ಹೇಳುವವರು ಕೇಳುವವರು ಇಲ್ಲದ ಶಿಕ್ಷಣ ಇಲಾಖೆ

1 year ago

ಇನ್ನು ಎರಡನೇ ಪಿಯುಸಿ ತರಗತಿಗಳ ಫಲಿತಾಂಶ ಬಂದಿಲ್ಲ. ಜೊತೆಗೆ ಸಿಇಟಿ ಪರೀಕ್ಷೆಯು ಆಗಿಲ್ಲ. ಅದರ ಫಲಿತಾಂಶವೂ ಬಂದಿಲ್ಲ. ಆದರೆ ಆಗಲೇ ಬಹಳಷ್ಟು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಲು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಪೋಷಕರು ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಈ ಹಿಂದೆ ಅನೇಕ ನ್ಯಾಯಾಲಯಗಳು ಶೈಕ್ಷಣಿಕ ಮಾಸ ಆರಂಭದ ಸಂದರ್ಭದಲ್ಲಿ ಮಾತ್ರ ಎಲ್ ಕೆ ಜಿ ಯುಕೆಜಿ ಮತ್ತು ಒಂದನೇ ತರಗತಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಪಡೆಯಬೇಕು. ಜೊತೆಗೆ ಮಕ್ಕಳಿಗೆ ಯಾವುದೇ ರೀತಿಯ ಸಂದರ್ಶನವನ್ನು ಮಾಡಬಾರದು ಎಂಬ ಆದೇಶಗಳನ್ನು ಮತ್ತು ತೀರ್ಪುಗಳನ್ನು ನೀಡಿದ್ದಾರೆ. ಆದರೆ ಇವುಗಳನ್ನು ಯಾರು ಕೇಳುವವರಿಲ್ಲ. ಆಗಸ್ಟ್ ತಿಂಗಳಿನಲ್ಲಿಯೇ ಮುಂದಿನ ವರ್ಷಕ್ಕೆ ಎಲ್ ಕೆ ಜಿ ಯು ಕೆ ಜಿ ಮತ್ತು ಒಂದನೇ ತರಗತಿಗಳಿಗೆ ಪ್ರವೇಶವನ್ನು ನೀಡುವ ಅರ್ಜಿಗಳನ್ನ ನೀಡುವ ಮತ್ತು ಮಕ್ಕಳ ಸಂದರ್ಶನವನ್ನು ಮಾಡುವುದು ಜೊತೆಗೆ ವಂತಿಗೆ ಪಡೆದುಕೊಳ್ಳುವಂತಹ ಎಲ್ಲಾ ಕ್ರಿಯೆಗಳು ರಾಜಾರೋಷವಾಗಿ ನಡೆಯುತ್ತಿದೆ.

ಇನ್ನು ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಖಾಸಗಿ ಸಂಸ್ಥೆಗಳು ವಿಶೇಷ ತರಬೇತಿ ನೀಡುವ ತರಗತಿಗಳನ್ನ ನಡೆಸುವ ಇಂಟಿಗ್ರೇಟೆಡ್ ಕೋರ್ಸ್ ಎಂಬಂತಹ ಸಂಗತಿಗಳನ್ನು ಮುಂದೆ ಮಾಡಿಕೊಂಡು ವಿಶೇಷ ತರಗತಿಗಳನ್ನ ನಡೆಸಬಾರದೆಂಬ ಆದೇಶವನ್ನು ನೀಡಿದ್ದಾರೆ. ಆದರೆ ಇದಕ್ಕೂ ಮೂರು ಕಾಸಿನ ಬೆಲೆ ಇಲ್ಲ. ಹಲವಾರು ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ತರಬೇತಿ ನೀಡುವ ಮತ್ತು ವಿಶೇಷವಾಗಿ ಪಾಠ ಪ್ರವಚನಗಳನ್ನು ಮಾಡುವ ಖಾಸಗಿ ಸಂಸ್ಥೆಗಳ ಜೊತೆ ಸೇರಿ ವಿಶೇಷ ತರಗತಿಗಳನ್ನು ತೆರೆದು ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಪಡೆಯುತ್ತಿದ್ದಾರೆ.

