ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿ ವಿಚಾರ ಕರ್ನಾಟಕ ರಾಜಕಾರಣದಲ್ಲಿ ಜಟಾಪಟಿಗೆ ಕಾರಣವಾಗಿದೆ. ಈಗಾಗಲೇ ರಾಜ್ಯದಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿ ಬರುವ ಶೈಕ್ಷಣಿಕ ವರ್ಷದಿಂದ ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಬಿಜೆಪಿ ನಾಯಕರನ್ನು ಕೆರಳಿಸಿದೆ.
ಈ ಕುರಿತಂತೆ ಸುದ್ದಿಗೋಷ್ಟಿ ನಡೆಸಿದ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಖಾಸಗಿ ಶಿಕ್ಷಣ ಮಾಫಿಯಾವನ್ನು ಪೋಷಿಸಲು, ಬಡ ವಿದ್ಯಾರ್ಥಿಗಳು ಮೆಕಾಲೆ ಶಿಕ್ಷಣ ಪದ್ಧತಿಯಲ್ಲೇ ಉಳಿಯುವಂತೆ ಮಾಡುವ ದುರುದ್ದೇಶದಿಂದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್ಇಪಿ) ಕೈಬಿಟ್ಟಿದೆ ಎಂದು ಆಪಾದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಇತರ ರಾಜಕಾರಣಿಗಳ ಮಕ್ಕಳು ಸಿಬಿಎಸ್ಸಿ, ಐಸಿಎಸ್ಇ ಮೂಲಕ ಆಧುನಿಕ ಶಿಕ್ಷಣ ಪಡೆಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳು ಹಳೇ ಮಾದರಿಯ ಶಿಕ್ಷಣದಲ್ಲೇ ಉಳಿಯಬೇಕು. ಅವರು ಮುಂದಕ್ಕೆ ಬರಬಾರದು ಎಂಬ ಹುನ್ನಾರ ಇವರದು ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಶಿಕ್ಷಣ ಇಲಾಖೆಯನ್ನು ರಾಜಕೀಯಕರಣಗೊಳಿಸುತ್ತಿದ್ದು, ಇದೇ ಕಾರಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸ್ಪರ್ಧೆಯ ದೃಷ್ಟಿಯಿಂದಲೂ ಇದು ಸರಿಯಲ್ಲ. ಸರ್ಕಾರದ ಈ ನಿರ್ಧಾರದಿಂದ ನಮ್ಮ ಮಕ್ಕಳು ಹಿಂದಕ್ಕೆ ಉಳಿಯುತ್ತಾರೆ ಎಂದರು.
ದೇಶದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಕಸ್ತೂರಿರಂಗನ್ ಅಧ್ಯಕ್ಷತೆಯ ಸಮಿತಿ ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ಮಾಡಿತು. ಆಧುನಿಕ ಕಾಲಕ್ಕೆ ತಕ್ಕಂತೆ ನೀತಿಯನ್ನು ರೂಪಿಸಲಾಗಿತ್ತು. ಮುಖ್ಯಮಂತ್ರಿ ಸೇರಿ ಸರ್ಕಾರದಲ್ಲಿರುವ ಯಾರೂ ಅದನ್ನು ಓದದೇ ಕೈಬಿಡಲು ಮುಂದಾಗಿರುವುದು ದುರಾದೃಷ್ಟ. ರಾಜ್ಯದ ವಿದ್ಯಾರ್ಥಿಗಳನ್ನು ಹಿಂದುಳಿಯುವಂತೆ ಮಾಡುವ ನಿರ್ಧಾರವನ್ನು ತಳೆದಿದೆ ಎಂದರು.
ಕಸ್ತೂರಿರಂಗನ್ ಅಧ್ಯಕ್ಷತೆಯ ಸಮಿತಿಯಲ್ಲಿ ದೇಶ– ವಿದೇಶಗಳಲ್ಲಿರುವ ಶ್ರೇಷ್ಠ ತಜ್ಞರು ಸದಸ್ಯರಾಗಿದ್ದರು. ಇವರು ತಮ್ಮ ಶಿಫಾರಸುಗಳನ್ನು ಸಾರ್ವಜನಿಕರ ಮುಂದಿಟ್ಟು, ಅಭಿಪ್ರಾಯ ಸಂಗ್ರಹಿಸಿದ್ದರು. ಸುಮಾರು 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನು ಸೇರಿಸುವ ಪ್ರಯತ್ನ ಮಾಡಿದ್ದರು. ಗ್ರಾಮಸಭೆಗಳಲ್ಲೂ ಶಿಫಾರಸುಗಳ ಚರ್ಚೆಗೆ ಅವಕಾಶ ನೀಡಲಾಗಿತ್ತು ಎಂದು ಕಪೋಲಕಲ್ಪಿತ ಕತೆಗಳನ್ನು ಹೇಳಿದರು.
