ನಮ್ಮ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ

1 year ago

ಹಾಸನ: ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಸಹಕರಿಸಿ ಎಂದು ಶಾಸಕ ಸ್ವರೂಪ್ ಪ್ರಕಾಶ್ ಮನವಿ ಮಾಡಿದ್ದಾರೆ.

ನಗರದ ವಾಣಿವಿಲಾಸ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ. ಶಿಕ್ಷಕರು ಮಕ್ಕಳ ದಾಖಲಾತಿಗಾಗಿ ಮನೆ ಮನೆಗೆ ಭೇಟಿ ನೀಡಿ ಸರ್ಕಾರಿ ಶಾಲೆಗಳ ಉಳುವಿಗೆ ಶ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ನಗರದ ಹೃದಯ ಭಾಗದಲ್ಲಿರುವ ಈ ಶಾಲೆ 125 ವರ್ಷಗಳನ್ನು ಪೂರೈಸಿದೆ. ಈ ಹಳೇಯ ಶಾಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದ ಶಾಸಕರು ಶಾಲೆಗಳ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗಾಗಿ ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಪೂರ್ವಜರು ಶಾಲೆಗಳಿಗೆ ದಾನವಾಗಿ ನೀಡಿರುವ ಜಾಗಗಳು ಅತ್ಯಂತ ಬೆಲೆ ಬಾಳು ವುದರಿಂದ ಮೊಮ್ಮಕ್ಕಳು ಸದರಿ ಜಾಗಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ. ಶಾಲೆಗಳ ಹೆಸರಿಗೆ ಖಾತೆ ಮಾಡುವ ಮೂಲಕ ಆಸ್ತಿಯನ್ನು ಸಂರಕ್ಷಣೆ ಮಾಡಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಿ ಎಂದರು.

ಶಾಲಾ ಮಕ್ಕಳಿಗೆ ಗುಲಾಬಿ ಹೂ , ಶಾಲಾ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು.

ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಮಾತನಾಡಿ, ಮಕ್ಕಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಿ. ಶಾಲಾ ಅವಧಿಯನ್ನು ಖುಷಿಯಿಂದ ಅನುಭವಿಸಿ ಎಂದರು.

ವಿದ್ಯೆಯನ್ನು ಕಲಿತು ಬುದ್ದಿವಂತರಾಗಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಉತ್ತಮ ನಾಗರೀಕರಾಗಿ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಸರ್ಕಾರದ ಆದೇಶದಂತೆ 2025-26 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಜಿಲ್ಲಾದ್ಯಂತ ಎಲ್ಲಾ ಶಾಲೆಗಳಲ್ಲಿ ಆಚರಿಸಲಾಗುತ್ತದೆ ಎಂದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಗಾಗಿ ಆಂದೋಲನ ನಡೆಸಲಾಗುತ್ತಿದೆ. ಸರ್ಕಾರ ಬಜೆಟ್ ನಲ್ಲಿ ಶಿಕ್ಷಣಕ್ಕೆ 43 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟು, ಕಲಿಕೆ ಉತ್ತಮಪಡಿಸಲು ವಿವಿಧ ಚಟುವಟಿಕೆಗಳನ್ನು ನಡೆಸುತ್ತದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಇದಕ್ಕೆ ಉದಾಹರಣೆ 48 ಸರ್ಕಾರಿ ಶಾಲೆಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ಶೈಕ್ಷಣಿಕ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ಬಿಸಿಯೂಟ ನೀಡಲಾಗುತ್ತದೆ. ಶಿಕ್ಷಕರಿಂದ ಗುಣಮಟ್ಟದ ಬೋಧನೆ ನೀಡಲಾಗುತ್ತದೆ ಪೋಷಕರಿಗೆ ತಮ್ಮ ಮಕ್ಕಳ ಕಲಿಕೆ ಬಗ್ಗೆ ಗ್ಯಾರಂಟಿ ನೀಡಲಾಗುವುದು ತಾವು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಸಹಕರಿಸುವಂತೆ ಕೋರಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ ಅವರು ಮಾತನಾಡಿ ಪ್ರಾಥಮಿಕ ಹಂತದಿAದಲೆ ಮಕ್ಕಳು ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ತಮ್ಮ ಶೈಕ್ಷಣಿಕ ಉಜ್ವಲ ಭವಿಷ್ಯಕ್ಕೆ ಹೊಸ ಹೊಸ ಕನಸುಗಳನ್ನು ಕಾಣುವುದರ ಮೂಲಕ ಸಾಕಾರಗೊಳಿಸಿಕೊಳ್ಳುವಂತೆ ತಿಳಿಸಿದರು.

ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಉತ್ತೇಜನ ನೀಡಿ ಬೆಳೆಯಲು ಅವಕಾಶ ಕಲ್ಪಿಸಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಇಂದು ಮಕ್ಕಳನ್ನು ಸಂತೋಷದಿಂದ ಶಾಲೆಗೆ ಬರ ಮಾಡಿಕೊಳ್ಳಲಾಗುತ್ತಿದೆ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ ಜೊತೆಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುವುದು ಎಂದರು.

ಮಹೇಶ್, ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳಾದ ರವೀಂದ್ರ, ಅಕ್ಷರ ದಾಸೋಹ ಅಧಿಕಾರಿ ಮಂಜು ನಾಯಕ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮತ್ತಿತರರು ಹಾಜರಿದ್ದರು.

Leave a Reply