ಪ್ರಧಾನ ಮಂತ್ರಿಗಳು ಎ ನ್ ಡಿ ಎ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸ್ಥಾನಗಳ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಚುನಾವಣೆಯ ಸಂದರ್ಭದಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಎದೆಯುಬ್ಬಿಸಿ ದೇಶದಾದ್ಯಂತ ಅಬ್ಬರಿಸುತ್ತ ಕೆಲವು ನಿಮ್ಮ ಪರವಿರುವ ತುತ್ತೂರಿ ಊದುವ ಮಾಧ್ಯಮಗಳಿಂದ ಪ್ರತಿದಿನವೂ ಸುದ್ದಿ ಮಾಡಿಸಿದ್ದುವಾಯಿತು. ಆದರೆ ನೀವು ಗಳಿಸಿದ್ದು ಕಳೆದ ಬಾರಿಗಿಂತ 70ಕ್ಕೂ ಹೆಚ್ಚು ಸ್ಥಾನಗಳನ್ನು ಕಡಿಮೆ ಎನ್ನುವುದನ್ನು ಮೊದಲು ನೆನಪಿನಲ್ಲಿಟ್ಟುಕೊಳ್ಳಿ ನಿಮ್ಮ ನಾನೂರರ ಕಥೆ ಏನಾಯಿತು ಎಂದು ಮೊದಲು ಹೇಳಿ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕಳೆದ ಹತ್ತು ವರ್ಷದಿಂದ ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂದು ನಿಮ್ಮ ಪಕ್ಷದ ಪಂಚಾಯಿತಿ ಸದಸ್ಯರಿಂದ ಪಾರ್ಲಿಮೆಂಟ್ ಸದಸ್ಯರ ತನಕ ಒಂದೇ ಮಂತ್ರವನ್ನ ಜಪಿಸುತ್ತಲೇ ಕಾಲ ಕಳೆದರು. ಆದರೆ ರಾಷ್ಟ್ರದ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಸ್ಥಾನವನ್ನು ನೀಡಿದ್ದಾರೆ. ನಮ್ಮ ಪಕ್ಷದ ಬ್ಯಾಂಕುಗಳ ಖಾತೆಯನ್ನು ನಿರ್ವಹಣೆ ಮಾಡದಂತೆ ತಂತ್ರಗಳನ್ನ ರೂಪಿಸಿ ಎಷ್ಟೇ ತೊಂದರೆಯನ್ನು ಕೊಟ್ಟರು ಹಣ ಬಲವಿಲ್ಲದ ಕಾಂಗ್ರೆಸ್ ಪಕ್ಷ ಜನಬಲದ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆದುಕೊಂಡಿದೆ.
ಉತ್ತರ ಪ್ರದೇಶದಲ್ಲಿ ನಿಮ್ಮ ಸರ್ಕಾರ ಧರ್ಮದ ಮತ್ತು ದೇವರ ಹೆಸರಿನಲ್ಲಿ ಅಮಾಯಕ ಜನರ ಮೇಲೆ ನಡೆಸಿದಂತಹ ದಬ್ಬಾಳಿಕೆಗಳು, ಮಾನವ ವಿರೋಧಿ ಕೃತ್ಯಗಳು ಇವುಗಳ ಕಾರಣದಿಂದಾಗಿ ಅಲ್ಲಿರುವ ಹಿಂದುಗಳು ಸೇರಿದಂತೆ ಎಲ್ಲರೂ ನಿಮ್ಮ ಪಕ್ಷಕ್ಕೆ ಸರಿಯಾದಂತಹ ಬುದ್ಧಿಯನ್ನು ಕಲಿಸಿದ್ದಾರೆ. ದಬ್ಬಾಳಿಕೆ ಮತ್ತು ಒತ್ತಡದ ತಂತ್ರಗಳು ಹೆಚ್ಚು ದಿನ ನಡೆಯುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಉತ್ತರ ಭಾರತದಲ್ಲಿ ನಿಮ್ಮದೇ ಸಾಮ್ರಾಜ್ಯವೆಂದು ಬೀಗುತ್ತಿದ್ದವರಿಗೆ ರಾಜಸ್ಥಾನದಲ್ಲಿ ಪಂಜಾಬಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರದಲ್ಲಿ ಜನರು ಸರಿಯಾದ ಪಾಠವನ್ನು ಕಲಿಸಿದ್ದಾರೆ. ಮಣಿಪುರದ ಜನತೆ ನಿಮ್ಮ ಸರ್ಕಾರದ ಬಗ್ಗೆ ಇರುವ ಅಭಿಪ್ರಾಯವನ್ನು ಮತಗಳ ಮೂಲಕ ತೋರಿಸಿಕೊಟ್ಟಿದ್ದಾರೆ.