ಭಾರತೀಯ ಆಲೋಚನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕು ಎಂದು ಡಾ.ಅಂಬೇಡ್ಕರ್, ನೇತಾಜಿ ಸುಭಾಷ್ ಚಂದ್ರಬೋಸ್ ಅನೇಕ ಬಾರಿ ಹೇಳಿದ್ದರು. ಸ್ವದೇಶಿ ಯೋಚನೆಗಳನ್ನು ಶಿಕ್ಷಣದಲ್ಲಿ ತರಬೇಕೆಂದು ಮಹಾತ್ಮಗಾಂಧೀಜಿ ತಿಳಿಸಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಅದ್ಯಾವುದೂ ಪಥ್ಯವಾಗುವುದಿಲ್ಲ. ‘ಕಾಂಗ್ರೆಸ್ ರೀಸರ್ಚ್ ಟೀಮ್’ನಿಂದ ಬಂದ ಸಲಹೆಗಳು ಮತ್ತು ಪಾಠಗಳನ್ನು ಸೇರಿಸಲು ನಿರ್ಧರಿಸಿದ್ದಾರೆ ಎಂದು ಮನಸಿಗೆ ಬಂದದ್ದನ್ನು ಹೇಳಿದರು.
ರಾಜ್ಯದಲ್ಲಿ ಶಿಕ್ಷಣ ಸಚಿವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಇವರಲ್ಲಿ ಯಾರು ಶಿಕ್ಷಣ ಸಚಿವರು? ಸರ್ಕಾರದ ಹಿಂದೆ ಇರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ ಅವರು ತಂದಿದ್ದನ್ನು ನಾವ್ಯಾಕೆ ಮಾಡಬೇಕ್ರಿ ಎಂಬ ಹಾರಿಕೆ ಉತ್ತರ ನೀಡುತ್ತಿರುವುದು ಸರಿಯಲ್ಲ. ಇದು ಉಡಾಫೆಯ ಪರಮಾವಧಿ ಎಂದರು.
ಭರವಸೆ ಈಡೇರಿಸಲಾಗಿದೆ: ಈ ವಿಚಾರ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾವು ಎನ್ಇಪಿ ಜಾರಿ ಆರಂಭದಲ್ಲೇ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರದ್ದು ಮಾಡುವುದಾಗಿ ಹೇಳಿದ್ದೆವು. ಈಗ ಆ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರ ಬಹಳ ತರಾತುರಿಯಲ್ಲಿ ಮೂಲಸೌಕರ್ಯ ಇಲ್ಲದೆ ಇದನ್ನು ಜಾರಿಗೆ ತಂದಿತ್ತು. ಈ ಎನ್ಇಪಿಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ಜಾರಿ ಮಾಡಿದರು? ಬಿಜೆಪಿ ಸರ್ಕಾರ ಇರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಹರ್ಯಾಣ ಹಾಗೂ ಗುಜರಾತ್ ನಲ್ಲಿ ಯಾಕೆ ಮಾಡಲಿಲ್ಲ? ನಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆ ಸರಿ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ಇಡೀ ಪ್ರಪಂಚದಲ್ಲಿನ ಜನ ಬೆಂಗಳೂರನ್ನು ಐಟಿ, ಶಿಕ್ಷಣ ರಾಜಧಾನಿ, ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ. ನಮ್ಮಲ್ಲಿರುವ ಶಿಕ್ಷಣ ಗುಣಮಟ್ಟ ಇದಕ್ಕೆ ಕಾರಣ. ಎನ್ಇಪಿಯಲ್ಲಿ ಉತ್ತಮ ಅಂಶ ಇದ್ದರೆ ಅದನ್ನು ಪರಿಗಣಿಸುತ್ತೇವೆ. ಇದು ಬಿಜೆಪಿಯ ರಾಜಕೀಯ ಅಜೆಂಡಾ. ಎನ್ಇಪಿ ಎಂದರೆ ನಾಗಪುರ ಶಿಕ್ಷಣ ನೀತಿ ಆಗಿದೆ. ಶಿಕ್ಷಣ ರಾಜ್ಯ ವ್ಯಾಪ್ತಿ ವಿಚಾರವೇ ಹೊರತು ಕೇಂದ್ರ ಸರ್ಕಾರದ ವಿಚಾರವಲ್ಲ ಎಂದು ತಿಳಿಸಿದರು.




