ಸಿಡಿದೆದ್ದ ನಾಡಿನ ಸಾಕ್ಷಿ ಪ್ರಜ್ಞೆ ದೇವನೂರು ಮಹಾದೇವು

3 years ago

ನಮ್ಮೆಲ್ಲರ ಪಾಲಿಗೆ ಹಿರಿಯಣ್ಣ ಹಾಗೂ  ಈ ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ದೇವನೂರು ಮಹಾದೇವ  ಅವರನ್ನು ನಾನು ಕಳೆದ ಐವತ್ತು ವರ್ಷಗಳಿಂದ ಅಂದರೆ, ನನ್ನ ಎಸ್.ಎಸ್.ಎಲ್.ಸಿ. ದಿನಗಳಿಂದ ತೀರಾ ಹತ್ತಿರದಿಂದ ಬಲ್ಲೆ.  ತಮ್ಮ ಕಣ್ಣ ಮುಂದಿನ ಅನ್ಯಾಯಗಳನ್ನು ಎಂದೂ ಸಹಿಸಿಕೊಳ್ಳದ ಹಾಗೂ ತಣ್ಣನೆಯ ಧ್ವನಿಯಲ್ಲಿ ಪ್ರತಿಕ್ರಿಯಿಸುತ್ತಿದ್ದ ಅವರದು ಒಂದು ರೀತಿಯಲ್ಲಿ ಸ್ಥಿತಿ ಪ್ರಜ್ಞತೆಯ ಮನಸ್ಸು. ಆವೇಶ ಮತ್ತು ಆಕ್ರೋಶದ ಮಾತುಗಳಿಂದ ಅವರು ಸದಾ ದೂರ ಉಳಿಯುತ್ತಿದ್ದರು.

ಹೇಳಬೇಕಾದ ಕಠೋರ ಸತ್ಯಗಳನ್ನು ಪಕ್ಷ ಮತ್ತು ಸಂಘಟನೆಗಳು ಎಂದು ಬೇಧ ಮಾಡದೆ ಹೇಳುವ ದೃಷ್ಟಿಕೋನದಿಂದ ಅವರು ಎಲ್ಲಾ ಪ್ರಶಸ್ತಿ ಮತ್ತು ಅಧಿಕಾರ, ಸ್ಥಾನಮಾನಗಳಿಂದ ದೂರ ಉಳಿದರು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಲು ನಿಷ್ಕ್ರಿಯವಾದ ಕನ್ನಡ ಸಾಹಿತ್ಯ ಪರಿಷತ್ತು ನೀಡುವ  ಆರು ಲಕ್ಷ ರೂಪಾಯಿಗಳನ್ನು ಒಳಗೊಂಡ ನೃಪತುಂಗ ಪ್ರಶಸ್ತಿಯನ್ನು ನಿರಾಕರಿಸಿದರು( ಈಗ ಏಳು ಲಕ್ಷ ಆಗಿದೆ). ಕನ್ನಡ ಸಾಹಿತ್ಯ ಸಮ್ಮೇಳದ  ಅಧ್ಯಕ್ಷತೆಯ ಪದವಿಯನ್ನು ನಕಲಿ ಶಾಮನ ಪದವಿ ಎಂಬಂತೆ ನೋಡಿ ತಿರಸ್ಕರಿಸಿದರು. ನಮ್ಮನ್ನು ಆಳುವ  ಸರ್ಕಾರಗಳ ಅಡಿಯಾಳು ಆಗಬಾರದೆಂದು  ವಿಧಾನ ಪರಿಷತ್ತಿನ ಸದಸ್ಯ ಪದವಿಯತ್ತ ಎಂದಿಗೂ  ಅವರು ತಿರುಗಿ ನೋಡಲಿಲ್ಲ.

