ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಇತಿಹಾಸದಲ್ಲಿ
ಹಿಂದೆಂದೂ ಕಾಣದ ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ಪ್ರಸಕ್ತ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಚುನಾವಣಾ ಕಾರಣಕ್ಕಾಗಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಬೀಡು ಬಿಟ್ಟಿದ್ದ ಅನೇಕ ನಾಯಕರು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ.
ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಸಜ್ಜುಗೊಂಡಿರುವ ಆಯೋಗ ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಘಟಾನುಘಟಿ ನಾಯಕರು ಹೊರರಾಜ್ಯಗಳ ಕಾರ್ಯಕರ್ತರು ಕರ್ನಾಟಕದಿಂದ ಹೊರ ನಡೆದಿದ್ದಾರೆ.
ಬಹಿರಂಗ ಪ್ರಚಾರ ಅಂತ್ಯಕ್ಕೂ ಮುನ್ನ ರಾಜ್ಯದ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಪಡೆಯೊಂದಿಗೆ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.
ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಎಸ್.ಜಯಶಂಕರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತಿತರರು ಬಿಜೆಪಿ ಪರವಾಗಿ ಪ್ರಚಾರ ನಡೆಸಿದರು.
ಕಾಂಗ್ರೆಸ್‍ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಬ್ಬರದ ಮತಯಾಚನೆ ನಡೆಸಿದರು.
ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತಿತರರು ಅಂತಿಮ ಕ್ಷಣದಲ್ಲಿ ಮತದಾರರ ಮನವೊಲಿಕೆ ಮಾಡಿದರು.
ಬಹಿರಂಗ ಪ್ರಚಾರ ಮುಗಿದ ಬಳಿಕ ಸ್ಟಾರ್ ಪ್ರಚಾರಕರು, ಮುಖಂಡರು ಕ್ಷೇತ್ರ ತೊರೆಯಬೇಕು. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಇನ್ನು ಮುಂದೆ ಮತದಾನ ಮುಗಿಯುವವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟಾರ್ ಪ್ರಚಾರಕರು, ಮುಖಂಡರು ಕ್ಷೇತ್ರವನ್ನು ತೊರೆಯಬೇಕು. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡುಬಂದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬುಧವಾರ ಮತದಾನ ನಡೆಯುವುದರಿಂದ ಕ್ಷೇತ್ರದಲ್ಲಿ ಶಾಂತಿ ಕಾಪಾಡಿಕೊಳ್ಳಬೇಕಾಗಿರುವ ಕಾರಣ ಆಯೋಗವು ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಿದೆ.
ಮಂಗಳವಾರ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಅಭ್ಯರ್ಥಿಗಳು ಸಹ ಪ್ರಚಾರವನ್ನು ಮುಕ್ತಾಯಗೊಳಿಸಬೇಕಾಗಿದೆ.
ಮದ್ಯ ಮಾರಾಟ ನಿಷೇಧ: ಇದೇ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಯಾವುದೇ ಮದ್ಯದಂಗಡಿಗಳು, ಮದ್ಯ ಮಾರಾಟ ಮಾಡುವ ಹೊಟೇಲ್‍ಗಳು, ಪಂಚತಾರಾ ಹೋಟೆಲ್‍ಗಳು ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ.
ಪೊಲೀಸರು ಸಂಬಂಧಪಟ್ಟ ಕ್ಷೇತ್ರದಲ್ಲಿ ಸಂಚಾರ ಮಾಡಿ ಮದ್ಯದಂಗಡಿಗಳನ್ನು ಮುಚ್ಚಿಸಲಿದ್ದಾರೆ. ಮದ್ಯ ಮಾರಾಟದ ಮೇಲೆ ಎಚ್ಚರಿಕೆ ವಹಿಸುವ ಪೊಲೀಸರು, ವಿಶೇಷ ತಂಡಗಳ ಮೂಲಕ ಎಲ್ಲಾ ಹೋಟೆಲ್, ಪಂಚತಾರಾ ಹೋಟೆಲ್‍ಗಳಲ್ಲಿ ತಪಾಸಣೆ ಕಾರ್ಯ ಕೈಗೊಳ್ಳಲಿದ್ದಾರೆ.
ಚುನಾವಣಾ ಕಣದಲ್ಲಿ ಅಂತಿಮವಾಗಿ 2615 ಅಭ್ಯರ್ಥಿಗಳು ಉಳಿದಿದ್ದಾರೆ. ಕಣದಲ್ಲಿರುವ 2615 ಅಭ್ಯರ್ಥಿಗಳ ಪೈಕಿ 2429 ಪುರುಷರು, 185 ಮಹಿಳೆಯರು ಮತ್ತು ಇಬ್ಬರು ಇತರರು ಕಣದಲ್ಲಿದ್ದಾರೆ. ಒಟ್ಟು 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆಯಲ್ಲಿ 1,15,709 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. 82,543 ಕಂಟ್ರೋಲ್ ಯೂನಿಟ್, 89,379 ವಿವಿ ಪ್ಯಾಟ್‍ಗಳನ್ನು ಬಳಕೆ ಮಾಡಲಾಗುತ್ತಿದೆ.
ಈಗಾಗಲೇ ಇವಿಎಂ ಬಗ್ಗೆ ಅರಿವು ಕಾರ್ಯಕ್ರಮ ಮಾಡಲಾಗಿದೆ. 16 ವಿಧಾನಸಭೆ ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್ ಯೂನಿಟ್‍ಗಳನ್ನು ಬಳಸಲಾಗುತ್ತದೆ.