ಸಾವಿರಾರು ಕೋಟಿ ರೂಪಾಯಿಗಳ ಚುನಾವಣಾ ಬಾಂಡ್ ಹಣದಿಂದ ಅಬ್ಬರದ ಚುನಾವಣೆಯನ್ನು ನಡೆಸಿದರು, ಅನೇಕ ಮಾಧ್ಯಮಗಳನ್ನು ಖರೀದಿಸಿದರು, ಹಲವಾರು ತಿಂಗಳುಗಳ ಕಾಲ ನೂರಾರು ಬಹಿರಂಗ ಸಭೆಗಳನ್ನು ಮಾಡಿದರು, ನಿಮ್ಮ ನಿರೀಕ್ಷೆಗಳೆಲ್ಲವೂ ಸುಳ್ಳಾಯಿತು ಎಂದರೆ ದೇಶದ ಜನರ ಆಶಯಗಳು ಬೇರೆ ಇದೆ ಎನ್ನುವುದು ಸ್ಪಷ್ಟವಾದಂತಹ ಅಭಿಪ್ರಾಯವಾಗಿದೆ.
ರಾಮ ನಿಮ್ಮ ಪಕ್ಷದ ಸ್ವತ್ತು ಎನ್ನುವ ರೀತಿಯಲ್ಲಿ ಮಾತನಾಡುತ್ತಾ ನಿಮ್ಮ ಪರವಾಗಿ ನಿಲ್ಲದವರು ಎಲ್ಲರೂ ಹಿಂದು ವಿರೋಧಿಗಳು ಎನ್ನುವ ರೀತಿಯಲ್ಲಿ ಬಿಂಬಿಸಿದಿರಿ. ಆದರೆ ಮರ್ಯಾದಾ ಪುರುಷ ರಾಮನಿಗೂ ಸಹ ನೀವು ರಾಮನನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದೀರಿ ಎಂದು ಅನಿಸಿರಬೇಕು. ಅದಕ್ಕಾಗಿ ತನ್ನದೇ ಆದ ತೀರ್ಮಾನವನ್ನು ಜನರ ಮೂಲಕ ಕೊಡಿಸಿಕೊಟ್ಟಿದ್ದಾನೆ.
ಪ್ರಧಾನ ಮಂತ್ರಿಗಳೇ ಇನ್ನು ಮುಂದಾದರೂ ಇಂತಹ ಹಗುರವಾದ ಮಾತುಗಳನ್ನ ಆಡುವುದನ್ನು ಬಿಟ್ಟು ಅಟಲ್ ಬಿಹಾರಿ ವಾಜಪೇಯಿರವರ ರೀತಿಯಲ್ಲಿ ಎಲ್ಲರನ್ನು ಪ್ರೀತಿಸುವ ರೀತಿಯಲ್ಲಿ ರಾಜಕಾರಣವನ್ನು ಮಾಡಿ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವುದನ್ನ ಇನ್ನು ಮುಂದಾದರೂ ನಿಲ್ಲಿಸಿ, ರಾಜ್ಯಗಳ ಮೇಲೆ ತಾರತಮ್ಯ ಮಾಡುವ ವ್ಯವಸ್ಥೆಯನ್ನು ಇನ್ನು ಮುಂದೆ ಮುಂದುವರಿಸಬೇಡಿ. ಭಾರತ ದೇಶದ ಪ್ರತಿಯೊಬ್ಬ ಭಾರತೀಯರು ಈ ದೇಶದ ಪ್ರಜೆಗಳು. ಅವರೆಲ್ಲರ ಯಜಮಾನರಾಗಿ ತಾವು ಕಾರ್ಯವನ್ನು ನಿರ್ವಹಿಸಿ.
ಒಂದು ಸಂತೋಷದ ಸಂಗತಿ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೊಂಡು ತಿರುಗಿದ ನಿಮ್ಮ ಪಕ್ಷದವರಿಗೆ ರಾಷ್ಟ್ರದ ಜನತೆ ಸಂವಿಧಾನದ ಮಹತ್ವವನ್ನ ತೋರಿಸಿಕೊಟ್ಟಿದ್ದಾರೆ. ಈ ಕಾರಣದಿಂದ ತಾವು ಸಂವಿಧಾನದ ಪುಸ್ತಕವನ್ನು ಪೂಜಿಸಿ ಅದನ್ನು ತಲೆಯ ಮೇಲೆ ಹೊತ್ತು ಗೌರವಿಸಿದ್ದು ಬಹಳ ಸಂತೋಷವಾಯಿತು, ಬಿಜೆಪಿಯವರ ಬದಲಾವಣೆಗೆ ಕಾರಣವಾದ ಜನರಿಗೂ ಅಭಿನಂದಿಸಬೇಕಾಗಿದೆ.
ಸಂವಿಧಾನವನ್ನ ಬದಲಾಯಿಸುತ್ತೇವೆ ಎಂದರೆ ಏನಾಗುತ್ತದೆ ಎನ್ನುವುದಕ್ಕೆ ಈ ಚುನಾವಣೆಯ ಫಲಿತಾಂಶ ಸಾಕ್ಷಿಯಾಗಿದೆ. ಸಂವಿಧಾನ ಈ ದೇಶದ ಅತ್ಯಂತ ಪವಿತ್ರವಾದ ಗ್ರಂಥ. ಭಾರತ ದೇಶದ ಜನತೆ ಹೆಚ್ಚು ಪೂಜಿಸುವುದು ಈ ಸಂವಿಧಾನದ ಗ್ರಂಥವನ್ನು ಎನ್ನುವುದು ಸ್ಪಷ್ಟವಾಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