ಈ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶಗಳು ಮತ್ತು ನ್ಯಾಯಾಲಯದ ತೀರ್ಪುಗಳು ಇವುಗಳಿಗೆ ಕವಡೆ ಕಾಸಿನ ಬೆಲೆಯನ್ನು ಕೊಡದೆ ತಮ್ಮ ಪಾಡಿಗೆ ತಾವು ಸರ್ವಾಧಿಕಾರಿಗಳಂತೆ ಪ್ರವೇಶಗಳನ್ನ ಎಲ್ಲಾ ಹಂತದಲ್ಲೂ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಶಿಕ್ಷಣ ಉಳ್ಳವರ ಮತ್ತು ಸಾಮಾಜಿಕವಾಗಿ ಪ್ರಗತಿಯನ್ನ ಹೊಂದಿರುವ ವರ್ಗದವರ ಆಸ್ತಿಯಾಗುತ್ತಿದೆ.

ಏಪ್ರಿಲ್ ಮೇ ತಿಂಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶವನ್ನ ಬಯಸಿ ಯಾವ ಶಾಲೆಗೆ ಹೋದರು ಯಾರಿಗೂ ಪ್ರವೇಶ ದೊರೆಯುವುದಿಲ್ಲ ಕಾರಣ ಎಲ್ಲ ಪ್ರವೇಶಗಳು ಮುಗಿದು ಹಲವಾರು ತಿಂಗಳುಗಳು ಕಳೆದಿದೆ ಎಂಬ ಮಾತನ್ನು ರಾಜಾರೋಷವಾಗಿ ಹೇಳುತ್ತಾರೆ.

ಪದವಿ ಪೂರ್ವ ಪರೀಕ್ಷೆಗಳ ಮತ್ತು ಸಿಇಟಿ ಪರೀಕ್ಷೆಗಳ ಫಲಿತಾಂಶ ಬರುವ ಮುನ್ನವೇ ತಾಂತ್ರಿಕ ವೈದ್ಯಕೀಯ ಮತ್ತು ಇತರೆ ಭಾಗಗಳಿಗೆ ಪ್ರವೇಶವನ್ನು ನೀಡಲು ಮುಂಗಡವಾಗಿ ಹಣವನ್ನು ಕಟ್ಟಿಸಿಕೊಳ್ಳುತ್ತಿರುವವರು ಯಾವುದೇ ಭಯವಿಲ್ಲದೆ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.

ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಇಂಟಿಗ್ರೇಟೆಡ್ ಕೋರ್ಸ್ ಎಂಬ ವಿಶೇಷ ತರಗತಿಗಳಲ್ಲಿ ಪ್ರವೇಶವನ್ನು ಪಡೆದುಕೊಳ್ಳಲು ಪೋಷಕರು ಲಕ್ಷಾಂತರ ರೂಪಾಯಿಗಳ ಹಣವನ್ನು ಸಾಲ ಮಾಡಿ ಇಲ್ಲವೇ ಬೇರೆ ಬೇರೆ ರೂಪದಲ್ಲಿ ತಂದು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತುಂಬುತ್ತಿದ್ದಾರೆ ಇಂತಹ ವಿಶೇಷ ತರಬೇತಿಗಳ ತರಗತಿಗಳ ಪ್ರವೇಶ ಪಡೆಯಲು ಸಾಮರ್ಥ್ಯವಿಲ್ಲದವರು ಸಾಮಾನ್ಯವಾಗಿದೆ ಸಾಮಾನ್ಯ ತರಗತಿಗಳಲ್ಲಿ ಶಿಕ್ಷಣವನ್ನು ಪಡೆದು ತಮ್ಮ ಬುದ್ಧಿವಂತಿಕೆ ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಉನ್ನತ ಶಿಕ್ಷಣಕ್ಕೆ ಪ್ರವೇಶದ ಅವಕಾಶವನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರುಗಳು ಈ ಕೂಡಲೇ ಇಲ್ಲಿಯ ತನಕ ಸರ್ಕಾರ ಹೊರಡಿಸಿರುವ ಆದೇಶಗಳು ಅವುಗಳ ಅನುಷ್ಠಾನದ ರೀತಿ ನೀತಿ ನ್ಯಾಯಾಲಯದ ತೀರ್ಪುಗಳು ಅವುಗಳ ಬದ್ಧತೆ ಎಷ್ಟರಮಟ್ಟಿಗೆ ಸಾಧ್ಯವಾಗಿದೆ ಎಲ್ಲವನ್ನು ಪರಿಶೀಲಿಸಲು ಗಮನವನ್ನು ಹರಿಸದಿದ್ದರೆ ಶಿಕ್ಷಣ ಕೇವಲ ಉಳ್ಳವರ ಆಸ್ತಿಯಾಗಿ ಉಳಿಯುತ್ತದೆ ಶಿಕ್ಷಣ ಇಲಾಖೆ ನೆಪಮಾತ್ರಕ್ಕೆ ಉಳಿದುಕೊಂಡಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply