ರಾಜಕೀಯ ಲಾಭಕ್ಕಾಗಿ ನಮ್ಮ ಸರ್ಕಾರದ ವಿರುದ್ಧ ತಪ್ಪು ಮಾಹಿತಿ ಹರಡುವ ಕೆಲಸ
ಬೆಂಗಳೂರು: ಒಳಮೀಸಲಾತಿ ಕುರಿತು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ 2005ರಲ್ಲಿ ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನು ರಚಿಸಿತು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಇಂದು ವಿಧಾನಸೌಧದಲ್ಲಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಸಚಿವರು ಹಾಗೂ ಶಾಸಕರು ಒಳಮೀಸಲಾತಿ ಅನುಷ್ಠಾನ ಕುರಿತು ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಯೋಗವು 2012ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದರೆ, ಕಾನೂನಿನ ತೊಡಕಿನಿಂದಾಗಿ ಸಂವಿಧಾನದ 341 ಮತ್ತು 341(A) ತಿದ್ದುಪಡಿ ಅವಶ್ಯಕತೆ ಎದುರಾಯಿತು. ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಆದರೆ ಮಾಧುಸ್ವಾಮಿ ನೇತೃತ್ವದ ಬಿಜೆಪಿ ಸರ್ಕಾರ ಸದಾಶಿವ ಆಯೋಗವನ್ನು ರದ್ದುಪಡಿಸಿ, ಅವೈಜ್ಞಾನಿಕ ವರ್ಗೀಕರಣ ಮಾಡಿ ಶೋಷಿತ ಸಮುದಾಯದ ಹಕ್ಕುಗಳಿಗೆ ಧಕ್ಕೆ ತಂದಿತ್ತು ಎಂದರು.
ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿಗಳು, ಹಾಗೂ ದಲಿತ ಸಂಘಟನೆಗಳು ಕಳೆದ ಮೂರು ದಶಕಗಳಿಂದ ಒಳಮೀಸಲಾತಿಯ ಬಗ್ಗೆ ಹೋರಾಟ ಮಾಡುತ್ತಾ, ಹಲವು ಹೋರಾಟಗಾರರ ಜೀವ ತೆತ್ತಿದ್ದಾರೆ. ಅವರ ಅವಿರತ ಹೋರಾಟದ ಫಲವಾಗಿ ಇವತ್ತು ಸುಪ್ರೀಂ ಕೋರ್ಟ್‌ನಿಂದ ಆದೇಶ ಹೊರಬಂದಿದೆ ಎಂದರು.
ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಪೀಠವು 2024 ಆಗಸ್ಟ್ 1ರಂದು ಮಹತ್ವದ ತೀರ್ಪು ನೀಡಿದ್ದು, ಆಯಾ ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರ ನೀಡಿದೆ. ಈ ಐತಿಹಾಸಿಕ ತೀರ್ಪಿನಿಂದ 30 ವರ್ಷಗಳ ಹೋರಾಟದಲ್ಲಿ ಶೋಷಿತ ಸಮುದಾಯಗಳಿಗೆ ನ್ಯಾಯ ದೊರೆತಿದ್ದು, ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಲಾಗಿದೆ. ಈ ಆಯೋಗ ಮೂರು ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಅದರಂತೆ ಪ್ರಕ್ರಿಯೆ ಮುಂದುವರಿಯುತ್ತಿದೆ. ಒಳಮೀಸಲಾತಿ ಜಾರಿಗೆ ಬರುವವರೆಗೂ ಸರ್ಕಾರ ಯಾವುದೇ ಹೊಸ ನೇಮಕಾತಿಯ ಅಧಿಸೂಚನೆ ಹೊರಡಿಸದಿರಲು ತೀರ್ಮಾನಿಸಿದೆ ಎಂದರು.
ತೆಲಂಗಾಣ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗಾಗಲೇ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿದ್ದು, ಕರ್ನಾಟಕ ಸರ್ಕಾರವೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಒಳಮೀಸಲಾತಿ ಜಾರಿಗೆ ತರಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ನಮ್ಮ ಸಮಾಜ ಕಲ್ಯಾಣ ಸಚಿವರ ಗೃಹ ಕಚೇರಿಯಲ್ಲಿ ಪರಿಶಿಷ್ಟ ಜಾತಿಯ ಸಚಿವರುಗಳಾದ ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಹೆಚ್.ಸಿ. ಮಹದೇವಪ್ಪ, ಆರ್.ಬಿ. ತಿಮ್ಮಾಪೂರ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಶಾಸಕರುಗಳಾದ ಅಭಯ್ಯ ಪ್ರಸಾದ್, ನರೇಂದ್ರಸ್ವಾಮಿ, ಶ್ರೀಮತಿ ರೂಪಕಲಾ ಎಂ., ಎ.ಆರ್. ಕೃಷ್ಣಮೂರ್ತಿ, ಶ್ರೀಮತಿ ನಯಾನ ಮೋಟಮ್ಮ, ಕೆ.ಎಸ್. ಬಸವಂತಪ್ಪ, ಎ.ಸಿ. ಶ್ರೀನಿವಾಸ್, ದರ್ಶನ್ ಧ್ರುವನಾರಾಯಣ, ಡಾ. ತಿಮ್ಮಯ್ಯ, ಸುಧಾಮ ದಾಸ್, ಮುಂತಾದ ನಾಯಕರು ಸಭೆ ಸೇರಿ ಒಳಮೀಸಲಾತಿ ಜಾರಿಗೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಕೆಲವು ಹೋರಾಟಗಾರರು ಹಾಗೂ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ನಮ್ಮ ಸರ್ಕಾರದ ವಿರುದ್ಧ ಭ್ರಾಂತಿ ಮೂಡಿಸುವ ಹಾಗೂ ತಪ್ಪು ಮಾಹಿತಿ ಹರಡುವ ಕೆಲಸ ಮಾಡುತ್ತಿರುವುದು ವಿಷಾದಕರವಾಗಿದೆ. ನಮ್ಮ ನಾಯಕರ ವಿರುದ್ಧ ಅಪಮಾನಕಾರಕ ಶಬ್ದಗಳನ್ನು ಬಳಸುವುದು ಸೂಕ್ತವಲ್ಲ. ಸಮುದಾಯದ ಸಂಘಟನೆಗಳು ಹಾಗೂ ಸಂಘ-ಸಂಸ್ಥೆಗಳು ಯಾವುದೇ ರೀತಿಯ ಅಶಾಂತಿ ಮೂಡಿಸುವ ಹೋರಾಟಗಳಿಂದ ದೂರವಿರಬೇಕೆಂದು ಮನವಿ ಮಾಡುತ್ತೇವೆ ಎಂದರು.
ಸುದೀರ್ಘ 30 ವರ್ಷಗಳ ಹೋರಾಟ ನಡೆಸಿದರೂ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಿಲ್ಲ. ಸಮುದಾಯದ ಹಲವು ಸಂಘ-ಸಂಸ್ಥೆಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನ ಆದೇಶ ನಿಟ್ಟುಸಿರು ಬಿಟ್ಟಂತಾಗಿದೆ. ಒಳಮೀಸಲಾತಿ ಜಾರಿಗಾಗಿ ಮುಂದಿನ ಮೂರು ತಿಂಗಳವರೆಗೆ ಶಾಂತಿಯಿಂದ ಇರಬೇಕೆಂದು ವಿನಂತಿಸುತ್ತೇವೆ ಎಂದರು.
ನಮ್ಮ ಸರ್ಕಾರ ಒಳಮೀಸಲಾತಿ ಜಾರಿಗೆ ಬದ್ಧವಾಗಿದೆ. ಒಳಮೀಸಲಾತಿಗೆ ಒಳಪಡುವ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಮಹತ್ವದ ನಿರ್ಧಾರವನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ತಿಮ್ಮಾಪೂರ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ, ಮಾಯಕೊಂಡ ಶಾಸಕ ಬಸವಂತಪ್ಪ, ವಿಧಾನ ಪರಿಷತ್ ಸದಸ್ಯ ವಸಂತಕುಮಾರ್ ಹಾಗೂ ಸಮುದಾಯದ ಪ್ರಮುಖ ನಾಯಕರು ಹಾಜರಿದ್ದರು.