ಏಕೆಂದರೆ ಮಹಾದೇವು ಅವರು ತಮ್ಮ ಜೀವನದುದ್ದಕ್ಕೂ ಬದುಕಿದ್ದು ಹಾಗೂ ಚಿಂತಿಸಿದ್ದು ಹಾಗೆಯೇ. ಅವರನ್ನು ಹತ್ತಿರದಿಂದ ನೋಡುತ್ತಾ, ಒಡನಾಡುತ್ತಾ ಬೆಳೆದ ನನ್ನಂತಹವರಿಗೆ  ಅದು ಆಶ್ಚರ್ಯಕರ ಸಂಗತಿ ಅಲ್ಲ. ಸತ್ಯ ಮತ್ತು ನಿಷ್ಟುರತೆ ಎಂದರೆ ಅದು ದೇವನೂರು ಎಂಬುದು ನಮಗೆಲ್ಲರಿಗೂ ಗೊತ್ತು. 1975 ರಲ್ಲಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಏರಿದಾಗ ಮೈಸೂರಿನಲ್ಲಿ ದೇವನೂರು, ಆಲನಹಳ್ಳಿ, ಕೆ.ರಾಮದಾಸ್ ಮತ್ತು  ಡಾ.ಬೆಸಗರಹಳ್ಳಿ ರಾಮಣ್ಣ, ನಾಗವಾರ ,  ಶಿವರಾಮು ಕಾಡನಕುಪ್ಪೆ ಮುಂತಾದ ಹಿರಿಯರು ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿ ನಮಗೆ ಮಾರ್ಗದರ್ಶಕರಾದರು. ದೂರದ ಧಾರವಾಢದಿಂದ  ಮೈಸೂರಿಗೆ ಬಂದು ಆಗತಾನೆ  ಆಂದೋಲನ ಪತ್ರಿಕೆ ಆರಂಭಿಸಿದ್ದ ರಾಜಶೇಖರ ಕೋಟಿಯವರು ಇವರೆಲ್ಲರ ಧ್ವನಿಗೆ ಪತ್ರಿಕೆಯ ಮೂಲಕ ವೇದಿಕೆ ಒದಗಿಸಿಕೊಟ್ಟರು.

1982 ರಲ್ಲಿ ಕರ್ನಾಟಕದಲ್ಲಿ ದಲಿತ ಸಂಘಟನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಂದರ್ಭ.  ಆ ವೇಳೆಯಲ್ಲಿ ರಿಚರ್ಡ್ ಆಟನ್ ಬರೋ ಅವರ  ಗಾಂಧಿ ಸಿನಿಮಾ ಬಿಡುಗಡೆಯಾಗಿ ದೇಶಾದ್ಯಂತ ಪ್ರಸಿದ್ಧಿ ಪಡೆಯಿತು. ಗಾಂಧಿ ಜೀವನದ ಹೋರಾಟವನ್ನು ಆಧರಿಸಿದ  ಈ ಸಿನಿಮಾದಲ್ಲಿ ಎಲ್ಲಿಯೂ ಅಂಬೇಡ್ಕರ್ ಕುರಿತಾಗಿ ಪ್ರಸ್ತಾಪ ಇರಲಿಲ್ಲ. ಆದ್ದರಿಂದ ಕರ್ನಾಟಕ ದಲಿತ ಸಂಘಟನೆಯು ಗಾಂಧಿ ಸಿನಿಮಾ ಕ್ಕೆ ಬಹಿಷ್ಕಾರ ಘೋಷಿಸಿತು. ಮಹಾದೇವು ಅವರು ಬೆಂಗಳೂರಿಗೆ ಬಂದು ಅಲಸೂರು ರಸ್ತೆಯಲ್ಲಿ ಇದ್ದ ಗೆಲಾಕ್ಷಿ ಚಿತ್ರಮಂದಿರದಲ್ಲಿ ಸಿನಿಮಾವನ್ನು ವೀಕ್ಷಿಸಿ ನಂತರ ‘’ ನಾನು ಗಾಂಧಿ ಸಿನಿಮಾ ನೋಡಿದೆ’’ ಎಂಬ ಲೇಖನ ಬರೆದರು.

ತಾವು ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದುಕೊಂಡು  ದಲಿತ ಸಂಘಟನೆಯ ನಿರ್ಧಾರ ತಪ್ಪು ಎಂದು ಹೇಳುವ ಆತ್ಮಸಾಕ್ಷಿಯ ಪ್ರಜ್ಞೆಯನ್ನು ಅವರು ಉಳಿಸಿಕೊಂಡಿದ್ದರು. ಏಕೆಂದರೆ, ಅಟನ್ ಬರೊ ಗಾಂಧಿ ಸಿನಿಮಾದಲ್ಲಿ ಎಲ್ಲಿಯೂ ವಿವಾದಾತ್ಮಕ ಅಂಶಗಳಿಗೆ ಒತ್ತು ನೀಡದೆ, ಬ್ರಿಟೀಷರ ವಿರುದ್ದದ ಗಾಂಧೀಜಿಯ  ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಗಾಂಧೀಜಿಯವರ ಬದುಕಿನಲ್ಲಿ ರಾಷ್ಟ್ರೀಯತೆ ಕುರಿತು ಅವರ ಮತ್ತು ಟ್ಯಾಗೂರ್ ನಡುವಿನ ಹೋರಾಟ  ಹಾಗೂ  ಸುಭಾಷ್ ಚಂದ್ರಬೋಸ್ ಜೊತೆ, ಅಹಿಂಸಾತ್ಮಕ ಹೋರಾಟ ಕುರಿತು ಮತ್ತು ಮೀಸಲಾತಿ ಕುರಿತಾಗಿ ಅಂಬೇಡ್ಕರ್ ಜೊತೆಗಿನ ಚರ್ಚೆ  ಹೀಗೆ ಅನೇಕ ವಿಚಾರಗಳು ಇದ್ದರೂ ಸಹ ಎರಡು ಗಂಟೆ ಅವಧಿಯ ಸಿನಿಮಾದಲ್ಲಿ ಅದು ಅಸಾಧ್ಯ ಎಂಬುದನ್ನು ಮಹಾದೇವು ಅರ್ಥಮಾಡಿಕೊಂಡಿದ್ದರು. ಇದು ಅವರ ವ್ಯೆಕ್ತಿತ್ವದ  ವೈಶಿಷ್ಟತೆ.

ಇದೇ ಮೊದಲ ಬಾರಿಗೆ  ಕರ್ನಾಟದ ಚುನಾವಣೆಯಲ್ಲಿ ನೇರವಾಗಿ ಪಾಲ್ಗೊಂಡು ಬಿ.ಜೆ.ಪಿ. ವಿರುದ್ಧ ಅವರು ಪ್ರಚಾರ ಮಾಡುತ್ತಿದ್ದಾರೆ. ಕಳೆದ  ಹದಿನೈದು ದಿನಗಳಲ್ಲಿ ಅವರು ವರುಣ ಕ್ಷೇತ್ರದಲ್ಲಿ, ನಂಜನಗೂಡು ಹಾಗೂ ತಲಕಾಡು ಸುತ್ತ ಮುತ್ತಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಬಿ.ಜೆ.ಪಿ. ಮತ್ತು ಸಂಘಪರಿವಾರದ ಮನುಕುಲದ ವಿರೋಧಿ ಕೃತ್ಯಗಳನ್ನು ಜನತೆಯ ಎದುರು  ಎಳೆಎಳೆಯಾಗಿ ಬಿಡಿಸಿಟ್ಟರು. ಇದು ಮಹಾದೇವು ಅವರ ಎದೆಯಾಳದ ನೋವುಗಳು ಅಥವಾ ಮಾತುಗಳು ಮಾತ್ರವಾಗಿರದೆ, ಈ ನಾಡಿನ ಪ್ರಜ್ಞಾವಂತ ಪ್ರತಿಯೊಬ್ಬ ನಾಗರೀಕನ ಮಾತುಗಳಾಗಿವೆ.  ನಾಡಿನ ದೇವರ ಹಬ್ಬ ಅಥವಾ ಜಾತ್ರೆಗಳಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುವ ಬಡವರಿಗೆ ಮುಸ್ಲಿಮರು ಎಂಬ ಏಕೈಕ ಕಾರಣಕ್ಕಾಗಿ ಅವಕಾಶ ನಿರಾಕರಿಸುವುದು ಹಿಂದೂ ಧರ್ಮದ ಲಕ್ಷಣವೆ?

ನಾವು ತಿನ್ನುವ ಮಾಂಸಹಾರ ಹೇಗಿರಬೇಕು? ಅದು ಹಲಾಲ್ ಅಥವಾ ಬೇರೆಯದು ಆಗಿರಬೇಕು ಎಂದು ತಮ್ಮ ಜೀವನದಲ್ಲಿ ಎಂದಿಗೂ ಮಾಂಸ ತಿನ್ನದ  ಹಲಾಲುಕೋರರಿಗೆ ತೀರ್ಮಾನಿಸುವ ಹಕ್ಕು ಕೊಟ್ಟುವರು ಯಾರು? ಇದು ದೇಶಭಕ್ತಿ ಅಥವಾ ಧರ್ಮ ಭಕ್ತಿಯ ಪ್ರತೀಕವೆ? ನಮ್ಮ ಹೆಣ್ಣುಮಕ್ಕಳ ವಸ್ತ್ರ ಹೇಗಿರಬೇಕೆಂದು ತೀರ್ಮಾನಿಸಲು ಹೊರಟ  ಈ ಲಂಭಕ್ತರಿಗೆ ತಮ್ಮ ಹೆಂಡತಿಯರು ಎದೆಯ ಮೇಲೆ ಸೀರೆ ಸೆರಗು ಹಾಕಿಕೊಳ್ಳದೆ ಓಡಾಡುವಂತೆ ಹೇಳಿ ಎಂದು  ನಾವು ಹೇಳಿದರೆ ಏನಾಗಬಹುದು ಊಹಿಸಿ? ಅಭಿವೃಧ್ಧಿ ಕುರಿತು ಮಾತನಾಡಲಾರದ ಅಯೋಗ್ಯರಿಗೆ ಹನುಮಾನ ಚಾಳಿಸು, ರಾಮಮಂದಿರ, ಟಿಪ್ಪು, ಉರಿಗೌಡ, ನಂಜೇಗೌಡ  ಈಗ ಚುನಾವಣೆಯ ವಿಷಯಗಳಾಗಿವೆ.

