ಮಣಿಕಂಠ ರಾಠೋಡ್ ವಿರುದ್ಧ ಸಾಕ್ಷ್ಯ ಸ್ಪಷ್ಟವಾಗಿದ್ದರೂ ಬಂಧಿಸದಿರುವುದು ಖೇದಕರ: ಅಪ್ಸರ್ ಕೊಡ್ಲಿಪೇಟೆ

11 months ago

ಕಲಬುರಗಿ: ಕೋಮು ಸಹಿಷ್ಣುತೆಗೆ ವಿರುದ್ಧವಾದ ಮತ್ತು ಸಾಮುದಾಯಿಕ ಹಿಂಸೆಗೆ ಪ್ರಚೋದಿಸುವ “15 ನಿಮಿಷಗಳಲ್ಲಿ ಮುಸ್ಲಿಂರ ಸಾಮೂಹಿಕ ನರಮೇಧ” ನಡೆಸುವ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಎಫ್‌ಐಆರ್ ದಾಖಲಿಸಿದರೂ, ವಿಡಿಯೋ ಸಾಕ್ಷ್ಯ ಸಹ ಸ್ಪಷ್ಟವಾಗಿದ್ದರೂ ಬಂಧನ ಆಗದಿರುವುದು ಖೇದಕರ ಎಂದು ಎಸ್ ಡಿ ಪಿ ಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.

ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಲಬುರಗಿ ಜಿಲ್ಲಾ ಸಮಿತಿ ಸಭೆಯು ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಮೋಹಿಸಿನ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ರವರ ಸಮ್ಮುಖದಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರುಗಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ ಕೊಡ್ಲಿಪೇಟೆ ಮುಖ್ಯಮಂತ್ರಿಗಳ ಸೂಚನೆಯ ಹೊರತಾಗಿಯೂ ದ್ವೇಷ ಭಾಷಣ ಮಾಡಿರುವವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗುವುದಿಲ್ಲ. ಎಲ್ಲೋ ಬೆರಳೆಣಿಕೆಯ ಒಂದೆರಡು ಆಗಬಹುದಷ್ಟೇ ಆದರೆ ಶಿಕ್ಷೆ ಆಗುವುದು ವಿರಳ. ಗುಲ್ಬರ್ಗದಲ್ಲಿ ಕೋಮು ಸಹಿಷ್ಣುತೆಗೆ ವಿರುದ್ಧವಾದ ಮತ್ತು ಸಾಮುದಾಯಿಕ ಹಿಂಸೆಗೆ ಪ್ರಚೋದಿಸುವ “15 ನಿಮಿಷಗಳಲ್ಲಿ ಮುಸ್ಲಿಂರ ಸಾಮೂಹಿಕ ನರಮೇಧ” ನಡೆಸುವ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಪಕ್ಷದ ನಾಯಕರಾದ ಅಲೀಮ್ ಇಲಾಹಿ ಲಿಖಿತ ದೂರು ನೀಡಿದ್ದು, ಇದನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದರೂ, ವಿಡಿಯೋ ಸಾಕ್ಷ್ಯ ಸಹ ಸ್ಪಷ್ಟವಾಗಿದೆ.  ಆದರೆ ಆರೋಪಿಯ ಬಂಧನ ಆಗದಿರುವುದು ಖೇದಕರ. ಈ ವಿಚಾರದಲ್ಲಿ ಕಾನೂನು ದುರ್ಬಲವಾಗಿದ್ದು, ತಿದ್ದುಪಡಿ ಆಗಬೇಕಾದ ಅಗತ್ಯ ಇದೆ ಎಂದರು.

ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಹೇಳಿ ನೀಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಪೊಲೀಸರು ಬಂಧಿಸಿದರೂ ಅಂತಹವರಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಹಾಗಾಗಿ ದ್ವೇಷ ಹುಟ್ಟಿಸುವ ಮಾತುಗಳನ್ನು ಆಡುವವರು ತಮ್ಮ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಈಗಿನ ಕಾಲ ಘಟ್ಟದ ಅಗತ್ಯಗಳಿಗೆ ಅನುಗುಣವಾಗಿ ಕಾನೂನು ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಲ್ವಂತ ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣಾ ಅಗತ್ಯ ತಯಾರಿ ನಡೆಸುವ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ರಹೀಮ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಟೇಲ್, ಕಾರ್ಯದರ್ಶಿ, ಜಿಲ್ಲಾ ಖಜಾಂಚಿ ಗೌಸ್ ಕಾರಿಗಾರ್, ಜಿಲ್ಲಾ ಸಮಿತಿ ಸದಸ್ಯ ಅಲೀಮ್ ಇಲಾಹಿ, ವಿಮೆನ್ ಇಂಡಿಯಾ ಮೂಮೆಂಟ್ ನ ಜಿಲ್ಲಾಧ್ಯಕ್ಷೆ, ಜಿಲ್ಲಾ ಕಾರ್ಯದರ್ಶಿ ಮತ್ತು ಎಲ್ಲಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

Leave a Reply