ಗಡೀಪಾರು ನಿಯಮಗಳನ್ನು ಇನ್ನಷ್ಟು ಸರಳೀಕರಗೊಳಿಸಬೇಕು: ಡಾ. ಜಿ.ಪರಮೇಶ್ವರ್

1 year ago

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಂತಹವರನ್ನು ಗಡೀಪಾರು ಮಾಡಲು ನಿಯಮಗಳನ್ನು ಇನ್ನಷ್ಟು ಸರಳೀಕರಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವಿಧಾನಪರಿಷತ್ ಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಪಿ.ಎಚ್.‌ಪೂಜಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ಆಫ್ರಿಕಾ ಪ್ರಜೆಗಳು ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇವರನ್ನ ಪತ್ತೆ ಹಚ್ಚಲು ಠಾಣಾ ಮಟ್ಟದಲ್ಲಿ ವಿದೇಶಿಯರ ಚಲನವಲನ ಬಗ್ಗೆ ನಿಗಾವಹಿಸಲಾಗಿದೆ ಎಂದರು.

ಅಕ್ರಮ‌ ನುಸುಳುಕೋರರನ್ನ ಪತ್ತೆ ಹಚ್ಚಿ ಡಿಟೆಂಕ್ಷನ್  ಸೆಂಟರ್ ನಲ್ಲಿ ಇರಿಸಲಾಗುತ್ತಿದೆ. ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ಆಯಾ ದೇಶಗಳ ವಿದೇಶಾಂಗ ಇಲಾಖೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಬಳಿಕ ಗಡೀಪಾರು ಮಾಡಲಾಗುತ್ತಿದೆ‌‌. ತ್ವರಿತಗತಿಯಲ್ಲಿ ಅಕ್ರಮ ವಿದೇಶಿಯರನ್ನ ಗಡಿಪಾರು ಮಾಡಲು ಕೇಂದ್ರ ಸರ್ಕಾರ ಗಡೀಪಾರು ನಿಯಮವನ್ನು ಸರಳೀಕರಣಗೊಳಿಬೇಕಿದೆ ಎ‌ಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಬಾಂಗ್ಲಾದೇಶಿಯರು ಕಾಫಿ ತೋಟದಲ್ಲಿ ಕೆಲಸಗಾರರಾಗಿ ಹಾಗೂ ಬೆಂಗಳೂರಿನಲ್ಲಿ  ಶೆಡ್ ಗಳನ್ನು ಹಾಕಿ ಚಿಂದಿ ಆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅಂತಹವರನ್ನ ಪತ್ತೆ ಹಚ್ಚಲಾಗಿದೆ. ಇದುವರೆಗೂ 133 ಪ್ರಕರಣಗಳಲ್ಲಿ 467 ಮಂದಿಯನ್ನ ಆರೋಪಿಯನ್ನಾಗಿ ಮಾಡಲಾಗಿದೆ. 159 ಮಂದಿಯನ್ನ ಗಡೀಪಾರು ಮಾಡಿದರೆ 204 ಮಂದಿ ಗಡೀಪಾರು ಮಾಡುವ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ವಿದೇಶಿ ಪ್ರಜೆಗಳ ಉಪಟಳ ಹೆಚ್ಚಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ನೆಲೆಸುವುದಲ್ಲದೆ‌ ಉದ್ದೇಶಪೂರ್ವಕವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರನ್ನ ಬಂಧಿಸಿ ಕೆಲದಿನಗಳ ಬಳಿಕ ಜಾಮೀನು ಪಡೆದು ಕ್ರೈಂ ಕೃತ್ಯಗಳಲ್ಲಿ ನಿರತರಾಗಿದ್ದಾರೆ. ಒಮ್ಮೆ ವ್ಯಕ್ತಿ ವಿರುದ್ಧ ಅಪರಾಧ ಪ್ರಕರಣ ದಾಖಲಾದರೆ ಪ್ರಕರಣ ಇತ್ಯರ್ಥವಾಗುವವರೆಗೂ ನ್ಯಾಯಾಲಯ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. ಈ ಅವಕಾಶವನ್ನ ವಿದೇಶಿಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ‌‌. ಹೀಗಾಗಿ ಕೇಂದ್ರ ಮಟ್ಟದಲ್ಲಿ ನಿಯಾಮವಳಿಯಲ್ಲಿ ಸಡಿಲಗೊಳಿಸಬೇಕು. ಅಲ್ಲದೆ ಅಕ್ರಮ ಬಾಂಗ್ಲಾದೇಶ ನುಸುಳುಕೋರರು ದೇಶದ ಗಡಿಯೊಳಗೆ ಬರದ ರೀತಿ ಇನ್ನಷ್ಟು ಭದ್ರತೆ ವಹಿಸಬೇಕೆಂದು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

Leave a Reply