ಇಂತಹ ಸಮಯದಲ್ಲಿ ಮಹಾದೇವು ಅಖಾಡಕ್ಕೆ ಇಳಿದಿರುವುದು ಎಲ್ಲರಲ್ಲೂ ನೈತಿಕತೆಯ ಜೊತೆಗೆ ಧೈರ್ಯವನ್ನ ಹೆಚ್ಚಿಸಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವರ್ತಮಾನದ  ಅನಿಷ್ಟಗಳ ವಿರುದ್ಧ  ಹತ್ತನೇ ಶತಮಾನದ ಪಂಪನಿಂದ ಹಿಡಿದು ಇಪ್ಪತ್ತನೆಯ ಶತಮಾನದ ಕುವೆಂಪುವರೆಗೆ ಧ್ವನಿ ಎತ್ತಿದ ಭವ್ಯ ಇತಿಹಾಸ ನಮ್ಮ ಕಣ್ಣ ಮುಂದಿದೆ. ನಾನು ಕಾದಂಬರಿ ಕಿಸಿಯುತ್ತೇನೆ, ಮಹಾಕಾವ್ಯ ಕಿಸಿಯುತ್ತೀನಿ ಎಂದು ಕಣ್ಣ ಮುಂದಿನ ಅನಾಚಾರಗಳಿಗೆ ಕಣ್ಮುಚ್ಚಿ ಕೂತವರು ವಿರಾಟನ ಆಸ್ಥಾನದ ಬೃಹನ್ನಳೆಯರು ಆಗಬಹುದೇ ಹೊರತು ಕನ್ನಡದ ಸಾಹಿತಿ ಅಥವಾ ಬರಹಗಾರ ಆಗಲು ಸಾಧ್ಯವಿಲ್ಲ. ಇಂತಹ ಬೃಹನ್ನಳೆಯರನ್ನು ನನ್ನ ಮೆಚ್ಚಿನ ಸಾಹಿತಿ ಅಥವಾ ಕವಿ ಎಂದು ತಮಟೆ ಬಾರಿಸಿ, ತುತ್ತೂರಿ ಊದುವ ಇಂದಿನ ಯುವ ತಲೆಮಾರು ಒಮ್ಮೆ  ಪಿ.ಲಂಕೇಶ್, ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಜಿ.ಗೋವಿಂದರಾವ್ ಮುಂತಾದವರು ಹೇಗೆ ಬರೆದರು ಮತ್ತು ಜೀವಿಸಿದರು ಎಂದು ಅವಲೋಕಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿ ನಮ್ಮ ನಡುವೆ  ನಡೆದಾಡುವ ಗಾಂಧಿ ಮತ್ತು ಅಂಬೇಡ್ಕರ್ ರೂಪದಲ್ಲಿರುವ ಮಹಾದೇವು ವ್ಯವಸ್ಥೆಯ ವಿರುದ್ಧ ಏಕೆ  ಕನಲಿ ಕೆಂಡವಾಗಿದ್ದಾರೆ? ಎಂಬುದನ್ನು ನಾವು ಅರ್ಥಮಾಡಿಕೊಂಡರೆ, ನಾಡಿದ್ದು ನಡೆಯುವ ಚುನಾವಣೆಯ ಮತದಾನದಲ್ಲಿ ನಾವು ಮುನುಕುಲದ ದುಷ್ಠ ಶಕ್ತಿಗಳನ್ನು ಸೋಲಿಸುವುದು ಮಾತ್ರವಲ್ಲ, ಅವುಗಳನ್ನು ಶಾಶ್ವತವಾಗಿ ಬೇರು ಸಮೇತ ಕಿತ್ತೊಗೆಯಲು ಸಾಧ್ಯವಾಗುತ್ತದೆ. ನಾವು ತಿನ್ನುವ ಉಪ್ಪು, ಅಕ್ಕಿ,  ಊಟವಿಲ್ಲದ ಬಡವರು  ತಿಂದು, ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವ ಕಡ್ಲೆಪುರಿ(ಚುರುಮುರಿ) ಹಾಗೂ ಒಲೆ ಹಚ್ಚುವ ಬೆಂಕಿ ಪೊಟ್ಟಣದಿಂದ ಹಿಡಿದು ನಮ್ಮ ಹೆಣ್ಣುಮಕ್ಕಳು ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಗೆ ತೆರಿಗೆ ಹಾಕಿ  ದೇಶವನ್ನು ಉದ್ದಾರ ಮಾಡುತ್ತೀವಿ ಎನ್ನುವ  ಸುಳ್ಳುಗಳ ಸಾಮ್ರಾಟರಿಗೆ ನಾವು ಮತ ಹಾಕಲು ಸಾಧ್ಯವೆ?

ಇದು ನನ್ನ ಹಿರಿಯ ತಲೆಮಾರು ಮಹಾದೇವು ಮತ್ತು ಸಂಗಡಿಗರಿಗೆ ಮಾತ್ರವಲ್ಲ, ನನ್ನ ತಲೆಮಾರಿಗೆ ಹಾಗೂ  ನನ್ನ ನಂತರದ ಕಿರಿಯ ತಲೆಮಾರಿಗೆ ಕಾಡುತ್ತಿರುವ ಪ್ರಶ್ನೆಗಳು. ಇವುಗಳನ್ನು ಜಾತಿ ಧರ್ಮ ಬೇಧವಿಲ್ಲದೆ ಎಲ್ಲಾ ಜನಸಾಮಾನ್ಯರಿಗೆ ದಾಟಿಸೋಣ.

-ಜಗದೀಶ್ ಕೊಪ್ಪ, ಚಿಂತಕರು

Leave a Reply