂಬಾ ಮನೆ ಮಾತಾಗಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿಯವರು ಈಗಲೂ ಉಪೇಂದ್ರ ಎಂಬ ನಟನ ಮೂಲಕ ಪುನರ್ಜನ್ಮ ಎತ್ತಿದ್ದಾರೆ ಎಂದು ಅನಿಸತೊಡಗಿದೆ.
ಬೆಂಗಳೂರಿನ ಅಕ್ಕಿಪೇಟೆಯಲ್ಲಿ ವರ್ತಕರಾಗಿದ್ದ ರಂಗಸ್ವಾಮಿಯವರು ರಾಜಕೀಯದ ಹುಚ್ಚು ಅಂಟಿಸಿಕೊಂಡು 1967 ರಿಂದ 2004 ರವರೆಗೆ ರಾಜ್ಯಾದ್ಯಂತ ಸತತ 86 ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಗಿನ್ನೀಸ್ ದಾಖಲೆ ಸ್ಥಾಪಿಸಿದರು.
1967 ರಲ್ಲಿ ಪ್ರಥಮ ಬಾರಿಗೆ ಕೆಂಗಲ್ ಹನುಂತಯ್ಯನವರ ವಿರುದ್ಧ ಸ್ಪರ್ಧಿಸಿದ್ದ ಇವರು 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ನಂತರ 2004 ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಎಸ್.ಎಂ. ಕೃಷ್ಣ ವಿರುದ್ಧ ಸ್ಪರ್ಧಿಸಿ ಸತತ ಸೋಲಿನಿಂದ ಕಂಗೆಟ್ಟು ನಿವೃತ್ತಿ ಘೋಷಿಸಿ, ಸನ್ಯಾಸತ್ವವನ್ನು ಸ್ವೀಕರಿಸಿ ಹಂಪಿ ಬಳಿಯ ಅಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ ಬದುಕಿ 2007 ರಲ್ಲಿ ನಿಧನರಾದರು.
ಇವರ ಸಾವಿನ ನಂತರ ಅವರಿಂದ ರಾಜಕೀಯ ದೀಕ್ಷೆ ಸ್ವೀಕರಿಸಿದ ನಟ ಉಪೇಂದ್ರ ಅವರು ಜಾಲತಾಣದಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ. ಅಲ್ಲಿಯೇ ಅಭ್ಯರ್ಥಿಗಳ ಆಯ್ಕೆ, ಸಭೆ ಸಮಾರಂಭ ನಡೆಸಿ, ಮತದಾನದ ಮೂಲಕ ಆಯ್ಕೆಯಾಗಿ ಕರ್ನಾಟಕ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ.
ಮನಸ್ಸಿಗೆ ಬೇಸರಾದಾಗ, ಯಾವುದೇ ಕಾಮಿಡಿ ಷೋಗಳು ಇಲ್ಲವಾದಾಗ ನೀವು ಉಪೇಂದ್ರರ ಮಾತುಗಳನ್ನು ಕೇಳಬಹುದು. ಈ ಕಾರಣಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಒಂದು ಜೋಕ್ ಅಸ್ತಿತ್ವಕ್ಕೆ ಬಂದಿದೆ.
ಯಾವುದಾದರೂ ವಿವಾಹ ಅಥವಾ ಇನ್ನಿತರೆ ಶುಭ ಕಾರ್ಯಗಳಲ್ಲಿ ಯಾರಾದರೂ ಯುವಕ ತಿಕ್ಕು ತಿಕ್ಕಲಾಗಿ ವರ್ತಿಸಿದರೆ ಎಲ್ಲರೂ ಕೇಳುವ ಪ್ರಶ್ನೆಯೆಂದರೆ, ಯಾರ್ಲಾ ಇವನು ಉಪೇಂದ್ರ?
ಚುನಾವಣೆ ನೆಪದಲ್ಲಿ ರಂಗಸ್ವಾಮಿ ಮತ್ತು ಉತ್ತರಾಧಿಕಾರಿ ಉಪೇಂದ್ರ ಇಬ್ಬರೂ ನೆನಪಾದರು.
-ಜಗದೀಶ್ ಕೊಪ್ಪ,ಹಿರಿಯ ಪತ್ರಕರ್ತರು




