ಸರ್ಕಾರಿ ಶಾಲೆಯ ಸ್ಥಿತಿಗತಿ ಅರಿಯಲು ಪಂಚಾಯಿತಿ ಮಟ್ಟದಲ್ಲೇ ಸಮೀಕ್ಷೆಯಾಗಲಿ

3 years ago

#survey #panchayat #level #know #condition #government #school #siddaramaiah #madhubangarappa #ksnagaraj

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ರಾಜ್ಯ ಉಚ್ಛನ್ಯಾಯಾಲಯ ಕಳವಳವ್ಯಕ್ತಪಡಿಸಿರುವುದು ಗಂಭೀರವಾದ ವಿಚಾರವಾಗಿರುತ್ತದೆ. ಸರ್ಕಾರಿ ಶಾಲೆಗಳು ಎಂದರೆ ಬಡವರು, ಮತ್ತು ಕಡುಬಡವರ ಮಕ್ಕಳು ಕಲಿಯುವ ಕೇಂದ್ರಗಳು. ಬಹಳಷ್ಟು ಶಾಲೆಗಳು ಕನ್ನಡ ಮಾಧ್ಯಮವೇ ಆಗಿರುತ್ತವೆ. ಇಲ್ಲಿ ಸೌಲಭ್ಯ ಸೌಕರ್ಯಗಳಿಲ್ಲವೆಂದರೆ ಇನ್ನು ಮಕ್ಕಳು ಕಲಿಯುವುದಾದರೂ ಹೇಗೆ?

ಯಾವ ಪೋಷಕರು ತಾನೆ ಪಾಳುಬಿದ್ದ ಬಂಗಲೆಗಳಿಗೆ ತಮ್ಮ ಮಕ್ಕಳನ್ನು ಕಲಿಯಲು ಕಳುಹಿಸುತ್ತಾರೆ. ಅವರಿಗೂ ಸಹ ಎಷ್ಟೇ ಕಷ್ಟವಿದ್ದರು ತಮ್ಮ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಕನಸುಗಳಿರುತ್ತವೆ. ಸರ್ಕಾರಿ ಆಸ್ಪತ್ರೆ ಮತ್ತು ಸರ್ಕಾರಿ ಶಾಲೆಗಳ ವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತವೆ. ಇವುಗಳ ಸ್ಥಿತಿಗತಿಗಳ ಬಗ್ಗೆ ಯಾವ ಸರ್ಕಾರವು ಮಾಹಿತಿಯನ್ನು ವೈಜ್ಞಾನಿಕವಾಗಿ ಪಡೆದುಕೊಂಡಿಲ್ಲ.

ಶಿಕ್ಷಣ ಕ್ಷೇತ್ರದ ಅನುದಾನ ಕೆಲವು ಕ್ಷೇತ್ರಗಳಿಗೆ ಮಾತ್ರ ಶಾಸಕರುಗಳು ಆಸಕ್ತಿಯಿಂದ ತೆಗೆದುಕೊಂಡು ಹೋಗಿ ಶಾಲೆಗಳನ್ನು ಅಭಿವೃದ್ಧಿಪಡಿಸುತ್ತಾರೆ. ಬಹಳಷ್ಟು ಚುನಾಯಿತಿ ಪ್ರತಿನಿಧಿಗಳಿಗೆ ಇದರ ಬಗ್ಗೆ ಆಸಕ್ತಿಗಳು ಇರುವುದಿಲ್ಲ. ಒಬ್ಬ ಚುನಾಯಿತ ಪ್ರತಿನಿಧಿ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಯಾವ ಮಟ್ಟಕ್ಕೆ ಅಭಿವೃದ್ಧಿಪಡಿಸಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡಬಹುದು ಎನ್ನುವುದಕ್ಕೆ ಬಿ.ಟಿ.ಎಂ. ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ರಾಮಲಿಂಗಾರೆಡ್ಡಿಯವರ ಆಸಕ್ತಿ ಸಾಕ್ಷಿಯಾಗಿದೆ.

ರಾಜ್ಯ ಸರ್ಕಾರ ಕೂಡಲೇ ಪ್ರತಿಯೊಂದು ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಬಗ್ಗೆ ವರದಿಯನ್ನು ಪಡೆಯಬೇಕು, ಆ ವರದಿಯಲ್ಲಿ ಶಾಲೆಯ ಕಟ್ಟಡದ ವಿಸ್ತೀರ್ಣವೆಷ್ಟಿದೆ, ಶಾಲೆಯ ಕಟ್ಟಡ ಎಷ್ಟು ವರ್ಷ ಹಳೆಯದು, ಆಟದ ಮೈದಾನಗಳು ಇವೆಯೋ ಇಲ್ಲವೋ, ಗ್ರಂಥಾಲಯ ಸೌಲಭ್ಯ ಇದೆಯೋ ಇಲ್ಲವೋ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಕರ ಸಂಖ್ಯೆ, ಆಯಾಗಳ ಸಂಖ್ಯೆ, ಕಟ್ಟಡದ ಭಾವಚಿತ್ರಗಳೊಂದಿಗೆ ಸರ್ಕಾರಕ್ಕೆ ನೀಡಬೇಕು. ಇದಲ್ಲದೆ ಎಷ್ಟು ಗಾಮಗಳಲ್ಲಿ ಒಂದರಿಂದ ಏಳನೇ ತರಗತಿ ಶಾಲೆಗಳು, ಹೈಸ್ಕೂಲ್ ಶಾಲೆಗಳು, ಪ್ರಥಮ ಪಿ.ಯು.ಸಿ. ತರಗತಿಗಳು, ಪದವಿ ಕಾಲೇಜುಗಳು, ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳು ಇವೆ ಎಂಬ ಮಾಹಿತಿಯನ್ನು ನಿರ್ದಿಷ್ಟ ದಿನದ ಒಳಗಾಗಿ ನೀಡುವಂತೆ ಶಿಕ್ಷಣ ಸಚಿವರು ಆದೇಶವನ್ನು ಹೊರಡಿಸಿ ಆ ವರದಿಯ ಆಧಾರದ ಮೇಲೆ ಶಿಕ್ಷಣ ಇಲಾಖೆ ಅನುದಾನವನ್ನು ಯೋಜನಾಬದ್ಧವಾಗಿ ಬಳಕೆ ಮಾಡಿದರೆ ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಸಹ ಖಾಸಗಿ ಶಾಲೆಗಳಿಗಿಂತ ದೊಡ್ಡದಾಗಿ ರೂಪುಗೊಂಡು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದಂತಾಗುತ್ತದೆ.

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply